ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮತ್ತು ಸಾರಿಗೆ ಸಂಸ್ಥೆಗಳ ಬಸ್‌ಗಳು ಅಪಘಾತಕ್ಕೀಡಾಗಿ, ದುರಸ್ತೆಗೆ ಕಳಿಸಿದರೆ, ಅವುಗಳ ಆದಾಯ ನಷ್ಟಕ್ಕೆ ‘ಐಡಲ್ ಶುಲ್ಕ’ (ನಿಷ್ಫಲ ಶುಲ್ಕ) ಅಡಿಯಲ್ಲಿ ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲ. ಅಂತಹ ಪರಿಹಾರ ಪಡೆಯಲು ಸಾರಿಗೆ ಸಂಸ್ಥೆಗಳು ಅರ್ಹವಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಆದಾಯ ನಷ್ಟಕ್ಕೆ ಪರಿಹಾರ ನೀಡಲು ನ್ಯಾಯಮಂಡಳಿ ನೀಡಿದ ಆದೇಶವನ್ನು ಪ್ರಶ್ನಿಸಿ ‘ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್’ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ನ್ಯಾಯಮೂರ್ತಿ ಹಂಚಾಟೆ ಸಂಜೀವ್‌ಕುಮಾರ್ ವಿಚಾರಣೆ ನಡೆಸಿದ್ದಾರೆ. “ಬಸ್ ಅಪಘಾತಕ್ಕೀಡಾಗಿ ಹಾನಿಗೊಳಗಾದರೆ ಮತ್ತು ದುರಸ್ತಿಗಾಗಿ ಗ್ಯಾರೇಜ್‌ನಲ್ಲಿ ಇರಿಸಿದರೆ, ಸಾರಿಗೆ ಸಂಸ್ಥೆಗಳು ಕಾನೂನಿನ ಪ್ರಕಾರ ಹಾನಿಗೆ ಸಂಬಂಧಿದಂತೆ ಪರಿಹಾರ ಪಡೆಯಬಹುದು. ಆದರೆ, ಆದಾಯದ ನಷ್ಟಕ್ಕೆ ಪರಿಹಾರ ಪಡೆಯಲು ಅರ್ಹರಲ್ಲ” ಎಂದು ಹೇಳಿದ್ದಾರೆ.
ಕೆಎಸ್‌ಆರ್‌ಟಿಸಿ ಪರವಾಗಿ ವಾದ ಮಂಡಿಸಿದ ವಕೀಲರು, “ಅಪಘಾತಗಳ ಕಾರಣ, ಬಸ್‌ಗಳನ್ನು ದುರಸ್ತಿಗಾಗಿ ವರ್ಕ್‌ಶಾಪ್‌ಗಳಿಗೆ ಕರೆದೊಯ್ಯಲಾಗುತ್ತದೆ. ದುರಸ್ತಿ ಅವಧಿಯಲ್ಲಿ ಅವು ಸಂಚರಿಸಲು ಸಾಧ್ಯವಿಲ್ಲ. ಆದ್ದರಿಂದ, ಕೆಎಸ್‌ಆರ್‌ಟಿಸಿಯು ‘ಆದಾಯ ನಷ್ಟ’ ಅಡಿಯಲ್ಲಿ ಪರಿಹಾರ ಪಡೆಯಲು ಅರ್ಹವಾಗಿದೆ” ಎಂದು ಹೇಳಿದರು.
ವಿಮಾ ಕಂಪನಿಯ ಪರ ವಾದ ಮಂಡಿಸಿದ ವಕೀಲರು, “ನಿಗದಿತ ಮಾರ್ಗಗಳಲ್ಲಿ ಇತರ ಬಸ್‌ಗಳನ್ನು ನಿಯೋಜಿಸಿರುವುದರಿಂದ ಕೆಎಸ್‌ಆರ್‌ಟಿಸಿ ಆದಾಯ ಕಳೆದುಕೊಳ್ಳುವುದಿಲ್ಲ. ಹೀಗಾಗಿ, ಕೆಎಸ್‌ಆರ್‌ಟಿಸಿ ‘ಐಡಲ್ ಚಾರ್ಜ್‌ಗಳು/ಆದಾಯ ನಷ್ಟ’ ಅಡಿಯಲ್ಲಿ ಪರಿಹಾರ ಪಡೆಯಲು ಅರ್ಹತೆ ಹೊಂದಿಲ್ಲ” ಎಂದು ವಿವರಿಸಿದರು.