ಮೋದಿ VS ಇಂದಿರಾ ; ಯಾವುದು ಸತ್ಯ, ಯಾವುದು ಸುಳ್ಳು?

Date:

ಇಂದಿನ ಡಿಜಿಟಲ್ ಯುಗದಲ್ಲಿ ಚುನಾವಣೆಯನ್ನು ಗೆಲ್ಲಲು ಕೇವಲ ಜನರ ಬೆಂಬಲವಷ್ಟೇ ಸಾಲದು, ಬದಲಿಗೆ ತಂತ್ರಜ್ಞಾನದ ಕುಟಿಲ ಬಳಕೆಯೂ ಬೇಕು ಎಂಬುದನ್ನು ಬಿಜೆಪಿ ಐಟಿ ಸೆಲ್ ಸಾಬೀತುಪಡಿಸುತ್ತಿದೆ. ಇತ್ತೀಚೆಗೆ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರಿನಲ್ಲಿ ಹರಡಲಾದ ನಕಲಿ ಪತ್ರಿಕಾ ವರದಿಯು ಈ ವ್ಯವಸ್ಥಿತ ಸುಳ್ಳಿನ ಜಾಲದ ಒಂದು ಸಣ್ಣ ಭಾಗವಷ್ಟೇ. ಮೋದಿ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಮತ್ತು ವಿರೋಧ ಪಕ್ಷಗಳನ್ನು ಹಣಿಯಲು ಮಾಹಿತಿ ತಂತ್ರಜ್ಞಾನವನ್ನು ಬಿಜೆಪಿ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುವ ಸಾವಿರ ಸಾಕ್ಷ್ಯಗಳಿಗೆ ಈಗ ಇನ್ನೊಂದು ಸೇರಿಕೊಂಡಿದೆ ಅಷ್ಟೇ. 

- Advertisement -

ಡಿಜಿಟಲ್ ಯುಗದಲ್ಲಿ ರಾಜಕೀಯ ಲಾಭಕ್ಕಾಗಿ ಹಳೆಯ ಪತ್ರಿಕೆಗಳ ಮುಖಪುಟಗಳನ್ನು ತಿದ್ದಿ (Morph) ಜನರನ್ನು ಹಾದಿ ತಪ್ಪಿಸುವುದು ಒಂದು ಅಪಾಯಕಾರಿ ಪ್ರವೃತ್ತಿಯಾಗಿ ಬೆಳೆಯುತ್ತಿದೆ. ಇತ್ತೀಚೆಗೆ ‘ದಿ ಹಿಂದೂ’ ಪತ್ರಿಕೆಯ 1967ರ ಜೂನ್ 6ರ ಮುಖಪುಟವನ್ನು ಎಡಿಟ್ ಮಾಡಿ, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು “ಚಿನ್ನ ಖರೀದಿಸಬೇಡಿ” ಎಂದು ಕರೆ ನೀಡಿದ್ದರು ಎಂಬ ಸುಳ್ಳು ಸುದ್ದಿಯನ್ನು ಬಿಜೆಪಿ ನಾಯಕರು ದೇಶಾದ್ಯಂತ ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿಯವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ನಡೆದ ಈ ‘ಫೇಕ್ ನ್ಯೂಸ್’ ಅಭಿಯಾನ ಈಗ ಬಿಜೆಪಿ ಪಾಲಿಗೆ ಮುಜುಗರ ತಂದಿಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ವೈರಲ್ ಚಿತ್ರದಲ್ಲೇನಿದೆ? ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಚಿತ್ರದ ಪ್ರಕಾರ, 1967ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ವಿದೇಶಿ ವಿನಿಮಯವನ್ನು ಉಳಿಸುವ ಸಲುವಾಗಿ “ರಾಷ್ಟ್ರೀಯ ಶಿಸ್ತು” ಪಾಲಿಸುವಂತೆ ಜನತೆಗೆ ಮನವಿ ಮಾಡಿದ್ದರು. ಈ ಮನವಿಯಲ್ಲಿ ಜನರು ಚಿನ್ನವನ್ನು ಖರೀದಿಸಬಾರದು ಎಂಬ ಶೀರ್ಷಿಕೆ ಎದ್ದು ಕಾಣುವಂತೆ ಚಿತ್ರಿಸಲಾಗಿದೆ. ಆದರೆ 1960ರ ದಶಕದಲ್ಲಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರವು ಚಿನ್ನದ ಮೇಲೆ ಕಠಿಣ ನಿಯಂತ್ರಣಗಳನ್ನು ಹೇರಿತ್ತು. ಆ ನಿಯಮಗಳು ಏನು? ಹೇಗಿತ್ತು ಅನ್ನೋ ಬಗ್ಗೆ ಲೇಖನದ ಉತ್ತರಾರ್ಧದಲ್ಲಿ ವಿವರಿಸಲಾಗುವುದು. ಅದಕ್ಕೂ ಮುನ್ನ ಈ ಕೆಳಗಿನ ಅಂಶವನ್ನು ವಿಶ್ಲೇಷಿಸೋಣ. 

ಮೋದಿ ಹೇಳಿದ್ದೇನು? ದೇಶಪ್ರೇಮ, ರಾಷ್ಟ್ರಭಕ್ತಿ, ದೇಶಕ್ಕಾಗಿ ತ್ಯಾಗ ಮುಂತಾದವುಗಳ ವೈಫಲ್ಯದ ನಂತರ ಪ್ರಧಾನಿ ಮೋದಿ ಅವರು ಮೇ 10 ರಂದು ಹೈದರಾಬಾದಿನಲ್ಲಿ ದೇಶದ ಪ್ರಜೆಗಳು ‘ತ್ಯಾಗ’ ಎಂಬ ಸೊಂಟದ ಪಟ್ಟಿಯನ್ನು ಬಿಗಿ ಮಾಡಬೇಕಾದ ಸಪ್ತಸೂತ್ರಗಳನ್ನು ನೀಡಿದ್ದರು. ಚಿನ್ನದ ಖರೀದಿಯನ್ನು ನಿಲ್ಲಿಸಿ, ಮನೆಯಿಂದಲೇ ಕೆಲಸ ಮಾಡಿ, ಇಂಧನ-ತೈಲ ಬಳಕೆ ಕಡಿಮೆ ಮಾಡಿ, ಅಡುಗೆ ಅನಿಲ ಉಳಿತಾಯ ಮಾಡಿ, ರಸಗೊಬ್ಬರ ಬಳಕೆ ಕಡಿಮೆ ಮಾಡಿ-ಸಾವಯವ ಕೃಷಿ ಅಳವಡಿಸಿಕೊಳ್ಳಿ, ವಿದೇಶಗಳಿಗೆ ಹೋಗುವುದನ್ನು ನಿಲ್ಲಿಸಿ, ಸ್ವದೇಶಿ ವಸ್ತುಗಳನ್ನು ಬಳಸಿ ಅನ್ನೋದು ಮೋದಿ ಕೊಟ್ಟ ತ್ಯಾಗದ ಕರೆಯಾಗಿತ್ತು. ಇದೊಂದು ಕಡೆ ಆದರೆ ಚಿನ್ನ ಮತ್ತು ಬೆಳ್ಳಿ ಆಮದು ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಮೇ 13ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಶೇಕಡಾ 6ರಿಂದ ಶೇಕಡಾ 15ಕ್ಕೆ ಹೆಚ್ಚಿಸಿದೆ. ಇದು ಇನ್ನೊಂದು ಕಡೆ.

ಮೋದಿ ಅವರ ತ್ಯಾಗದ ಸೂತ್ರಗಳಿಗೆ ಸಾಮಾನ್ಯ ಜನರಿಂದ ಹಿಡಿದು ವಿಪಕ್ಷಗಳೂ ಟೀಕೆ ಮಾಡಿದ್ದವು. “ಮೋದಿಯವರ ಆಡಳಿತದಲ್ಲಿ ದೇಶದ ಆರ್ಥಿಕ ಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ಜನರಿಗೆ ಚಿನ್ನ ಕೊಳ್ಳಬೇಡಿ ಎಂದು ಹೇಳುವ ಸ್ಥಿತಿ ಬಂದಿದೆ” ಎಂದು ಕಾಂಗ್ರೆಸ್ ನಾಯಕರು ವ್ಯಂಗ್ಯವಾಡಿದ್ದರು. 

ಕಾಂಗ್ರೆಸ್‌ನ ಈ ಟೀಕೆಗೆ ತಿರುಗೇಟು ನೀಡಲು ಬಿಜೆಪಿ ಐಟಿ ಸೆಲ್ ಮತ್ತು ನಾಯಕರು 1967ರ ಇಂದಿರಾ ಗಾಂಧಿಯರು ಹೇಳಿದ್ದರು ಎನ್ನಲಾದ ನಕಲಿ ಪತ್ರಿಕಾ ವರದಿಯನ್ನು ಅಸ್ತ್ರವಾಗಿ ಬಳಸಿಕೊಂಡರು. ಕರ್ನಾಟಕದ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್ ಅವರು ಈ ನಕಲಿ ಪೋಸ್ಟರ್ ಹಂಚಿಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

