ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಬೆನ್ನೆಲುಬಾಗಿರುವ ಸರ್ಕಾರಿ ಗುತ್ತಿಗೆದಾರರು ಸದ್ಯ ಸರ್ಕಾರದ ವಿರುದ್ಧ ಆಕ್ರೋಶದಲ್ಲಿದ್ದಾರೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಬರೋಬ್ಬರಿ ₹38,000 ಕೋಟಿಗೂ ಅಧಿಕ ಬಿಲ್ ಪಾವತಿಗಾಗಿ ರಾಜ್ಯ ಸರ್ಕಾರಕ್ಕೆ ‘ನವೆಂಬರ್ ಗಡುವು’ ನೀಡಿರುವ ಗುತ್ತಿಗೆದಾರರ ಸಂಘ, ಹಿಂದಿನ ಹೋರಾಟದ ಕಹಿ ನೆನಪಿನೊಂದಿಗೇ ಇದೀಗ ಮತ್ತೊಂದು ನಿರ್ಣಾಯಕ ಸಮರಕ್ಕೆ ಅಣಿಯಾಗಿದೆ.
ಗುತ್ತಿಗೆದಾರರು ಸರ್ಕಾರದ ವಿರುದ್ಧ ಸಿಡಿದೆದ್ದಿರುವುದು ಇದೇ ಮೊದಲಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರ ಸಂಘವು ‘40% ಕಮಿಷನ್’ ಆರೋಪ ಮಾಡಿ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಪ್ರಧಾನಿಗಳಿಗೆ ಪತ್ರ ಬರೆಯುವ ಮೂಲಕ ದೊಡ್ಡ ಮಟ್ಟದ ಹೋರಾಟ ನಡೆಸಿತ್ತು.
ಅಂದಿನ ಆ ಹೋರಾಟವು ರಾಜ್ಯದ ರಾಜಕೀಯ ಚಿತ್ರಣವನ್ನೇ ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿದ್ದ ಹಾಲಿ ನಾಯಕರು, ಗುತ್ತಿಗೆದಾರರ ಬೆಂಬಲಕ್ಕೆ ನಿಂತು, ಅಧಿಕಾರಕ್ಕೆ ಬಂದ ತಕ್ಷಣ ಎಲ್ಲ ಸಮಸ್ಯೆ ಬಗೆಹರಿಸುವ ಮತ್ತು ಶೀಘ್ರವಾಗಿ ಬಿಲ್ ಪಾವತಿಸುವ ಭರವಸೆ ನೀಡಿದ್ದರು.
ಇದನ್ನೂ ಓದಿ: ಸಾಲ ವಸೂಲಾತಿ ದಾದಾಗಿರಿಗೆ ಆರ್‌ಬಿಐ ತಡೆ: ಆದೇಶ ಕಾಗದಕ್ಕಷ್ಟೇ ಸೀಮಿತವಾಗದಿರಲಿ, ಗ್ರಾಹಕರಿಗೆ ನಿಜವಾದ ನೆಮ್ಮದಿ ಸಿಗಲಿ
This video cannot be played in your browser. Open the video directly
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗುತ್ತಿಗೆದಾರರು ಬಿಲ್ ಪಾವತಿಯ ನಿರೀಕ್ಷೆಯಲ್ಲಿದ್ದರು. ಆದರೆ, ಸರ್ಕಾರವು ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳ ಗುಣಮಟ್ಟ ಮತ್ತು ಅಕ್ರಮಗಳ ಪರಿಶೀಲನೆಗೆ ತನಿಖಾ ಸಮಿತಿಗಳನ್ನು (ನ್ಯಾ. ನಾಗಮೋಹನ್ ದಾಸ್ ಸಮಿತಿ ಸೇರಿದಂತೆ) ರಚಿಸಿತು.
“ತನಿಖೆ ಪೂರ್ಣಗೊಂಡು ವರದಿ ಬರುವವರೆಗೆ ಹಣ ಬಿಡುಗಡೆ ಇಲ್ಲ” ಎಂಬ ಕಟ್ಟುನಿಟ್ಟಿನ ನಿಲುವು ತಳೆಯಿತು. ಈ ಪ್ರತಿಕ್ರಿಯೆ ಗುತ್ತಿಗೆದಾರರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತು. ತನಿಖೆಗಳ ವಿಳಂಬದಿಂದಾಗಿ ವರ್ಷಗಳೇ ಉರುಳಿದರೂ, ಬಿಲ್ ಪಾವತಿ ಪ್ರಕ್ರಿಯೆ ಸಂಪೂರ್ಣ ನೆನೆಗುದಿಗೆ ಬಿತ್ತು. ಇತ್ತೀಚೆಗೆ ಕೆಲವು ಇಲಾಖೆಗಳಲ್ಲಿ ಸಣ್ಣಪುಟ್ಟ ಮೊತ್ತ ಬಿಡುಗಡೆಯಾದರೂ, ಬಹುಪಾಲು ಬೃಹತ್ ಮೊತ್ತ (ಸುಮಾರು 38 ಸಾವಿರ ಕೋಟಿ ರೂ.) ಹಾಗೆಯೇ ಉಳಿದುಕೊಂಡಿದೆ.
