ಕ್ರಿಪ್ಟೋ ಮಾತ್ರವಲ್ಲದೆ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಟ್ರಂಪ್ ಬ್ರ್ಯಾಂಡ್ ವಿಶ್ವದಾದ್ಯಂತ ಭಾರೀ ಲಾಭ ಮಾಡುತ್ತಿದೆ. ಅಮೆರಿಕದ ವಿದೇಶಾಂಗ ನೀತಿಯಲ್ಲಿ ಪ್ರಮುಖ ಪಾತ್ರ ವಹಿಸುವ ಸೌದಿ ಅರೇಬಿಯಾ ಮತ್ತು ಕತಾರ್ ದೇಶಗಳಲ್ಲಿ ‘ಟ್ರಂಪ್’ ಹೆಸರನ್ನು ಬಳಸಲು ಪರವಾನಗಿ ನೀಡಿದ್ದಕ್ಕಾಗಿ ಕನಿಷ್ಠ 14 ಮಿಲಿಯನ್ ಡಾಲರ್ (₹1,332.8 ಕೋಟಿ)ಸಂದಾಯವಾಗಿದೆ. ಮಧ್ಯಪ್ರಾಚ್ಯದ ಇತರ ಒಪ್ಪಂದಗಳಿಂದ 35 ಮಿಲಿಯನ್ ಡಾಲರ್( ₹3,332 ಕೋಟಿ), ಹಾಗೂ ಭಾರತ, ವಿಯೆಟ್ನಾಂ, ರೊಮೇನಿಯಾ, ಟರ್ಕಿ ಮತ್ತು ಇಂಡೋನೇಷ್ಯಾ ದೇಶಗಳ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳಿಂದ ಕನಿಷ್ಠ 20 ಮಿಲಿಯನ್ ಡಾಲರ್(₹1,904 ಕೋಟಿ) ಆದಾಯ ಟ್ರಂಪ್ ಕುಟುಂಬಕ್ಕೆ ಹರಿದುಬಂದಿದೆ.
ಅಮೆರಿಕದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಆರ್ಥಿಕ ವಿದ್ಯಮಾನವೊಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅಧಿಕಾರಾವಧಿಯಲ್ಲಿ ನಡೆದಿದೆ. ಶ್ವೇತಭವನಕ್ಕೆ ಮರಳಿದ ಕೇವಲ ಒಂದು ವರ್ಷದ ಅವಧಿಯಲ್ಲಿ (2025ನೇ ಸಾಲಿನಲ್ಲಿ) ಟ್ರಂಪ್ ಅವರು ಕನಿಷ್ಠ 2.2 ಬಿಲಿಯನ್ ಡಾಲರ್ (ಅಂದಾಜು ₹21 ಸಾವಿರ ಕೋಟಿ) ಆದಾಯ ಗಳಿಸಿದ್ದಾರೆ. 2024ರಲ್ಲಿ ಅಧ್ಯಕ್ಷರಾಗುವ ಮುನ್ನ ಅವರ ವ್ಯವಹಾರಗಳ ಗಳಿಕೆ 622 ಮಿಲಿಯನ್ ಡಾಲರ್(₹59 ಸಾವಿರ ಕೋಟಿ) ಇತ್ತು. ಮಂಗಳವಾರ ಬಿಡುಗಡೆಯಾದ ಅವರ ‘ಕಡ್ಡಾಯ ಹಣಕಾಸು ಬಹಿರಂಗಪಡಿಸುವಿಕೆ’ ವರದಿಯಿಂದ ಈ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಅಮೆರಿಕದ ಅಧ್ಯಕ್ಷೀಯ ಹುದ್ದೆ ಹಾಗೂ ಖಾಸಗಿ ವ್ಯವಹಾರಗಳ ನಡುವಿನ ಅಂತರ ಸಂಪೂರ್ಣವಾಗಿ ಅಳಿಸಿಹೋಗಿರುವ ಬಗ್ಗೆ ಗಂಭೀರ ಚರ್ಚೆ ಹಾಗೂ ಟೀಕೆಗಳು ಹುಟ್ಟುಕೊಂಡಿವೆ.