“ಕಾಂಗ್ರೆಸ್ಸಿಗರ ಆರ್ಥಿಕ ಅಜ್ಞಾನ ಮತ್ತು ಅಂಧ ವಿರೋಧಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಇತಿಹಾಸದ ಅರಿವೂ ಇಲ್ಲದ, ಆರ್ಥಿಕ ನಿರ್ವಹಣೆಯ ಗಂಧ-ಗಾಳಿಯೂ ಗೊತ್ತಿಲ್ಲದ ಇಂದಿನ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಯೊಂದು ನಡೆಯನ್ನೂ ವಿರೋಧಿಸುವುದೇ ಒಂದು ‘ನಿತ್ಯ ಕಾಯಕ’ವಾಗಿಬಿಟ್ಟಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಮೋದಿ ಅವರು ನೀಡುವ ದೂರದೃಷ್ಟಿಯ ಆರ್ಥಿಕ ಸಲಹೆಗಳನ್ನು ಲೇವಡಿ ಮಾಡುವ ಈ ಕಾಂಗ್ರೆಸ್ಸಿಗರು ಒಮ್ಮೆ ತಮ್ಮದೇ ಪಕ್ಷದ ಇತಿಹಾಸವನ್ನು ತಿರುವಿ ಹಾಕಲಿ. 1967 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಆರ್ಥಿಕ ಶಿಸ್ತಿಗಾಗಿ ‘ಚಿನ್ನ ಕೊಳ್ಳಬೇಡಿ’ ಎಂದು ಜನರಲ್ಲಿ ಮನವಿ ಮಾಡಿದ್ದರು. ‘ದೊರೆ ಮಾಡಿದರೆ ದಂಡವಿಲ್ಲ’ ಎಂಬಂತೆ, ಇಂದಿರಾ ಗಾಂಧಿ ಅಥವಾ ಸೋನಿಯಾ ಗಾಂಧಿ ಅವರ ಕಾಲದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರಗಳು ಕರೆ ನೀಡಿದರೆ ಅದು “ಆರ್ಥಿಕ ನೀತಿ”. ಆದರೆ ರಾಷ್ಟ್ರದ ಹಿತದೃಷ್ಟಿಯಿಂದ ಮೋದಿ ಅವರು ಕರೆ ನೀಡಿದರೆ ಅದು ಇವರಿಗೆ ತಪ್ಪಾಗಿ ಕಾಣುತ್ತಿರುವುದು ಕಾಂಗ್ರೆಸ್ ನಾಯಕರ ಎಡಬಿಡಂಗಿತನಕ್ಕೆ ಹಿಡಿದ ಕನ್ನಡಿ. ಕೇವಲ ರಾಜಕೀಯ ಕಾರಣಕ್ಕಾಗಿ ದೇಶದ ಆರ್ಥಿಕತೆಯ ಬಗ್ಗೆ ಯಾವುದೇ ತರ್ಕವಿಲ್ಲದೆ ಮಾತನಾಡುವ ಕಾಂಗ್ರೆಸ್ ನಾಯಕರು ಮೊದಲು ಆರ್ಥಿಕತೆಯ ಮೂಲಪಾಠಗಳನ್ನು ಕಲಿಯಲಿ. ಮೋದಿಯವರನ್ನು ವಿರೋಧಿಸುವ ಭರದಲ್ಲಿ ದೇಶದ ಹಿತವನ್ನು ಬಲಿ ಕೊಡಬೇಡಿ ” ಎಂದು ಟ್ವೀಟ್‌ ಮಾಡಿದ್ದರು. 

R ASHOK TWITTER

ಆದರೆ, ಈ ಹಂತದಲ್ಲಿ ಬಿಜೆಪಿ ನಾಯಕರು ತಾವು ಹಂಚಿಕೊಳ್ಳುತ್ತಿರುವುದು ಒಂದು ಫ್ಯಾಬ್ರಿಕೇಟೆಡ್‌  (Fabricated) ಚಿತ್ರ ಎಂಬ ಕನಿಷ್ಠ ಸತ್ಯಾಂಶವನ್ನು ಪರಿಶೀಲಿಸುವ ಗೋಜಿಗೆ ಹೋಗದಿರುವುದು ದುರದೃಷ್ಟಕರ. 

