ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪಶುವೈದ್ಯರ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಭಾರೀ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ತನಿಖಾ ಮಾಹಿತಿಯೊಂದು ಹೊರಬಿದ್ದಿದೆ. ಪರೀಕ್ಷೆಯಲ್ಲಿ ಟಾಪ್ ರ‍್ಯಾಂಕ್ ಗಳಿಸಿದ 14 ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯುವುದಕ್ಕೂ ಮುನ್ನವೇ ಸೋರಿಕೆಯಾದ ಪ್ರಶ್ನೆಗಳು ಲಭ್ಯವಾಗಿದ್ದವು ಎಂಬುದು ‘ಪ್ರಾಬಬಿಲಿಟಿ ಟೆಸ್ಟ್’ ಮೂಲಕ ತಿಳಿದುಬಂದಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯನ್ನು ಪ್ರಕಟಿಸಿದೆ.
ಪರೀಕ್ಷೆಗಳಲ್ಲಿ ಸೈಬರ್ ಹಾಗೂ ಗಣಿತದ ಮಾದರಿಗಳನ್ನು ಬಳಸಿಕೊಂಡು ಅಕ್ರಮ ಅಥವಾ ಸಾಮೂಹಿಕ ನಕಲನ್ನು ಪತ್ತೆಹಚ್ಚಲು ‘ಪ್ರಾಬಬಿಲಿಟಿ ಟೆಸ್ಟ್’ ನಡೆಸಲಾಗುತ್ತದೆ. ಬ್ಯಾಂಕಿಂಗ್ ಪರೀಕ್ಷೆಗಳನ್ನು ನಡೆಸುವ ಐಬಿಪಿಎಸ್ ಕೂಡ ಇಂತಹ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಸಂಭವನೀಯತೆಯ ತಂತ್ರಜ್ಞಾನವನ್ನು ಬಳಸುವುದು ವಾಡಿಕೆ. ತನಿಖಾ ಸಂಸ್ಥೆಯಾದ ಸಿಐಡಿ ನಡೆಸಿದ ಈ ಪ್ರಾಬಬಿಲಿಟಿ ವಿಶ್ಲೇಷಣೆಯಲ್ಲಿ, ಟಾಪ್ 14 ರ‍್ಯಾಂಕ್ ಪಡೆದ ಅಭ್ಯರ್ಥಿಗಳು ಪರೀಕ್ಷೆಗೂ ಮುನ್ನವೇ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಪಡೆದಿದ್ದರು ಎಂಬುದಕ್ಕೆ ಶೇಕಡ 99ರಷ್ಟು ಸಂಭವನೀಯತೆ (99% Probability) ಕಂಡುಬಂದಿದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಕೆಪಿಎಸ್‌ಸಿಯ ʼಭ್ರಷ್ಟʼ ರೋಗಕ್ಕೆ ಅರೆಬರೆ ತೇಪೆ ಸಾಕು; ಶಾಶ್ವತ ಮದ್ದು ಬೇಕು!
ತಪ್ಪು ಒಪ್ಪಿಕೊಂಡ 10 ಅಭ್ಯರ್ಥಿಗಳು
This video cannot be played in your browser. Open the video directly
ಟಾಪ್ 14 ರ‍್ಯಾಂಕ್ ಪಡೆದ ಅಭ್ಯರ್ಥಿಗಳಲ್ಲಿ ಈಗಾಗಲೇ 10 ಅಭ್ಯರ್ಥಿಗಳು ತಾವು ಪರೀಕ್ಷೆಗೂ ಮುನ್ನ ಮಧ್ಯವರ್ತಿಗಳಿಗೆ ಲಕ್ಷಾಂತರ ರೂಪಾಯಿ ಹಣ ನೀಡಿ ಪ್ರಶ್ನೆಪತ್ರಿಕೆ ಪಡೆದುಕೊಂಡಿದ್ದಾಗಿ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ. ಉಳಿದ 4 ಅಭ್ಯರ್ಥಿಗಳು ತಪ್ಪೊಪ್ಪಿಕೊಳ್ಳದಿದ್ದರೂ, ಗಣಿತಶಾಸ್ತ್ರೀಯ ವಿಶ್ಲೇಷಣೆ ಮತ್ತು ಸಿಐಡಿ ತನಿಖಾ ಸಾಕ್ಷ್ಯಗಳು ಅವರಿಗೂ ಸೋರಿಕೆಯಾದ ಪ್ರಶ್ನೆಗಳು ತಲುಪಿರುವುದನ್ನು ದೃಢಪಡಿಸಿವೆ ಎಂದು ವರದಿ ಹೇಳಿದೆ.
