ಭಾರತೀಯ ರಾಜಕಾರಣದಲ್ಲಿ ಕಳೆದ ಒಂದು ದಶಕದಿಂದ ನಿರಂತರವಾಗಿ ಚರ್ಚೆಯಾಗುತ್ತಿರುವ ಪ್ರಮುಖ ಕೇಂದ್ರಬಿಂದು ರಾಹುಲ್ ಗಾಂಧಿ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಧಿಕಾರಾವಧಿಯಲ್ಲಿ ಪ್ರತಿಪಕ್ಷಗಳನ್ನು ದಮನ ಮಾಡಲು, ಹತ್ತಿಕ್ಕಲು ಮತ್ತು ನಾಯಕರ ವ್ಯಕ್ತಿತ್ವವನ್ನು ಹನನ ಮಾಡಲು ಆಳುವ ವರ್ಗಗಳು ನಡೆಸಿದ ಕುತಂತ್ರಗಳು ಒಂದೆರಡಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವುದು, ‘ಪಪ್ಪು’ ಅಥವಾ ‘Failed Product’ ಎಂದು ಹೀಯಾಳಿಸುವುದು, ಮಾಧ್ಯಮಗಳ ಮೂಲಕ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುವುದು ಹಾಗೂ ಇ.ಡಿ., ಸಿಬಿಐ, ಆದಾಯ ತೆರಿಗೆ ಇಲಾಖೆ, ಎನ್.ಐ.ಎ. ಮುಂತಾದ ಸಾಂವಿಧಾನಿಕ ಸಂಸ್ಥೆಗಳನ್ನು ವಿರೋಧ ಪಕ್ಷಗಳ ವಿರುದ್ಧ ದುರುಪಯೋಗಪಡಿಸಿಕೊಳ್ಳುವುದು ರಾಜಕೀಯ ಅಸ್ತ್ರಗಳಾಗಿ ಬಳಕೆಯಾದವು. ಹನ್ನೆರಡು ವರ್ಷಗಳಿಗೂ ಹೆಚ್ಚು ಕಾಲ ಈ ರೀತಿಯ ತೀವ್ರತರವಾದ ಅಪಪ್ರಚಾರದ ಅಲೆಗಳು ಹಾಗೂ ವ್ಯಕ್ತಿತ್ವ ಹನನದ ರಾಜಕೀಯ ದಾಳಿಗಳು ನಡೆದರೂ, ರಾಹುಲ್ ಗಾಂಧಿ ಧೃತಿಗೆಡದೆ, ಬೆನ್ನು ತಿರುಗಿಸದೆ ಅದನ್ನ ಮೆಟ್ಟಿ ನಿಂತು ಎದುರಿಸಿದ ಪರಿ ಇಂದಿನ ರಾಜಕೀಯದಲ್ಲಿ ಒಂದು ದೊಡ್ಡ ಮೈಲಿಗಲ್ಲಾಗಿದೆ.
ಅಧಿಕಾರದಲ್ಲಿರುವವರಿಗೆ ಪ್ರತಿಪಕ್ಷಗಳನ್ನು ಬಗ್ಗುಬಡಿಯಲು ನೂರಾರು ದಾರಿಗಳಿರುತ್ತವೆ. ವಿರೋಧ ಪಕ್ಷದ ನಾಯಕರನ್ನು ಟ್ರೋಲ್ ಮಾಡುವುದು, ಅವರ ವ್ಯಕ್ತಿತ್ವವನ್ನು ಹಳ್ಳ ಹಿಡಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ತೇಜೋವಧೆ ಮಾಡುವುದು, ಮಾತಿನ ತುಣುಕುಗಳನ್ನು ತಕ್ಷಣಕ್ಕೆ ಕ್ವಿಕ್ ಆಗಿ ಕಟ್ ಮಾಡಿ ವಿಕೃತವಾಗಿ ಬಿತ್ತರಿಸಿ ಅವರ ವ್ಯಕ್ತಿತ್ವವನ್ನು ಹಾಳು ಮಾಡುವುದು ಇವೆಲ್ಲವೂ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿವೆ. ಪ್ರಧಾನಿ ಮೋದಿ ಮತ್ತು ಸಂಘಪರಿವಾರದ ಈ ರಾಜಕೀಯ ತಂತ್ರಗಾರಿಕೆಗೆ ಕೇಸರಿ ಸಾಮಾಜಿಕ ಜಾಲತಾಣ ಖಾತೆಗಳು ಹಾಗೂ ‘ಗೋದಿ ಮೀಡಿಯಾ’ ಎಂದು ಕುಖ್ಯಾತವಾಗಿರುವ ಮುಖ್ಯವಾಹಿನಿಯ ಮಾಧ್ಯಮಗಳ ಒಂದು ದೊಡ್ಡ ವರ್ಗವೇ ಶಕ್ತಿ ತುಂಬಿತು. ರಾಹುಲ್ ಗಾಂಧಿ ಅವರ ವ್ಯಕ್ತಿತ್ವ ಹನನದ ಈ ಪ್ರಚಾರ ಸಮರಕ್ಕೆ ದೇಶದ ಬಲಿಷ್ಠ ಕಾರ್ಪೊರೇಟ್ ಸಂಸ್ಥೆಗಳು ಸಾವಿರಾರು ಕೋಟಿ ರೂಪಾಯಿಗಳನ್ನು ಸುರಿಸಿವೆ ಎಂಬ ಗಂಭೀರ ಆರೋಪಗಳಿವೆ. ರಾಹುಲ್ ಏನು ಹೇಳುತ್ತಾರೆ ಎನ್ನುವುದಕ್ಕಿಂತ ಅವರು ಹೇಗೆ ಮಾತನಾಡುತ್ತಾರೆ ಎಂಬ ಸುಳ್ಳುಗಳ ಕಥಾನಕಗಳನ್ನು ಹೆಣೆದು, ಜನತೆ ಆಲಿಸುವ ಮೊದಲೇ ಪಕ್ಷಪಾತದ ವಿಕೃತ ತೀರ್ಪು ನೀಡುವ ವಾತಾವರಣವನ್ನು ನಿರ್ಮಿಸಲಾಯಿತು. ರಾಹುಲ್ ಎತ್ತಿದ ಗಂಭೀರ ರಾಜಕೀಯ ಪ್ರಶ್ನೆಗಳು ಹಿನ್ನೆಲೆಗೆ ಸರಿದು, ವೈಯಕ್ತಿಕ ಅಪಹಾಸ್ಯವನ್ನು ಮುನ್ನೆಲೆಗೆ ತಂದು ನಿಲ್ಲಿಸಲಾಯಿತು.
ಅಧಿಕಾರಸ್ಥರಿಗೆ ಈ ಪ್ರತಿಪಕ್ಷವನ್ನು ಬಗ್ಗುಬಡಿಯಲು ಇರಬಹುದಾದ ನೂರಾರು ದಾರಿಗಳಲ್ಲಿ ಪ್ರಮುಖವಾದುದು ಕಾನೂನಿನ ಅಸ್ತ್ರ. ರಾಹುಲ್ ಗಾಂಧಿ ಅವರ ಮೇಲೆ ದೇಶಾದ್ಯಂತ ಸಿಕ್ಕಾಪಟ್ಟೆ ಕೇಸುಗಳನ್ನು ಹಾಕಲಾಗಿದೆ. ಭಾರತದ ಉದ್ದಗಲಕ್ಕೂ ಅವರ ಮೇಲೆ ದೊಡ್ಡ ಪ್ರಕರಣಗಳಿಂದ ಹಿಡಿದು ಸಣ್ಣಪುಟ್ಟ ವಿಚಾರಗಳಿಗೂ ಕೇಸುಗಳನ್ನು ಹಾಕಿ ಕೋರ್ಟ್ ಅಲೆಸುವ ಕೆಲಸ ಮಾಡಲಾಗಿದೆ. ಈ ಮುಖಾಂತರ ಅವರನ್ನು ಕುಗ್ಗಿಸುವುದು, ಅವರ ಹೆಸರನ್ನು ನ್ಯೂಸ್ನಲ್ಲಿ ಸ್ಪ್ರೆಡ್ ಮಾಡುವುದು, ಅವರ ವ್ಯಕ್ತಿತ್ವ ಹರಣ ಮಾಡುವುದು ಈ ತಂತ್ರದ ಭಾಗವಾಗಿತ್ತು. ನೇರವಾಗಿ ಎದುರಿಸಲು ಬಾರದವರು ಪರೋಕ್ಷವಾಗಿ ಈ ತರಹದ ಎಲ್ಲಾ ಹಲ್ಲೆಗಳನ್ನು ನಡೆಸಿದರು. ಇದರ ಜೊತೆಗೆ ಚುನಾವಣಾ ಆಯೋಗ, ನ್ಯಾಯಾಂಗ, ಜಾರಿ ನಿರ್ದೇಶನಾಲಯ (ED), ಸಿಬಿಐ, ಎನ್.ಐ.ಎ. ಹಾಗೂ ಐ.ಟಿ. ಇಲಾಖೆಯಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಇವರನ್ನು ಬಗ್ಗುಬಡಿಯಲು ನೋಡಲಾಯಿತು. ಇಷ್ಟೆಲ್ಲಾ ಕಾನೂನು ಹೋರಾಟಗಳು, ವೈಯಕ್ತಿಕ ಮೊಕದ್ದಮೆಗಳ ಸುರಿಮಳೆಯ ನಡುವೆಯೂ ರಾಹುಲ್ ಗಾಂಧಿ ಜಗ್ಗದೆ, ಕುಗ್ಗದೆ ಮುನ್ನಡೆದರು.
