ಮಹಿಳೆಯರ ರಾಜಕೀಯ ಸಬಲೀಕರಣದ ಭಾಷಣ ಮಾಡುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಅಧಿಕಾರ ಹಂಚಿಕೆಯಲ್ಲಿ ಮಾತ್ರ ಮಹಿಳೆಯರನ್ನು ಕಡೆಗಣಿಸುತ್ತಿವೆ. ಮಹಿಳೆಯರಿಗೆ ರಾಜಕೀಯದಲ್ಲಿ ಸಮಾನ ಅವಕಾಶ ಕಲ್ಪಿಸುವ ಇಚ್ಛಾಶಕ್ತಿ ಇದ್ದರೆ, ಮೊದಲು ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಸಂಸತ್ತಿನವರೆಗೆ ಸಮಾನ ಪ್ರಾತಿನಿಧ್ಯ ನೀಡಲು ಮುಂದಾಗಲಿ ಎಂದು ಗ್ರಾಮ ಸ್ವರಾಜ್ಯ ಕರ್ನಾಟಕ ಆಗ್ರಹಿಸಿದೆ.
ಕಾಮನ್‌ವೆಲ್ತ್ ಮಹಿಳಾ ಸಂಸದೀಯ ಸಮ್ಮೇಳನದಲ್ಲಿ 300ಕ್ಕೂ ಹೆಚ್ಚು ಮಹಿಳಾ ಪ್ರತಿನಿಧಿಗಳು ಭಾಗವಹಿಸಿರುವುದು ಸ್ವಾಗತಾರ್ಹ. ಆದರೆ ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಮೂರು ಹಂತದ ಪಂಚಾಯತ್ ಚುನಾವಣೆಗಳು ಮುಂದೂಡಲ್ಪಟ್ಟಿರುವುದು ಸುಮಾರು 50 ಸಾವಿರ ಮಹಿಳಾ ಪ್ರತಿನಿಧಿಗಳ ರಾಜಕೀಯ ಅವಕಾಶಗಳಿಗೆ ತಡೆಯೊಡ್ಡಿದಂತಾಗಿದೆ. ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಸರ್ಕಾರಗಳು ಈ ವೈರುಧ್ಯಕ್ಕೆ ಉತ್ತರಿಸಬೇಕು ಎಂದು ಗ್ರಾಮ ಸ್ವರಾಜ್ಯ ಕರ್ನಾಟಕದ ರಾಜ್ಯ ಉಪಾಧ್ಯಕ್ಷ ಪ್ರದೀಪ್ ಚ. ಪಾಟೀಲ್ ನಾಗರದಿನ್ನಿ ಪ್ರಶ್ನಿಸಿದ್ದಾರೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತಮ್ಮ ಭಾಷಣದಲ್ಲಿ ಬಸವಣ್ಣನವರ ಅನುಭವ ಮಂಟಪವನ್ನು ಸ್ಮರಿಸಿದ್ದನ್ನು ಸ್ವಾಗತಿಸಿದ ಪ್ರದೀಪ್ ಪಾಟೀಲ್, ಬಸವಣ್ಣನವರ ವಿಚಾರಧಾರೆಯನ್ನು ಕೇವಲ ಭಾಷಣಗಳಲ್ಲಿ ಸ್ಮರಿಸುವುದಲ್ಲ, ಆಡಳಿತ ವ್ಯವಸ್ಥೆಯಲ್ಲೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಬಸವಣ್ಣನವರ ಸಮಾನತೆಯ ಪರಂಪರೆಯನ್ನು ಕೊಂಡಾಡುವ ಕೇಂದ್ರ ಸರ್ಕಾರದಲ್ಲಿ ಮಹಿಳೆಯರಿಗೆ ಎಷ್ಟರಮಟ್ಟಿನ ರಾಜಕೀಯ ಪ್ರಾತಿನಿಧ್ಯ ದೊರೆತಿದೆ ಎಂಬುದನ್ನೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮುಂಬರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಬಹುಮತ ಹೊಂದಿರುವ ಎನ್‌ಡಿಎ ಸರ್ಕಾರ ಮಹಿಳೆಯರಿಗೆ ಸಂಸತ್ತಿನಲ್ಲಿ ಶೇ.50ರಷ್ಟು ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಗಂಭೀರ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೊಂದೆಡೆ, ರಾಜ್ಯ ಸಚಿವ ಸಂಪುಟದಲ್ಲಿ ಮಹಿಳಾ ಸಚಿವರೇ ಇಲ್ಲದಿರುವುದನ್ನು ಪ್ರಸ್ತಾಪಿಸಿರುವ ಅವರು, ಮಹಿಳಾ ಸಮಾನತೆಯ ಬಗ್ಗೆ ಮಾತನಾಡುವ ರಾಜ್ಯ ಸರ್ಕಾರಕ್ಕೆ ಮಹಿಳೆಯರಿಗೆ ಅಧಿಕಾರ ಹಂಚಿಕೆ ಮಾಡುವ ವಿಚಾರದಲ್ಲಿ ಯಾವ ನೈತಿಕತೆ ಇದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ ಎಂದು ಟೀಕಿಸಿದ್ದಾರೆ.
ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾದ ಶಾಸಕರು ಮತ್ತು ಸಂಸದರು ಸಂವಿಧಾನಬದ್ಧ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು. ಜನಪರ ಕಾನೂನುಗಳು, ಮಹಿಳೆಯರ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ವಿಚಾರಗಳ ಕುರಿತು ಸದನಗಳಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕು. ಆದರೆ, ಇಂತಹ ಮಹತ್ವದ ವಿಚಾರಗಳನ್ನು ಕಡೆಗಣಿಸಿ ಜನಪ್ರತಿನಿಧಿಗಳು ಬೇರೆ ಚಟುವಟಿಕೆಗಳಲ್ಲಿ ತೊಡಗಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಿಳೆಯರಿಗೆ ಕೇವಲ ಮತದಾನದ ಹಕ್ಕು ನೀಡಿದರೆ ಸಾಲದು, ಕಾನೂನು ರೂಪಿಸುವ ಅಧಿಕಾರವೂ ದೊರೆಯಬೇಕು. ಮಹಿಳೆಯರ ರಾಜಕೀಯ ಹಕ್ಕುಗಳಿಗಾಗಿ ಸಂಸತ್ ಮತ್ತು ವಿಧಾನಮಂಡಲಗಳಲ್ಲಿ ಧ್ವನಿ ಎತ್ತದ ಜನಪ್ರತಿನಿಧಿಗಳಿಗೆ ಮುಂದಿನ ಚುನಾವಣೆಗಳಲ್ಲಿ ಮಹಿಳೆಯರು ತಕ್ಕ ಉತ್ತರ ನೀಡಲಿದ್ದಾರೆ. ಮಹಿಳೆಯರ ಹಕ್ಕುಗಳ ಪರವಾಗಿ ಮಾತನಾಡದ ಮೂಕ ನಾಯಕರನ್ನು ಆಯ್ಕೆ ಮಾಡುವುದಿಲ್ಲ ಎಂಬ ಎಚ್ಚರಿಕೆಯನ್ನು ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರದೀಪ್ ಚ. ಪಾಟೀಲ್ ನಾಗರದಿನ್ನಿ ಹೇಳಿದ್ದಾರೆ.