‘ದಿ ಹಿಂದೂ’ ಪತ್ರಿಕೆಯ ಸ್ಪಷ್ಟೀಕರಣ:-

ಈ ಚಿತ್ರ ವ್ಯಾಪಕವಾಗಿ ಶೇರ್‌ ಆದ ಬೆನ್ನಲ್ಲೇ, ‘ದಿ ಹಿಂದೂ’ ಪತ್ರಿಕಾ ಸಂಸ್ಥೆಯು ಇದು ನಕಲಿ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಈ ಕುರಿತು ಪತ್ರಿಕೆಯ ಹಿರಿಯ ಪತ್ರಕರ್ತ ಬಿ. ಕೋಳಪ್ಪನ್ ಅವರು ಎಕ್ಸ್ (X) ತಾಣದಲ್ಲಿ ಪೋಸ್ಟ್ ಮಾಡಿ, “ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ಜೂನ್ 6, 1967ರ ಪತ್ರಿಕೆಯ ಪುಟವು ಡಿಜಿಟಲ್ ಆಗಿ ಮಾರ್ಪಡಿಸಲ್ಪಟ್ಟಿದೆ. ಅಂದು ಬಿಡುಗಡೆಯಾದ ನಿಜವಾದ ಪುಟವೇ ಬೇರೆ ಇದೆ. ಆಧುನಿಕ ತಂತ್ರಜ್ಞಾನ ಬಳಸಿ ರಾಷ್ಟ್ರೀಯ ಪತ್ರಿಕೆಯ ಮುಖಪುಟವನ್ನೇ ಬದಲಿಸುವ ಮಟ್ಟಕ್ಕೆ ಸುಳ್ಳು ಸುದ್ದಿಗಳು ತಲುಪಿವೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹಿಂದೂ ಪತ್ರಿಕೆ ಕ್ಲಾರಿಫಿಕೇಷನ್‌ ಕೊಟ್ಟಿದ್ದು

ಪತ್ರಿಕಾ ಸಂಸ್ಥೆಯು ತನ್ನ ಓದುಗರಿಗೆ ಎಚ್ಚರಿಕೆ ನೀಡುತ್ತಾ, “ನಮ್ಮ ಆರ್ಕೈವ್‌ಗಳಲ್ಲಿ ಅಂತಹ ಯಾವುದೇ ಪುಟವಿಲ್ಲ. ಓದುಗರು ಇಂತಹ ಚಿತ್ರಗಳನ್ನು ಹಂಚಿಕೊಳ್ಳುವ ಮೊದಲು ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು” ಎಂದು ಮನವಿ ಮಾಡಿದೆ. ರಾಜಕೀಯ ಪಕ್ಷಗಳು ಪರಸ್ಪರ ಟೀಕೆಗೆ ಇಂತಹ ಚಿತ್ರಗಳನ್ನು ಆಯುಧವಾಗಿ ಬಳಸುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯೇ ಸರಿ. 

ಇನ್ನು ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯ ವಿರೋಧಕ್ಕಾಗಿ ಇತಿಹಾಸವನ್ನು ಮತ್ತು ರಾಷ್ಟ್ರೀಯ ಪತ್ರಿಕೆಗಳ ವಿಶ್ವಾಸಾರ್ಹತೆಯನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ “ಬಿಜೆಪಿಯವರು ಎತ್ತಿದ ಕೈ” ಎಂಬ ಟೀಕೆಗಳು ಕೇಳಿಬರುತ್ತಿವೆ. ಸತ್ಯಾಂಶವನ್ನು ಪರಿಶೀಲಿಸದೆ ಜವಾಬ್ದಾರಿಯುತ ಸ್ಥಾನದಲ್ಲಿರುವ ವಿರೋಧ ಪಕ್ಷದ ನಾಯಕರೇ ಇಂತಹ ಸುಳ್ಳು ಮಾಹಿತಿಯನ್ನು ಹಂಚಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಅಂದಿನ ಸರ್ಕಾರದ ನಿಜವಾದ ಚಿನ್ನದ ನಿಯಂತ್ರಣ ನೀತಿಗಳು ಹೇಗಿತ್ತು?

ವೈರಲ್ ಆಗಿರುವ ಪತ್ರಿಕೆಯ ಕ್ಲಿಪ್ ನಕಲಿಯಾಗಿದ್ದರೂ ಸಹ, 1960ರ ದಶಕದಲ್ಲಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರವು ಚಿನ್ನದ ಮೇಲೆ ಕಠಿಣ ನಿಯಂತ್ರಣಗಳನ್ನು ಹೇರಿತ್ತು ಎಂಬುದು ಐತಿಹಾಸಿಕ ಸತ್ಯ. ಈ ನಿಯಮಗಳು ಹೇಗಿದ್ದವು ಮತ್ತು ಯಾಕೆ ಜಾರಿಗೆ ಬಂದವು ಎಂಬುದು ಆಸಕ್ತಿದಾಯಕವಾಗಿದೆ.

1. ಚಿನ್ನದ ನಿಯಂತ್ರಣ ನಿಯಮಗಳು (Gold Control Rules)

ಆ ಕಾಲದಲ್ಲಿ ಭಾರತವು ವಿದೇಶಿ ವಿನಿಮಯದ ತೀವ್ರ ಕೊರತೆಯನ್ನು ಎದುರಿಸುತ್ತಿತ್ತು. ಕಳ್ಳಸಾಗಣೆಯನ್ನು ತಡೆಯಲು ಮತ್ತು ದೇಶದ ಸಂಪತ್ತು ಚಿನ್ನದ ರೂಪದಲ್ಲಿ ವ್ಯರ್ಥವಾಗದಂತೆ ನೋಡಿಕೊಳ್ಳಲು ಸರ್ಕಾರವು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿತ್ತೇ ಹೊರತು ಈಗಿನ ಪೋಸ್ಟರ್‌ನಲ್ಲಿರುವಂತೆ ಪ್ರಧಾನಿಯವರು ಪತ್ರಿಕೆಯ ಮೂಲಕ ಜಾಹೀರಾತು ನೀಡಿ ಮನವಿ ಮಾಡಿರಲಿಲ್ಲ. 

