ಸತ್ಯ, ಅಹಿಂಸೆ, ಸರಳತೆ, ಕರ್ತವ್ಯನಿಷ್ಠೆ ಮತ್ತು ನೈತಿಕ ಮೌಲ್ಯಗಳು ಕೇವಲ ಇತಿಹಾಸದ ಪುಟಗಳಿಗೆ ಸೀಮಿತವಾಗದೆ, ಇಂದಿನ ಸಮಾಜದ ಬದುಕಿನಲ್ಲೂ ಅಳವಡಿಕೆಯಾಗಬೇಕಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.
ವಿಜಯಪುರದ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿಯವರ ಬದುಕಿನ ಪ್ರತಿಯೊಂದು ಹಂತವೂ ನೈತಿಕ ಮೌಲ್ಯಗಳ ಮಹತ್ವವನ್ನು ಸಾರುತ್ತದೆ ಎಂದರು.
ಬಾಲ್ಯದಲ್ಲಿಯೇ ಸತ್ಯ ಮತ್ತು ಕರ್ತವ್ಯದ ಮಹತ್ವವನ್ನು ಅರಿತುಕೊಂಡಿದ್ದ ಗಾಂಧೀಜಿ, ನಂತರ ಸತ್ಯ ಮತ್ತು ಅಹಿಂಸೆಯನ್ನು ತಮ್ಮ ಬದುಕಿನ ಪ್ರಮುಖ ತತ್ವಗಳನ್ನಾಗಿ ರೂಪಿಸಿಕೊಂಡರು. ಸಂಘರ್ಷದ ಸಂದರ್ಭದಲ್ಲಿಯೂ ಹಿಂಸೆಗೆ ಬದಲಾಗಿ ಅಹಿಂಸೆಯ ಮಾರ್ಗವನ್ನು ಆಯ್ಕೆ ಮಾಡಿಕೊಂಡ ಅವರ ಚಿಂತನೆ ಇಂದಿನ ಪೀಳಿಗೆಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿನಿಯರಲ್ಲಿ ಗಾಂಧೀಜಿಯವರ ವಿಚಾರಧಾರೆ ಹಾಗೂ ಸಂದೇಶಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎನ್‌ಎಸ್‌ಎಸ್ ಹಾಗೂ ಗಾಂಧಿ ಅಧ್ಯಯನ ಕೇಂದ್ರಗಳು ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್, ಫೇಸ್‌ಬುಕ್ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ನಿರಂತರವಾಗಿ ಮಾಹಿತಿ ಹಂಚಿಕೆ ಮತ್ತು ಅರಿವು ಮೂಡಿಸುವ ಚಟುವಟಿಕೆಗಳನ್ನು ನಡೆಸಬೇಕು. ಇದಕ್ಕೆ ವಿಶ್ವವಿದ್ಯಾಲಯದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ. ಪಿ.ಜಿ. ತಡಸದ ಅವರು, ಗಾಂಧೀಜಿಯವರ ಬಾಲ್ಯ, ಸ್ವಾತಂತ್ರ್ಯ ಹೋರಾಟ, ವೈಯಕ್ತಿಕ ಜೀವನ ಹಾಗೂ ವಿಚಾರಧಾರೆಗಳ ವಿವಿಧ ಆಯಾಮಗಳನ್ನು ವಿವರಿಸಿದರು.
This video cannot be played in your browser. Open the video directly
ಗಾಂಧೀಜಿಯವರ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಅವರ ತಾಯಿ ನೀಡಿದ ಸಂಸ್ಕಾರಗಳು ಮತ್ತು ವ್ರತಾಚರಣೆಗಳು ಪ್ರಮುಖ ಪಾತ್ರ ವಹಿಸಿದ್ದವು. ಬಾಲ್ಯದ ಅನುಭವಗಳೇ ಮುಂದೆ ಅವರ ಜೀವನದ ನೈತಿಕ ನಿಲುವುಗಳಿಗೆ ಭದ್ರ ಬುನಾದಿಯಾದವು ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ ನಡೆಸಿದ ಉಪವಾಸ ಸತ್ಯಾಗ್ರಹಗಳು, ಸ್ವಚ್ಛತೆಗೆ ಅವರು ನೀಡಿದ ಆದ್ಯತೆ, ನೈಸರ್ಗಿಕ ಚಿಕಿತ್ಸೆಯ ಮೇಲಿನ ನಂಬಿಕೆ ಹಾಗೂ ಸರಳ ಜೀವನಶೈಲಿ ಅವರ ವ್ಯಕ್ತಿತ್ವದ ಪ್ರಮುಖ ಅಂಶಗಳಾಗಿದ್ದವು ಎಂದು ವಿವರಿಸಿದರು.
ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನವನ್ನು ಸ್ಮರಿಸಿದ ಪ್ರೊ. ತಡಸದ ಅವರು, ಅಧಿಕಾರ ಮತ್ತು ಸ್ಥಾನಮಾನಕ್ಕಿಂತ ದೇಶಸೇವೆಗೆ ಆದ್ಯತೆ ನೀಡಿದ ಶಾಸ್ತ್ರಿಯವರ ಬದುಕು ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ವೈಯಕ್ತಿಕ ಸಂಪತ್ತಿನ ಆಸೆಗಿಂತ ದೇಶದ ಹಿತವನ್ನೇ ಜೀವನದ ಗುರಿಯಾಗಿಸಿಕೊಂಡಿದ್ದ ಶಾಸ್ತ್ರಿಯವರ ಸರಳತೆ ಮತ್ತು ಕರ್ತವ್ಯನಿಷ್ಠೆ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳಾಗಿವೆ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಸಂಗೀತ ವಿಭಾಗದ ವಿದ್ಯಾರ್ಥಿನಿಯರಾದ ಶ್ರುತಿ, ವೀಣಾ ಪತ್ತರ್ ಹಾಗೂ ತಂಡದವರು ‘ರಘುಪತಿ ರಾಘವ ರಾಜಾರಾಮ್’ ಗೀತೆಯನ್ನು ಪ್ರಸ್ತುತಪಡಿಸಿದರು.
ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ಡಾ. ರಾಜಕುಮಾರ ಮಾಲಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ. ಪ್ರಕಾಶ್ ಸಣ್ಣಕ್ಕನವರ್ ಕಾರ್ಯಕ್ರಮ ನಿರೂಪಿಸಿದರು. ಇಂಗ್ಲಿಷ್ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಕ್ಷಯ ಯಾರ್ಡಿ ವಂದಿಸಿದರು.





