ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಳ್ಳೆಯ ಸ್ನೇಹಿತರು ಎಂದು ತಮ್ಮನ್ನು ತಾವು ಕರೆದುಕೊಳ್ಳುವವರು. ಈಗ ಅದೇ ಒಳ್ಳೆಯ ಸ್ನೇಹಿತರು ಸ್ನೇಹಿತರು ಸೇರಿಕೊಂಡು ತಮ್ಮ ತಮ್ಮ ಕ್ಷೇತ್ರಗಳನ್ನು ನಾಶಪಡಿಸುತ್ತಿದ್ದಾರೆ. ಮೋದಿ ಭಾರತವನ್ನು, ಟ್ರಂಪ್ ಇಡೀ ಜಗತನ್ನು ನಾಶಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಬಿ ಕೆ ಹರಿಪ್ರಸಾದ್ ಅಧಿಕಾರ ವಹಿಸಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. “ನೀಟ್ ಪರೀಕ್ಷೆ ವಿಚಾರದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮೋದಿ ಸರ್ಕಾರ ದ್ರೋಹ ಬಗೆದಿದೆ” ಎಂದು ದೂರಿದರು. ಹಾಗೆಯೇ ನೀಟ್ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ರಾಮಮಂದಿರ ಅಕ್ರಮ: ಅಯೋಧ್ಯೆ ತೊರೆಯದಂತೆ ಟ್ರಸ್ಟ್, ದೇವಾಲಯ ಸಿಬ್ಬಂದಿಗೆ ಎಸ್‌ಐಟಿ ಸೂಚನೆ
ಇಂಧನ ಬೆಲೆ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, “ನೆಹರೂ ಕಾಲದಿಂದಲೂ ಭಾರತ ಅಲಿಪ್ತ ನೀತಿಯನ್ನು ಅನುಸರಿಸುತ್ತಿದೆ. ಎಲ್ಲ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಂಡಿದೆ. ಆದರೆ ಆ ನೀತಿಯನ್ನು ಈಗ ಕೈಬಿಡಲಾಗಿದೆ. ಮೋದಿ ಎಲ್ಲರನ್ನೂ ತನ್ನ ಸ್ನೇಹಿತರು ಎಂದು ಕರೆಯುವ ಮೂಲಕ, ಅವರನ್ನು ಅಪ್ಪಿಕೊಳ್ಳುವ ಮೂಲಕ ನಮ್ಮನ್ನು ಈ ಪರಿಸ್ಥಿತಿಗೆ ತಂದಿದ್ದಾರೆ” ಎಂದು ದೂರಿದರು.
“ನಾವು (ಕಾಂಗ್ರೆಸ್ ಕಾರ್ಯಕರ್ತರು) ಯಾವ ಸರ್ಕಾರದಿಂದ ಜನರಿಗೆ ಪ್ರಯೋಜನವಾಗಿದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಸಬೇಕು. ಜನರ ಬಳಿಗೆ ಹೋಗಿ ಏನು ನಡೆಯುತ್ತಿದೆ ಎಂಬುದನ್ನು ಅವರಿಗೆ ಅರ್ಥಮಾಡಿಸಬೇಕು. ಪಕ್ಷದ ಮೂಲ ಮೌಲ್ಯ, ಸಿದ್ಧಾಂತಕ್ಕೆ ಧಕ್ಕೆಯಾಗದಂತೆ ನಮ್ಮ ಪಕ್ಷವನ್ನು ಕಟ್ಟಬೇಕು” ಎಂದು ಖರ್ಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.
“ರಾಮಮಂದಿರದಲ್ಲಿ ಧರ್ಮದ ಹೆಸರಿನಲ್ಲಿ ಲೂಟಿ”
ಇನ್ನು ಈ ಸಂದರ್ಭದಲ್ಲೇ ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್‌ಗೆ ಸಂಬಂಧಿಸಿದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಬಗ್ಗೆ ಬಿಜೆಪಿ ತರಾಟೆಗೆ ತೆಗೆದುಕೊಂಡರು. ಅಯೋಧ್ಯೆಯ ರಾಮಮಂದಿರದಲ್ಲಿ ಧರ್ಮದ ಹೆಸರಿನಲ್ಲಿ “ಲೂಟಿ” ನಡೆದಿದೆ ಎಂದು ಹೇಳಿದರು.
