ಬ್ರಿಟನ್‌ನಲ್ಲಿ ಕನಿಷ್ಠ 70 ಅಪ್ರಾಪ್ತ ಬಾಲಕಿಯರನ್ನು ಆನ್‌ಲೈನ್ ಮೂಲಕ ವಂಚಿಸಿ, ಲೈಂಗಿಕ ಕಿರುಕುಳ ನೀಡಿದ ಹಾಗೂ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಡಿ ಭಾರತೀಯ ಮೂಲದ ವಿದ್ಯಾರ್ಥಿ ಬಿಲಾಲ್ ಕಾಜಿ (27) ಎಂಬಾತನಿಗೆ ಅಲ್ಲಿನ ನ್ಯಾಯಾಲಯ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ತಾನೊಬ್ಬ 14 ವರ್ಷದ ಬಾಲಕ ಎಂದು ನಂಬಿಸಿ ಆತ ಈ ಪೈಶಾಚಿಕ ಕೃತ್ಯ ಎಸಗಿದ್ದ.
ಚೆಸ್ಟರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಬಿಲಾಲ್, 2021 ರಿಂದ 2025 ರ ನಡುವೆ ಸ್ನ್ಯಾಪ್‌ಚಾಟ್, ರೋಬ್ಲಾಕ್ಸ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ‘ರೀಸ್’ ಎಂಬ 14 ವರ್ಷದ ಬ್ರಿಟಿಷ್ ಬಾಲಕನ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದಿದ್ದ. 10 ರಿಂದ 17 ವರ್ಷದೊಳಗಿನ ಬಾಲಕಿಯರನ್ನು ಆನ್‌ಲೈನ್‌ನಲ್ಲಿ ಪರಿಚಯಿಸಿಕೊಂಡು, ಪ್ರೀತಿಯ ನಾಟಕವಾಡಿ ಅವರಿಂದ ಖಾಸಗಿ ಹಾಗೂ ಆಕ್ಷೇಪಾರ್ಹ ಚಿತ್ರಗಳು ಮತ್ತು ವಿಡಿಯೋಗಳನ್ನು ಕಳುಹಿಸುವಂತೆ ಒತ್ತಾಯಿಸುತ್ತಿದ್ದ.
ಬಾಲಕಿಯರು ಚಿತ್ರಗಳನ್ನು ಕಳುಹಿಸಲು ನಿರಾಕರಿಸಿದರೆ, ಅವರ ಖಾಸಗಿ ಚಿತ್ರಗಳನ್ನು ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಕಳುಹಿಸುವುದಾಗಿ ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಕೆಲವು ಪ್ರಕರಣಗಳಲ್ಲಿ ಬಾಲಕಿಯರ ಸಾಮಾಜಿಕ ಜಾಲತಾಣದ ಖಾತೆಗಳನ್ನು ಹ್ಯಾಕ್ ಮಾಡಿದ್ದ ಈತ, ಅವರ ಸಂಪರ್ಕದಲ್ಲಿದ್ದವರಿಗೆ ಆಕ್ಷೇಪಾರ್ಹ ಚಿತ್ರಗಳನ್ನು ರವಾನಿಸಿ ವಿಕೃತಿ ಮೆರೆದಿದ್ದ ಎಂಬುದು ತನಿಖೆಯಿಂದ ಬಯಲಾಗಿದೆ.
2021ರ ಡಿಸೆಂಬರ್‌ನಲ್ಲಿ 13 ವರ್ಷದ ಬಾಲಕಿಯೊಬ್ಬಳು ತನಗೆ ಆಗುತ್ತಿರುವ ಕಿರುಕುಳದ ಕುರಿತು ಪೊಲೀಸರಿಗೆ ದೂರು ನೀಡಿದಾಗ ಈ ಬೃಹತ್ ಜಾಲ ಬಯಲಿಗೆ ಬಂದಿದೆ. ಚೆಷೈರ್ ಪೊಲೀಸರು ತನಿಖೆ ಚುರುಕುಗೊಳಿಸಿ, 2023ರ ಜುಲೈನಲ್ಲಿ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಬಿಲಾಲ್‌ನನ್ನು ಬಂಧಿಸಿದ್ದರು. ಆತನ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಪರಿಶೀಲಿಸಿದಾಗ ಬರೋಬ್ಬರಿ 70 ಸಂತ್ರಸ್ತ ಬಾಲಕಿಯರನ್ನು ಪತ್ತೆಹಚ್ಚಲಾಯಿತು.
ಮಕ್ಕಳ ಅಶ್ಲೀಲ ಚಿತ್ರಗಳ ತಯಾರಿಕೆ, ಬ್ಲ್ಯಾಕ್‌ಮೇಲ್ ಸೇರಿದಂತೆ ಒಟ್ಟು 37 ಆರೋಪಗಳನ್ನು ಕಾಜಿ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾನೆ. ನವೆಂಬರ್ 13ರಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಸ್ಟೀಫನ್ ಎವೆರೆಟ್ ಅವರು, “ಆರೋಪಿಯೊಬ್ಬ ಅತ್ಯಂತ ಅಪಾಯಕಾರಿ ವ್ಯಕ್ತಿಯಾಗಿದ್ದು, ತನ್ನ ಕುತಂತ್ರದಿಂದ ಸಾಮಾಜಿಕ ಜಾಲತಾಣಗಳ ಮೂಲಕ ಮನೆಯೊಳಗಿದ್ದ ಮಕ್ಕಳ ಸುರಕ್ಷತೆಯನ್ನೇ ಕಸಿದುಕೊಂಡಿದ್ದಾನೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಪರಾಧಿಗೆ ಒಟ್ಟು 30 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದ್ದು, ಆತ ಪೆರೋಲ್‌ಗೆ ಅರ್ಹತೆ ಪಡೆಯಲು ಕನಿಷ್ಠ 20 ವರ್ಷಗಳ ಕಾಲ ಜೈಲಿನಲ್ಲಿ ಕಳೆಯಲೇಬೇಕು ಎಂದು ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. ಅಲ್ಲದೆ, ಆತನ ಹೆಸರನ್ನು ಜೀವಿತಾವಧಿಯವರೆಗೆ ‘ಲೈಂಗಿಕ ಅಪರಾಧಿಗಳ ಪಟ್ಟಿ’ಯಲ್ಲಿ (ಸೆಕ್ಸ್ ಅಫೆಂಡರ್ಸ್ ರಿಜಿಸ್ಟರ್) ದಾಖಲಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.



