ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಕನಿಷ್ಠ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ, (ಸಿಐಟಿಯು) ಜಿಲ್ಲಾ ಸಮಿತಿ ವತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು.
ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುತ್ತಿರುವ ಕರವಸೂಲಿಗಾರರು, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳು, ನೀರುಗಂಟಿಗಳು, ಜವಾನರು ಹಾಗೂ ಸ್ವಚ್ಛತಾಗಾರರನ್ನು ಏಕಕಾಲದಲ್ಲಿ ಸರ್ಕಾರಿ ನೌಕರರೆಂದು ಘೋಷಿಸಬೇಕು. ನೌಕರರ ಸೇವಾ ಹಿರಿತನವನ್ನು ಪರಿಗಣಿಸಿ ಇನ್‌ಕ್ರಿಮೆಂಟ್ ನೀಡಬೇಕು ಎಂದು ಆಗ್ರಹಿಸಿದರು.
ಐದು ವರ್ಷ ಸೇವೆ ಸಲ್ಲಿಸಿರುವ ನೌಕರರಿಗೆ 75,010 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ 1500 ಹಾಗೂ 15 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ 3000 ಇನ್‌ಕ್ರಿಮೆಂಟ್ ನೀಡಬೇಕು. ಈ ಕುರಿತು ಈಗಾಗಲೇ ಆರ್ಥಿಕ ಇಲಾಖೆಗೆ ಕಡತ ಸಲ್ಲಿಕೆಯಾಗಿದೆ ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವ ನೌಕರರು ನಿವೃತ್ತರಾದಾಗ ಅಥವಾ ಮೃತಪಟ್ಟಾಗ 6 ಲಕ್ಷ ಇಡಗಂಟು ನೀಡಬೇಕು. ಗ್ರಾಮ ಪಂಚಾಯಿತಿಯಲ್ಲಿ ಠರಾವು ಮೂಲಕ ನೇಮಕಗೊಂಡು, ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆಯದಿರುವ ಸಿಬ್ಬಂದಿಗೂ ಇಡಿಗಂಟು ನೀಡುವಂತೆ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ತರಬೇತಿ ಪಡೆದಿರುವ ಎಲ್ಲಾ ಸ್ವಚ್ಛವಾಹಿನಿ ನೌಕರರಿಗೆ ಕೆಲಸ ನೀಡಬೇಕು. ಒಡಂಬಡಿಕೆ ಪತ್ರ ಹಾಗೂ ಪ್ರತಿವರ್ಷ ನವೀಕರಣ ಮಾಡುವ ಪದ್ಧತಿಯನ್ನು ರದ್ದುಪಡಿಸಿ, 15ನೇ ಹಣಕಾಸು ಯೋಜನೆಯಡಿ ವೇತನ ಪಾವತಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಚಾಲಕನನ್ನು ಪರಿಗಣಿಸಿ 15 ಸಾವಿರ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿಗಳಿಗೆ ಎರಡನೇ ಡಾಟಾ ಎಂಟ್ರಿ ಆಪರೇಟರ್ ಹುದ್ದೆ ನೀಡಿರುವುದನ್ನು ಸ್ವಾಗತ. ಈಗಾಗಲೇ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಕಂಪ್ಯೂಟರ್ ಜ್ಞಾನ ಹಾಗೂ ಅಗತ್ಯ ವಿದ್ಯಾರ್ಹತೆ ಹೊಂದಿರುವ ಗ್ರಾಮ ಪಂಚಾಯಿತಿ ನೌಕರರಿಗೂ ಈ ಹುದ್ದೆಗಳಿಗೆ ಅವಕಾಶ ನೀಡಬೇಕು. ಪಂಚಾಯಿತಿಗಳ ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗದಿಪಡಿಸಬೇಕು. 2017ರೊಳಗೆ ಕಾರ್ಯನಿರ್ವಹಿಸುತ್ತಿರುವ ಹೆಚ್ಚುವರಿ ಕರವಸೂಲಿಗಾರರಿಗೆ ಅನುಮೋದನೆ ನೀಡಬೇಕು. ರಾಜ್ಯದಲ್ಲಿನ ಮೊದಲ ಹಂತದ ಡಾಟಾ ಎಂಟ್ರಿ ಆಪರೇಟರ್‌ಗಳ ಹುದ್ದೆ ತೆರವಾದ ನಂತರವೇ ಅನುಮೋದನೆ ನೀಡಬೇಕೆಂಬ ಷರತ್ತನ್ನು ಕೈಬಿಟ್ಟು ಅನುಮೋದನೆ ನೀಡಲು ಅವಕಾಶ ಕಲ್ಪಿಸಬೇಕು ಎಂದು ವಿವರಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಕರವಸೂಲಿಗಾರ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ನೀರುಗಂಟಿ, ಜವಾನ ಹಾಗೂ ಸ್ವಚ್ಛತಾಗಾರರ ಹುದ್ದೆಗಳನ್ನು ಭರ್ತಿ ಮಾಡಬೇಕು. ಗ್ರೇಡ್-1 ಕಾರ್ಯದರ್ಶಿಗಳಿಂದ ಪಿಡಿಒ ಹುದ್ದೆಗೆ ರಾಜ್ಯಮಟ್ಟದಲ್ಲಿ ನೀಡುವ ಮುಂಬಡ್ತಿ ಪದ್ಧತಿಯನ್ನು ಕೈಬಿಟ್ಟು, ಜಿಲ್ಲಾ ಮಟ್ಟದಲ್ಲಿ ಮುಂಬಡ್ತಿ ನೀಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಪ್ರತಿ ಗ್ರಾಮ ಪಂಚಾಯಿತಿಗೂ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಬೇಕು. ಬಿಲ್ ಕಲೆಕ್ಟರ್ ಹಾಗೂ ಗುಮಾಸ್ತ ವೃಂದದಿಂದ ಗ್ರೇಡ್-2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗಳಿಗೆ ನೇಮಕಗೊಂಡ ನೌಕರರ ಹಿಂದಿನ ಸೇವೆಯನ್ನು ಕೆಸಿಎಸ್‌ಆರ್ ನಿಯಮ 325ರಂತೆ ಪರಿಗಣಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಹಿರೇಹಳ್ಳದಲ್ಲಿ ಮರಳು ಅಕ್ರಮ ಗಣಿಗಾರಿಕೆ ತಡೆಗೆ ರೈತ ಸಂಘ ಆಗ್ರಹ
ಈ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷ ಮಲ್ಲಿಕಾರ್ಜುನ ಮನ್ಸಲಾಪುರ, ಪ್ರಧಾನ ಕಾರ್ಯದರ್ಶಿ ಆಂಜನೇಯ್ಯ ನಾಯಕ ಮಾಡಿಗೇರಾ, ಪಾಂಡುರಂಗ ನಾಯಕ, ಡಿ.ಎಸ್. ಶರಣಬಸವ, ಗಿರಿಯಪ್ಪ ಪೂಜಾರಿ, ಶರ್ಫುದ್ದಿನ್ ಪೋತ್ನಾಳ, ಎಚ್. ಪದ್ಮಾ, ಶಿವಶರಣ ಹಿರೇಬೂದುರು, ಅಂಬಣ್ಣ ನಾಯಕ, ಶ್ರೀರಾಮುಲು, ಶರಣಬಸವ ಹರವಿ, ಯಂಕಪ್ಪ ಸೇರಿದಂತೆ ನೂರಾರು ನೌಕರರು ಭಾಗವಹಿಸಿದ್ದರು.