ಸರ್ಕಾರದ ತನಿಖೆ ಮತ್ತು ಪರಿಶೀಲನೆಗಳ ನೆಪದಲ್ಲಿ ಬಿಲ್ ಪಾವತಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಗುತ್ತಿಗೆದಾರರು ಈಗ ‘ನವೆಂಬರ್ ಡೆಡ್‌ಲೈನ್’ ಅಸ್ತ್ರ ಪ್ರಯೋಗಿಸಿದ್ದಾರೆ. ಬಿಬಿಎಂಪಿ, ಲೋಕೋಪಯೋಗಿ (PWD) ಮತ್ತು ನೀರಾವರಿ ಇಲಾಖೆಗಳಲ್ಲಿ ಸಾವಿರಾರು ಕೋಟಿ ಬಾಕಿ ಇದೆ. ಬ್ಯಾಂಕ್ ಮತ್ತು ಖಾಸಗಿ ಲೇವಾದೇವಿಗಾರರಿಂದ ದುಬಾರಿ ಬಡ್ಡಿಗೆ ಸಾಲ ತಂದು ಕಾಮಗಾರಿ ಮಾಡಿರುವ ಗುತ್ತಿಗೆದಾರರು, ಅಸಲು-ಬಡ್ಡಿ ಕಟ್ಟಲಾಗದೆ ಆಸ್ತಿಪಾಸ್ತಿ ಮಾರಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ.
ಯಾರು ಮೊದಲು ಕಾಮಗಾರಿ ಮುಗಿಸಿದ್ದಾರೋ ಅವರಿಗೆ ಮೊದಲ ಆದ್ಯತೆ ಮೇರೆಗೆ ಯಾವುದೇ ಕಮಿಷನ್ ಹಾವಳಿ ಇಲ್ಲದೆ ನೇರವಾಗಿ ಹಣ ಪಾವತಿಯಾಗಬೇಕು ಎಂಬುದು ಈಗಿನ ಪ್ರಮುಖ ಬೇಡಿಕೆ. ನವೆಂಬರ್ 30ರ ಒಳಗಾಗಿ ಹಂತ-ಹಂತವಾಗಿ ಬಿಲ್ ಪಾವತಿ ಮಾಡಲೇಬೇಕು. ಇಲ್ಲವಾದಲ್ಲಿ, ಡಿಸೆಂಬರ್ 1 ರಿಂದ ರಾಜ್ಯಾದ್ಯಂತ ನಡೆಯುತ್ತಿರುವ ಎಲ್ಲ ಸರ್ಕಾರಿ ಕಾಮಗಾರಿಗಳನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಅಷ್ಟು ಮಾತ್ರವಲ್ಲದೆ ಗಡುವು ಮೀರಿದರೆ ಹೊಸ ಟೆಂಡರ್‌ಗಳಲ್ಲಿ ಭಾಗವಹಿಸದೆ ಸಂಪೂರ್ಣ ಬಹಿಷ್ಕಾರ ಹಾಕಲಾಗುವುದು, ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸ ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಬೃಹತ್ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಒಟ್ಟಾರೆಯಾಗಿ, ಈ ಹಿಂದಿನ ಬಿಜೆಪಿ ಸರ್ಕಾರದ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದಿದ್ದ ಗುತ್ತಿಗೆದಾರರು ಇದೀಗ ಪ್ರಸ್ತುತ ಸರ್ಕಾರದ ತನಿಖೆ ಮತ್ತು ವಿಳಂಬ ನೀತಿಯಿಂದಲೂ ಹೈರಾಣಾಗಿದ್ದಾರೆ. ನವೆಂಬರ್ ಒಳಗಾಗಿ ಸರ್ಕಾರ ಈ ಬಿಕ್ಕಟ್ಟನ್ನು ಬಗೆಹರಿಸದಿದ್ದರೆ, ರಾಜ್ಯದ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ದೊಡ್ಡ ಮಟ್ಟದ ಬ್ರೇಕ್ ಬೀಳುವುದು ನಿಶ್ಚಿತ.





