ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಪ್ರತಿ ಲೀಟರ್‌ಗೆ ₹3 ರಷ್ಟು ದಿಢೀರ್ ಏರಿಕೆ ಮಾಡಲಾಗಿದ್ದು, ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. ಈ ಬೆಲೆ ಏರಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿರುವ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಗಳ ಸಚಿವ ಪ್ರಿಯಾಂಕ್ ಖರ್ಗೆ, “‘ಮೋದಿನಾಮಿಕ್ಸ್’ ಮತ್ತು ವಿದೇಶಾಂಗ ನೀತಿ ವಿಫಲವಾಗಿದೆ” ಎಂದು ಹೇಳಿದ್ದಾರೆ.
ಇಂಧನ ದರ ಏರಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, “ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಯಾವುದೇ ಪ್ರಯೋಜನವಿಲ್ಲದ ವಿಶ್ವ ಸಂಚಾರದಲ್ಲಿ ತೊಡಗಿದ್ದಾರೆ” ಎಂದು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ಕೇಂದ್ರದಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಬರೆ: ಪೆಟ್ರೋಲ್, ಡೀಸೆಲ್ ದರ 3 ರೂ ಹೆಚ್ಚಳ
ಇನ್ನು “ಚುನಾವಣೆಯ ಸಮಯದಲ್ಲಿ ಬೆಲೆ ಏರಿಕೆ ಘೋಷಣೆಗಳನ್ನು ತಡೆಯಲಾಗಿದೆ. ಇದೀಗ ಚುನಾವಣೆ ಮುಗಿದ ಬಳಿಕ ಘೋಷಣೆ ಮಾಡಲಾಗಿದೆ. ಇದು ‘ಅಚ್ಛೇ ದಿನ್’ ಭರವಸೆಯೇ” ಎಂದು ಪ್ರಶ್ನಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್ ಮತ್ತು ಇತರೆ ಇಂಧನಗಳನ್ನು ದುಂದುವೆಚ್ಚ ಮಾಡದಂತೆ, ಉಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಇನ್ನೊಂದೆಡೆ ಸಚಿವರು ದೇಶದಲ್ಲಿ ಅಧಿಕ ಇಂಧನ ಇದೆ ಎಂದು ಹೇಳುತ್ತಾರೆ. ಈ ವಿರೋಧಾಭಾಸಗಳು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ” ಎಂದು ಖರ್ಗೆ ಹೇಳಿದ್ದಾರೆ.
ಹಾಗೆಯೇ, ” ನಾವು ಎದುರಿಸುತ್ತಿರುವ ನಿಜವಾದ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಸಾರ್ವಜನಿಕರೊಂದಿಗೆ ಮತ್ತು ಸಂಸತ್ತಿನಲ್ಲಿ ಬಹಿರಂಗವಾಗಿ ಮಾತನಾಡಬೇಕು” ಎಂದು ಒತ್ತಾಯಿಸಿದ್ದಾರೆ.




