ಕಾನೂನುಬದ್ಧವಾಗಿ ಅನುಮತಿಸಲಾದ 10 ಗಂಟೆಗಳ ಗರಿಷ್ಠ ರಾತ್ರಿ ಪಾಳಿಯ ನಂತರ, ಮುಂಜಾನೆ ವಿಮಾನವನ್ನು ಲ್ಯಾಂಡ್ ಮಾಡುವಾಗ (ಇಳಿಸುವಾಗ) ಪ್ರತಿ 100 ಭಾರತೀಯ ಪೈಲಟ್‌ಗಳಲ್ಲಿ ಸುಮಾರು 63 ಮಂದಿ ನಿದ್ದೆ ಮಂಪರಿನಲ್ಲಿರುತ್ತಾರೆ (ತೂಕಡಿಸುತ್ತಿರುತ್ತಾರೆ) ಎಂದು ವಾಯುಯಾನ ಸುರಕ್ಷತಾ ಸಂಸ್ಥೆ ‘ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್’ ತನ್ನ ವಿಮರ್ಶಾ ವರದಿಯಲ್ಲಿ ತಿಳಿಸಿದೆ. ಯುರೋಪ್‌ನಲ್ಲಿ ಹಗಲು ವೇಳೆಯ ವಿಮಾನ ಹಾರಾಟದಲ್ಲಿ ಈ ಪ್ರಮಾಣ 100ಕ್ಕೆ ಕೇವಲ 16 ರಷ್ಟಿದೆ.
ಭಾರತದಲ್ಲಿ ಪೈಲಟ್‌ಗಳ ಕೆಲಸದ ಅವಧಿಗೆ ಸಂಬಂಧಿಸಿದ ನಿಯಮಗಳು ವಿಮಾನವನ್ನು ಸುರಕ್ಷಿತವಾಗಿ ಮುನ್ನಡೆಸುವಷ್ಟು ಅವರನ್ನು ಎಚ್ಚರವಾಗಿರಿಸುತ್ತವೆಯೇ ಎಂಬುದನ್ನು ಪರಿಶೀಲಿಸುವುದು ಈ ಅಧ್ಯಯನದ ಪ್ರಮುಖ ಉದ್ದೇಶವಾಗಿತ್ತು. “ಹಗಲಿನಲ್ಲಿ ವಿಮಾನ ಹಾರಾಟ ಬಹುಪಾಲು ಸುರಕ್ಷಿತವಾಗಿದೆ. ಆದರೆ, ತಡರಾತ್ರಿ ಮತ್ತು ಮುಂಜಾನೆ ವೇಳೆಯಲ್ಲಿ ಪೈಲಟ್‌ಗಳು ಸುಸ್ತಾಗಿರುತ್ತಾರೆ. ಕಾನೂನಿನ ಚೌಕಟ್ಟಿನೊಳಗಿನ ಕರ್ತವ್ಯದ ಅವಧಿಯೂ ಸಹ ಆಯಾಸವನ್ನುಂಟುಮಾಡಬಹುದು. ಹೀಗಾಗಿ ಪೈಲಟ್‌ಗಳ ಬದಲಾಗಿ ನಿಯಮಗಳನ್ನು ಸರಿಪಡಿಸಬೇಕಿದೆ” ಎಂದು ವರದಿ ಹೇಳಿದೆ.
