ರಾಜಧಾನಿಯಲ್ಲಿ ಬಿಎಂಟಿಸಿ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ದಿನನಿತ್ಯ ಚಿಲ್ಲರೆಗಾಗಿ ನಡೆಯುವ ಜಟಾಪಟಿ ಹೊಸದೇನಲ್ಲ. ಆದರೆ, ಶನಿವಾರ ರಾತ್ರಿ ಸ್ವತಃ ರಾಜ್ಯ ಸಾರಿಗೆ ಸಚಿವ ಬೈರತಿ ಸುರೇಶ್ ಅವರಿಗೇ ಈ ‘ಚಿಲ್ಲರೆ’ ಸಮಸ್ಯೆಯ ನೈಜ ದರ್ಶನವಾಗಿದೆ. ಟಿಕೆಟ್‌ಗಾಗಿ 100 ರೂ. ನೋಟು ನೀಡಿದ ಸಚಿವರಿಗೆ, ‘ಚಿಲ್ಲರೆ ಇಲ್ಲ, ಬಸ್ಸಿನಿಂದ ಕೆಳಗಿಳಿಯಿರಿ’ ಎಂದು ನಿರ್ವಾಹಕ ಹೇಳಿದ ಪ್ರಸಂಗ ನಡೆದಿದೆ.
ನಗರದ ಸಾರಿಗೆ ವ್ಯವಸ್ಥೆ, ಪ್ರಯಾಣಿಕರ ಸುರಕ್ಷತೆ ಮತ್ತು ಬಸ್ಸುಗಳ ಕಾರ್ಯನಿರ್ವಹಣೆಯ ನೈಜ ಸ್ಥಿತಿಯನ್ನು ಪರಿಶೀಲಿಸುವ ಉದ್ದೇಶದಿಂದ ಸಚಿವ ಬೈರತಿ ಸುರೇಶ್ ಅವರು ಶನಿವಾರ ರಾತ್ರಿ ವೇಷ ಮರೆಸಿಕೊಂಡು (ಮುಖಕ್ಕೆ ಮಾಸ್ಕ್ ಧರಿಸಿ) ಬಸ್ಸುಗಳಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿದರು.
ರಹಸ್ಯ ಕಾರ್ಯಾಚರಣೆಯ ಭಾಗವಾಗಿ ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿಗೆ ಪ್ರಯಾಣಿಸಲು ಸಚಿವರು ಬಿಎಂಟಿಸಿ ಬಸ್ ಹತ್ತಿದ್ದರು. ಎರಡು ಟಿಕೆಟ್ ನೀಡುವಂತೆ ಕೇಳಿ, ನಿರ್ವಾಹಕನಿಗೆ 100 ರೂಪಾಯಿ ಮುಖಬೆಲೆಯ ನೋಟನ್ನು ನೀಡಿದರು. ಈ ವೇಳೆ ನಿರ್ವಾಹಕ ನಿಖರವಾದ ಚಿಲ್ಲರೆ ನೀಡುವಂತೆ ಕೇಳಿದ್ದಾನೆ. ತಮ್ಮ ಬಳಿ ಚಿಲ್ಲರೆ ಇಲ್ಲವೆಂದು ಸಚಿವರು ಉತ್ತರಿಸಿದಾಗ, ನಿರ್ವಾಹಕ ತನ್ನ ಬಳಿಯಿದ್ದ ಹಣದ ಬ್ಯಾಗ್ (ಕ್ಯಾಶ್ ಬ್ಯಾಗ್) ತೆರೆದು ತೋರಿಸಿ, ‘ನನ್ನ ಬಳಿಯೂ ಸಾಕಷ್ಟು ಚಿಲ್ಲರೆ ಇಲ್ಲ, ಸರಿಯಾದ ಚಿಲ್ಲರೆ ನೀಡಲು ಸಾಧ್ಯವಾಗದಿದ್ದರೆ ಬಸ್ಸಿನಿಂದ ಕೆಳಗಿಳಿಯಿರಿ’ ಎಂದು ಕಡ್ಡಿ ಮುರಿದಂತೆ ಹೇಳಿದ್ದಾನೆ.
ಸಚಿವರು ಮುಖಕ್ಕೆ ಮಾಸ್ಕ್ ಧರಿಸಿದ್ದರಿಂದ, ಈ ಪ್ರಯಾಣಿಕ ರಾಜ್ಯದ ಸಾರಿಗೆ ಸಚಿವರೆಂಬ ವಿಚಾರ ನಿರ್ವಾಹಕನಿಗೆ ತಿಳಿದಿರಲಿಲ್ಲ. ನಿರ್ವಾಹಕನ ಮಾತಿಗೆ ಯಾವುದೇ ಮರುಪ್ರಶ್ನೆ ಹಾಕದ ಸಚಿವರು, ಸುಮ್ಮನೆ ಬಸ್ಸಿನಿಂದ ಕೆಳಗೆ ಇಳಿದಿದ್ದಾರೆ.
ಸಚಿವರು ಶನಿವಾರ ಸಂಜೆ 7.10 ರಿಂದ ರಾತ್ರಿ 9.10ರವರೆಗೆ ಸುಮಾರು ಎರಡು ಗಂಟೆಗಳ ಕಾಲ ಜಯಮಹಲ್, ಟಿವಿ ಟವರ್, ಆರ್‌ಟಿ ನಗರ, ಸಿಬಿಐ ರಸ್ತೆ, ಹೆಬ್ಬಾಳ, ಮಾನ್ಯತಾ ಟೆಕ್ ಪಾರ್ಕ್, ನಾಗವಾರ, ಹೆಣ್ಣೂರು, ಹೆಣ್ಣೂರು ಬಂಡೆ, ಬೈರತಿ ಬಂಡೆ ಮತ್ತು ಗೆದ್ದಲಹಳ್ಳಿ ಮಾರ್ಗಗಳಲ್ಲಿ ಸಂಚರಿಸಿ ಸಾರಿಗೆ ವ್ಯವಸ್ಥೆಯ ವಾಸ್ತವ ಸ್ಥಿತಿಯನ್ನು ಅರಿತರು.
ಬಸ್ಸಿನಿಂದ ಇಳಿದ ಬಳಿಕ ಸಚಿವರು ನಾಗಶೆಟ್ಟಿಹಳ್ಳಿಯಿಂದ ಆಟೋರಿಕ್ಷಾವೊಂದರಲ್ಲಿ ಪ್ರಯಾಣಿಸಿದ್ದಾರೆ. ಆಟೋ ಮೀಟರ್‌ನಲ್ಲಿ 30 ರೂ. ಬಾಡಿಗೆ ತೋರಿಸುತ್ತಿದ್ದರೂ, ಆಟೋ ಚಾಲಕ 36 ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಇದನ್ನು ಪ್ರಶ್ನಿಸಿದಾಗ, ‘ಮೀಟರ್ ಅನ್ನು ಮರುಹೊಂದಾಣಿಕೆ ಮಾಡಬೇಕಿದೆ’ ಎಂದು ಚಾಲಕ ಉತ್ತರಿಸಿದ್ದಾನೆ. ಅಂತಿಮವಾಗಿ ಸಚಿವರು 40 ರೂ. ಪಾವತಿಸಿ ಆಟೋದಿಂದ ಇಳಿದು ತೆರಳಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಸ್ ನಿರ್ವಾಹಕನನ್ನು ಅಮಾನತು ಮಾಡಲು ಸಾರಿಗೆ ಸಚಿವ ಬೈರತಿ ಸುರೇಶ್ ಆದೇಶಿಸಿದ್ದಾರೆ.




