ಪಿಂಚಣಿ ಎನ್ನುವುದು ಸರ್ಕಾರ ಅಥವಾ ಆಡಳಿತ ಮಂಡಳಿಗಳು ನೌಕರರಿಗೆ ನೀಡುವ ಯಾವುದೇ ಕೃಪೆ, ದಯೆ ಅಥವಾ ಭಿಕ್ಷೆಯಲ್ಲ; ಬದಲಿಗೆ ಅದು ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರ ಕಾನೂನುಬದ್ಧ ಹಕ್ಕು ಎಂದು ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅರ್ಹ ನೌಕರರ ಪಿಂಚಣಿ ಸೌಲಭ್ಯವನ್ನು ಸಕಾಲದಲ್ಲಿ ಗೌರವಿಸಿ ಪಾವತಿಸಬೇಕು ಎಂದು ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ವಿವಿಧ ಸ್ವಾಯತ್ತ ಸಂಸ್ಥೆಗಳಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ಹಳೇ ಪಿಂಚಣಿ ಯೋಜನೆಯ ಅಡಿಯಲ್ಲಿ ಪಿಂಚಣಿ ಸೌಲಭ್ಯಗಳನ್ನು ನಿರಾಕರಿಸಲಾಗಿತ್ತು. ನೌಕರರ ಸೇವಾ ವಿಲೀನ ಅಥವಾ ಆಡಳಿತಾತ್ಮಕ ಬದಲಾವಣೆಗಳ ನೆಪವೊಡ್ಡಿ, ಅವರ ಹಿಂದಿನ ಸೇವಾವಧಿಯನ್ನು ಪಿಂಚಣಿಗೆ ಪರಿಗಣಿಸಲು ಅಧಿಕಾರಿಗಳು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ನಿವೃತ್ತ ನೌಕರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: 2016ರ MLA ಚುನಾವಣೆಯಲ್ಲಿ ಡಿಎಂಕೆ ಅಭ್ಯರ್ಥಿ ಜಯ; ‘ಸುಪ್ರೀಂ’ ವಿಳಂಬಕ್ಕೆ ಹೈಕೋರ್ಟ್ ಬೇಸರ
ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು, ಅಧಿಕಾರಿಗಳ ಧೋರಣೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಒಬ್ಬ ನೌಕರನು ಹಿಂದೆ ಸಲ್ಲಿಸಿದ ಸೇವೆಯನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ಬಳಸಿಕೊಂಡು, ನಿವೃತ್ತಿಯ ನಂತರ ಪಿಂಚಣಿ ನೀಡುವ ಸಮಯದಲ್ಲಿ ಅದನ್ನು ಕೇವಲ ಒಂದು ‘ಐತಿಹಾಸಿಕ ಸಂಗತಿ’ ಎಂಬಂತೆ ಕಡೆಗಣಿಸಲು ಕಾನೂನು ಒಪ್ಪುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಪಿಂಚಣಿ ಪಾವತಿಯು ಯಾವುದೇ ಆಡಳಿತಾತ್ಮಕ ಔದಾರ್ಯವಲ್ಲ. ನೌಕರರು ತಮ್ಮ ಯೌವನ ಮತ್ತು ಜೀವನದ ಪ್ರಮುಖ ಘಟ್ಟವನ್ನು ಸಂಸ್ಥೆಯ ಏಳಿಗೆಗಾಗಿ ಮೀಸಲಿಟ್ಟಿರುತ್ತಾರೆ. ಹೀಗಾಗಿ ನಿವೃತ್ತಿಯ ನಂತರ ಅವರ ಜೀವನ ಭದ್ರತೆಗಾಗಿ ಪಿಂಚಣಿ ನೀಡುವುದು ಸರ್ಕಾರದ ಕಾನೂನುಬದ್ಧ ಕರ್ತವ್ಯವಾಗಿದೆ ಎಂದು ತಿಳಿಸಿದೆ.
ಒಂದೇ ರೀತಿಯ ಸೇವೆ ಸಲ್ಲಿಸಿದ ನೌಕರರ ನಡುವೆ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಪಿಂಚಣಿ ಸೌಲಭ್ಯದಲ್ಲಿ ತಾರತಮ್ಯ ಮಾಡುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಹೈಕೋರ್ಟ್‌ನ ಈ ಸ್ಪಷ್ಟ ನಿಲುವಿನಿಂದಾಗಿ, ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ಪಿಂಚಣಿ ವಂಚಿತರಾಗಿದ್ದ ರಾಜ್ಯದ ನೂರಾರು ನಿವೃತ್ತ ನೌಕರರು ಮತ್ತು ವಿಶ್ವವಿದ್ಯಾಲಯಗಳ ಸಿಬ್ಬಂದಿಗೆ ದೊಡ್ಡ ಮಟ್ಟದ ಕಾನೂನು ಬಲ ಸಿಕ್ಕಂತಾಗಿದೆ. ನಿಗದಿತ ಕಾಲಮಿತಿಯೊಳಗೆ ಅರ್ಹ ನೌಕರರ ಪಿಂಚಣಿ ಬಾಕಿಯನ್ನು ಇತ್ಯರ್ಥಪಡಿಸುವಂತೆ ನ್ಯಾಯಾಲಯವು ಸರ್ಕಾರಕ್ಕೆ ಸೂಚಿಸಿದೆ.



