ಯುವಜನರಲ್ಲಿ ಅಡಗಿರುವ ಸೃಜನಶೀಲ ಪ್ರತಿಭೆ ಹಾಗೂ ಕಲಾತ್ಮಕ ಅಭಿವ್ಯಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ 2026-27ನೇ ಸಾಲಿನ ಜಿಲ್ಲಾಮಟ್ಟದ ಯುವಜನೋತ್ಸವವನ್ನು ನವೆಂಬರ್ 12ರಂದು ವಿಜಯಪುರದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ನಗರದ ಗಾಂಧಿಚೌಕ್‌ನಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂದು ಬೆಳಿಗ್ಗೆ 10.30ಕ್ಕೆ ಯುವಜನೋತ್ಸವ ನಡೆಯಲಿದೆ.
ಯುವಜನೋತ್ಸವದಲ್ಲಿ ಜನಪದ ನೃತ್ಯ (ತಂಡ), ಜನಪದ ಗೀತೆ (ತಂಡ), ಚಿತ್ರಕಲೆ, ಬೀದಿ ನಾಟಕ (ನುಕ್ಕಡ್ ನಾಟಕ) ಹಾಗೂ ಕವಿತೆ ರಚನೆ ಸೇರಿದಂತೆ ಐದು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಜನಪದ ನೃತ್ಯ ಮತ್ತು ಜನಪದ ಗೀತೆ ಸ್ಪರ್ಧೆಗಳಲ್ಲಿ ತಲಾ 10 ಸದಸ್ಯರ ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ತಂಡಕ್ಕೆ ಪ್ರದರ್ಶನ ನೀಡಲು 5ರಿಂದ 8 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
‘ನಶಾ ಮುಕ್ತ ಯುವ ಸಮುದಾಯ’ ವಿಷಯದಡಿ ಚಿತ್ರಕಲೆ ಸ್ಪರ್ಧೆ ನಡೆಯಲಿದ್ದು, ಸ್ಪರ್ಧಿಗಳಿಗೆ ಆರು ಗಂಟೆಗಳ ಕಾಲಾವಕಾಶ ನಿಗದಿಪಡಿಸಲಾಗಿದೆ. ಇದೇ ವಿಷಯದಡಿ ನಡೆಯುವ ಬೀದಿ ನಾಟಕ ಸ್ಪರ್ಧೆಯಲ್ಲಿ 10 ಜನರ ತಂಡ ಭಾಗವಹಿಸಬಹುದಾಗಿದ್ದು, ಪ್ರದರ್ಶನಕ್ಕೆ ಏಳು ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಕವಿತೆ ರಚನೆ ಸ್ಪರ್ಧೆಗೆ ಒಂದು ಗಂಟೆ 30 ನಿಮಿಷಗಳ ಸಮಯ ನಿಗದಿಪಡಿಸಲಾಗಿದೆ.
15ರಿಂದ 29 ವರ್ಷ ವಯೋಮಿತಿಯ ಯುವಜನರಿಗೆ ಅವಕಾಶ
15ರಿಂದ 29 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಯುವಜನ ಸಂಘಗಳ ಸದಸ್ಯರು ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ.
ಆಸಕ್ತ ಸ್ಪರ್ಧಿಗಳು ತಮ್ಮ ಹೆಸರುಗಳನ್ನು ನವೆಂಬರ್ 11ರೊಳಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಕಚೇರಿ ದೂರವಾಣಿ ಸಂಖ್ಯೆ 08352-251085 ಅಥವಾ ಮೊಬೈಲ್ ಸಂಖ್ಯೆ 7019008443, 9535501872 ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




