ರಾಜ್ಯದಲ್ಲಿ ಇತ್ತೀಚೆಗೆ ನಡೆಸಲಾದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಆಡಿಟ್ ವರದಿಯೊಂದು ಹೊರಬಿದ್ದಿದ್ದು, ಈ ವರದಿ ರಾಜ್ಯ ರಾಜಕೀಯ ಹಾಗೂ ಸಾಂವಿಧಾನಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪ್ರಜಾಪ್ರಭುತ್ವದ ಅತಿ ದೊಡ್ಡ ಹಕ್ಕಾದ ‘ಮತದಾನ’ದ ಹಕ್ಕನ್ನು ರಾಜ್ಯದಲ್ಲಿ ಹೆಚ್ಚಾಗಿ ದಲಿತ, ಬುಡಕಟ್ಟು, ಅಲ್ಪಸಂಖ್ಯಾತ ಮತ್ತು ಮಹಿಳಾ ಮತದಾರರಿಂದ ಕಸಿದುಕೊಳ್ಳಲಾಗಿದೆ ಎಂಬ ಸತ್ಯ ಬಹಿರಂಗಗೊಂಡಿದೆ. ಶಾಸಕರ ಭವನದಲ್ಲಿ ನಡೆದ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ‘ಎದ್ದೇಳು ಕರ್ನಾಟಕ’ದ ಪದಾಧಿಕಾರಿ ನೂರ್ ಶ್ರೀಧರ್ ಕ್ಷೇತ್ರ ಮಟ್ಟದ ಪರಿಶೀಲನೆಯಿಂದ ಈ ಮಾಹಿತಿ ತಿಳಿದುಬಂದಿದೆ ಎಂದು ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿರುವ ವರದಿಯ ಪ್ರಕಾರ, ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ಮತ್ತು ‘ವರ್ಗಾವಣೆಗೊಂಡಿದ್ದಾರೆ’ ಎಂದು ನಮೂದಿಸಲಾದ ಮತದಾರರಲ್ಲಿ ಸಿಂಹಪಾಲು ಪರಿಶಿಷ್ಟ ಜಾತಿ (ದಲಿತರು), ಪರಿಶಿಷ್ಟ ಪಂಗಡ (ಬುಡಕಟ್ಟು), ಅಲ್ಪಸಂಖ್ಯಾತರು (ಮುಖ್ಯವಾಗಿ ಮುಸ್ಲಿಂ ಸಮುದಾಯ), ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಸೇರಿದ್ದಾರೆ.
ರಾಜ್ಯದಲ್ಲಿ ಒಟ್ಟಾರೆ ಶೇ.19.48ರಷ್ಟು ಮತದಾರರ ಹೆಸರನ್ನು ‘ಅನುಮಾನಾಸ್ಪದ’, ‘ವರ್ಗಾವಣೆ’ ಅಥವಾ ‘ಗೈರುಹಾಜರಿ’ ಎಂಬ ಕಾರಣಕ್ಕೆ ತೆಗೆದುಹಾಕಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪರಿಷ್ಕರಣೆಯ ಹೆಸರಿನಲ್ಲಿ ಅತ್ಯಂತ ಹೆಚ್ಚು ಅಂದರೆ ಶೇ. 46ರಷ್ಟು ಮತದಾರರ ಹೆಸರನ್ನು ರದ್ದುಗೊಳಿಸಲಾಗಿದೆ. ಇದರಲ್ಲಿ ಶೇ. 60ಕ್ಕೂ ಹೆಚ್ಚು ಹೆಸರುಗಳಿಗೆ ‘ಸ್ಥಳಾಂತರಗೊಂಡಿದ್ದಾರೆ’ ಎಂಬ ಕಾರಣ ನೀಡಲಾಗಿದೆ.
ಇದನ್ನೂ ಓದಿ: ಯಾದಗಿರಿ | ಎಸ್‌ಐಆರ್: ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರ ಮತಹಕ್ಕು ಕಸಿಯುವ ಸಂಚು ಎಂದು ಆರೋಪ
ಅತ್ಯಂತ ಹೆಚ್ಚು ‘ಖಾಯಂ ಆಗಿ ಸ್ಥಳಾಂತರಗೊಂಡಿದ್ದಾರೆ’ ಎಂದು ಗುರುತಿಸಲಾದ 20 ವಿಧಾನಸಭಾ ಕ್ಷೇತ್ರಗಳಲ್ಲಿ 14 ಕ್ಷೇತ್ರಗಳು ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಮೀಸಲಾದವುಗಳಾಗಿವೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಾದ ಮಾನ್ವಿ, ದೇವದುರ್ಗ, ಮಸ್ಕಿ ಮೊದಲಾದ ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ ಸರಾಸರಿ ಶೇ. 65ರಷ್ಟು ಬುಡಕಟ್ಟು ಮತದಾರರನ್ನು ಸ್ಥಳಾಂತರಗೊಂಡಿದ್ದಾರೆ ಎಂದು ಪಟ್ಟಿಯಿಂದ ಹೊರಗಿಡಲಾಗಿದೆ.