ಚಿನ್ನದ ಗಟ್ಟಿಗಳ ಮೇಲೆ ನಿಷೇಧ: ನಾಗರಿಕರು ಚಿನ್ನದ ಬಾರ್‌ಗಳು (ಕಟ್ಟಿಗಳು) ಅಥವಾ ನಾಣ್ಯಗಳ ರೂಪದಲ್ಲಿ ಚಿನ್ನವನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು.

ಆಭರಣ ತಯಾರಕರಿಗೆ ಮಿತಿ: ಆಭರಣ ಕೆಲಸ ಮಾಡುವ ಕುಶಲಕರ್ಮಿಗಳು ಗರಿಷ್ಠ 100 ಗ್ರಾಂ ಗಿಂತ ಹೆಚ್ಚು ಚಿನ್ನವನ್ನು ತಮ್ಮ ಬಳಿ ಇಟ್ಟುಕೊಳ್ಳುವಂತಿರಲಿಲ್ಲ.

ವ್ಯಾಪಾರಿಗಳ ಮೇಲೆ ಕಣ್ಗಾವಲು: ಪರವಾನಗಿ ಪಡೆದ ವ್ಯಾಪಾರಿಗಳು ತಮ್ಮ ಕೆಳಗೆ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ ಮಾತ್ರ ಚಿನ್ನವನ್ನು ಹೊಂದಬೇಕಿತ್ತು. ಅಲ್ಲದೆ, ವ್ಯಾಪಾರಿಗಳು ಪರಸ್ಪರ ಚಿನ್ನವನ್ನು ವ್ಯಾಪಾರ ಮಾಡುವುದನ್ನೂ ನಿಷೇಧಿಸಲಾಗಿತ್ತು.

2. ಮೊರಾರ್ಜಿ ದೇಸಾಯಿಯವರ ಪಾತ್ರ

ಚಿನ್ನದ ನಿಯಂತ್ರಣದ ಕಥೆ ಆರಂಭವಾಗಿದ್ದು 1962ರಲ್ಲಿ. ಆಗಿನ ಹಣಕಾಸು ಸಚಿವ ಮೊರಾರ್ಜಿ ದೇಸಾಯಿಯವರು ಮೊದಲ ಬಾರಿಗೆ ಚಿನ್ನದ ನಿಯಂತ್ರಣ ಕ್ರಮಗಳನ್ನು ಪರಿಚಯಿಸಿದರು. ಬ್ಯಾಂಕುಗಳು ಚಿನ್ನದ ಮೇಲೆ ನೀಡಿದ್ದ ಸಾಲಗಳನ್ನು ಹಿಂಪಡೆಯುವಂತೆ ಸೂಚಿಸಲಾಯಿತು. ಚಿನ್ನದ ವಾಯ್ದ ವ್ಯಾಪಾರವನ್ನು (Forward Trading) ನಿಷೇಧಿಸಲಾಯಿತು. 1963ರಲ್ಲಿ ಸರ್ಕಾರವು 14 ಕ್ಯಾರೆಟ್‌ಗಿಂತ ಹೆಚ್ಚಿನ ಶುದ್ಧತೆಯ ಚಿನ್ನದ ಆಭರಣ ತಯಾರಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿತು. ಅಪ್ಪಟ ಚಿನ್ನದ (22 ಅಥವಾ 24 ಕ್ಯಾರೆಟ್) ಬಳಕೆಯನ್ನ ಕಡಿಮೆ ಮಾಡುವುದು ಇದರ ಉದ್ದೇಶವಾಗಿತ್ತು.

3. 1968ರ ಚಿನ್ನದ ನಿಯಂತ್ರಣ ಕಾಯ್ದೆ:-

ಮುಂದೆ 1968ರಲ್ಲಿ ಇಂದಿರಾ ಗಾಂಧಿ ಸರ್ಕಾರವು ‘ಚಿನ್ನದ ನಿಯಂತ್ರಣ ಕಾಯ್ದೆ’ಯನ್ನು (Gold Control Act, 1968) ಅಧಿಕೃತವಾಗಿ ಜಾರಿಗೆ ತಂದಿತು. ಇದು ದೇಶದ ಇತಿಹಾಸದಲ್ಲೇ ಅತ್ಯಂತ ಕಠಿಣ ಆರ್ಥಿಕ ಕಾನೂನುಗಳಲ್ಲಿ ಒಂದಾಗಿತ್ತು. ಈ ಕಾಯ್ದೆಯು ಚಿನ್ನದ ಆಮದು ಮತ್ತು ರಫ್ತಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಯತ್ನಿಸಿತ್ತು. 

ಇಂದು ಈ ನಕಲಿ ಪತ್ರಿಕೆಯ ಚಿತ್ರ ವೈರಲ್ ಆಗಲು ಪ್ರಮುಖ ಕಾರಣವೆಂದರೆ, ಅಂದಿನ ಮತ್ತು ಇಂದಿನ ರಾಜಕೀಯ ಆರ್ಥಿಕ ನಿರ್ಧಾರಗಳ ನಡುವೆ ಹೋಲಿಕೆ ಮಾಡಲು ಹೊರಟಿರುವುದು. ಪ್ರಧಾನಿ ನರೇಂದ್ರ ಮೋದಿಯವರು ತ್ಯಾಗ, ದೇಶಪ್ರೇಮದ ಹೆಸರಲ್ಲಿ ನಿರ್ಬಂಧಗಳನ್ನು ಪಾಲಿಸಲು ಕರೆ ನೀಡಿದಾಗ, ಅದನ್ನು ಇಂದಿರಾ ಗಾಂಧಿಯವರ ಅಂದಿನ ಕ್ರಮಗಳೊಂದಿಗೆ ಹೋಲಿಸಿ ಜನರಲ್ಲಿ ಗೊಂದಲ ಮೂಡಿಸುವುದು ಬಿಜೆಪಿ ನಾಯಕರು ಹಾಗೂ ಅಂಧಭಕ್ತರ ಪ್ರಯತ್ನವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಎತ್ತಿದ ಕೈ ಎಂಬ ಟೀಕೆ ಈಗ ಮತ್ತೊಮ್ಮೆ ಕೇಳಿಬರುತ್ತಿದೆ. ಚುನಾವಣೆಗಳಾಗಲಿ, ಧಾರ್ಮಿಕ ವಿಷಯಗಳಾಗಲಿ, ವಿರೋಧ ಪಕ್ಷಗಳ ವಿರುದ್ಧದ ಆರೋಪಗಳಾಗಲಿ — ಹಲವು ಬಾರಿ ಪರಿಶೀಲಿಸದ ಮಾಹಿತಿ ಮೊದಲು ವೈರಲ್‌ ಆಗಿ ನಂತರ ಅದು ಸುಳ್ಳು ಎಂದು ಬಹಿರಂಗವಾದ ಮೇಲೆ ಪೆಚ್ಚು ಮೋರೆ ಹಾಕಿಕೊಳ್ಳುವ ಬಿಜೆಪಿಗರ ಉದಾಹರಣೆಗಳು ಸಾಕಷ್ಟಿವೆ.

ಪ್ರಧಾನಿ ಮೋದಿಯವರು “ವಿಶ್ವದ ಅತ್ಯುತ್ತಮ ಪ್ರಧಾನಿ” ಎಂದು ಯುನೆಸ್ಕೋ ಘೋಷಿಸಿದೆ ಎಂಬ ಸುಳ್ಳು ಸುದ್ದಿಯನ್ನು ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ವ್ಯವಸ್ಥಿತವಾಗಿ ಹರಡಿದ್ದರು, ನಂತರ ಅದು ಸುಳ್ಳೆಂದು ಸಾಬೀತಾಗಿತ್ತು. ನೋಟು ಅಮಾನ್ಯೀಕರಣದ ಸಮಯದಲ್ಲಿ ಹೊಸ 2,000 ರೂಪಾಯಿ ನೋಟಿನಲ್ಲಿ ‘ನ್ಯಾನೋ ಜಿಪಿಎಸ್ ಚಿಪ್’ ಇದೆ ಎಂದು ಬಿಜೆಪಿ ಬೆಂಬಲಿಗರು ಮತ್ತು ಹಲವು ಸಂಸದರ ಜೊತೆಗೆ ಕೆಲ ಮಾಧ್ಯಮಗಳೂ ಪ್ರತಿಪಾದಿಸಿದ್ದರು. ಆದರೆ ಅಂತಹ ಯಾವುದೇ ತಂತ್ರಜ್ಞಾನ ಇಲ್ಲ ಎಂದು ಸ್ವತಃ ಆರ್‌ಬಿಐ ಸ್ಪಷ್ಟಪಡಿಸಿತ್ತು. 

ಈ ಹಿಂದೆ ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಥೀ ಅವರು ತಮ್ಮ ವೀಡಿಯೊವೊಂದರಲ್ಲಿ ಬಿಜೆಪಿ ಐಟಿ ಸೆಲ್‌ನ ಕಾರ್ಯವೈಖರಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಅವರ ಪ್ರಕಾರ, ಈ ಜಾಲವು ಕೇವಲ ಸಾಮಾನ್ಯ ಕಾರ್ಯಕರ್ತರಿಂದ ನಡೆಯುತ್ತಿಲ್ಲ; ಬದಲಿಗೆ ಹಣ ನೀಡಿ ನೇಮಿಸಿಕೊಂಡ Influencers ಮತ್ತು PR ಕಂಪನಿಗಳ ಮೂಲಕ ನಡೆಯುತ್ತಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುವ ಹ್ಯಾಶ್‌ಟ್ಯಾಗ್‌ಗಳು ಹೆಚ್ಚಿನವು ಕೃತಕವಾಗಿ ಸೃಷ್ಟಿಸಿದವು. ಪ್ರತಿ ಟ್ವೀಟ್‌ಗೆ ಇಂತಿಷ್ಟು ಹಣವನ್ನು ನೀಡುವ ಮೂಲಕ ನಿರುದ್ಯೋಗಿ ಯುವಕರನ್ನು ಇಲ್ಲಿ ಬಳಸಿಕೊಳ್ಳಲಾಗುತ್ತಿದೆ. ಪ್ರತೀ ಟ್ವೀಟ್‌ಗೆ 50 ರಿಂದ 70 ರೂಪಾಯಿ ವರೆಗೆ ಹಣ ನೀಡಲಾಗುತ್ತದೆ. ಹೀಗಾಗಿ ಇದು ಕೆಲವರಿಗೆ “ಪಾಕೆಟ್ ಮನಿ” ಗಳಿಸುವ ಮಾರ್ಗವಾಗಿಬಿಟ್ಟಿದೆ. ಆದರೆ ಈ ಪ್ರಚಾರದ ಪರಿಣಾಮವಾಗಿ ನಿಜ ಮತ್ತು ಸುಳ್ಳಿನ ನಡುವಿನ ಗಡಿ ಅಸ್ಪಷ್ಟವಾಗುತ್ತಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ. 

ಪಿಆರ್ ಸಂಸ್ಥೆಗಳು ನೇಮಿಸಿಕೊಂಡಿರುವ ಪ್ರಭಾವಿಗಳು ಹಂಚಿಕೊಳ್ಳುವ ಶೇ. 50ಕ್ಕಿಂತ ಹೆಚ್ಚಿನ ಮಾಹಿತಿಗಳು ನಕಲಿ ಅಥವಾ ದಾರಿ ತಪ್ಪಿಸುವಂತಹವು ಆಗಿರುತ್ತವೆ. ನಿರ್ದಿಷ್ಟ ಸಮಯದಲ್ಲಿ, ಸಂಘಟಿತವಾಗಿ ಈ ಟ್ವೀಟ್‌ಗಳು ಪೋಸ್ಟ್‌ ಆಗುತ್ತವೆ. ಇನ್ನು ಬಿಜೆಪಿ ಐಟಿ ಸೆಲ್‌ನ ಅತಿ ದೊಡ್ಡ ಅಸ್ತ್ರವೆಂದರೆ ಫೋಟೋಶಾಪ್ ಮಾಡಿದ ಚಿತ್ರಗಳು. ವಿಶ್ವ ನಾಯಕರು ಮೋದಿಯವರನ್ನು ಹೊಗಳಿದ್ದಾರೆ ಎಂದು ಸುಳ್ಳು ಸಂದೇಶಗಳನ್ನು ಸೃಷ್ಟಿಸುವುದು ಇವರ ಹಳೆಯ ಚಾಳಿ. ವಿಕಿಲೀಕ್ಸ್‌ನ ಜೂಲಿಯನ್ ಅಸ್ಸಾಂಜೆ ಅವರು ಮೋದಿಯವರನ್ನು ಹೊಗಳಿದ್ದಾರೆ ಎಂಬ ಸುಳ್ಳು ಮಾಹಿತಿ ಇದಕ್ಕೆ ಪ್ರಮುಖ ಉದಾಹರಣೆ. ಕೊನೆಗೆ ಅಸ್ಸಾಂಜೆ  ಅಂತಹ ಹೇಳಿಕೆ ನೀಡಿಲ್ಲ ಎಂದು ಫ್ಯಾಕ್ಟ್‌ ಚೆಕ್‌ ವೆಬ್‌ಸೈಟ್‌ಗಳು ವರದಿ ಮಾಡಿದ್ದವು. 

