ರಾಜ್ಯದಲ್ಲಿ ಕನ್ನಡಿಗರ ಬದುಕು ದುಸ್ತರವಾಗಿರುವಾಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ವಿಶ್ವ ಕನ್ನಡ ಸಮ್ಮೇಳನ’ ನಡೆಸಲು ಮುಂದಾಗಿರುವುದು ‘ಶವಪೆಟ್ಟಿಗೆಯ ಮೇಲೆ ಹೂವು ಸುರಿದಂತೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಿಗರಿಗೆ ಉದ್ಯೋಗ, ಶಿಕ್ಷಣದಲ್ಲಿ ಅನ್ಯಾಯವಾಗುತ್ತಿದ್ದು, ಈ ಬೂಟಾಟಿಕೆಯ ಸಮ್ಮೇಳನ ಕೈಬಿಟ್ಟು ಕನ್ನಡಿಗರ ರಕ್ಷಣೆಗೆ ಕಾಯ್ದೆ ರೂಪಿಸುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು ಸರ್ಕಾರದ ನೀತಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಸಮ್ಮೇಳನದ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಿಗೆ ವಹಿಸಿರುವುದನ್ನು ಕರವೇ ಕಟುವಾಗಿ ಟೀಕಿಸಿದೆ. ತ್ರಿಭಾಷಾ ನೀತಿ ಹಾಗೂ ಕನ್ನಡಿಗರ ಮೇಲೆ ಬಲವಂತದ ಹಿಂದಿ ಹೇರಿಕೆಯ ಪರವಾಗಿರುವ ಮೊಯ್ಲಿ ಅವರು ಸಮ್ಮೇಳನದಲ್ಲಿ ಏನು ಸಂದೇಶ ನೀಡಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ತರುವಲ್ಲಿ ಸರ್ಕಾರ ವಿಫಲವಾಗಿದೆ. ಉತ್ತರದ ರಾಜ್ಯಗಳ ಮಕ್ಕಳು ಎರಡೇ ಭಾಷೆ ಕಲಿತು ತಮ್ಮ ಭವಿಷ್ಯಕ್ಕೆ ಪೂರಕವಾದ ಕೌಶಲ್ಯ ವೃದ್ಧಿಸಿಕೊಳ್ಳುತ್ತಿದ್ದರೆ, ನಮ್ಮ ಮಕ್ಕಳು ಮೂರನೇ ಭಾಷೆಯ ಹೊರೆ ಹೊರಬೇಕಾಗಿದೆ. ಸರ್ಕಾರದ ನೀತಿಗಳನ್ನು ಕನ್ನಡ ದ್ರೋಹಿಗಳೇ ನಿರ್ಧರಿಸುವಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನಿಯಂತ್ರಿತ ವಲಸೆಯಿಂದಾಗಿ ಕರ್ನಾಟಕ ಕಸದ ತೊಟ್ಟಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಅವರು, ರಾಜ್ಯದಲ್ಲಿ ಎಂಜಿನಿಯರಿಂಗ್ ಪದವೀಧರರ ಪೈಕಿ ಕೇವಲ ಶೇ. 17ರಷ್ಟು ಮಂದಿಗೆ ಮಾತ್ರ ಉದ್ಯೋಗ ಸಿಗುತ್ತಿದ್ದು, ಉಳಿದ ಶೇ. 83ರಷ್ಟು ಯುವಕರು ನಿರುದ್ಯೋಗಿಗಳಾಗಿ ಬೀದಿ ಅಲೆಯುತ್ತಿದ್ದಾರೆ. ಐಟಿ-ಬಿಟಿ ಸೇರಿದಂತೆ ಖಾಸಗಿ ಸಂಸ್ಥೆಗಳು ಹೊರರಾಜ್ಯದವರಿಂದ ತುಂಬಿಹೋಗಿವೆ. ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ. 