ಟ್ರಂಪ್ ಅವರ ಈ ಬೃಹತ್ ಗಳಿಕೆಗೆ ಪ್ರಮುಖ ಕಾರಣವಾಗಿರುವುದು ಕ್ರಿಪ್ಟೋ ಕರೆನ್ಸಿ ಉದ್ಯಮ. ಅಚ್ಚರಿಯ ಸಂಗತಿಯೆಂದರೆ, ಹಿಂದೆ ಇದೇ ಕ್ರಿಪ್ಟೋ ಕರೆನ್ಸಿಯನ್ನು “ವಂಚಕರು ಮತ್ತು ಡ್ರಗ್ಸ್ ದಂಧೆಕೋರರ ಸುರಕ್ಷಿತ ತಾಣ” ಎಂದು ಟೀಕಿಸುತ್ತಿದ್ದ ಟ್ರಂಪ್, ಈಗ ಅದೇ ಉದ್ಯಮದಿಂದ ಬರೋಬ್ಬರಿ 1.4 ಬಿಲಿಯನ್ ಡಾಲರ್(₹1.33 ಲಕ್ಷ ಕೋಟಿ) ಸಂಪಾದಿಸಿದ್ದಾರೆ. ತಮ್ಮ ಮೂವರು ಮಕ್ಕಳೊಂದಿಗೆ ಸೇರಿ ಹುಟ್ಟುಹಾಕಿದ ‘ವರ್ಲ್ಡ್ ಲಿಬರ್ಟಿ ಫೈನಾನ್ಷಿಯಲ್’ ಎಂಬ ಕ್ರಿಪ್ಟೋ ಸಂಸ್ಥೆ ಹಾಗೂ ತಮ್ಮದೇ ಹೆಸರಿನ ಡಿಜಿಟಲ್ ಟೋಕನ್‌ಗಳ ಮಾರಾಟವು ಟ್ರಂಪ್ ಕುಟುಂಬಕ್ಕೆ ಅಪಾರ ಪ್ರಮಾಣದ ಸಂಪತ್ತನ್ನು ತಂದುಕೊಡುವ ಅಕ್ಷಯ ಪಾತ್ರೆಯಾಗಿ ಪರಿಣಮಿಸಿದೆ.
ಅಮೆರಿಕದ ವಿದೇಶಾಂಗ ನೀತಿ ಮತ್ತು ಅಧ್ಯಕ್ಷರ ವೈಯಕ್ತಿಕ ಲಾಭದ ನಡುವಿನ ಗೆರೆ ಅಳಿಸಿಹೋಗಿರುವುದಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಜೊತೆಗಿನ ವ್ಯವಹಾರವು ಜ್ವಲಂತ ಉದಾಹರಣೆಯಾಗಿದೆ. 2025ರ ಜನವರಿಯಲ್ಲಿ, ಟ್ರಂಪ್ ಅವರು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಕೆಲವೇ ದಿನಗಳ ಮುನ್ನ, ಯುಎಇ ಸರ್ಕಾರದೊಂದಿಗೆ ನಂಟು ಹೊಂದಿರುವ ಹೂಡಿಕೆ ಸಂಸ್ಥೆಯೊಂದು ‘ವರ್ಲ್ಡ್ ಲಿಬರ್ಟಿ’ಯ ಶೇ 49ರಷ್ಟು ಷೇರುಗಳನ್ನು ಖರೀದಿಸಿತು. ಈ ಒಪ್ಪಂದದ ಬೆನ್ನಲ್ಲೇ, ಅಮೆರಿಕದ ರಾಷ್ಟ್ರೀಯ ಭದ್ರತಾ ಅಧಿಕಾರಿಗಳ ತೀವ್ರ ವಿರೋಧದ ನಡುವೆಯೂ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಕ್ಕೆ ಬಳಸುವ ಅತ್ಯಮೂಲ್ಯ ಕಂಪ್ಯೂಟರ್ ಚಿಪ್‌ಗಳನ್ನು ಯುಎಇಗೆ ರಫ್ತು ಮಾಡಲು ಟ್ರಂಪ್ ಆಡಳಿತ ಅನುಮತಿ ನೀಡಿದ್ದು ತೀವ್ರ ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಹೂಡಿಕೆಯಿಂದ ಟ್ರಂಪ್‌ಗೆ 200 ಮಿಲಿಯನ್ ಡಾಲರ್‌ಗೂ(₹1,904 ಕೋಟಿ) ಅಧಿಕ ಆದಾಯ ಬಂದಿದೆ.