ಆದರೆ, ವರದಿಯ ಅರ್ಥ ‘ಭಾರತದಲ್ಲಿ ವಿಮಾನ ಹಾರಾಟ ಅಸುರಕ್ಷಿತ’ ಎಂದಲ್ಲ. 100ರಲ್ಲಿ 63 ಎಂಬ ಅಂಕಿ-ಅಂಶವು ರಾತ್ರಿ 9 ರಿಂದ ಬೆಳಗ್ಗೆ 7 ರವರೆಗಿನ ಕರ್ತವ್ಯದ ಅವಧಿಯನ್ನು ಆಧರಿಸಿ, 13 ಪೈಲಟ್‌ಗಳ ಅನಾಮಧೇಯ ರೋಸ್ಟರ್‌ಗಳು ಮತ್ತು ‘ಸ್ಲೀಪ್ ಅಂಡ್ ಬಾಡಿ ಕ್ಲಾಕ್’ ಮಾದರಿಯನ್ನು ಬಳಸಿ ಮಾಡಿದ ವೈಜ್ಞಾನಿಕ ಮುನ್ಸೂಚನೆಯಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್‌ನ ಸಂಸ್ಥಾಪಕ ಕ್ಯಾಪ್ಟನ್ ಅಮಿತ್ ಸಿಂಗ್ ಪ್ರತಿಕ್ರಿಯಿಸಿ, “ಪೈಲಟ್‌ಗಳು ಬಹಳ ಹಿಂದಿನಿಂದಲೂ ಹೇಳುತ್ತಿರುವ ವಿಚಾರಗಳನ್ನೇ ಈ ವರದಿಯೂ ಪುಷ್ಟೀಕರಿಸಿದೆ. ಅತಿಯಾದ ಆಯಾಸದಿಂದ ವಿಮಾನ ಹಾರಾಟ ಕಷ್ಟವಾಗುತ್ತಿದೆ ಎಂದು ಅನೇಕ ಪೈಲಟ್‌ಗಳು ಹಿಂದಿನ ಸಮೀಕ್ಷೆಗಳಲ್ಲೂ ತಿಳಿಸಿದ್ದಾರೆ. ಭಾರತದ ನಿಯಮಗಳು ಕರ್ತವ್ಯದ ಗಂಟೆಗಳನ್ನು ಮಾತ್ರ ಲೆಕ್ಕ ಹಾಕುತ್ತವೆ ವಿನಃ, ದೇಹದ ಜೈವಿಕ ಗಡಿಯಾರವನ್ನಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೌಂಡೇಶನ್ 2022ರಲ್ಲಿ 542 ಮತ್ತು 2024ರಲ್ಲಿ 530 ಭಾರತೀಯ ಪೈಲಟ್‌ಗಳನ್ನು ಸಮೀಕ್ಷೆಗೊಳಪಡಿಸಿತ್ತು. ಈ ಪೈಕಿ 100ರಲ್ಲಿ 71 ಮಂದಿ ತಾವು ಕಾಕ್‌ಪಿಟ್‌ನಲ್ಲಿ ಕರ್ತವ್ಯ ನಿರ್ವಹಿಸುವಾಗ ಅತಿಯಾದ ಆಯಾಸಕ್ಕೊಳಗಾಗಿದ್ದಾಗಿ ಹೇಳಿದ್ದಾರೆ. 66 ಮಂದಿ ಕರ್ತವ್ಯದ ವೇಳೆ ಅರಿವಿಲ್ಲದೆ ಕ್ಷಣಕಾಲ ನಿದ್ದೆಗೆ ಜಾರಿದ್ದಾಗಿ (ಮೈಕ್ರೋಸ್ಲೀಪ್) ಒಪ್ಪಿಕೊಂಡಿದ್ದಾರೆ.
ಕರ್ತವ್ಯದ ನಿಯಮಗಳು ವಿಜ್ಞಾನ ಮತ್ತು ಕಾರ್ಯಾಚರಣೆಯ ಅನುಭವವನ್ನು ಆಧರಿಸಿರಬೇಕು ಎಂಬ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ (ICAO) ಮಾನದಂಡಕ್ಕೆ ಭಾರತದ ನಿಯಮಗಳನ್ನು ಒಳಪಡಿಸಿದಾಗ, ವಿಜ್ಞಾನದ ವಿಚಾರದಲ್ಲಿ ‘ಭಾಗಶಃ ಸರಿ’ ಮತ್ತು ಸ್ವಂತ ಅನುಭವದ ವಿಚಾರದಲ್ಲಿ ‘ತೋರಿಸಿಲ್ಲ’ ಎಂಬ ರೇಟಿಂಗ್ ನೀಡಲಾಗಿದೆ. ಮಧ್ಯರಾತ್ರಿಯಿಂದ ಮುಂಜಾನೆ 6ರವರೆಗಿನ ಕರ್ತವ್ಯವನ್ನು 10 ಗಂಟೆಗಳು ಮತ್ತು ಎರಡು ಲ್ಯಾಂಡಿಂಗ್‌ಗಳಿಗೆ ಸೀಮಿತಗೊಳಿಸಿರುವುದು ಉತ್ತಮ ನಿಯಮವಾಗಿದೆ. ಆದರೆ, ಹಗಲಿನಲ್ಲಿ ಬೆಳಗ್ಗೆ 10:30ರವರೆಗೆ ಪ್ರಾರಂಭವಾಗುವ ಪಾಳಿಗಳಿಗೆ ಯಾವುದೇ ಹೆಚ್ಚುವರಿ ಸುರಕ್ಷತಾ ಕ್ರಮಗಳಿಲ್ಲದೆ, ದೈನಂದಿನ ಕರ್ತವ್ಯವನ್ನು 13 ಗಂಟೆಗಳವರೆಗೆ ಅನುಮತಿಸಲಾಗಿದೆ. ಒಂದು ವೇಳೆ ರಾತ್ರಿ 11:30ರ ಲ್ಯಾಂಡಿಂಗ್ ಸೇರಿ ಒಟ್ಟು ಆರು ಲ್ಯಾಂಡಿಂಗ್‌ಗಳಿದ್ದರೆ, ಶೇ 55 ರಿಂದ 77 ರಷ್ಟು ಪೈಲಟ್‌ಗಳು ನಿದ್ರಾಹೀನತೆಯಿಂದ ಬಳಲುತ್ತಾರೆ ಎಂದು ವರದಿ ವಿಶ್ಲೇಷಿಸಿದೆ.
ಆಯಾಸಕ್ಕೆ ಎರಡು ಪ್ರಮುಖ ಕಾರಣಗಳಿವೆ. ಎಚ್ಚರವಾದ ಕ್ಷಣದಿಂದಲೇ ಮೊಬೈಲ್ ಬ್ಯಾಟರಿ ಖಾಲಿಯಾಗುವಂತೆ ದೇಹದ ಮೇಲೆ ನಿದ್ರೆಯ ಒತ್ತಡ ಹೆಚ್ಚಾಗುತ್ತದೆ. ಮತ್ತೊಂದೆಡೆ, ಜೈವಿಕ ಗಡಿಯಾರವು ಬೆಳಗಿನ ಜಾವ 2 ರಿಂದ 6 ರವರೆಗೆ ದೇಹದ ಎಚ್ಚರದ ಸ್ಥಿತಿಯನ್ನು (Alertness) ಕನಿಷ್ಠ ಮಟ್ಟಕ್ಕೆ ಇಳಿಸುತ್ತದೆ. ರಾತ್ರಿ ಹಾರಾಟವು ‘ಬ್ಯಾಟರಿ ಖಾಲಿ’ ಮತ್ತು ‘ಕಡಿಮೆ ಎಚ್ಚರ’ ಎರಡೂ ಸಮಸ್ಯೆಗಳನ್ನು ಒಟ್ಟಿಗೆ ತರುತ್ತದೆ. ಇದಲ್ಲದೆ 17 ರಿಂದ 19 ಗಂಟೆಗಳ ಕಾಲ ಎಚ್ಚರವಾಗಿದ್ದ ವ್ಯಕ್ತಿಯ ದೇಹವು, ರಕ್ತದಲ್ಲಿ ಶೇ 0.05 ರಷ್ಟು ಮದ್ಯಪಾನವಿದ್ದಾಗ ಹೇಗೆ ವರ್ತಿಸುತ್ತದೋ ಅಷ್ಟೇ ನಿಧಾನವಾಗಿ ಕಾರ್ಯನಿರ್ವಹಿಸುತ್ತದೆ. ಭಾರತದಲ್ಲಿ ಪೈಲಟ್‌ಗಳ ರಕ್ತದಲ್ಲಿ ಶೇ 0.009 ರಷ್ಟು ಮದ್ಯದ ಅಂಶವಿದ್ದರೂ ಪರವಾನಗಿ ರದ್ದುಪಡಿಸುವ ನಿಯಮವಿದೆ, ಆದರೆ ನಿದ್ರಾಹೀನತೆ ಅದಕ್ಕಿಂತ ಐದು ಪಟ್ಟು ಹೆಚ್ಚು ಅಪಾಯಕಾರಿ ಎಂದು ವರದಿ ಎಚ್ಚರಿಸಿದೆ.
