ಬೆಂಗಳೂರಿನ ಮಾಗಡಿ ರಸ್ತೆ ಬಳಿಯ ಎರಡು ಕಲ್ಲು ಕ್ವಾರಿಗಳಲ್ಲಿ ಸಂಭವಿಸಿದ ಕುಸಿತದಿಂದಾಗಿ 7 ಮಂದಿ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ, ಅಧಿಕಾರಿಗಳಿಂದ ವಿಸ್ತೃತ ವರದಿ ಬಂದ ಬಳಿಕವಷ್ಟೇ ಮುಂದಿನ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇಂದು(ಜುಲೈ 2) ವಿಧಾನಸೌಧದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದುರಂತದ ಕುರಿತು ಪ್ರಾಥಮಿಕ ಮಾಹಿತಿಗಳನ್ನು ಹಂಚಿಕೊಂಡರು. ಘಟನಾ ಸ್ಥಳಕ್ಕೆ ಪೊಲೀಸ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಈ ದುರಂತವು ಯಾವುದೇ ಸ್ಫೋಟದಿಂದ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆದಾಗ್ಯೂ, ಈ ಕ್ವಾರಿಗಳು ಕಾನೂನುಬದ್ಧವಾಗಿ ಕಾರ್ಯಾಚರಣೆ ನಡೆಸುತ್ತಿದ್ದವೆಯೇ ಹಾಗೂ ಕ್ವಾರಿ ನಿರ್ವಹಣೆಯ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತೇ ಎಂಬುದರ ಬಗ್ಗೆ ಸಮಗ್ರ ವರದಿ ತರಿಸಿಕೊಂಡು ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು.
ಇದನ್ನು ಓದಿದ್ದೀರಾ? ಶ್ವೇತಭವನವೇ ಟ್ರಂಪ್‌ನ ಬಂಡವಾಳ ಕಚೇರಿ: ಅಧ್ಯಕ್ಷನಾದ ಒಂದೇ ವರ್ಷದಲ್ಲಿ ₹21 ಸಾವಿರ ಕೋಟಿ ಆದಾಯ
ಹಿಂದೊಮ್ಮೆ ಇದೇ ಪ್ರದೇಶದಲ್ಲಿ ನಡೆದಿದ್ದ ಸ್ಫೋಟದಲ್ಲಿ ಚಿರತೆಯೊಂದು ಮೃತಪಟ್ಟಿದ್ದರೂ ಯಾವುದೇ ತನಿಖೆ ನಡೆಸದೆ ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು ಎಂಬ ಸ್ಥಳೀಯ ಶಾಸಕರ ಆರೋಪದ ಬಗ್ಗೆಯೂ ಅವರು ಪ್ರತಿಕ್ರಿಯಿಸಿದರು. ‘ಶಾಸಕರು ಈ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆಯೂ ಅಧಿಕೃತ ವರದಿ ಪಡೆದ ನಂತರವೇ ಪ್ರತಿಕ್ರಿಯಿಸುತ್ತೇನೆ’ ಎಂದು ಹೇಳಿದರು.
ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ವಿತರಿಸುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ದುರಂತದಲ್ಲಿ ಮೃತಪಟ್ಟವರ ನಿಖರ ಅಂಕಿ-ಅಂಶಗಳು ಮೊದಲು ಲಭ್ಯವಾಗಲಿ. ಆನಂತರ ನಿಯಮಾನುಸಾರ ಪರಿಹಾರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಆತುರದಲ್ಲಿ ಪರಿಹಾರ ಘೋಷಣೆ ಮಾಡುವುದರಿಂದ ಮೃತರು ಮರಳಿ ಬರುವುದಿಲ್ಲ; ಇದಕ್ಕೊಂದು ನಿರ್ದಿಷ್ಟ ಸರ್ಕಾರಿ ಪ್ರಕ್ರಿಯೆ ಇದೆ. ಸಂತ್ರಸ್ತರಿಗೆ ಖಂಡಿತವಾಗಿಯೂ ಪರಿಹಾರ ಒದಗಿಸಲಾಗುವುದು. ಆದರೆ, ಭವಿಷ್ಯದಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಪ್ರಸ್ತುತ ನಮ್ಮ ಮೊದಲ ಆದ್ಯತೆಯಾಗಿದೆ’ ಎಂದು ಹೇಳಿದರು.