ಇಷ್ಟು ಮಾತ್ರವಲ್ಲದೆ, ಪರೀಕ್ಷೆಯ ‘ಸಾಮಾನ್ಯ ಜ್ಞಾನ’ ಪತ್ರಿಕೆಯಲ್ಲೂ ಮಾಜಿ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ನಿಕಟವರ್ತಿಗಳು ಸೇರಿದಂತೆ ಮತ್ತಿಬ್ಬರು ಅಭ್ಯರ್ಥಿಗಳು ಅಕ್ರಮವಾಗಿ ಪ್ರಶ್ನೆಗಳನ್ನು ಪಡೆದಿರುವ ಸಾಧ್ಯತೆಯನ್ನು ಈ ಪ್ರಾಬಬಿಲಿಟಿ ಪರೀಕ್ಷೆ ಬೆಟ್ಟುಮಾಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.
ಪರೀಕ್ಷೆಗೂ ಕೆಲ ದಿನಗಳ ಮುನ್ನ ಅಭ್ಯರ್ಥಿಗಳನ್ನು ರಹಸ್ಯ ರೆಸಾರ್ಟ್‌ಗಳು ಹಾಗೂ ವಿಲ್ಲಾಗಳಲ್ಲಿ ಇರಿಸಲಾಗಿತ್ತು. ಪರೀಕ್ಷೆಯಲ್ಲಿ ಬರುವ ಸುಮಾರು 60ರಿಂದ 80 ಪ್ರಶ್ನೆಗಳನ್ನು ಅಭ್ಯರ್ಥಿಗಳಿಗೆ ನೀಡಲಾಗಿದ್ದು, ಒಎಂಆರ್ ಶೀಟ್‌ನಲ್ಲಿ ಹೇಗೆ ಉತ್ತರಿಸಬೇಕು ಎಂಬುದನ್ನು ಮಧ್ಯವರ್ತಿಗಳು ಅವರಿಗೆ ತರಬೇತಿ ನೀಡಿದ್ದರು. ಒಂದೊಂದು ಹುದ್ದೆಗೆ 30 ಲಕ್ಷ ರೂ. ನಿಂದ 50 ಲಕ್ಷ ರೂ. ವರೆಗೆ ಡೀಲ್ ಕುದುರಿಸಲಾಗಿತ್ತು. ಟಾಪ್ ರ‍್ಯಾಂಕ್ ಗಳಿಸಿದ ಕೆಲವರು ಬರೋಬ್ಬರಿ 1.52 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಮಧ್ಯವರ್ತಿಗಳಿಗೆ ಪಾವತಿಸಿದ್ದಾರೆ ಎಂಬುದು ಸಿಐಡಿ ಮತ್ತು ಜಾರಿ ನಿರ್ದೇಶನಾಲಯದ (ಇಡಿ) ಜಂಟಿ ತನಿಖೆಯಿಂದ ಬಯಲಾಗಿದೆ.
ಏನಿದು ಕೆಪಿಎಸ್‌ಸಿ ಹಗರಣ?
2024ರಲ್ಲಿ ಪ್ರಕಟಿಸಲಾಗಿದ್ದ 400 ಪಶುವೈದ್ಯರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಜನವರಿ 9ರಂದು ಪರೀಕ್ಷೆ ನಡೆದಿತ್ತು. ಆದರೆ, ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ ಎಸಗಲಾಗಿದೆ ಮತ್ತು ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಜುಲೈ 24ರಂದು ಎಫ್‌ಐಆರ್ ದಾಖಲಾದ ನಂತರ ಕೆಪಿಎಸ್‌ಸಿ ಈ ನೇಮಕಾತಿಯ ಫಲಿತಾಂಶವನ್ನು ತಡೆಹಿಡಿದಿದೆ.
ಈ ಹಗರಣದಲ್ಲಿ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್, ಮಧ್ಯವರ್ತಿ ಬಸವರಾಜ್ ಕಣ್ಣಾಳೆ ಸೇರಿದಂತೆ ಪ್ರಮುಖ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ಹೆಸರು ಕೇಳಿಬಂದಿದೆ. ತಮ್ಮ ಸ್ವಂತ ಮಗಳ ಅಕ್ರಮ ನೇಮಕಾತಿ ಪ್ರಕರಣದಲ್ಲೂ ಸಿಲುಕಿದ್ದ ಸಾಹುಕಾರ್ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಪ್ರಸ್ತುತ ಸೈಬರ್ ಸಾಕ್ಷ್ಯಗಳು ಮತ್ತು ‘ಪ್ರಾಬಬಿಲಿಟಿ ಪರೀಕ್ಷೆ’ಯ ಈ ಆಘಾತಕಾರಿ ವರದಿಯು ತನಿಖಾ ಸಂಸ್ಥೆಗೆ ಕೋರ್ಟ್‌ನಲ್ಲಿ ಬಲವಾದ ಸಾಕ್ಷ್ಯವಾಗುವ ಸಾಧ್ಯತೆಯಿದೆ.





