ರಾಜ್ಯ ಪೊಲೀಸರ ಕಲ್ಯಾಣಕ್ಕೆ ಮಹತ್ವದ ಹೆಜ್ಜೆ ಇಟ್ಟಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶ ಹಾಗೂ ತೆಲಂಗಾಣ ಮಾದರಿಯಲ್ಲಿ ರಾಜ್ಯ ಪೊಲೀಸರ ಸಂಕಷ್ಟ ಭತ್ಯೆಯನ್ನು (ರಿಸ್ಕ್ ಅಲೋಯೆನ್ಸ್) ಶೇ 50ರಷ್ಟು ಹೆಚ್ಚಿಸಲು ಸರ್ಕಾರ ಸಮ್ಮತಿಸಿದೆ ಎಂದು ಪ್ರಕಟಿಸಿದ್ದಾರೆ. ಇದರ ಜತೆಗೆ, ತುರ್ತು ಕಾರ್ಯಾಚರಣೆಗಳಿಗಾಗಿ ಗಗನಚುಂಬಿ ಕಟ್ಟಡಗಳ ಮೇಲೆ ಹೆಲಿಪ್ಯಾಡ್ ನಿರ್ಮಾಣ ಕಡ್ಡಾಯ ಹಾಗೂ ರೌಡಿಗಳನ್ನು ಮಟ್ಟಹಾಕಲು ಪ್ರತ್ಯೇಕ ‘ರೌಡಿ ನಿಗ್ರಹ ಪಡೆ’ ರಚನೆಯಂತಹ ಮಹತ್ವದ ನಿರ್ಧಾರಗಳನ್ನು ಘೋಷಿಸಿದ್ದಾರೆ.
ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಕರ್ನಾಟಕ ರಾಜ್ಯ ಪೊಲೀಸರಿಗಾಗಿ ಸಮಗ್ರ ಸಾಮರ್ಥ್ಯ ವೃದ್ಧಿ ತರಬೇತಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. “ನಾಡಿನ ಜನರ ರಕ್ಷಣೆ ಮಾಡುವ ಪೊಲೀಸರು ಉತ್ತಮ ಬದುಕನ್ನು ನಡೆಸಬೇಕು. ಹೀಗಾಗಿ ಅವರ ಆರ್ಥಿಕ ಅಗತ್ಯಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಗೃಹ ಇಲಾಖೆಯು ಪೊಲೀಸರಿಗೆ ಅಗತ್ಯವಿರುವ ಎಲ್ಲ ಮೂಲಸೌಲಭ್ಯಗಳನ್ನು ಒದಗಿಸಲಿದೆ” ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡ ಮುಖ್ಯಮಂತ್ರಿಗಳು, “ಬೆಂಗಳೂರು ನಗರ ಸೇರಿದಂತೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ರೌಡಿಗಳನ್ನು ಮಟ್ಟಹಾಕಲು ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ‘ರೌಡಿ ನಿಗ್ರಹ ಪಡೆ’ ರಚಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಈ ತಂಡವು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಹಾಗೂ ಜನರಿಗೆ ಭದ್ರತೆ ಒದಗಿಸುವ ಕೆಲಸ ಮಾಡಲಿದೆ” ಎಂದು ಸ್ಪಷ್ಟಪಡಿಸಿದರು. ಜೊತೆಗೆ ಪೊಲೀಸರ ಮೇಲಿರುವ ಕಾರ್ಯದೊತ್ತಡ ಕಡಿಮೆ ಮಾಡಲು ಹಾಗೂ ಅವರಿಗೆ ಹೆಚ್ಚಿನ ವಸತಿ ಸೌಲಭ್ಯ ಕಲ್ಪಿಸಲು ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
“ಬೆಂಗಳೂರು ವಿಶ್ವಮಾನ್ಯ ನಗರವಾಗಿದ್ದು, ಇಲ್ಲಿ ಗಗನಚುಂಬಿ ಕಟ್ಟಡಗಳ ನಿರ್ಮಾಣ ಹೆಚ್ಚಾಗುತ್ತಿದೆ. ಅಗ್ನಿ ಅವಘಡ ಅಥವಾ ಭಯೋತ್ಪಾದಕ ದಾಳಿಗಳಂತಹ ತುರ್ತು ಸಂದರ್ಭಗಳಲ್ಲಿ ನಾಗರಿಕರ ಜೀವ ಉಳಿಸಲು ಹೆಲಿಪ್ಯಾಡ್ಗಳ ಬಳಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ, ಗಗನಚುಂಬಿ ಕಟ್ಟಡಗಳ ಮೇಲೆ ಹೆಲಿಪ್ಯಾಡ್ ನಿರ್ಮಾಣಕ್ಕೆ ಅಗತ್ಯ ಸ್ಥಳಾವಕಾಶ ಒದಗಿಸಬೇಕು. ಕಾನೂನು ಚೌಕಟ್ಟಿನಲ್ಲಿ ಬಿಲ್ಡರ್ಗಳು ಮತ್ತು ಡೆವಲಪರ್ಗಳಿಗೆ ಅನುಮತಿ ನೀಡಲು ಸರ್ಕಾರ ಸಿದ್ಧವಿದೆ. ಹೆಲಿಪ್ಯಾಡ್ ಬಳಕೆಗೆ ಸಂಬಂಧಿಸಿದಂತೆ ಸೇನೆ ಹಾಗೂ ವಾಯುಸೇನಾ ಅಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕುರಿತು ಗೃಹ ಸಚಿವರು ಶೀಘ್ರದಲ್ಲೇ ಮಾತುಕತೆ ನಡೆಸಲಿದ್ದಾರೆ” ಎಂದು ವಿವರಿಸಿದರು.
