ಕಳೆದ 10 ವರ್ಷಗಳಿಂದ ಚುನಾವಣಾ ಆಯೋಗದ ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಆಗಾಗೇ ಏಳುತ್ತಲೇ ಇವೆ. ಹಲವು ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಮುತುವರ್ಜಿಯಲ್ಲೇ ಬಿಜೆಪಿ ಸಲಿಸಾಗಿ ಮತಗಳವು ಮಾಡಿದೆ ಎಂಬ ಆರೋಪಗಳಿಗೆ ಪುಷ್ಠಿ ನೀಡುವಂತಹ ಘಟನೆಗಳು ಒಂದಾದ ಬಳಿಕ ಒಂದು ಬಹಿರಂಗವಾಗುತ್ತಿವೆ. ಇದೀಗ 2024ರಲ್ಲಿ ನಡೆದ ಲೋಕಸಭೆ ಮತ್ತು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳ ವೇಳೆ 200 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ನಂತರ ಚಲಾವಣೆಯಾದ ಮತಗಳ ದಾಖಲೆಯೇ ಚುನಾವಣಾ ಆಯೋಗದ ಬಳಿ ಇಲ್ಲ ಎಂಬುದು ಬಹಿರಂಗವಾಗಿದೆ.
ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು-ಕಾಶ್ಮೀರದ ಒಟ್ಟು 200 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ನಂತರ ಎಷ್ಟು ಮಂದಿ ಮತ ಚಲಾಯಿಸಿದ್ದಾರೆ ಎಂಬ ಅಧಿಕೃತ ದಾಖಲೆಯೇ ಚುನಾವಣಾ ಆಯೋಗದ ಬಳಿಯಿಲ್ಲ ಎಂಬ ಆಘಾತಕಾರಿ ಅಂಶ ತನಿಖಾ ಪತ್ರಿಕೋದ್ಯಮ ಸಂಸ್ಥೆ ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ನಡೆಸಿದ ವಿಶೇಷ ತನಿಖೆಯಿಂದ ಬಹಿರಂಗವಾಗಿದೆ. ಇದಕ್ಕೂ ಮುನ್ನ ಇದೇ ಸರಣಿಯ ಮೊದಲ ಭಾಗದಲ್ಲಿ, 51 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳಿಗೂ ಮತ್ತು ಎಣಿಕೆಯಾದ ಮತಗಳಿಗೂ ವ್ಯತ್ಯಾಸವಿದೆ ಎಂದು ಸಂಸ್ಥೆ ವರದಿ ಮಾಡಿತ್ತು. ಈ ಮೂಲಕ ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಪಾರದರ್ಶಕತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳು ಎದ್ದಿವೆ.
ಇದನ್ನೂ ಓದಿ: ಸಿಇಸಿ ಗ್ಯಾನೇಶ್ರನ್ನು ಯಾರಿಂದಲೂ ರಕ್ಷಿಸಲು ಸಾಧ್ಯವಿಲ್ಲ; ಎಸ್ಐಆರ್ ಪ್ರಕ್ರಿಯೆ ತಕ್ಷಣ ತಡೆಹಿಡಿಯಿರಿ: ಕಾಂಗ್ರೆಸ್
ಚುನಾವಣಾ ಆಯೋಗದ ‘ಎಲೆಕ್ಷನ್ ಆಡಿಟ್ ಸೀರೀಸ್’ಭಾಗ-2ರ ಅಡಿಯಲ್ಲಿ ಈ ವರದಿಯನ್ನು ಪ್ರಕಟಿಸಲಾಗಿದೆ. 2024ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು-ಕಾಶ್ಮೀರದ ಒಟ್ಟು 530 ಕ್ಷೇತ್ರಗಳ ಚುನಾವಣಾಧಿಕಾರಿಗಳು ಸಲ್ಲಿಸಿದ 4,212 ಪುಟಗಳ ಆಂತರಿಕ ಭೌತಿಕ ದಾಖಲೆಗಳನ್ನು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ಡಿಜಿಟಲೀಕರಣಗೊಳಿಸಿ ವಿಶ್ಲೇಷಣೆ ನಡೆಸಿದೆ.
ಎಲ್ಲೆಲ್ಲಿ ದಾಖಲೆಗಳು ನಾಪತ್ತೆ?
ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕ್ಷೇತ್ರಗಳ ಅಂದರೆ 114 ಕ್ಷೇತ್ರಗಳಲ್ಲಿ ಸಂಜೆ 5ರ ನಂತರದ ಮತದಾನ ಎಷ್ಟಾಗಿದೆ ಎಂಬ ದಾಖಲೆಯೇ ಇಲ್ಲ. ಇದಾದ ನಂತರದ ಸ್ಥಾನದಲ್ಲಿ ಜಮ್ಮು-ಕಾಶ್ಮೀರವಿದೆ. ಅಲ್ಲಿನ 90 ವಿಧಾನಸಭಾ ಕ್ಷೇತ್ರಗಳ ಪೈಕಿ 44 ಕ್ಷೇತ್ರಗಳಲ್ಲಿ ಅಂದರೆ ಬರೋಬ್ಬರಿ 49% ಕ್ಷೇತ್ರಗಳಲ್ಲಿ ಸಂಜೆ 5 ರಿಂದ 6 ಗಂಟೆಯ ನಡುವಿನ ಮತದಾನದ ದಾಖಲೆಗಳಿಲ್ಲ. ಹರಿಯಾಣದ 90 ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳಲ್ಲಿ ಈ ದಾಖಲೆಗಳು ಕಾಣೆಯಾಗಿವೆ.