ಈ ಎಲ್ಲ ಅಪಪ್ರಚಾರಗಳಿಗೆ ಬಲವಾದ ಸವಾಲೆಸೆದದ್ದು 2022ರಲ್ಲಿ ಆರಂಭವಾದ ಐತಿಹಾಸಿಕ ‘ಭಾರತ್ ಜೋಡೋ ಯಾತ್ರೆ’. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಾವಿರಾರು ಕಿಲೋಮೀಟರ್ಗಳ ಕಾಲ ಕಾಲ್ನಡಿಗೆಯಲ್ಲಿ ಸಾಗಿದ ರಾಹುಲ್ ಗಾಂಧಿ, ದಾಖಲೆಗಳು ಹಾಗೂ ಬಂಡುಗಳ ಸಮೇತ ನೀಟಾಗಿ ಜನರ ಬಳಿಗೆ ಹೋದರು. ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಯುವಕರನ್ನು ನೇರವಾಗಿ ಭೇಟಿಯಾಗಿ ಅವರ ಸಂಕಷ್ಟಗಳನ್ನು ಆಲಿಸಿದರು. ಮಾಧ್ಯಮಗಳು ಸೃಷ್ಟಿಸಿದ್ದ ಕೃತಕ ಬಿಂಬಕ್ಕೂ ಮತ್ತು ಜನರ ನಡುವೆ ಕಾಣಿಸಿಕೊಂಡ ನೈಜ ರಾಹುಲ್ ಗಾಂಧಿಗೂ ಇದ್ದ ಅಪಾರ ವ್ಯತ್ಯಾಸ ಜನತೆಗೆ ತಿಳಿಯಿತು. ‘ಅರೆಕಾಲಿಕ ರಾಜಕಾರಣಿ’ ಎಂಬ ಟೀಕೆಗಳಿಗೆ ತೆರೆ ಬಿದ್ದು, ‘ಪಪ್ಪು’ ಎಂಬ ಹಣೆಪಟ್ಟಿ ಕರಗಿ ಕಳಚಿಕೊಳ್ಳುವ ಪ್ರಕ್ರಿಯೆ ಶುರುವಾಯಿತು. ದೆಹಲಿ ಹೋರಾಟದಲ್ಲಿ ವಿದ್ಯಾರ್ಥಿಗಳ ಚಳುವಳಿಯೊಂದಿಗೆ ಹೆಜ್ಜೆಹಾಕಿದ ಅವರು, ಅತ್ಯಂತ ವ್ಯವಸ್ಥಿತವಾಗಿ ಈ ಹೋರಾಟಗಳನ್ನು ಮುನ್ನಡೆಸಿದರು. ಎಸ್.ಐ.ಆರ್ ಬಗ್ಗೆ ಈಗ ಎದ್ದಿರುವ ಪ್ರಶ್ನೆಗಳನ್ನ ರಾಹುಲ್ ಗಾಂಧಿ ತಿಂಗಳುಗಳ ಮೊದಲೇ ನೀಟಾಗಿ ದಾಖಲೆಗಳ ಸಮೇತ ಎತ್ತಿ ಹಿಡಿದರು. ಈ ಎಲ್ಲಾ ಸವಾಲುಗಳನ್ನು ಮೀರಿ ನಿಲ್ಲುವ ಮೂಲಕ ಅವರು ಯುವಜನತೆ ಮತ್ತು ಜನರ ವಿಶ್ವಾಸ ಸಂಪೂರ್ಣವಾಗಿ ಗಳಿಸಿದರು.