ಬಿಜೆಪಿ ಐಟಿ ಸೆಲ್‌ನ ಆರಂಭಿಕ ದಿನಗಳಲ್ಲಿ (2004 ರಿಂದ) ಅದರ ಮುಖ್ಯಸ್ಥರಾಗಿದ್ದ ಪ್ರೊದ್ಯುತ್ ಬೋರಾ ಅವರು ಪಕ್ಷವನ್ನು ತೊರೆಯುವಾಗ ಹೇಳಿದ ಮಾತುಗಳು ಇಂದಿನ ಪರಿಸ್ಥಿತಿಗೆ ಹಿಡಿದ ಕೈಕನ್ನಡಿ. “ಪಕ್ಷಕ್ಕೆ ಹುಚ್ಚು ಹಿಡಿದಿದೆ. ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು ಎಂಬ ಬಯಕೆ ಪಕ್ಷದ ನೈತಿಕತೆಯನ್ನೇ ನಾಶಪಡಿಸಿದೆ. ಅಮಿತ್ ಶಾ ಅವರ ಅಹಂಕಾರ ಮತ್ತು ಮೋದಿಯವರ ನಡೆ ಪ್ರಜಾಪ್ರಭುತ್ವದ ಸಂಪ್ರದಾಯಗಳಿಗೆ ಧಕ್ಕೆ ತರುತ್ತಿವೆ” ಎಂದು ಅವರು ವಿಷಾದಿಸಿದ್ದರು. ಪ್ರಸ್ತುತ ಅಮಿತ್ ಮಾಳವೀಯ ನೇತೃತ್ವದಲ್ಲಿ ಈ “ಸುಳ್ಳು ಸುದ್ದಿಗಳ ಪ್ರಸಾರ” ಮತ್ತಷ್ಟು ತೀವ್ರಗೊಂಡಿದೆ. 

ಪ್ರೊದ್ಯುತ್ ಬೋರಾ ನ್ಯೂಸ್‌ ಕಟ್‌

ಬಿಜೆಪಿ ಐಟಿ ಸೆಲ್ ಸೃಷ್ಟಿಸುವ ಸುಳ್ಳುಗಳು ಕೇವಲ ವಾಟ್ಸಾಪ್‌ಗೆ ಸೀಮಿತವಾಗದೆ ಮುಖ್ಯವಾಹಿನಿಯ ಮಾಧ್ಯಮಗಳನ್ನೂ ಪ್ರವೇಶಿಸುತ್ತಿವೆ. ಇದಕ್ಕೆ ತ್ರಿಪುರಾದ ಘಟನೆಯೇ ಸಾಕ್ಷಿ. ತ್ರಿಪುರಾದಲ್ಲಿ ಹೆದ್ದಾರಿ ದುರಸ್ತಿಗಾಗಿ ಪ್ರಧಾನಿ ಮೋದಿ ಅವರು ರಾತ್ರಿ 10 ಗಂಟೆಗೆ ಐಎಎಸ್ ಅಧಿಕಾರಿಯೊಬ್ಬರಿಗೆ ಕರೆ ಮಾಡಿದ್ದರು ಎಂಬ ಸುದ್ದಿಯನ್ನು ಜೀ ನ್ಯೂಸ್‌ನಂತಹ ಸುದ್ದಿ ವಾಹಿನಿಗಳು ಅಬ್ಬರದಿಂದ ಪ್ರಸಾರ ಮಾಡಿದವು. ಆದರೆ ಸತ್ಯ ಏನೆಂದರೆ, ಅಂತಹ ಯಾವುದೇ ಕರೆ ಹೋಗಿರಲಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಯೇ ಸ್ಪಷ್ಟಪಡಿಸಿದರು. ಇದು ಈ ವ್ಯವಸ್ಥೆಯ ಬೂಟಾಟಿಕೆಯನ್ನು ತೋರಿಸುತ್ತದೆ. 

ಗೆಲುವಿಗಾಗಿ ಸುಳ್ಳನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಐಟಿ ಸೆಲ್, ದೇಶದ ಯುವಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದೆ. ರಾಜಕೀಯ ವಿರೋಧಕ್ಕಾಗಿ ರಾಷ್ಟ್ರೀಯ ಪತ್ರಿಕೆಗಳ ಮುಖಪುಟವನ್ನು ಎಡಿಟ್ ಮಾಡುವುದು ಅಥವಾ ಇತಿಹಾಸವನ್ನು ತಿದ್ದುವ ಪ್ರಯತ್ನ ಮಾಡುವುದು ಅಕ್ಷಮ್ಯ ಅಪರಾಧ. ಮೋದಿಯವರ ವರ್ಚಸ್ಸು ಹೆಚ್ಚಿಸಲು ಮಿಂಚಿನ ವೇಗದಂತೆ ಪ್ರಚಾರ ತಂತ್ರಗಳನ್ನು ಬಳಸಲಾಗುತ್ತಿದ್ದರೂ, ಸತ್ಯದ ಮುಂದೆ ಈ ಸುಳ್ಳಿನ ಕೋಟೆಗಳು ಹೆಚ್ಚು ದಿನ ನಿಲ್ಲಲಾರವು. ಜನರು ಪ್ರತಿ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಇಂದಿನ ತುರ್ತು ಅಗತ್ಯವಾಗಿದೆ. 

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...