ಕ್ರಿಪ್ಟೋ ಟೋಕನ್‌ಗಳ ಮಾರಾಟದ ಅಂಕಿಅಂಶಗಳು ಮತ್ತಷ್ಟು ದಂಗುಬಡಿಸುವಂತಿವೆ. ವರ್ಲ್ಡ್ ಲಿಬರ್ಟಿಯ ‘$WLFI’ ಡಿಜಿಟಲ್ ಕರೆನ್ಸಿ ಮಾರಾಟದಿಂದ 2024ರಲ್ಲಿ 57 ಮಿಲಿಯನ್ ಡಾಲರ್(5,426 ಕೋಟಿ) ಗಳಿಸಿದ್ದ ಟ್ರಂಪ್, 2025ರಲ್ಲಿ ಬರೋಬ್ಬರಿ 799 ಮಿಲಿಯನ್ ಡಾಲರ್(7,604.48 ಕೋಟಿ) ಕಮಾಯಿ ಮಾಡಿದ್ದಾರೆ. ಈ ಒಪ್ಪಂದದ ಪ್ರಕಾರ, ಕಾಯಿನ್ ಮೌಲ್ಯ ಕುಸಿದರೂ ಟ್ರಂಪ್ ಕುಟುಂಬಕ್ಕೆ ಶೇ 75ರಷ್ಟು ಆದಾಯ ಖಾತರಿಯಾಗಿತ್ತು. ಇದಲ್ಲದೆ, ‘$TRUMP’ ಹೆಸರಿನ ಮೆಮ್‌ಕಾಯಿನ್ ಮಾರಾಟದಿಂದ ಕನಿಷ್ಠ 636 ಮಿಲಿಯನ್ ಡಾಲರ್(6,054.72 ಕೋಟಿ) ಆದಾಯ ಬಂದಿದೆ. ಪ್ರಸ್ತುತ ಈ ಕಾಯಿನ್‌ನ ಮೌಲ್ಯ ಕಳೆದ ವರ್ಷಕ್ಕಿಂತ ಶೇ 80ರಷ್ಟು ಕುಸಿದು ಕೇವಲ 1.67 ಡಾಲರ್‌ಗೆ ತಲುಪಿದ್ದರೂ, ಟ್ರಂಪ್ ಅವರ ಖಾತೆ ಮಾತ್ರ ಆಗಲೇ ಭರ್ತಿಯಾಗಿದೆ.
ಇದನ್ನು ಓದಿದ್ದೀರಾ? ದೇಶದ ರಿಯಲ್ ಎಸ್ಟೇಟ್ ಮೇಲೆ ಯುದ್ಧದ ಕಾರ್ಮೋಡ: 7 ನಗರಗಳಲ್ಲಿ ವಸತಿ ಮಾರಾಟ ಕುಸಿತ
ಈ ಹಿತಾಸಕ್ತಿ ಸಂಘರ್ಷದ ಬಗ್ಗೆ ಬುಧವಾರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ತಮ್ಮ ಮೇಲಿನ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. “ನಾನು ಹಣಕಾಸು ನಿರ್ವಹಣೆ ಮಾಡುವವರೊಂದಿಗೆ ಎಂದಿಗೂ ಮಾತನಾಡುವುದಿಲ್ಲ. ನನ್ನ ಆದಾಯ ಹೆಚ್ಚಾಗಲು ಷೇರುಪೇಟೆಯ ಏರಿಕೆಯೇ ಕಾರಣ,” ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ವಾಸ್ತವದಲ್ಲಿ ಅವರು ವರ್ಷಕ್ಕೊಮ್ಮೆ ತಮ್ಮ ಆರ್ಥಿಕ ಸಲಹೆಗಾರರನ್ನು ಭೇಟಿಯಾಗಿ ಲೆಕ್ಕಾಚಾರ ಪಡೆಯುತ್ತಾರೆ. ಅಲ್ಲದೆ, ಯುಎಇಯ ಬೃಹತ್ ಹೂಡಿಕೆ ಹಾಗೂ ಬ್ರ್ಯಾಂಡಿಂಗ್ ಒಪ್ಪಂದಗಳನ್ನು ಕೇವಲ ಷೇರುಪೇಟೆಯ ಏರಿಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ.
