ಈ ಬಾರಿಯ ದಸರಾ ಮಹೋತ್ಸವದಲ್ಲಿ ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಕ್ರೀಡೆ ‘ಕಂಬಳ’ವನ್ನು ಮೈಸೂರಿನಲ್ಲಿ ಪರಿಚಯಿಸಲು ಸಿದ್ಧತೆ ನಡೆದಿದೆ. ದಸರಾ ಉತ್ಸವದ ಭಾಗವಾಗಿ ಅಕ್ಟೋಬರ್ 18 ಮತ್ತು 19ರಂದು ಎರಡು ದಿನಗಳ ಕಾಲ ಕಂಬಳ ಆಯೋಜಿಸಲು ಮನವಿ ಮಾಡಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಅನುದಾನ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
ದಸರಾ-2026ರ ಸಂಭ್ರಮಕ್ಕೆ ರಾಜ್ಯ ಸರ್ಕಾರ ಸಕಲ ಸಿದ್ಧತೆ ಆರಂಭಿಸಿದೆ. ಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ದಸರಾ ಮಹೋತ್ಸವದ ಅಧಿಕೃತ ದಿನಾಂಕಗಳನ್ನು ಅಂತಿಮಗೊಳಿಸಲಾಗಿದೆ.
ಜುಲೈ 26ರಂದು ದಸರಾ ಗಜಪಡೆಯ ಆಗಮನಕ್ಕೆ ‘ಗಜಪಯಣ’ ಕಾರ್ಯಕ್ರಮ ಆರಂಭವಾಗಲಿದೆ. ಆಗಸ್ಟ್ 26ರಂದು ಮೈಸೂರು ಅರಮನೆಯ ಪ್ರವೇಶ ದ್ವಾರದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುತ್ತದೆ. ಅಕ್ಟೋಬರ್ 11 (ಬೆಳಗ್ಗೆ 11.50)ರಂದು ಚಾಮುಂಡಿಬೆಟ್ಟದಲ್ಲಿ ಶುಭ ಧನುರ್ ಲಗ್ನದಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಅಕ್ಟೋಬರ್ 21 (ವಿಜಯದಶಮಿ)ರಂದು ಮೈಸೂರಿನ ರಾಜಬೀದಿಗಳಲ್ಲಿ ಅದ್ದೂರಿ ಜಂಬೂಸವಾರಿ ಮೆರವಣಿಗೆಯ ವೈಭವ ಮೇಳೈಸಲಿದೆ.
ವಿಜಯದಶಮಿಯ ದಿನವಾದ ಅ.21ರಂದು ಮಧ್ಯಾಹ್ನ 1.36ರಿಂದ 1.56ರ ನಡುವೆ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಸಂಜೆ 4.10ರಿಂದ 4.35ರ ನಡುವೆ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ದಸರಾ ಮಹೋತ್ಸವವನ್ನು ಇನ್ನಷ್ಟು ಅದ್ದೂರಿಯಾಗಿ ಆಚರಿಸಲು, ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ಅಗತ್ಯವಿರುವ ಭದ್ರತೆ, ಸ್ವಚ್ಛತೆ ಮತ್ತು ಮೂಲಸೌಕರ್ಯಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಲಾಗಿದೆ.
ಇದನ್ನೂ ಓದಿ: ಮೈಸೂರು | ರಾಮನಗರ, ಚನ್ನಪಟ್ಟಣ ಮುಸ್ಲಿಂ ಮತದಾರರ ಕುರಿತು ಕುಮಾರಸ್ವಾಮಿ ಆರೋಪಗಳು ನಿರಾಧಾರ: ವಕ್ತಾರ ರಾಜೇಶ್
ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ಕೆ. ವೆಂಕಟೇಶ್, ಎಚ್.ಸಿ. ಮಹದೇವಪ್ಪ ಹಾಗೂ ವಿವಿಧ ಜಿಲ್ಲೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಉದ್ಘಾಟಕರನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿದೆ




