ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಆಘಾತಕಾರಿ ಸತ್ಯವೊಂದನ್ನು ಹೊರಹಾಕಿದೆ. ಬಂಧಿತ ಕೆಪಿಎಸ್‌ಸಿ ಅಮಾನತುಗೊಂಡ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರು ಅಭ್ಯರ್ಥಿಗಳಿಂದ ಸಂಗ್ರಹಿಸಿದ ಲಂಚದ ಹಣದಿಂದ ತಮ್ಮ ಸ್ವಗ್ರಾಮದಲ್ಲಿ ಬೃಹತ್ 35 ಕೋಟಿ ರೂಪಾಯಿ ಮೌಲ್ಯದ ಕನಸಿನ ಯೋಜನೆಯನ್ನು (ಡ್ರೀಮ್ ಪ್ರಾಜೆಕ್ಟ್) ನಿರ್ಮಿಸಲು ಸಜ್ಜಾಗಿದ್ದರು ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.
ಇಡಿ ತನಿಖಾಧಿಕಾರಿಗಳು ಪಿಎಂಎಲ್‌ಎ ವಿಶೇಷ ನ್ಯಾಯಾಲಯದಲ್ಲಿ ನೀಡಿದ ವಿವರಣೆ ಪ್ರಕಾರ, ಶಿವಶಂಕರಪ್ಪ ಸಾಹುಕಾರ್ ಅವರು ತಮ್ಮ ಹುಟ್ಟೂರಿನಲ್ಲಿ ಶಾಲಾ ಕಟ್ಟಡ, ಶಾಂಪಿಂಗ್ ಮಾಲ್ ಮತ್ತು ವಸತಿನಿಲಯವನ್ನು ಒಳಗೊಂಡ ಬೃಹತ್ ಕಾಂಪ್ಲೆಕ್ಸ್ ನಿರ್ಮಿಸಲು 35 ಕೋಟಿ ರೂಪಾಯಿಗಳ ಕಾರ್ಪಸ್ ಫಂಡ್ ಸಂಗ್ರಹಿಸುತ್ತಿದ್ದರು.
ಇದನ್ನೂ ಓದಿ: BREAKING NEWS | ಕೆಪಿಎಸ್‌ಸಿ ಕಚೇರಿ ಸೇರಿ ಹಲವೆಡೆ ಇಡಿ ದಾಳಿ
ಕೆಪಿಎಸ್‌ಸಿ ಪರೀಕ್ಷಾ ಉತ್ತರ ಪತ್ರಿಕೆ ಹಾಗೂ ‘ಆನ್ಸರ್ ಕೀ’ಗಳನ್ನು ಸೋರಿಕೆ ಮಾಡಿ ಉದ್ಯೋಗಾಕಾಂಕ್ಷಿಗಳಿಂದ ಕೋಟಿಗಟ್ಟಲೆ ಲಂಚದ ಹಣವನ್ನು ನಗದ ರೂಪದಲ್ಲಿ ಪಡೆಯಲಾಗಿತ್ತು. ಈ ಹಣವನ್ನು ಬ್ಯಾಂಕಿಂಗ್ ಮಾರ್ಗಗಳನ್ನು ಹೊರತುಪಡಿಸಿ ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ವ್ಯವಹಾರ ನಡೆಸಲು ಬಳಸಲಾಗುತ್ತಿತ್ತು. ಸಾಹುಕಾರ್ ಅವರ ನಿವಾಸದಲ್ಲೇ ಸುಮಾರು 10 ಕೋಟಿ ರೂ.ಗಳಿಗೂ ಹೆಚ್ಚು ನಗದು ವಹಿವಾಟುಗಳು ನಡೆದಿದ್ದವು ಎಂದು ಇಡಿ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದೆ.
ಅಷ್ಟೇ ಅಲ್ಲದೆ, ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಲಂಚ ನೀಡಿ ಅಕ್ರಮ ಎಸಗಿದ್ದ ಆರೋಪ ಹೊಂದಿರುವ ಒಬ್ಬ ಅಭ್ಯರ್ಥಿಯ ಪೋಷಕರನ್ನೇ ಈ ನೂತನ ಶಾಲಾ ಯೋಜನೆಯ ಉಸ್ತುವಾರಿಯನ್ನಾಗಿ ನೇಮಿಸಿಕೊಳ್ಳಲಾಗಿತ್ತು ಎಂಬ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಎಡಿಜಿಪಿ ಆರ್. ಹಿತೇಂದ್ರ ಅವರ ನೇತೃತ್ವದಲ್ಲಿ ಪುನಾರಚಿತ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ತನಿಖೆಯ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದು, ಇಡಿ ಮತ್ತು ಸಿಐಡಿ ತನಿಖೆಗಳು ಪರಸ್ಪರ ಪೂರಕವಾಗಿ ನಡೆಯುವಂತೆ ಸೂಚಿಸಿದೆ.
ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಸದಸ್ಯೆ ಬಿ.ವಿ. ಗೀತಾ ಪ್ರಸ್ತುತ ಜೈಲಿನಲ್ಲಿದ್ದು, ಜಾಮೀನು ಅರ್ಜಿಯ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ.