2024ರ ಹೊಸ ನಿಯಮಗಳಿಗೆ ಆಧಾರವಾಗಿದ್ದ ಡಿಜಿಸಿಎ (DGCA)ಯ 2023ರ ಅಧ್ಯಯನವನ್ನು ಕೇವಲ ರೋಸ್ಟರ್ ಮತ್ತು ವರದಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ನಿದ್ರೆಯನ್ನು ಅಳೆಯುವ ಯಾವುದೇ ವೈಜ್ಞಾನಿಕ ಸಾಧನಗಳನ್ನು ಬಳಸಿರಲಿಲ್ಲ. 2025ರ ಅಂತ್ಯದ ವೇಳೆಗೆ ರಾತ್ರಿ ನಿಯಮಗಳು ಜಾರಿಯಾದ ಕೇವಲ ಐದು ವಾರಗಳಲ್ಲಿ, ಡಿಜಿಸಿಎ ಒಂದು ದೊಡ್ಡ ವಿಮಾನಯಾನ ಸಂಸ್ಥೆಗೆ ಅದನ್ನು ಅಮಾನತುಗೊಳಿಸಿತು. ಸುರಕ್ಷತಾ ಅಪಾಯದ ಮೌಲ್ಯಮಾಪನಗಳನ್ನು ಪರಿಶೀಲಿಸಲಾಗಿದೆ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿತ್ತಾದರೂ, ಯಾವುದನ್ನೂ ಬಹಿರಂಗಪಡಿಸಿಲ್ಲ ಎಂದು ಫೌಂಡೇಶನ್ ಹೇಳಿದೆ.
ತನಿಖಾಧಿಕಾರಿಗಳು ಸಹ ವಿಮಾನ ದುರಂತಗಳಲ್ಲಿ ಪೈಲಟ್‌ಗಳ ಆಯಾಸದ ಬಗ್ಗೆ ಇದೇ ರೀತಿಯ ಕಳವಳ ವ್ಯಕ್ತಪಡಿಸಿದ್ದಾರೆ. 158 ಜನರನ್ನು ಬಲಿಪಡೆದ 2010ರ ಮಂಗಳೂರು ವಿಮಾನ ದುರಂತದಲ್ಲಿ, ವಿಮಾನ ಹಾರಾಟದ ಬಹುಪಾಲು ಸಮಯ ಕ್ಯಾಪ್ಟನ್ ನಿದ್ರಿಸುತ್ತಿದ್ದರು ಎಂದು ತನಿಖಾ ಸಮಿತಿ ಕಂಡುಕೊಂಡಿತ್ತು. 2013ರ ಮುಂಬೈ ವಿಮಾನದ ಗಂಭೀರ ಘಟನೆಗೂ ಪೈಲಟ್‌ನ ಆಯಾಸವೇ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ; ಕರ್ತವ್ಯದ ಮಿತಿಗಳನ್ನು ಪಾಳಿ ಪ್ರಾರಂಭವಾಗುವ ಸಮಯದ ಆಧಾರದ ಮೇಲೆ ನಿಗದಿಪಡಿಸುವುದು, ಶಿಕ್ಷೆಯ ಭಯವಿಲ್ಲದೆ ಪೈಲಟ್‌ಗಳು ತಮ್ಮ ಆಯಾಸವನ್ನು ವರದಿ ಮಾಡಲು ಅವಕಾಶ ನೀಡುವುದು (ಜೊತೆಗೆ ನಿದ್ರೆಯ ಕುರಿತು ಸ್ವತಂತ್ರ ಅಧ್ಯಯನ), ಮತ್ತು ಪ್ರತಿಯೊಂದು ವಿನಾಯಿತಿಗಳ ಹಿಂದಿನ ಸಾಕ್ಷ್ಯಗಳನ್ನು ಅಂತಿಮ ದಿನಾಂಕದೊಂದಿಗೆ ಪ್ರಕಟಿಸುವುದು ಸೇರಿದಂತೆ ಮೂರು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರುವಂತೆ ವರದಿ ಶಿಫಾರಸು ಮಾಡಿದೆ.






