“ರಾಜ್ಯದ ಕಾಂಗ್ರೆಸ್ ಸರ್ಕಾರವು ಜನಸೇವೆ ಮಾಡುವುದನ್ನು ಬಿಟ್ಟು ಬಿಡದಿ ಟೌನ್‌ಶಿಪ್ ಯೋಜನೆಯ ಹೆಸರಿನಲ್ಲಿ ಸ್ವತಃ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಇಳಿದಿದೆ” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಗುರುವಾರ, ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸರ್ಕಾರದ ನಡೆ ರಿಯಲ್ ಎಸ್ಟೇಟ್ ದಲ್ಲಾಳಿಯ ಕೆಲಸದಂತಿದೆ. ನಿವೇಶನ ಮಾರಾಟ ಮತ್ತು ತೆರಿಗೆಗಳ ಮೂಲಕ ಮುಂದಿನ 15 ವರ್ಷಗಳಲ್ಲಿ 33,000 ಕೋಟಿ ರೂಪಾಯಿ ಆದಾಯ ಗಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಸಚಿವ ಸಂಪುಟ ಸಭೆಯಲ್ಲೂ ಇದಕ್ಕೆ ಒಪ್ಪಿಗೆ ನೀಡಲಾಗಿದೆ. ಇದು ಸರ್ಕಾರದ ಕೆಲಸವಲ್ಲ, ದಲ್ಲಾಳಿಗಳ ಕೆಲಸ” ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಮಾತನಾಡಿದ ಅವರು, “ಯಾರೋ ಒಬ್ಬ ವ್ಯಕ್ತಿಯ ಪ್ರಭಾವಕ್ಕೆ ಬಲಿಯಾಗಿ ಮುಖ್ಯಮಂತ್ರಿಯವರು ಈ ದಂಧೆಗೆ ಕೈಹಾಕಬಾರದು. ಕೇವಲ ಕುರ್ಚಿ ಉಳಿಸಿಕೊಳ್ಳಲು ಇಂತಹ ಯೋಜನೆಗಳಿಗೆ ಸಹಿ ಹಾಕುತ್ತಿದ್ದಾರೆ. ಅಧಿಕಾರದ ಕೊನೆಯ ದಿನಗಳಲ್ಲಿ ತಮ್ಮ ಹೆಸರನ್ನು ಕೆಡಿಸಿಕೊಳ್ಳಬೇಡಿ” ಎಂದಿದ್ದಾರೆ.
2006ರಲ್ಲಿ ತಾವು ಬೆಂಗಳೂರಿನ ಸುತ್ತ ಐದು ಟೌನ್‌ಶಿಪ್‌ಗಳನ್ನು ನಿರ್ಮಿಸಲು ಮುಂದಾದಾಗ ಅಂದಿನ ಕಾಂಗ್ರೆಸ್ ನಾಯಕರು ವಿರೋಧಿಸಿದ್ದನ್ನು ನೆನಪಿಸಿಕೊಂಡ ಕುಮಾರಸ್ವಾಮಿ, “ಅಂದು ನನ್ನ ಯೋಜನೆಯನ್ನು ವಿರೋಧಿಸಿ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು. ಅಂದು ವಿರೋಧಿಸಿದವರೇ ಇಂದು ಅದೇ ಜಾಗದಲ್ಲಿ ಟೌನ್‌ಶಿಪ್ ಮಾಡುತ್ತಿರುವುದು ವಿಪರ್ಯಾಸ. ಎಚ್.ಕೆ. ಪಾಟೀಲರು ಅಂದಿನ ತಮ್ಮ ಸಮಿತಿಯ ವರದಿಯನ್ನು ಈಗ ಜನರ ಮುಂದೆ ಇಡಲಿ” ಎಂದು ಆಗ್ರಹಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ, “ಬಿಡದಿಯಲ್ಲಿ ರೈತರೇ ಇಲ್ಲ ಎನ್ನುವ ಡಿ.