ಅಯೋಧ್ಯೆಯ ರಾಮಮಂದಿರಕ್ಕೆ ನೀಡಲಾಗುವ ದೇಣಿಗೆಗಳ ದುರುಪಯೋಗ ಮಾಡಲಾಗಿದೆ. ಅಕ್ರಮ ನಡೆದಿದೆ ಎಂಬ ಆರೋಪಗಳು ಸದ್ಯ ತೀವ್ರ ವಿವಾದಕ್ಕೆ ಕಾರಣವಾಗಿದೆ. ತನಿಖೆ ನಡೆಸಬೇಕೆಂಬ ಆಗ್ರಹ ಹೆಚ್ಚಾಗುತ್ತಿದ್ದಂತೆ ಈ ನಡುವೆ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಹಾಗೆಯೇ ಉದ್ಯೋಗಿಯೊಬ್ಬನ ಬಂಧನ ಮಾಡಲಾಗಿದೆ.
ಉತ್ತರ ಪ್ರದೇಶ ಸರ್ಕಾರ ಶನಿವಾರ ಲಕ್ನೋ ವಿಭಾಗೀಯ ಆಯುಕ್ತ ವಿಜಯ್ ವಿಶ್ವಾಸ್ ಪಂತ್, ಪೊಲೀಸ್ ಮಹಾನಿರ್ದೇಶಕ ಕಿರಣ್ ಎಸ್ ಮತ್ತು ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್ ಅವರನ್ನು ಒಳಗೊಂಡ ಮೂವರು ಸದಸ್ಯರ ಎಸ್‌ಐಟಿಯನ್ನು ರಚಿಸಿದೆ. ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರ ಈ ಎಸ್‌ಐಟಿ ತಂಡಕ್ಕೆ ಸೂಚಿಸಿದೆ.
ಇದನ್ನು ಓದಿದ್ದೀರಾ? ರಾಮಮಂದಿರ ದೇಣಿಗೆ ದುರುಪಯೋಗ: ಬಿಜೆಪಿಯ ಬ್ರಿಜ್ ಭೂಷಣ್ ಆರೋಪಗಳ ಸುತ್ತ
ತನಿಖೆಯ ಭಾಗವಾಗಿ, ರುಡೌಲಿಯ ಶುಜಗಂಜ್ ಪ್ರದೇಶದ ಮೀನಾಪುರ್ ಫಾಗೋಲಿಯ ನಿವಾಸಿ ಲವ್ ಕುಶ್ ಎಂದು ಗುರುತಿಸಲಾದ ವ್ಯಕ್ತಿಯನ್ನು ವಿಚಾರಣೆಗಾಗಿ ಬಂಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ಕೆಲವು ನಗದು ಕೂಡ ಪತ್ತೆಯಾಗಿದೆ ಎಂದು ವರದಿಯಾಗಿದೆ. ಆದರೆ ಎಷ್ಟು ಮೊತ್ತ, ಅದು ಅಯೋಧ್ಯೆಯ ರಾಮಮಂದಿರಕ್ಕೆ ಸೇರಿದ್ದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭಿಸಿಲ್ಲ.
ಆದರೆ ರಾಮಮಂದಿರದಲ್ಲಿ ಉದ್ಯೋಗಿಯಾಗಿರುವ ವ್ಯಕ್ತಿಯ ಬಂಧನವಾಗಿದೆ ಎಂಬ ಬಗ್ಗೆ ಪೊಲೀಸರು, ಜಿಲ್ಲಾಡಳಿತ ಅಥವಾ ದೇವಾಲಯ ಟ್ರಸ್ಟ್ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಈ ತಿಂಗಳ ಆರಂಭದಲ್ಲಿ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆಯಲ್ಲಿ ಕೋಟ್ಯಂತರ ರೂಪಾಯಿಗಳು ದುರುಪಯೋಗವಾಗಿದೆ ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ನಾಯಕ ಅಖಿಲೇಶ್ ಯಾದವ್ ಆರೋಪಿಸಿದ್ದರು. ಅಖಿಲೇಶ್ ಮಾತ್ರವಲ್ಲದೆ ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಕೂಡಾ ಸ್ವಪಕ್ಷೀಯರ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಇದನ್ನು ಓದಿದ್ದೀರಾ? ದೇಶಕ್ಕೆ ನೀಡಿದ್ದ ವಾಗ್ದಾನದಲ್ಲಿ ಎಷ್ಟು ಈಡೇರಿಸಿದ್ದೀರಿ; ರಾಮಮಂದಿರದಲ್ಲಿ ನಿಂತು ಹೇಳುತ್ತೀರಾ: ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ರಾಮಮಂದಿರ ಟ್ರಸ್ಟ್ ಕೆಲವು ಪ್ರಮುಖ ಪದಾಧಿಕಾರಿಗಳನ್ನು ಉಲ್ಲೇಖಿಸಿ ಮಾತನಾಡುತ್ತಾ, “ಕೆಲವರು ರಾಮಮಂದಿರ ಆಂದೋಲನವನ್ನು ತಮ್ಮ ವೈಯಕ್ತಿಕ ಆಸ್ತಿ ಮತ್ತು ರಾಜಕೀಯ ಬೆಳವಣಿಗೆಗೆ ಬಳಸಿಕೊಂಡರು. ಜನಸಾಮಾನ್ಯರು ಭಕ್ತಿಯಿಂದ ನೀಡಿದ ಹಣ ದುರುಪಯೋಗವಾಗಿದೆ” ಎಂದು ದೂರಿದ್ದಾರೆ. ಆದರೆ ಅಧಿಕ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರೂ ಇದೇ ಆರೋಪ ಮಾಡಿದ್ದಾರೆ.
ಹೀಗೆ ತಮ್ಮ ಪಕ್ಷದವರಿಂದಲೇ ಆರೋಪಗಳು ಕೇಳಿಬರುತ್ತಿದ್ದಂತೆ, ಹಿರಿಯ ಬಿಜೆಪಿ ನಾಯಕ ರಜನೀಶ್ ಸಿಂಗ್ ದೇಣಿಗೆಯ ಮಾಹಿತಿ ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು. ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಅವರು ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಆದರೆ ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಆಂತರಿಕ ಲೆಕ್ಕಪರಿಶೋಧನೆ ನಡೆಯುತ್ತಿದೆ ಮತ್ತು ಈ ಆರೋಪಕ್ಕೆ ಸಾಕ್ಷ್ಯ ಯಾವುದೂ ಸಿಕ್ಕಿಲ್ಲ ಎಂದಿದ್ದಾರೆ.




