ಮತಗಿಟ್ಟಿಸಿಕೊಳ್ಳಲು ಧರ್ಮಗಳ ನಡುವೆ ದಳ್ಳುರಿ ಸೃಷ್ಟಿಸಿ, ರಾಮಮಂದಿರದ ಜಪ ಮಾಡಿದ ಬಿಜೆಪಿ ಈಗ ಕೃಷ್ಣನತ್ತ ಸಾಗಿದೆ. ಬಿಜೆಪಿ ಮತಕ್ಕಾಗಿ ಬಳಸಿಕೊಂಡ ರಾಮನ ಮಂತ್ರ ಈಗಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಳ್ಳುವ ಮೂಲಕ ಕ್ಷೀಣಿಸಿದೆ. ಜತೆ ಜತೆಗೆ ಕೋಟ್ಯಂತರ ರೂಪಾಯಿ ದೇಣಿಗೆಗಳೂ ಗುಳುಂ ಆಗಿವೆ. ಇದೀಗ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿ ಕೃಷ್ಣನ ಮೊರೆ ಹೋಗಿದೆ.
ಈ ಹಿಂದೆ ರಾಮನ ಜಪ ಮಾಡಿಕೊಂಡು, ಕೋಮುದ್ವೇಷವನ್ನು ಸೃಷ್ಟಿಸುತ್ತಾ ಉತ್ತರ ಪ್ರದೇಶದಲ್ಲಿ ಬಿಜೆಪಿ ಎರಡು ಬಾರಿ ಗದ್ದುಗೆಯನ್ನು ಏರಿದೆ. ಈಗ ಮೂರನೇ ಬಾರಿಗೆ ಅಧಿಕಾರದಲ್ಲೇ ಉಳಿಯಲು ಬಿಜೆಪಿ ತನ್ನ ತನ್ನ ಸಾಂಸ್ಕೃತಿಕ ಮತ್ತು ರಾಜಕೀಯ ಕಾರ್ಯತಂತ್ರಕ್ಕೆ ಹೊಸ ರೂಪ ನೀಡಿದೆ. ಅಕ್ರಮಗಳಲ್ಲಿ ಮುಳುಗಿರುವ ರಾಮಮಂದಿರವನ್ನು ಈಗ ಬಳಸಲಾಗದು ಎಂಬ ಅರಿವು ಮೂಡಿರುವ ಕಾರಣ ಬಿಜೆಪಿ ಈಗ ಶ್ರೀಕೃಷ್ಣನ ಜನ್ಮಭೂಮಿಯಾದ ಮಥುರಾದಿಂದ ಬಿಜೆಪಿ ತನ್ನ ಚುನಾವಣಾ ಪ್ರಚಾರಕ್ಕೆ ಇಳಿದಿದೆ. ‘ರಾಧೇ ರಾಧೇ, ಕಮಲ್ ಖಿಲಾ ದೇ’ (ರಾಧೆಗೆ ಜಯವಾಗಲಿ, ಕಮಲ ಅರಳಲಿ) ಎಂಬ ಹೊಸ ಘೋಷವಾಕ್ಯವನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಮಥುರಾ ಕೃಷ್ಣ ದೇಗುಲದಲ್ಲೂ ದೇಣಿಗೆ ದುರ್ಬಳಕೆ ಆರೋಪ: ಸಿಬಿಐ ತನಿಖೆಗೆ ಆಗ್ರಹ
ಮಥುರಾದ ಪರ್ಖಮ್ ಗ್ರಾಮದ ಪಂಡಿತ್ ದೀನದಯಾಳ್ ಉಪಾಧ್ಯಾಯ ಗೋ ಸಂಶೋಧನಾ ಕೇಂದ್ರದಲ್ಲಿ ನವೆಂಬರ್ 17ರಂದು ಮುಕ್ತಾಯಗೊಂಡ ಬಿಜೆಪಿಯ ಎರಡು ದಿನಗಳ ಯೋಜನಾ ಸಭೆಯಲ್ಲಿ ಈ ಹೊಸ ಘೋಷಣೆಯನ್ನು ಮಾಡಲಾಗಿದೆ. ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವ ಪಂಕಜ್ ಚೌಧರಿ ಅವರು ಬೆಳಗಿನ ಅಧಿವೇಶನದ ಆರಂಭದಲ್ಲೇ ಈ ಘೋಷಣೆಯನ್ನು ಕೂಗಿದ್ದು, ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿಗಳು ಮತ್ತು ಪಕ್ಷದ ಹಿರಿಯ ನಾಯಕರು ಇದಕ್ಕೆ ಧ್ವನಿಗೂಡಿಸಿದ್ದಾರೆ.