ಎಲ್ ಕೆ ಅಡ್ವಾಣಿಯವರ ರಥಯಾತ್ರೆಯ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಮತ್ತು ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ. ಆ ಸಂಗ್ರಹಗಳ ಬಗ್ಗೆ ಸರಿಯಾದ ಲೆಕ್ಕಪತ್ರವನ್ನು ನೀಡಲಾಗಿಲ್ಲ. ಇದೀಗ ದೇವಾಲಯಕ್ಕೆ ಸಂಬಂಧಿಸಿದ ಹಣಕಾಸಿನ ಅಕ್ರಮಗಳ ವರದಿಗಳು ಹೊರಬಿದ್ದಿವೆ ಎಂದರು.
ಇದನ್ನೂ ಓದಿ: ರಾಮಮಂದಿರ ದೇಣಿಗೆ ದುರುಪಯೋಗ: ಬಿಜೆಪಿಯ ಬ್ರಿಜ್ ಭೂಷಣ್ ಆರೋಪಗಳ ಸುತ್ತ
“ಸುಮಾರು 5,000 ಕೋಟಿ ರೂಪಾಯಿಗಳನ್ನು ದುರುಪಯೋಗ ಮಾಡಲಾಗಿದೆ ಎಂದು ವರದಿಗಳು ಹೇಳುತ್ತವೆ. ಅರ್ಚಕರು ಹಣವನ್ನು ದೋಚುತ್ತಿದ್ದಾರೆ. ರಾಮ ನಾಮ್ ಜಪನಾ, ಪರಾಯ ಮಾಲ್ ಅಪ್ನಾ (ರಾಮನ ಹೆಸರನ್ನು ಜಪಿಸಿ ಬೇರೆಯವರ ಆಸ್ತಿಯನ್ನು ನಿಮ್ಮದಾಗಿಸಿಕೊಳ್ಳಿ). ರಾಮನ ಹೆಸರಿನಲ್ಲಿ ಲೂಟಿ ನಡೆದಿದೆ. ಕೋಟ್ಯಂತರ ರೂಪಾಯಿಗಳನ್ನು ಲೂಟಿ ಮಾಡಲು ದೇವಾಲಯವನ್ನು ನಿರ್ಮಿಸಲಾಗಿದೆ” ಎಂದು ಆರೋಪಿಸಿದರು.
“ದೇವಾಲಯಗಳ ದೇಣಿಗೆ ಪೆಟ್ಟಿಗೆಗಳಿಂದ ಬರುವ ಹಣ ಎಲ್ಲೋ ಹೋಗುತ್ತಿದೆ. ಇದರ ಹಿಂದೆ ದೇವಾಲಯದ ಸಿಬ್ಬಂದಿ ಇದ್ದಾರೆಯೇ ಅಥವಾ ಬೇರೆ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯಬೇಕು” ಎಂದು ಆಗ್ರಹಿಸಿದರು.
“ದೇವರು ನಿಮ್ಮೊಂದಿಗಿದ್ದಾನೆ, ದೇವಾಲಯ ನಿಮ್ಮೊಂದಿಗಿದೆ, ಮೋದಿ ನಿಮ್ಮೊಂದಿಗಿದ್ದಾರೆ ಮತ್ತು ನೀವು ಮುಖ್ಯಮಂತ್ರಿಯಾಗಿರುವಾಗ ನಿಮಗೆ 15 ದಿನಗಳು ಏಕೆ ಬೇಕು?” ಎಂದು ಈ ಸಂದರ್ಭದಲ್ಲೇ ತನಿಖೆಗೆ 15 ದಿನ ಕೋರಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದರು. “ರಾಮನ ಹೆಸರಿನಲ್ಲಿ ಲೂಟಿ ಮಾಡಿದವರನ್ನು ಜೈಲಿಗೆ ಹಾಕಿ” ಎಂದು ಒತ್ತಾಯಿಸಿದರು.