ಕೇವಲ ಕ್ರಿಪ್ಟೋ ಮಾತ್ರವಲ್ಲದೆ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಟ್ರಂಪ್ ಬ್ರ್ಯಾಂಡ್ ವಿಶ್ವದಾದ್ಯಂತ ಭಾರೀ ಲಾಭ ಮಾಡುತ್ತಿದೆ. ಅಮೆರಿಕದ ವಿದೇಶಾಂಗ ನೀತಿಯಲ್ಲಿ ಪ್ರಮುಖ ಪಾತ್ರ ವಹಿಸುವ ಸೌದಿ ಅರೇಬಿಯಾ ಮತ್ತು ಕತಾರ್ ದೇಶಗಳಲ್ಲಿ ‘ಟ್ರಂಪ್’ ಹೆಸರನ್ನು ಬಳಸಲು ಪರವಾನಗಿ ನೀಡಿದ್ದಕ್ಕಾಗಿ ಕನಿಷ್ಠ 14 ಮಿಲಿಯನ್ ಡಾಲರ್ (₹1,332.8 ಕೋಟಿ) ಸಂದಾಯವಾಗಿದೆ. ಮಧ್ಯಪ್ರಾಚ್ಯದ ಇತರ ಒಪ್ಪಂದಗಳಿಂದ 35 ಮಿಲಿಯನ್ ಡಾಲರ್( ₹3,332 ಕೋಟಿ), ಹಾಗೂ ಭಾರತ, ವಿಯೆಟ್ನಾಂ, ರೊಮೇನಿಯಾ, ಟರ್ಕಿ ಮತ್ತು ಇಂಡೋನೇಷ್ಯಾ ದೇಶಗಳ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳಿಂದ ಕನಿಷ್ಠ 20 ಮಿಲಿಯನ್ ಡಾಲರ್(₹1,904 ಕೋಟಿ) ಆದಾಯ ಟ್ರಂಪ್ ಕುಟುಂಬಕ್ಕೆ ಹರಿದುಬಂದಿದೆ.
ಅಮೆರಿಕದೊಳಗಿನ ಅವರ ಸಾಂಪ್ರದಾಯಿಕ ರಿಯಲ್ ಎಸ್ಟೇಟ್ ವ್ಯವಹಾರಗಳು ಸಹ ಲಾಭದಾಯಕವಾಗಿ ಮುಂದುವರಿದಿವೆ. ಮಿಯಾಮಿಯ ಬಳಿ ಇರುವ ಟ್ರಂಪ್ ನ್ಯಾಷನಲ್ ಗಾಲ್ಫ್ ಕ್ಲಬ್ 122 ಮಿಲಿಯನ್ ಡಾಲರ್(₹1,161.44 ಕೋಟಿ) (ಹಿಂದಿನ ವರ್ಷ 110 ಮಿಲಿಯನ್ ಡಾಲರ್-₹1,047.2 ಕೋಟಿ) ತಂದುಕೊಟ್ಟಿದ್ದರೆ, ಅವರ ಪ್ರಸಿದ್ಧ ಮಾರ್-ಎ-ಲಾಗೊ ಕ್ಲಬ್‌ನಿಂದ 77 ಮಿಲಿಯನ್ ಡಾಲರ್(₹7,330.4 ಕೋಟಿ) (ಹಿಂದಿನ ವರ್ಷ 50 ಮಿಲಿಯನ್ ಡಾಲರ್-₹4,760 ಕೋಟಿ) ಆದಾಯ ಬಂದಿದೆ. ಇದಲ್ಲದೆ, ಅವರದ್ದೇ ಒಡೆತನದ ಸಾರ್ವಜನಿಕ ಲಿಸ್ಟೆಡ್ ಸಾಮಾಜಿಕ ಜಾಲತಾಣ ಸಂಸ್ಥೆ ‘ಟ್ರಂಪ್ ಮೀಡಿಯಾ ಆ್ಯಂಡ್ ಟೆಕ್ನಾಲಜಿ ಗ್ರೂಪ್’ನ ಷೇರುಗಳ ಮೌಲ್ಯ ಸುಮಾರು 875 ಮಿಲಿಯನ್ ಡಾಲರ್( ಭಾರತೀಯ ರೂಪಾಯಿ (₹8,330 ಕೋಟಿ) ಎಂದು ಅಂದಾಜಿಸಲಾಗಿದ್ದು, ಇದು ಅವರ ಒಟ್ಟು ಆಸ್ತಿಯ ಪ್ರಮುಖ ಭಾಗವಾಗಿದೆ.