ಬೆಂಗಳೂರು ಗ್ರಾಮಾಂತರ ಭಾಗದ ಆನೇಕಲ್‌ನಂತಹ ದಲಿತ ಪ್ರಾಬಲ್ಯದ ಕ್ಷೇತ್ರದಲ್ಲಿ ಶೇ. 40ಕ್ಕೂ ಹೆಚ್ಚು ಮತದಾರರು ಡಿಲೀಟ್ ಆಗಿದ್ದು, ಅದರಲ್ಲಿ ಶೇ.81ರಷ್ಟು ಜನರನ್ನು ಸ್ಥಳಾಂತರಗೊಂಡಿದ್ದಾರೆ ಎಂದು ವರ್ಗೀಕರಿಸಲಾಗಿದೆ.
ಇನ್ನೊಂದೆಡೆ ಪುರುಷರಿಗಿಂತ ಮಹಿಳಾ ಮತದಾರರ ಹೆಸರುಗಳೇ ಹೆಚ್ಚಿನ ಪ್ರಮಾಣದಲ್ಲಿ ಡಿಲೀಟ್ ಆಗಿವೆ. ಮದುವೆ, ವಲಸೆ ಹಾಗೂ ಅಗತ್ಯ ದಾಖಲೆಗಳ ಕೊರತೆ ನೆಪದಲ್ಲಿ ಮಹಿಳೆಯರ ಮತದಾನದ ಹಕ್ಕು ಈ ಪ್ರಕ್ರಿಯೆಯಲ್ಲಿ ಬಲಿಯಾಗಿದೆ. ರಾಜ್ಯದ ಸರಾಸರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಲ್ಪಸಂಖ್ಯಾತರು ವಾಸಿಸುವ ಕ್ಷೇತ್ರಗಳಲ್ಲಿ ಮತದಾರರ ಹೆಸರನ್ನು ಕೈಬಿಡಲಾಗಿದೆ.
ಇತರ ರಾಜ್ಯಗಳಲ್ಲೂ ಇದೇ ರೀತಿಯ ಮತದಾರರ ಹಕ್ಕು ಕಸಿತ!
ಕರ್ನಾಟಕದಲ್ಲಿ ಕಂಡುಬಂದಿರುವ ಈ ಎಸ್‌ಐಆರ್ ಮಾದರಿಯ ಹಕ್ಕು ಕಸಿತದ ಪ್ರಕ್ರಿಯೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಚುನಾವಣಾ ಆಯೋಗವು ಕೈಗೊಂಡ ಎಸ್‌ಐಆರ್‌ನಲ್ಲಿ ದೇಶದ ಇತರ ಹಲವು ರಾಜ್ಯಗಳಲ್ಲೂ ಶೋಷಿತ ಸಮುದಾಯಗಳ ಮತ ಹಕ್ಕು ಇಲ್ಲದಂತಾಗಿದೆ.
ಮಹಾರಾಷ್ಟ್ರದ ಮುಂಬೈ ನಗರ ಮತ್ತು ಸುತ್ತಮುತ್ತಲಿನ ಕೊಳಚೆ ಪ್ರದೇಶಗಳು ಹಾಗೂ ಗ್ರಾಮೀಣ ಭಾಗದ ಶೋಷಿತ ವರ್ಗಗಳ ವಲಸೆ ಕಾರ್ಮಿಕರನ್ನು ‘ಖಾಯಂ ಸ್ಥಳಾಂತರಿತರು’ ಎಂದು ಪರಿಗಣಿಸಿ ಲಕ್ಷಾಂತರ ದಲಿತ ಮತ್ತು ಅಲ್ಪಸಂಖ್ಯಾತರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಉತ್ತರ ಪ್ರದೇಶದ ಪಶ್ಚಿಮ ಉತ್ತರ ಪ್ರದೇಶ ಮತ್ತು ಪೂರ್ವಾಂಚಲ ಭಾಗಗಳಲ್ಲಿ ಎಸ್‌ಐಆರ್ ಮತ್ತು ಆಧಾರ್ ಜೋಡಣೆ ಪ್ರಕ್ರಿಯೆಯ ವೇಳೆ ಲಕ್ಷಾಂತರ ಮುಸ್ಲಿಂ ಮತ್ತು ಯಾದವ/ದಲಿತ ಸಮುದಾಯದ ಮತದಾರರ ಹೆಸರುಗಳು ತಾಂತ್ರಿಕ ದೋಷ ಹಾಗೂ ತಪ್ಪು ನಮೂದುಗಳಿಂದ ಪಟ್ಟಿಯಿಂದ ಮಾಯವಾಗಿದ್ದವು.
