ಬಿಜೆಪಿ ಸರ್ಕಾರವಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹೊರಡಿಸಿರುವ ನೂತನ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಸ್ವ ಸಮುದಾಯ ಮತ್ತು ಸವರ್ಣೀಯರಿಂದ ತೀವ್ರ ಆಕ್ರೋಶ, ಪ್ರತಿಭಟನೆಯನ್ನು ಎದುರಿಸುವಂತಾಗಿದೆ.
ಪ್ರಯಾಗ್‌ರಾಜ್‌ನ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಪ್ರಬುದ್ಧ ಮಹಾಕುಂಭ’ ಕಾರ್ಯಕ್ರಮದಲ್ಲಿ ಮೌರ್ಯ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಈ ರಾದ್ಧಾಂತ ಸಂಭವಿಸಿದೆ. ಮೌರ್ಯ ಅವರ ಭಾಷಣದ ಮಧ್ಯೆ ರೋಹಿತ್ ತಿವಾರಿ ಸೇರಿದಂತೆ ಇಬ್ಬರು ಬ್ರಾಹ್ಮಣ ಯುವಕರು ಎದ್ದುನಿಂತು, “ಯುಜಿಸಿಯ ನೂತನ ಕಾಯ್ದೆಗಳ ಕುರಿತು ಸರ್ಕಾರದ ಮತ್ತು ನಿಮ್ಮ ನಿಲುವೇನು? ನಮ್ಮ ಪರವಾಗಿ ನೀವು ಯಾವಾಗ ಮಾತನಾಡುತ್ತೀರಿ?” ಎಂದು ಬಹಿರಂಗವಾಗಿ ಪ್ರಶ್ನಿಸಿದ್ದರು.
ಇದನ್ನೂ ಓದಿ: ಯುಜಿಸಿ ಕಾಯ್ದೆ ಜಾರಿಗೆ ಸುಪ್ರೀಂ ತಡೆ: ‘ಬ್ರಾಹ್ಮಣ್ಯ ಮನಸ್ಥಿತಿ’ ಎಂದ ಬಿಹಾರದ ಸಿಪಿಐ(ಎಂಎಲ್) ಶಾಸಕ
ಯುವಕರ ಪ್ರಶ್ನೆಯಿಂದ ಅಸಮಾಧಾನಗೊಂಡ ಉಪಮುಖ್ಯಮಂತ್ರಿ ಮೌರ್ಯ, “ಈಗ ಸುಮ್ಮನಿರಿ, ನಾನು ಪ್ರತಿಯೊಂದು ವಿಷಯದ ಬಗ್ಗೆಯೂ ಮಾತನಾಡುತ್ತೇನೆ. ನಾನು ಯಾವುದಕ್ಕೂ ಹೆದರಿ ಸುಮ್ಮನಿರುವವನಲ್ಲ” ಎಂದು ವೇದಿಕೆಯಿಂದಲೇ ಯುವಕರನ್ನು ಗದರಿದರು. ತಕ್ಷಣವೇ ಪೊಲೀಸರು ಆ ಯುವಕರನ್ನು ಸಭೆಯ ಸ್ಥಳದಿಂದ ಹೊರಗೆ ಕರೆದೊಯ್ಯಲು ಮುಂದಾದರು.
ಆ ಸಮಯದಲ್ಲಿ ಸ್ಥಳದಲ್ಲಿದ್ದ ಬಿಜೆಪಿ ಕೌನ್ಸಿಲರ್ (ಪಾರ್ಷದ್) ವಿನಯ್ ಮಿಶ್ರಾ ಎಂಬಾತ ಪ್ರಶ್ನೆ ಕೇಳಿದ ಯುವಕ ರೋಹಿತ್ ತಿವಾರಿ ಮೇಲೆ ಎರಗಿ ಕಪಾಳಕ್ಕೆ ಹೊಡೆದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದು, ಸವರ್ಣೀಯ ಮತ್ತು ಬ್ರಾಹ್ಮಣ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆಯ ಬೆನ್ನಲ್ಲೇ ಪ್ರಯಾಗ್‌ರಾಜ್ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಹರ್ಷವರ್ಧನ್ ಬಾಗ್‌ಪೇಯಿ ಅವರು ಮೌರ್ಯ ಮತ್ತು ಕೌನ್ಸಿಲರ್ ವಿರುದ್ಧ ಬಹಿರಂಗವಾಗಿ ತಿರುಗಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಶಾಸಕ ಬಾಗ್‌ಪೇಯಿ, “ಯುಜಿಸಿ ಕಾಯ್ದೆಯನ್ನು ವಿರೋಧಿಸುವುದು ಪ್ರತಿಯೊಬ್ಬ ಸವರ್ಣೀಯ ಹಾಗೂ ಬ್ರಾಹ್ಮಣರ ಹಕ್ಕಾಗಿದೆ. ಸ್ವಂತ ನಾಯಕರ ಮೆಚ್ಚುಗೆಗಾಗಿ ಹಾಗೂ ಲಾಭಕ್ಕಾಗಿ ಸಮಾಜದ ಯುವಕರ ಮೇಲೆಯೇ ಹಲ್ಲೆ ಮಾಡಿದವರು ನೆನಪಿಡಲಿ. ಇತಿಹಾಸದಲ್ಲಿ ಯಾರೂ ತಮ್ಮ ಮಗುವಿಗೆ ‘ವಿಭೀಷಣ’ ಎಂದು ಹೆಸರಿಡುವುದಿಲ್ಲ,” ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲ್ಲೆಗೊಳಗಾದ ಯುವಕ ದಾರಾಗಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹಲ್ಲೆ ನಡೆಸಿದ ಬಿಜೆಪಿ ಕೌನ್ಸಿಲರ್ ವಿನಯ್ ಮಿಶ್ರಾ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಯುಜಿಸಿ ತಂದಿರುವ ಹೊಸ ಸಮಾನತೆ ಮತ್ತು ಮೀಸಲಾತಿ ನಿಯಮಾವಳಿಗಳು ಸಾಮಾನ್ಯ ವರ್ಗದ, ಸವರ್ಣೀಯ ಯುವಕರಿಗೆ ಅನ್ಯಾಯ ಉಂಟುಮಾಡಲಿವೆ ಹಾಗೂ ಇದರ ದುರ್ಬಳಕೆಗೆ ಅವಕಾಶವಿದೆ ಎಂದು ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಕಾಯ್ದೆಯ ಜಾರಿಗೆ ಸುಪ್ರೀಂ ಕೋರ್ಟ್ ಈಗಾಗಲೇ ಮಧ್ಯಂತರ ತಡೆ ನೀಡಿದೆ. ಆಡಳಿತಾರೂಢ ಬಿಜೆಪಿ ನಾಯಕರು ಕಾಯ್ದೆಯ ಬಗ್ಗೆ ಮೌನ ವಹಿಸಿರುವುದು ಬ್ರಾಹ್ಮಣ ಮತ್ತು ಸವರ್ಣೀಯ ಸಮುದಾಯಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿ ಮತ ಬ್ಯಾಂಕ್ ಕಳೆದುಕೊಳ್ಳುವ ಆತಂಕದಲ್ಲಿದೆ.




