ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಕೆಲಸದ ಒತ್ತಡ ಕಡಿತ ಸೇರಿದಂತೆ ವಿವಿಧ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ (ಐಸಿಡಿಎಸ್) ಹಾಗೂ ಅಕ್ಷರ ದಾಸೋಹ (ಬಿಸಿಯೂಟ) ನೌಕರರು ಶುಕ್ರವಾರ ‘ಕರಾಳ ದಿನಾಚರಣೆ’ ಅಂಗವಾಗಿ ಮುಷ್ಕರ ನಡೆಸಿ ಬೃಹತ್ ಪ್ರತಿಭಟನೆ ಮತ್ತು ಧರಣಿ ನಡೆಸಿದರು.
ತುಮಕೂರು ನಗರದ ಟೌನ್ ಹಾಲ್‌ನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿದ ಸಾವಿರಾರು ನೌಕರರು, ಸರ್ಕಾರಗಳ ನಿರಂತರ ನಿರ್ಲಕ್ಷ್ಯ ಮತ್ತು ಶೋಷಣೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಪ್ರತಿಭಟನಾಕಾರರು ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ–2020 ಹಾಗೂ ಅನುದಾನ ಕಡಿತದಿಂದ ಅಂಗನವಾಡಿ ವ್ಯವಸ್ಥೆ ದುರ್ಬಲವಾಗುತ್ತಿದ್ದು, 3–6 ವರ್ಷದ ಮಕ್ಕಳನ್ನು ಶಾಲೆಗಳ ಎಲ್‌ಕೆಜಿ–ಯುಕೆಜಿಗೆ ವರ್ಗಾಯಿಸುವ ಕ್ರಮವನ್ನು ವಿರೋಧಿಸಿದರು.
ರಾಜ್ಯ ಸರ್ಕಾರ ಚುನಾವಣಾ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ₹15,000 ಹಾಗೂ ಸಹಾಯಕಿಯರಿಗೆ ₹10,000 ಗೌರವಧನ ನೀಡಬೇಕು. 45ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸಿನಂತೆ ಕಾರ್ಯಕರ್ತೆಯರಿಗೆ ₹41,000, ಸಹಾಯಕಿಯರಿಗೆ ₹35,000 ಕನಿಷ್ಠ ವೇತನ ಹಾಗೂ ₹18,000 ಮಾಸಿಕ ಪಿಂಚಣಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ–ಯುಕೆಜಿ ಆರಂಭಿಸಬೇಕು. ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಆಟಿಕೆಗಳನ್ನು ಒದಗಿಸಿ ಕೇಂದ್ರಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಅಭಿವೃದ್ಧಿಪಡಿಸಬೇಕು. ಪೋಷಣ್ ಟ್ರ್ಯಾಕರ್ ಮತ್ತು ಇ-ಕೆವೈಸಿ ಮೂಲಕ ಉಂಟಾಗುತ್ತಿರುವ ತಾಂತ್ರಿಕ ತೊಂದರೆ ನಿವಾರಿಸಿ, ಡಿಜಿಟಲ್ ಕಾರ್ಯಗಳಿಗೆ ಟ್ಯಾಬ್ಲೆಟ್ ಹಾಗೂ ಡೇಟಾ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಬಿಎಲ್‌ಒ ಸೇರಿದಂತೆ ಇಲಾಖೇತರ ಕೆಲಸಗಳಿಂದ ಅಂಗನವಾಡಿ ನೌಕರರನ್ನು ಮುಕ್ತಗೊಳಿಸಬೇಕು. ಕೇಂದ್ರಗಳಿಗೆ ಕುಡಿಯುವ ನೀರು, ಅನಿಲ ಸಂಪರ್ಕ, ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಬಾಡಿಗೆ ಕಟ್ಟಡಗಳಿಗೆ ಮಾರುಕಟ್ಟೆ ದರದ ಬಾಡಿಗೆ ನೀಡಬೇಕು ಹಾಗೂ ಸಂಸ್ಕರಿತ ಆಹಾರದ ಬದಲು ಸ್ಥಳೀಯ ತಾಜಾ ಪೌಷ್ಟಿಕ ಆಹಾರ ವಿತರಣೆ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಅಕ್ಷರ ದಾಸೋಹ ನೌಕರರು, ಕಳೆದ ಹಲವು ವರ್ಷಗಳಿಂದ ವೇತನ ಹೆಚ್ಚಳವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ ಚುನಾವಣಾ ಭರವಸೆಯಂತೆ ₹7,000 ವೇತನ ಹೆಚ್ಚಳ, ದಿನಕ್ಕೆ 6 ಗಂಟೆಗಳ ಕೆಲಸ, ಆರೋಗ್ಯ ವಿಮೆ, ₹10,000 ಮಾಸಿಕ ಪಿಂಚಣಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು
ಇಸ್ಕಾನ್ ಹಾಗೂ ಮಠಗಳಿಗೆ ಬಿಸಿಯೂಟ ಯೋಜನೆಯ ಜವಾಬ್ದಾರಿ ವರ್ಗಾಯಿಸುವ ಪ್ರಸ್ತಾಪ ಕೈಬಿಡಬೇಕು. ಪ್ರತಿ ಶಾಲೆಯಲ್ಲೂ ಸುಸಜ್ಜಿತ ಅಡುಗೆ ಕೇಂದ್ರ ನಿರ್ಮಿಸಬೇಕು. ಕೆಲಸದ ಸ್ಥಳದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು. ಜಾತಿ ಆಧಾರದ ಮೇಲೆ ನೌಕರರನ್ನು ವಜಾಗೊಳಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಉತ್ತರ ಪ್ರದೇಶ ಹಾಗೂ ಪಂಜಾಬ್ ಹೈಕೋರ್ಟ್ ತೀರ್ಪಿನಂತೆ 12 ತಿಂಗಳ ಉದ್ಯೋಗ ಹಾಗೂ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಲು ಬಂದ ಜಿಲ್ಲಾಧಿಕಾರಿ ಶುಭ ಕಲ್ಯಾಣ ಅವರಿಗೆ ಅಂಗನವಾಡಿ ನೌಕರರು ಬಿಎಲ್‌ಒ ಕೆಲಸದ ವೇಳೆ ಎದುರಾಗುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ಉತ್ತಮ ಮೊಬೈಲ್ ಇಲ್ಲದಿರುವುದು, ನೆಟ್‌ವರ್ಕ್ ಸಮಸ್ಯೆ, ಮೊಬೈಲ್ ಕರೆ ಹಾಗೂ ಡೇಟಾ ವೆಚ್ಚಕ್ಕೆ ಯಾವುದೇ ಭತ್ಯೆ ನೀಡದಿರುವುದು ಕೆಲಸ ನಿರ್ವಹಣೆಗೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದರು. ನೌಕರರ ಸಮಸ್ಯೆಗಳ ಕುರಿತು ಜಿಲ್ಲಾ ಮಟ್ಟದಲ್ಲಿ ವಿಶೇಷ ಸಭೆ ಕರೆಯುವಂತೆ ಮನವಿ ಮಾಡಿದರು.
ಮನವಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ. ಸಿದ್ದರಾಮಯ್ಯ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿ ಸುಧಾಕರ್ ಸಹ ಸ್ವೀಕರಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಜಿ. ಕಮಲ, ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು, ಖಜಾಂಚಿ ಅನಸೂಯ, ಅಕ್ಷರ ದಾಸೋಹ ನೌಕರರ ಸಂಘದ ನಾಗರತ್ನಮ್ಮ, ಗಿರಿಜಾ ಹಾಗೂ ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಗೌರಮ್ಮ, ಜಬೀನಾ, ವನಜಾಕ್ಷಿ, ಅಧಿಲಕ್ಷ್ಮಿ, ಶಿವಗಂಗಮ್ಮ, ಪಾರ್ವತಮ್ಮ, ಯಶೋಧಮ್ಮ, ಹಾಲಮ್ಮ, ಪ್ರೇಮಾ, ಇಂದ್ರಮ್ಮ, ಸೌಭಾಗ್ಯ, ಗಿರಿಜಾ, ಲೀಲಾ, ಮಮತಾ, ಭಾರತಿ, ಭಾಗ್ಯ ಹಾಗೂ ಅಕ್ಷರ ದಾಸೋಹ ನೌಕರರ ಸಂಘದ ಮಂಜುಳ, ಮಂಜಮ್ಮ ಸೇರಿದಂತೆ ನೂರಾರು ನೌಕರರು ಭಾಗವಹಿಸಿ ನಾಯಕತ್ವ ವಹಿಸಿದ್ದರು.