ಇದನ್ನೂ ಓದಿ: ಕನ್ನಡಿಗರೇ ಗಮನಿಸಿ: ನಿಮ್ಮ ಗ್ಯಾರಂಟಿ ಯೋಜನೆ, ಸರ್ಕಾರಿ ಸೌಲಭ್ಯಗಳನ್ನೂ ಕಸಿದುಕೊಳ್ಳುತ್ತದೆ ‘ಎಸ್‌ಐಆರ್’
ಬಿಹಾರದಲ್ಲಿ ನಡೆದ ಎಸ್‌ಐಆರ್‌ನಲ್ಲಿ ಪ್ರವಾಹ ಮತ್ತು ಉದ್ಯೋಗಕ್ಕಾಗಿ ಹೊರರಾಜ್ಯಕ್ಕೆ ವಲಸೆ ಹೋಗುವ ಅತ್ಯಂತ ಹಿಂದುಳಿದ ವರ್ಗಗಳ (EBC) ಮತ್ತು ದಲಿತರ ಹೆಸರುಗಳನ್ನು ‘ಸ್ಥಳಾಂತರ’ ಎಂದು ನಮೂದಿಸಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಅಸ್ಸಾಂನಲ್ಲಿ ಎನ್‌ಆರ್‌ಸಿ ಪ್ರಕ್ರಿಯೆಯ ಬೆನ್ನಲ್ಲೇ ನಡೆದ ವಿಶೇಷ ಪರಿಷ್ಕರಣೆ (ಐಆರ್) ಪ್ರಕ್ರಿಯೆಯಲ್ಲಿ ಅಲ್ಪಸಂಖ್ಯಾತರು ಹಾಗೂ ಬಂಗಾಳಿ ಭಾಷಿಕ ದಲಿತ ಸಮುದಾಯದ ಮಹಿಳೆಯರನ್ನು ದಾಖಲೆಗಳ ಕೊರತೆಯ ನೆಪವೊಡ್ಡಿ ‘D-Voter’ (ಸಂದಿಗ್ಧ ಮತದಾರರು) ಪಟ್ಟಿಗೆ ಸೇರಿಸಿ ಮತದಾನದ ಹಕ್ಕಿನಿಂದ ವಂಚಿಸಲಾಯಿತು.
ಸದ್ಯ ಕರ್ನಾಟಕದಲ್ಲೂ ಅದೇ ರೀತಿ ಲಕ್ಷಾಂತರ ದಲಿತ, ಬುಡಕಟ್ಟು, ಅಲ್ಪಸಂಖ್ಯಾತ ಮತ್ತು ಮಹಿಳಾ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ‘ಎದ್ದೇಳು ಕರ್ನಾಟಕ’ದಂತಹ ಸಾಮಾಜಿಕ ಸಂಘಟನೆಗಳು ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರು, “ಬಡವರು, ಕೂಲಿ ಕಾರ್ಮಿಕರು ಮತ್ತು ವಲಸಿಗರಿಂದ ತಕ್ಷಣವೇ ಆಧಾರ್ ಅಥವಾ ಜಾಗದ ದಾಖಲೆಗಳನ್ನು ತಂದು ಹಾಜರುಪಡಿಸಲು ಸಾಧ್ಯವಾಗುವುದಿಲ್ಲ. ಇದನ್ನು ನೆಪ ಮಾಡಿಕೊಂಡು ಅವರ ಪ್ರಜಾಸತ್ತಾತ್ಮಕ ಹಕ್ಕನ್ನು ಕಸಿದುಕೊಳ್ಳುವುದು ಸಂವಿಧಾನ ವಿರೋಧಿ” ಎಂದು ಹೇಳಿದ್ದಾರೆ.