2024ರ ಲೋಕಸಭಾ ಚುನಾವಣೆ ಈ ರಾಜಕೀಯ ಬದಲಾವಣೆಗೆ ಸ್ಪಷ್ಟ ಮುದ್ರೆ ಒತ್ತಿತು. 2019ರಲ್ಲಿ 303 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ 2024ರಲ್ಲಿ 240 ಸ್ಥಾನಗಳಿಗೆ ಕುಸಿದು, ಸ್ವಂತ ಬಲದ ಮೇರೆಗೆ ಸರಳ ಬಹುಮತವನ್ನೂ ಗಳಿಸಲು ವಿಫಲವಾಯಿತು. ಮತ್ತೊಂದೆಡೆ ಕಾಂಗ್ರೆಸ್ 52 ಸ್ಥಾನಗಳಿಂದ 99 ಸ್ಥಾನಗಳಿಗೆ ಏರಿತು. ರಾಹುಲ್ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ, ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವ ಸಾಂವಿಧಾನಿಕ ಜವಾಬ್ದಾರಿಯನ್ನು ಸ್ವಯಂಪ್ರೇರಿತರಾಗಿ ಎತ್ತಿಕೊಂಡರು. ‘ಪಪ್ಪು’ ಹಣೆಪಟ್ಟಿ ಬದಲಾಗಿ ಈಗ ‘Failed Product’ ಎಂಬ ವ್ಯಂಗ್ಯ ಮುನ್ನೆಲೆಗೆ ಬಂದಿದೆ. ನಿರುದ್ಯೋಗ, ಆರ್ಥಿಕ ಅಸಮಾನತೆ, ಜಾತಿಗಣತಿ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ರಕ್ಷಣೆಯಂತಹ ಮೂಲಭೂತ ಮತ್ತು ಗಂಭೀರ ಪ್ರಶ್ನೆಗಳನ್ನು ಸರ್ಕಾರದ ಮುಂದಿಡುತ್ತಿದ್ದಾರೆ. ಆದರೆ, ಸಂಸತ್ತಿನ ಒಳಗಡೆ ಹಾಗೂ ಹೊರಗಡೆ ಈ ಯಾವುದೇ ಸವಾಲುಗಳಿಗೆ ಪ್ರಧಾನಿ ಮೋದಿ ಅಥವಾ ಆಡಳಿತ ಪಕ್ಷದಿಂದ ಯಾವುದೇ ಓಪನ್ ಚರ್ಚೆಗೆ ಬರಲು ಅಥವಾ ಮುಕ್ತ ಉತ್ತರಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿ ವಿರೋಧ ಪಕ್ಷವನ್ನು ಹತ್ತಿಕ್ಕುವ ಹಳೆಯ ದಾರಿಯನ್ನೇ ಮುಂದುವರಿಸಿದ್ದಾರೆ.
ಹೌದು, ದೇಶದ ಗಂಭೀರ ಸಮಸ್ಯೆಗಳ ಕುರಿತು ರಾಹುಲ್ ಗಾಂಧಿ ನಿರಂತರವಾಗಿ ಚರ್ಚೆಗೆ, ಮುಕ್ತ ಸಂವಾದಕ್ಕೆ ಅಥವಾ ಸಂಸತ್ತಿನಲ್ಲಿ ಉತ್ತರ ನೀಡಲು ಸವಾಲು ಹಾಕುತ್ತ ಬಂದಿದ್ದರೂ, ಬಿಜೆಪಿ ನಾಯಕರು ಇದಕ್ಕೆ ನೇರ ಉತ್ತರ ನೀಡದೆ ಜಾರಿಕೊಳ್ಳುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
NEET ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಯ ಮೇಲಿನ ಪೊಲೀಸರ ಬಲಪ್ರಯೋಗದ ಕುರಿತು ರಾಹುಲ್ ಗಾಂಧಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. “ಯಾರು ಗುಂಡು ಹಾರಿಸಲು, ಲಾಠಿ ಪ್ರಹಾರಕ್ಕೆ ಆದೇಶಿಸಿದ್ದು?” ಎಂದು ಪ್ರಶ್ನಿಸಿದ ಅವರು, ಅಮಿತ್ ಶಾ ರಾಜೀನಾಮೆ ನೀಡಬೇಕು ಅಥವಾ ಹೊಣೆ ಹೊತ್ತು ಉತ್ತರಿಸಬೇಕು ಎಂದು ಆಗ್ರಹಿಸಿದ್ದರು.
ಇತ್ತೀಚಿನ ದಿನಗಳಲ್ಲಿ SIR (ವ್ಯವಸ್ಥಿತ ಮತದಾರರ ಪಟ್ಟಿ ಪರಿಷ್ಕರಣೆ/ನೂಸುಳುಕೋರರ ವಿಚಾರ) ಮತ್ತು EVM ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ. ನವೆಂಬರ್ 1 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ‘ಚಲೋ ದೆಹಲಿ’ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತರ ಕ್ರಮದ ವಿರುದ್ಧ ಮತ್ತು 13.3 ಕೋಟಿ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿರುವ ಬಗ್ಗೆ ಗಂಭೀರ ಆರೋಪ ಮಾಡಿ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದರು.
