ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣ (POCSO) ಕ್ಕೆ ಸಂಬಂಧಿಸಿದಂತೆ ಕಲಬುರಗಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐತಿಹಾಸಿಕ ತೀರ್ಪೊಂದನ್ನು ನೀಡಿದೆ. ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸುವುದರ ಜೊತೆಗೆ, ಬಾಲಕಿಯ ಬಾಲ್ಯವಿವಾಹ ಮಾಡಿದ್ದ ಪೋಷಕರು ಹಾಗೂ ಪತಿಯನ್ನು ಶಿಕ್ಷೆಗೊಳಪಡಿಸಿ ಆದೇಶಿಸಿದೆ.
ಏನಿದು ಪ್ರಕರಣ?
ನಾಗಪ್ಪ ಚಡಬನೂರ ಎಂಬಾತ ಅಪ್ರಾಪ್ತ ಬಾಲಕಿಯೊಬ್ಬಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಈ ಕಾಮುಕನ ಕಾಟದಿಂದ ಮಗಳನ್ನು ಪಾರು ಮಾಡುವ ಉದ್ದೇಶದಿಂದ, ಹೆದರಿದ ಪೋಷಕರು ಆಕೆಗೆ ಅವಸರದಲ್ಲಿ ಬಾಲವಿವಾಹ ಮಾಡಿಸಿದ್ದರು. 2024ರ ಸೆಪ್ಟೆಂಬರ್ 5ರಂದು ನಾಗಪ್ಪ ಚಡಬನೂರ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ, ಬಳಿಕ ವಾಡಿ ರೈಲು ನಿಲ್ದಾಣದಲ್ಲಿ ಆಕೆಯನ್ನು ಅನಾಥವಾಗಿ ಬಿಟ್ಟು ಪರಾರಿಯಾಗಿದ್ದ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್.ಎಲ್. ಚೌಹಾಣ್ ಅವರು, ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: ದಸರಾ ಉತ್ಸವ | ಮೊದಲ ಬಾರಿಗೆ ಮೈಸೂರಿನಲ್ಲಿ ಕಂಬಳ ಆಯೋಜಿಸಲು ಸಿದ್ಧತೆ
ನಾಗಪ್ಪ ಚಡಬನೂರನಿಗೆ 20 ವರ್ಷಗಳ ಕಠಿಣ ಕಾರಾಗೃಹ ವಾಸ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗಿದೆ. ಬಾಲ್ಯವಿವಾಹ ಮಾಡಿದ ತಪ್ಪಿಗಾಗಿ ಬಾಲಕಿಯ ತಂದೆ-ತಾಯಿ ಮತ್ತು ಆಕೆಯ ಪತಿಗೆ ತಲಾ ಒಂದು ವರ್ಷದ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ.
ನ್ಯಾಯಾಲಯ ಸಂತ್ರಸ್ತೆಯ ಭವಿಷ್ಯದ ದೃಷ್ಟಿಯಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ 5 ಲಕ್ಷ ರೂ. ಪರಿಹಾರವನ್ನು ಆಕೆಗೆ ನೀಡಬೇಕೆಂದು ಆದೇಶಿಸಿದೆ.