ಕೆ. ಶಿವಕುಮಾರ್, ಅದೇ ಬಾಯಿಯಲ್ಲಿ 80%ರಷ್ಟು ರೈತರು ಒಪ್ಪಿಗೆ ನೀಡಿದ್ದಾರೆ ಎನ್ನುತ್ತಾರೆ. ಇದು ದ್ವಂದ್ವದ ಪರಮಾವಧಿ. ಅವರ ಸಹೋದರ ಡಿ.ಕೆ. ಸುರೇಶ್ ಅವರು ಬಮೂಲ್ ಅಧ್ಯಕ್ಷರಾಗಿದ್ದಾರೆ, ಅಲ್ಲಿಂದ ವರದಿ ತರಿಸಲಿ; ಈ ಎಂಟು ಹಳ್ಳಿಗಳಲ್ಲಿ ಎಷ್ಟು ಹಾಲು ಉತ್ಪಾದನೆಯಾಗುತ್ತದೆ ಮತ್ತು ಎಷ್ಟು ರೈತ ಕುಟುಂಬಗಳಿವೆ ಎಂಬುದು ತಿಳಿಯುತ್ತದೆ” ಎಂದಿದ್ದಾರೆ.
ಭೂ ಹಂಚಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ ಕುಮಾರಸ್ವಾಮಿ, “ವರದಿಯಲ್ಲಿ 2,320 ಎಕರೆ ಸರ್ಕಾರಿ ಜಮೀನು ಇರುವುದಾಗಿ ಹೇಳಲಾಗಿತ್ತು. ಆದರೆ ಈಗಿನ ಅಧಿಸೂಚನೆಯಲ್ಲಿ ಕೇವಲ 750 ಎಕರೆ ಎಂದು ತೋರಿಸಲಾಗಿದೆ. ಉಳಿದ 1,570 ಎಕರೆ ಜಮೀನು ಯಾರ ಪಾಲಾಯಿತು” ಎಂದು ಪ್ರಶ್ನಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಮೋದಿ VS ಇಂದಿರಾ ; ಯಾವುದು ಸತ್ಯ, ಯಾವುದು ಸುಳ್ಳು?
“ಈಗಲ್‌ಟನ್ ರೆಸಾರ್ಟ್ ಒತ್ತುವರಿ ಮಾಡಿಕೊಂಡಿದ್ದ ಜಮೀನಿಗೆ 10 ವರ್ಷಗಳ ಹಿಂದೆ ಎಕರೆಗೆ 12 ಕೋಟಿ ರೂಪಾಯಿ ಬೆಲೆ ನಿಗದಿ ಮಾಡಲಾಗಿತ್ತು. ಆದರೆ ಈಗಿನ ಟೌನ್‌ಶಿಪ್ ಯೋಜನೆಗೆ ರೈತರ ಜಮೀನಿಗೆ ಕೇವಲ 2 ಕೋಟಿ ರೂಪಾಯಿ ನೀಡಲಾಗುತ್ತಿದೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯ” ಎಂದಿದ್ದಾರೆ.
“ಬೆಂಗಳೂರು ಅಭಿವೃದ್ಧಿ ಸಚಿವರು ‘ಎ ಖಾತಾ’ ಮತ್ತು ‘ಇ ಖಾತಾ’ ಹೆಸರಿನಲ್ಲಿ ಹಣ ವಸೂಲಿ ಮಾಡಲು ಹೊರಟಿದ್ದಾರೆ. ಜನರು ಇಂತಹವುಗಳಿಗೆ ದುಡ್ಡು ಕಟ್ಟಬೇಡಿ. ಇನ್ನು ಎರಡು ವರ್ಷಗಳಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅಂದು ನಾವು ಈ ಕೆಲಸಗಳನ್ನು ಉಚಿತವಾಗಿ ಮಾಡಿಕೊಡುತ್ತೇವೆ” ಎಂದು ಭರವಸೆ ನೀಡಿದ್ದಾರೆ.