ವಿಧಾನಸಭೆ ಚುನಾವಣೆಗಳು ಮಾತ್ರವಲ್ಲ, ಲೋಕಸಭೆ ಚುನಾವಣೆಯಲ್ಲೂ ಇದೇ ಮಾದರಿಯ ಲೋಪ ಕಂಡುಬಂದಿದೆ. ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳು, ಹರಿಯಾಣದ 10ರಲ್ಲಿ 1 ಕ್ಷೇತ್ರ ಮತ್ತು ಜಮ್ಮು-ಕಾಶ್ಮೀರದ 5ರಲ್ಲಿ 1 ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಕೊನೆಯ ಒಂದು ಗಂಟೆಯ ದಾಖಲೆಗಳು ಲಭ್ಯವಿಲ್ಲ.
ಇದನ್ನೂ ಓದಿ: ಸಿಇಸಿ ಗ್ಯಾನೇಶ್ ಕುಮಾರ್ ಪದಚ್ಯುತಿಗೆ ಒತ್ತಾಯಿಸಲು ಕೇರಳ ಸರ್ಕಾರ ನಿರ್ಧಾರ; ವಿಧಾನಸಭೆಯಲ್ಲಿ ಇಂದು ನಿರ್ಣಯ ಮಂಡನೆ
ಸಾಮಾನ್ಯವಾಗಿಯೇ ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಮತದಾನದ ದಿನದಂದು ಪ್ರತಿ ಎರಡು ಗಂಟೆಗೊಮ್ಮೆ ಚಲಾವಣೆಯಾದ ಮತಗಳ ವಿವರವನ್ನು ಅಲ್ಲಿರುವ ಅಧಿಕಾರಿ ದಾಖಲಿಸಬೇಕು. ಇವಿಎಂ ಕಂಟ್ರೋಲ್ ಯೂನಿಟ್ನಲ್ಲಿರುವ ಟೋಟಲ್ ಬಟನ್ ಅನ್ನು ಒತ್ತಿ ಈ ಸಂಖ್ಯೆಯನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಮತದಾನದ ಅವಧಿ ಮುಗಿದ ನಂತರವೂ ಸರತಿ ಸಾಲಿನಲ್ಲಿ ನಿಂತಿರುವ ಮತದಾರರಿಗೆ ನೀಡಲಾಗುವ ‘ಚೀಟಿಗಳ’ಲೆಕ್ಕವನ್ನೂ ಇಡಬೇಕು. ಆದರೆ, 23 ಕ್ಷೇತ್ರಗಳಲ್ಲಿ ಈ ಚೀಟಿಗಳ ಸಂಖ್ಯೆಯನ್ನೂ ದಾಖಲಿಸಲಾಗಿಲ್ಲ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ದಿನ ಸಂಜೆ 5 ಗಂಟೆಗೆ ಶೇ. 58.22ರಷ್ಟು ಮತದಾನವಾಗಿದೆ ಎಂದು ಆಯೋಗ ತಿಳಿಸಿತ್ತು. ಆದರೆ ಮರುದಿನ ಈ ಪ್ರಮಾಣವನ್ನು ಶೇ. 66.05ಕ್ಕೆ ಪರಿಷ್ಕರಿಸಲಾಗಿತ್ತು. ಸಂಜೆ 5 ಗಂಟೆಯ ನಂತರ ದಿಢೀರ್ ಆಗಿ ಮತದಾನ ಪ್ರಮಾಣ ಏರಿಕೆಯಾಗಿರುವುದು ಅಕ್ರಮ ನಡೆದಿರುವ ಸಾಧ್ಯತೆಯ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ನಡುವೆ, ಆಯೋಗದ ಆಂತರಿಕ ವರದಿಯಲ್ಲೇ ಸಂಜೆ 5ರ ನಂತರದ ಮತದಾನದ ಅಂಕಿಅಂಶಗಳು ಇಲ್ಲದಿರುವುದು ಈ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ. ದಾಖಲೆಗಳನ್ನೇ ಇಲ್ಲವನ್ನಾಗಿಸಿ ಚುನಾವಣಾ ಅಕ್ರಮಗಳನ್ನು ಪತ್ತೆಹಚ್ಚುವ ವ್ಯವಸ್ಥೆಯನ್ನೇ ದುರ್ಬಲಗೊಳಿಸುವ ಹುನ್ನಾರ ಅಲ್ಲವೇ ಎಂಬ ಪ್ರಶ್ನೆ ಎದ್ದಿವೆ. ಈಗಾಗಲೇ ಮುಖ್ಯ ಚುನಾವಣಾ ಅಧಿಕಾರಿ ಗ್ಯಾನೇಶ್ ಕುಮಾರ್ ಅವರು ಎಸ್ಐಆರ್ ಸೇರಿದಂತೆ ಹಲವು ವಿಚಾರಗಳಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ತನಿಖಾ ವರದಿಯಿಂದ ಬಹಿರಂಗವಾಗಿದೆ.