ಈಗಾಗಲೇ ಬಿಜೆಪಿ ಯುಪಿಯಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ ಎಂಬುದನ್ನು ಮನಗಂಡಿದೆ. ಇನ್ನೊಂದೆಡೆ ಇಂಡಿಯಾ ಒಕ್ಕೂಟ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಏರಲು ಸಜ್ಜಾಗುತ್ತಿದೆ, ಕನಿಷ್ಠ ಪ್ರಬಲ ಪೈಪೋಟಿ ನೀಡಲು ಸಿದ್ಧವಾಗಿದೆ. ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ‘ಪಿಡಿಎ’ (ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು) ಸಾಮಾಜಿಕ ಸಮೀಕರಣವನ್ನು ರೂಪಿಸಿ ತಮ್ಮ ಪ್ರಚಾರಕ್ಕೆ ಇಳಿದಿದ್ದಾರೆ. ಇದನ್ನು ಭೇದಿಸಿ ಮತ್ತೆ ಕೋಮು ದ್ವೇಷಕ್ಕೆ ದೂಡಲು ಬಿಜೆಪಿ ‘ಕೃಷ್ಣ’ನ ಜಪದ ತಂತ್ರ ಹೂಡಿದೆ. ಪಿಡಿಎ ಒಂದಾದರೆ ಇಂಡಿಯಾ ಒಕ್ಕೂಟಕ್ಕೆ ಮತ ಹರಿಯಲಿದೆ ಎಂಬ ಕಾರಣಕ್ಕೆ ಶ್ರೀಕೃಷ್ಣ ಜನ್ಮಭೂಮಿ ವಿಷಯದ ಮೂಲಕ ಹಿಂದೂ ಮತಗಳನ್ನು ಒಗ್ಗೂಡಿಸಲು ಬಿಜೆಪಿ ಮುಂದಾಗಿದೆ.
ಉತ್ತರ ಪ್ರದೇಶದಲ್ಲಿ ಯಾದವ ಸಮುದಾಯವು ಸಾಂಪ್ರದಾಯಿಕವಾಗಿ ಶ್ರೀಕೃಷ್ಣನನ್ನು ತಮ್ಮ ಆರಾಧ್ಯ ದೈವವೆಂದು ಪರಿಗಣಿಸುತ್ತದೆ. ಈ ವರ್ಗ ಅಖಿಲೇಶ್ ಯಾದವ್ ಅವರ ಬಲಿಷ್ಠ ಮತಬ್ಯಾಂಕ್ ಆಗಿದೆ. ಈಗ ಬಿಜೆಪಿಯೇ ಸ್ವತಃ ‘ರಾಧೇ ರಾಧೇ’ ಮಂತ್ರ ಜಪಿಸುವ ಮೂಲಕ, ಅಖಿಲೇಶ್ ಯಾದವ್ ಅವರನ್ನು ‘ಮಥುರಾ’ ವಿಷಯದ ರಾಜಕೀಯ ಅಖಾಡಕ್ಕೆ ಎಳೆದು ತಂದು ಅವರ ಮತಬ್ಯಾಂಕ್‌ನಲ್ಲಿ ಬಿರುಕು ಮೂಡಿಸುವ ಲೆಕ್ಕಾಚಾರ ಹಾಕಿದೆ.
ಮತ್ತೊಂದೆಡೆ, ಬಿಜೆಪಿಯ ಈ ನಡೆಯನ್ನು ಎಸ್‌ಪಿ ತೀವ್ರವಾಗಿ ಟೀಕಿಸಿದೆ. ರಾಜ್ಯದ ಮೂಲಭೂತ ಸಮಸ್ಯೆಗಳು, ನಿರುದ್ಯೋಗ ಮತ್ತು ಬೆಲೆ ಏರಿಕೆಯಂತಹ ವಿಷಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಮತ್ತೆ ಧಾರ್ಮಿಕ ಘೋಷಣೆಗಳ ಮೊರೆ ಹೋಗುತ್ತಿದೆ ಎಂದು ಎಸ್‌ಪಿ ವಕ್ತಾರರು ಆರೋಪಿಸಿದ್ದಾರೆ.