ಇದೇ ವೇಳೆ, ಟ್ರಂಪ್ ಅವರಿಗೆ ಕಾನೂನು ಹೋರಾಟಗಳಲ್ಲೂ ಆರ್ಥಿಕ ವಿನಾಯಿತಿ ಮತ್ತು ಲಾಭ ದೊರೆತಿದೆ. ನ್ಯೂಯಾರ್ಕ್‌ನ ಸಿವಿಲ್ ವಂಚನೆ ಪ್ರಕರಣದಲ್ಲಿ ವಿಧಿಸಲಾಗಿದ್ದ ಸುಮಾರು ಅರ್ಧ ಬಿಲಿಯನ್ ಡಾಲರ್ ದಂಡವನ್ನು ಮೇಲ್ಮನವಿ ನ್ಯಾಯಾಲಯ ರದ್ದುಗೊಳಿಸಿರುವುದು ಅವರಿಗೆ ದೊಡ್ಡ ರಿಲೀಫ್ ನೀಡಿದೆ. ಲೇಖಕಿ ಇ. ಜೀನ್ ಕ್ಯಾರೋಲ್ ಅವರಿಗೆ 50 ಮಿಲಿಯನ್ ಡಾಲರ್ ಪಾವತಿಸಬೇಕಾದ ಬಾಕಿ ಉಳಿದಿದ್ದರೂ; ಎಬಿಸಿ ನ್ಯೂಸ್ (ಮಾನನಷ್ಟ ಮೊಕದ್ದಮೆ), ಪ್ಯಾರಾಮೌಂಟ್ (ಸಂದರ್ಶನ ಎಡಿಟ್ ಮಾಡಿದ್ದಕ್ಕಾಗಿ) ಹಾಗೂ ಮೆಟಾ (ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ನಿರ್ಬಂಧದ ಪ್ರಕರಣ) ಸಂಸ್ಥೆಗಳ ವಿರುದ್ಧದ ಮೊಕದ್ದಮೆಗಳನ್ನು ಇತ್ಯರ್ಥಪಡಿಸಿಕೊಂಡು ಅಲ್ಲಿಂದಲೂ ಭಾರಿ ಮೊತ್ತದ ಪರಿಹಾರವನ್ನು ಪಡೆದುಕೊಂಡಿದ್ದಾರೆ.
2024ರ ಕೊನೆಯಲ್ಲಿ ಕನಿಷ್ಠ 236 ಮಿಲಿಯನ್ ಡಾಲರ್(₹2,246.72 ಕೋಟಿ) ಇದ್ದ ಅವರ ಹೂಡಿಕೆಗಳ ಮೌಲ್ಯ, 2025ರ ಅಂತ್ಯದ ವೇಳೆಗೆ ಕನಿಷ್ಠ 857 ಮಿಲಿಯನ್ ಡಾಲರ್‌ಗೆ(₹8,158.64) ಏರಿಕೆಯಾಗಿದೆ. ಅಮೆರಿಕದ ಇತಿಹಾಸದಲ್ಲಿ ಅಧ್ಯಕ್ಷೀಯ ಹುದ್ದೆಯನ್ನು ಸಾರ್ವಜನಿಕ ಸೇವೆ ಎಂದು ಪರಿಗಣಿಸಲಾಗುತ್ತದೆ. ಆದರೆ, 2025ರ ಹಣಕಾಸು ಬಹಿರಂಗಪಡಿಸುವಿಕೆ ವರದಿಯನ್ನು ಕೂಲಂಕಷವಾಗಿ ಗಮನಿಸಿದರೆ, ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನವನ್ನು ತಮ್ಮ ಕೌಟುಂಬಿಕ ವ್ಯವಹಾರಗಳ ವಿಸ್ತರಣೆಗೆ ಹಾಗೂ ಅಪಾರ ಸಂಪತ್ತು ಕ್ರೋಢೀಕರಣಕ್ಕೆ ಬಳಸಿಕೊಳ್ಳುತ್ತಿರುವ ಸ್ಪಷ್ಟ ಚಿತ್ರಣ ಗೋಚರಿಸುತ್ತದೆ. ಈ ವಿದ್ಯಮಾನವು ಅಮೆರಿಕದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಕುಖ್ಯಾತ ಪ್ರಕರಣವಾಗಿ ದಾಖಲಾಗಿದೆ.




