“ಮಹಾತ್ಮ ಗಾಂಧೀಜಿ ಭಾರತದ ಆತ್ಮವಿದ್ದಂತೆ. ಅವರ ಹೆಸರು ಹಾಗೂ ವಿಚಾರಧಾರೆಯನ್ನು ಅಳಿಸಿಹಾಕಲು ಯಾರಿಂದಲೂ ಸಾಧ್ಯವಿಲ್ಲ. ಅವರ ತತ್ವಗಳನ್ನು ಯುವಪೀಳಿಗೆ ಮೈಗೂಡಿಸಿಕೊಳ್ಳಬೇಕು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಪಾದಿಸಿದರು.
ಶುಕ್ರವಾರ ಗಾಂಧಿ ಜಯಂತಿಯ ಅಂಗವಾಗಿ ನಗರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬೆಳಿಗ್ಗೆ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಅವರು, ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿದರು. ನಂತರ ಸರ್ಕಾರಿ ಕಲಾ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಸ್ತಂಭವನ್ನು ಅನಾವರಣಗೊಳಿಸಿ, ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದರು.
ಗಾಂಧಿವಾದ ಹಾಗೂ ವಿರೋಧಿಗಳ ನಡುವೆ ಸಂಘರ್ಷ:
“ದೇಶದಲ್ಲಿ ಪ್ರಸ್ತುತ ಎರಡು ವಿಚಾರಧಾರೆಗಳಿವೆ. ಒಂದು ಗಾಂಧಿ ತತ್ವವನ್ನು ಒಪ್ಪುವ ಗುಂಪು, ಮತ್ತೊಂದು ಗಾಂಧಿವಾದವನ್ನು ವಿರೋಧಿಸುವ ಗುಂಪು. ಇವೆರಡರ ನಡುವಿನ ಸಂಘರ್ಷವನ್ನು ಇಡೀ ದೇಶವೇ ಗಮನಿಸುತ್ತಿದೆ. ವ್ಯಕ್ತಿ ಮರಣ ಹೊಂದಿದರೂ ಅವರ ವಿಚಾರಧಾರೆಗಳು ಸಾಯುವುದಿಲ್ಲ. ಗಾಂಧೀಜಿಯವರನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ವಿದೇಶಿ ಗಣ್ಯರು ಭಾರತಕ್ಕೆ ಬಂದರೆ ಮೊದಲು ರಾಜಘಾಟ್ಗೆ ತೆರಳಿ ಗೌರವ ಸಲ್ಲಿಸುತ್ತಾರೆ. ಅವರ ನಿಧನದ ವೇಳೆ ವಿಶ್ವಸಂಸ್ಥೆಯ ಕಟ್ಟಡದಲ್ಲಿದ್ದ ವಿವಿಧ ರಾಷ್ಟ್ರಗಳ ಧ್ವಜಗಳನ್ನು ಅರ್ಧಮಟ್ಟಕ್ಕಿಳಿಸಿ ಗೌರವಿಸಲಾಗಿತ್ತು. ಹೀಗಾಗಿ ಅವರ ಜಾಗತಿಕ ಪ್ರಭಾವವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ” ಎಂದರು.
ಚೀನಾದಲ್ಲೂ ಗಾಂಧಿ ತತ್ವ ಬೋಧನೆ:
“ನಮಗಿಂತ ದೊಡ್ಡ ದೇಶವಾದ ಚೀನಾದಲ್ಲಿ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಗಾಂಧಿ ತತ್ವಗಳನ್ನು ಬೋಧಿಸಲಾಗುತ್ತಿದೆ. ವಿಶ್ವದ ಎಲ್ಲ ನಾಯಕರು ಅವರ ತತ್ವಗಳನ್ನು ಒಪ್ಪಿಕೊಂಡಿದ್ದಾರೆ. ಇಂದಿನ ಯುವ ಪೀಳಿಗೆ ಗಾಂಧೀಜಿಯವರ ಅಹಿಂಸೆ ಮತ್ತು ಶಾಂತಿಯ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
ಗಾಂಧಿವಾದಿಯಿಂದಲೇ ರಾಜಕೀಯಕ್ಕೆ ಪ್ರೇರಣೆ:
“ನನಗೆ 12-13 ವರ್ಷವಿದ್ದಾಗ ನಮ್ಮ ಕನಕಪುರದಲ್ಲಿ ಎಸ್. ಕರಿಯಪ್ಪ ಎಂಬ ಗಾಂಧಿವಾದಿ ಶಾಸಕರಿದ್ದರು. ಅವರು ಸ್ವಾತಂತ್ರ್ಯ ಹೋರಾಟಗಾರರು. ಒಮ್ಮೆ ನನ್ನ ಪೋಷಕರು ನನ್ನನ್ನು ಅವರ ಬಳಿ ಕರೆದೊಯ್ದು ಆಶೀರ್ವಾದ ಕೊಡಿಸಿದ್ದರು. ಆ ನಾಯಕನಿಗೆ ಜನ ಕೊಡುತ್ತಿದ್ದ ಅಪಾರ ಗೌರವವನ್ನು ನೋಡಿ, ಜನಸೇವೆ ಮಾಡಲು ನಾನೂ ರಾಜಕಾರಣಕ್ಕೆ ಬರಬೇಕು ಎಂಬ ಪ್ರೇರಣೆ ನನಗೆ ಸಿಕ್ಕಿತು” ಎಂದು ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದರು.