80ರಷ್ಟು ಮೀಸಲಾತಿ ನೀಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದ ಸರ್ಕಾರ, ಈಗ ಕಾರ್ಪೊರೇಟ್ ಕುಳಗಳಿಗೆ ಹೆದರಿ ಕಾಯ್ದೆ ಜಾರಿ ಮಾಡದೆ ಹೇಡಿಯಂತೆ ಕುಳಿತಿದೆ. ಹೀಗಿದ್ದ ಮೇಲೆ 2028ರ ಚುನಾವಣೆಯಲ್ಲಿ ಯಾವ ಮುಖ ಹೊತ್ತು ಮತ ಕೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಕಾರ್ಮಿಕ ಇಲಾಖೆ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ಉದ್ಯೋಗದ ಸಮೀಕ್ಷೆ ನಡೆಸಲು ಮುಂದಾದರೂ ಕಾರ್ಪೊರೇಟ್ ಬೆದರಿಕೆಯಿಂದ ಸರ್ಕಾರ ಅನುಮತಿ ನೀಡಲಿಲ್ಲ. ಕರವೇ ಕಾರ್ಯಕರ್ತರು ಐಟಿ-ಬಿಟಿ ಕಂಪನಿಗಳಿಗೆ ತೆರಳಿ ಲೆಕ್ಕ ಕೇಳಿದರೆ ಮುಖ್ಯಮಂತ್ರಿಗಳು ನಮ್ಮನ್ನೇ ‘ಮಾರಲ್ ಪೋಲಿಸಿಂಗ್’ ಮಾಡಬೇಡಿ ಎಂದು ಉಪದೇಶಿಸುತ್ತಾರೆ. ಈ ಸರ್ಕಾರವನ್ನು ಜನಪ್ರತಿನಿಧಿಗಳು ನಡೆಸುತ್ತಿದ್ದಾರೆಯೋ ಅಥವಾ ಕಾರ್ಪೊರೇಟ್ ಕಂಪನಿಗಳೋ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಕೆಪಿಎಸ್‌ಸಿ ಭ್ರಷ್ಟಾಚಾರದ ಕೂಪವಾಗಿದ್ದು, ಅದನ್ನು ಎಲ್ಲಾ ರಾಜಕೀಯ ಪಕ್ಷಗಳು ಸೇರಿ ಸರ್ವನಾಶ ಮಾಡಿವೆ. ಪರೀಕ್ಷೆಗಳನ್ನು ನಂಬಿಕೊಂಡಿದ್ದ ಸಾವಿರಾರು ಅಭ್ಯರ್ಥಿಗಳ ಬದುಕು ನರಕವಾಗಿದೆ. ಇನ್ನೊಂದೆಡೆ, ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚಿರುವ ಸರ್ಕಾರ, ಉಳಿದ ಶಾಲೆಗಳನ್ನು ಕನ್ನಡ ವಿರೋಧಿ ಖಾಸಗಿ ಸಂಸ್ಥೆಗಳಿಗೆ ಚಿನ್ನದ ತಟ್ಟೆಯಲ್ಲಿ ಇಟ್ಟು ಕೊಡುತ್ತಿದೆ. ಉತ್ತಮ ಫಲಿತಾಂಶ ನೀಡುತ್ತಿರುವ ಸರ್ಕಾರಿ ಶಿಕ್ಷಕರ ಮೇಲೆಯೇ ಗೂಬೆ ಕೂರಿಸುವ ಕುತಂತ್ರ ನಡೆಯುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಪಕ್ಕದ ಮಹಾರಾಷ್ಟ್ರ ಸರ್ಕಾರ ಮರಾಠಿ ಭಾಷಿಕರ ರಕ್ಷಣೆಗೆ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ನೋಡಿಯಾದರೂ ರಾಜ್ಯ ಸರ್ಕಾರ ಕಲಿಯಬೇಕು. ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮ್ಮೇಳನ ಮಾಡುವ ಬದಲು, ಕನ್ನಡಿಗರ ರಕ್ಷಣೆಗೆ ಕಾಯ್ದೆಗಳನ್ನು ತರಬೇಕು. ಕನ್ನಡಿಗರು ಮುಗ್ಧರು ಎಂದು ಭಾವಿಸಬೇಡಿ, ಅನಿಯಂತ್ರಿತ ವಲಸೆ ಹಾಗೂ ಸರ್ಕಾರದ ಕನ್ನಡಿಗ ವಿರೋಧಿ ನೀತಿಗಳ ವಿರುದ್ಧ ಶೀಘ್ರದಲ್ಲೇ ಜನ ದಂಗೆ ಏಳಲಿದ್ದಾರೆ. ಆ ಬೆಂಕಿಯನ್ನು ಆರಿಸುವ ಶಕ್ತಿ ಸರ್ಕಾರಕ್ಕೆ ಇರುವುದಿಲ್ಲ ಎಂದು ಟಿ.ಎ. ನಾರಾಯಣಗೌಡ ಎಚ್ಚರಿಸಿದ್ದಾರೆ.