ರಾಷ್ಟ್ರೀಯ ಭದ್ರತಾ ಪಡೆಯ (ಎನ್ಎಸ್ಜಿ) ತರಬೇತಿಯನ್ನು ಶ್ಲಾಘಿಸಿದ ಸಿಎಂ, “ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದಾಗ ಶಿಷ್ಟರ ರಕ್ಷಣೆಗೆ ಪೊಲೀಸರು ಧಾವಿಸುತ್ತಾರೆ. ಸಜ್ಜನರನ್ನು ರಕ್ಷಿಸುವುದು, ದುರ್ಜನರನ್ನು ಶಿಕ್ಷಿಸುವುದು ಧರ್ಮದ ಕೆಲಸ. ನಮ್ಮ ರಾಜ್ಯ ಪೊಲೀಸರ ಕೌಶಲ ಹಾಗೂ ಸಾಮರ್ಥ್ಯ ಹೆಚ್ಚಿಸಲು ಎನ್ಎಸ್ಜಿ ಶಕ್ತಿ ತುಂಬುತ್ತಿರುವುದು ಸಾರ್ಥಕ ಕಾರ್ಯ. ಇಲ್ಲಿ ಪಡೆದ ತರಬೇತಿಯು ನಾಡಿನ ಜನರ ರಕ್ಷಣೆಗೆ ಬಳಕೆಯಾಗಬೇಕು. ಗಡಿಯಲ್ಲಿ ಸೈನಿಕನಿದ್ದಂತೆ, ಗಡಿಯೊಳಗೆ ಆರಕ್ಷಕರಿದ್ದಾರೆ. ಕಷ್ಟದ ಸಂದರ್ಭದಲ್ಲಿ ಪ್ರಾಣ ಪಣಕ್ಕಿಟ್ಟು ಹೋರಾಡುವ ನಮ್ಮ ಪೊಲೀಸರ ದಕ್ಷತೆ, ಕಾರ್ಯಪರತೆ ಹಾಗೂ ಕರ್ತವ್ಯ ನಿಷ್ಠೆಯ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ” ಎಂದು ತಿಳಿಸಿದರು.
ಹಿಂದೆ ತಾವು ಬಂಧಿಖಾನೆ ಸಚಿವರಾಗಿದ್ದಾಗಿನ ಅನುಭವ ಮೆಲುಕು ಹಾಕಿದ ಅವರು, “ಕೆಲವು ದುರ್ಘಟನೆಗಳಾದಾಗ ರಾಜಕಾರಣಿಗಳಾದ ನಾವು ನಿಮ್ಮನ್ನೇ ದೂಷಿಸಿದ ಉದಾಹರಣೆಗಳಿವೆ. ಆದರೆ ನೀವು ನಿಮ್ಮ ನಿಷ್ಠೆ, ಪ್ರಾಮಾಣಿಕತೆಯಿಂದ ದೇಶದ ಸಮಗ್ರತೆ, ಐಕ್ಯತೆ ಮತ್ತು ಶಾಂತಿ ಕಾಪಾಡುವುದು ಬಹಳ ಮುಖ್ಯ” ಕಿವಿಮಾತು ಹೇಳಿದರು.
“ಡಿಜಿಟಲ್ ಹಾಗೂ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ನಾವೂ ಅಪ್ಡೇಟ್ ಆಗುವುದು ಅನಿವಾರ್ಯ. ಅಪರಾಧ ನಿಯಂತ್ರಣ ಹಾಗೂ ದೇಶದ ರಕ್ಷಣೆಗೆ ಡ್ರೋನ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ನಮ್ಮ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುತುವರ್ಜಿ ವಹಿಸಿದ್ದಾರೆ” ಎಂದರು.
“ರಾಜ್ಯದಲ್ಲಿ 7 ಕೋಟಿ ಜನಸಂಖ್ಯೆಯಿದ್ದು, ವಿಶ್ವದ ಅತ್ಯುತ್ತಮ ಕಂಪನಿಗಳು ಹಾಗೂ 2 ಲಕ್ಷಕ್ಕೂ ಅಧಿಕ ವಿದೇಶಿಗರು ನಂಬಿಕೆ ಇಟ್ಟು ಇಲ್ಲಿ ನೆಲೆಸಿದ್ದಾರೆ. ಅವರೆಲ್ಲರಿಗೂ ಭದ್ರತೆ ಒದಗಿಸುವುದು ನಮ್ಮ ಕರ್ತವ್ಯ. ಗೃಹ ಮತ್ತು ಪೊಲೀಸ್ ಇಲಾಖೆಗಳು ಒಟ್ಟಾಗಿ ಈ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಿವೆ. ವಿದೇಶಿಗರು ಭಾರತಕ್ಕೆ ಬರುವಾಗ ಮೊದಲು ಕರ್ನಾಟಕಕ್ಕೆ ಕಾಲಿಡುತ್ತಾರೆ. ಕರ್ನಾಟಕ ಬಲಗೊಂಡರೆ ದೇಶ ಬಲಗೊಂಡಂತೆ. ಹೀಗಾಗಿ, ಪೊಲೀಸರ ಮೇಲಿರುವ ಜವಾಬ್ದಾರಿ ಹಿರಿದಾದದ್ದು” ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.