ಸೇವೆಯಿಂದ ಸಿಗುವ ಗೌರವ ಶಾಶ್ವತ:
“ದೇವರಿಗೆ ಯಾವುದೇ ಧರ್ಮವಿಲ್ಲ ಎಂಬ ಗಾಂಧೀಜಿ ಮಾತಿನಂತೆ ನನಗೂ ಎಲ್ಲಾ ಧರ್ಮಗಳ ಬಗ್ಗೆ ಗೌರವವಿದೆ. ಕುರ್ಚಿಯಿಂದ ಬರುವ ಗೌರವ ಶಾಶ್ವತವಲ್ಲ, ಸೇವೆಯಿಂದ ಸಿಗುವ ಗೌರವ ಮಾತ್ರ ಶಾಶ್ವತ. ‘ನಿನ್ನನ್ನು ನೀನು ನಿಯಂತ್ರಿಸಿಕೊಳ್ಳಬೇಕಾದರೆ ನಿನ್ನ ಮೆದುಳನ್ನು ಉಪಯೋಗಿಸು, ಮತ್ತೊಬ್ಬರನ್ನು ನಿಯಂತ್ರಿಸಲು ನಿನ್ನ ಹೃದಯವನ್ನು ಉಪಯೋಗಿಸು’ ಎಂಬ ಅವರ ಮಾತನ್ನು ನಾನು ಪಾಲಿಸುತ್ತೇನೆ. ‘ಸ್ವತಂತ್ರನಾಗಬೇಕಾದರೆ ಮೊದಲು ನಿರ್ಭೀತನಾಗಬೇಕು’ ಎಂಬ ಅವರ ಸಂದೇಶದಂತೆ ನಾನು ಯಾವುದೇ ಕೆಲಸ ಮಾಡುವಾಗಲೂ ಹೆದರುವವನಲ್ಲ. ಯಾವುದೇ ವಿಚಾರದಲ್ಲಿ ಸಂಪೂರ್ಣ ಶ್ರಮ (Full effort is full victory) ಹಾಕಿದಾಗಲೇ ನಾನು ಯಶಸ್ಸು ಕಂಡಿದ್ದೇನೆ” ಎಂದು ತಮ್ಮ ಅನುಭವ ಹಂಚಿಕೊಂಡರು.
”ಹಿಟ್ಲರ್ಗೆ ಗಾಂಧೀಜಿ ಬರೆದ ಪತ್ರದಲ್ಲಿ ಶಾಂತಿಯ ಬಹುದೊಡ್ಡ ಸಂದೇಶವಿದೆ. ಹಿಂಸೆ ಎಂದಿಗೂ ನಮ್ಮ ಗುರಿಯಾಗಬಾರದು. ದೇಶಕ್ಕೆ ಗಾಂಧಿ ತತ್ವಗಳನ್ನು ಅರಿತಿರುವವರ ಅಗತ್ಯ ಬಹಳಷ್ಟಿದೆ” ಎಂದರು. ಇದೇ ವೇಳೆ ಶೀಘ್ರದಲ್ಲೇ ಗಾಂಧೀಜಿ ಕುರಿತ ಪುಸ್ತಕ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಹಂಚಿಕೊಂಡರು.
”ನಾನು ರೇಣುಕಾಚಾರ್ಯ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕನಾಗಿದ್ದಾಗ ವೂಡೇ ಪಿ. ಕೃಷ್ಣ ಅವರು ಎಂಜಿನಿಯರಿಂಗ್ ಓದುತ್ತಿದ್ದರು. ಮನಸ್ಸು ಮಾಡಿದ್ದರೆ ಅವರೂ ರಾಜಕಾರಣಿಯಾಗಬಹುದಿತ್ತು. ನಾಯಕರನ್ನು ಸೃಷ್ಟಿಸುವವನೇ ನಿಜವಾದ ನಾಯಕ ಎಂಬ ರಾಜೀವ್ ಗಾಂಧಿ ಅವರ ಆಶಯದಂತೆ ಪಂಚಾಯಿತಿಯಿಂದ ಸಂಸತ್ತಿನವರೆಗೆ ನಾಯಕರನ್ನು ಬೆಳೆಸುವ ಕೆಲಸವನ್ನು ನಮ್ಮ ಪಕ್ಷ ಮಾಡುತ್ತಿದೆ” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.