ರಾಹುಲ್ ಗಾಂಧಿ ಅವರು ನಿರುದ್ಯೋಗ, ಆರ್ಥಿಕ ಅಸಮಾನತೆ, ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಹಾಗೂ ಸಾರ್ವಜನಿಕರ ಹಕ್ಕುಗಳ ಕಸಿಯುವಿಕೆಯ ಕುರಿತು ಸತತವಾಗಿ ಮುಕ್ತ ಚರ್ಚೆಗೆ ಆಹ್ವಾನಿಸುತ್ತಿದ್ದರೂ, ಆಡಳಿತ ಪಕ್ಷವು ನೇರ ಚರ್ಚೆಗೆ ಬರುವ ಬದಲು ವೈಯಕ್ತಿಕ ಟೀಕೆಗಳು ಮತ್ತು ಹಳೆಯ ಹಣೆಪಟ್ಟಿಗಳನ್ನು ಮುನ್ನೆಲೆಗೆ ತರುತ್ತಿದೆ.
ರಾಹುಲ್ ಗಾಂಧಿಯವರ ಸಾರ್ವಜನಿಕ ಚಿತ್ರಣ ಬದಲಾಗಿದ್ದರೂ, ರಾಜಕೀಯ ಯಶಸ್ಸಿನ ಖಾತರಿ ಇನ್ನೂ ಸಂಪೂರ್ಣವಾಗಿ ಸಿಕ್ಕಿಲ್ಲ. ಕಾಂಗ್ರೆಸ್ ಪಕ್ಷವು ಈಗಲೂ ಹಲವು ರಾಜ್ಯಗಳಲ್ಲಿ ದುರ್ಬಲವಾಗಿದ್ದು, ಸಂಘಟನೆ ಬಲಗೊಳ್ಳಬೇಕಿದೆ ಹಾಗೂ ಚುನಾವಣಾ ತಂತ್ರಗಾರಿಕೆ ದಷ್ಟಪುಷ್ಟವಾಗಬೇಕಿದೆ. ಜನರ ವಿಶ್ವಾಸವನ್ನು ಮತಗಳಾಗಿ ಪರಿವರ್ತಿಸುವುದು ಮತ್ತು ಜನಪ್ರಿಯತೆಯೊಂದಿಗೆ ಪರ್ಯಾಯ ಆಡಳಿತದ ಸ್ಪಷ್ಟ ನೀತಿ ನಿರೂಪಣೆಗಳನ್ನು ನೀಡುವುದು ಅವರ ಮುಂದಿರುವ ಸವಾಲು. ವೈಯಕ್ತಿಕ ಅಪಹಾಸ್ಯ ರಾಜಕೀಯ ವಿಮರ್ಶೆಗೆ ಎಂದಿಗೂ ಪರ್ಯಾಯವಾಗಬಾರದು. ‘ಪಪ್ಪು’ ಅಥವಾ ‘Failed Product’ ಎಂಬ ಹಣೆಪಟ್ಟಿಗಳು ಗಂಭೀರ ಚರ್ಚೆಗೆ ನೆರವಾಗುವುದಿಲ್ಲ, ಬದಲಿಗೆ ರಾಜಕೀಯ ಸಂವಾದವನ್ನು ವ್ಯಕ್ತಿಕೇಂದ್ರಿತ ಸಂಘರ್ಷಕ್ಕೆ ಸೀಮಿತಗೊಳಿಸುತ್ತವೆ. ಹನ್ನೆರಡು ವರ್ಷಗಳ ಅಪಹಾಸ್ಯವನ್ನು ಮೆಟ್ಟಿನಿಂತು ವಿಪಕ್ಷ ನಾಯಕರಾಗಿ ಹೊರಹೊಮ್ಮಿರುವ ರಾಹುಲ್ ಗಾಂಧಿ, ಮೋದಿಯವರ ಅಪಪ್ರಚಾರದ ಮಿತಿಯನ್ನು ಬಯಲು ಮಾಡಿದ್ದಾರೆ. ಜನರ ಬದುಕಿನ ಪ್ರಶ್ನೆಗಳಿಗೆ ಉತ್ತರ ನೀಡದೆ ಹಣೆಪಟ್ಟಿಗಳನ್ನು ಹಚ್ಚುವ ರಾಜಕೀಯ ಗೆಲುವು ತಾತ್ಕಾಲಿಕ ಎಂಬ ಸಂದೇಶವನ್ನು ಇಂದಿನ ರಾಜಕೀಯ ಬೆಳವಣಿಗೆಗಳು ಸ್ಪಷ್ಟಪಡಿಸುತ್ತವೆ.




