ಕರ್ನಾಟಕದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿದೆ. ಎನ್ಯುಮರೇಷನ್ ಫಾರ್ಮ್ ತುಂಬುವುದರಲ್ಲಿ ಉಂಟಾಗಿರುವ ಗೊಂದಲಗಳಿಂದ ಬೂತ್ ಮಟ್ಟದ ಅಧಿಕಾರಿಗಳು (BLO) ಹೆಣಗಾಡುತ್ತಿದ್ದಾರೆ. ಈ ನಡುವೆ, ನಿಗದಿಪಡಿಸಿದ ಗುರಿಯನ್ನು ತಲುಪದ ಬಿಎಲ್‌ಒಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಬೆದರಿಕೆ ಹಾಕಿದ್ದಾರೆ. ಈ ಬೆದರಿಕೆಯು ಸಾರ್ವಜನಿಕ ಮತ್ತು ಆಡಳಿತಾತ್ಮಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವಾದ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸುವುದು ಅಗತ್ಯ. ಆದರೆ, ಎಸ್‌ಐಆರ್ ಎಂಬುದು ಬಹುಸಂಖ್ಯಾತ ಮತದಾರರನ್ನೇ ಮತದಾನದಿಂದ ಹೊರಗಿಟ್ಟು ಚುನಾವಣೆ ನಡೆಸುವ ಪ್ರಕ್ರಿಯೆಯಾಗಿ ಮಾರ್ಪಟ್ಟಿದೆ. ಮತಪಟ್ಟಿ ಪರಿಷ್ಕರಣೆಯಲ್ಲಿ ಅನೇಕ ಸಂದರ್ಭಗಳಲ್ಲಿ ಅರ್ಹ ಮತದಾರರ ಹೆಸರುಗಳು ಕೈಬಿಟ್ಟು ಹೋಗುವುದು ಅಥವಾ ನಕಲಿ ಹೆಸರುಗಳು ಉಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ನಿಗಾವಹಿಸಿ, ಯಾವುದೇ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳದೆ ಎಚ್ಚರ ವಹಿಸಬೇಕು. ಆದರೆ, ಪ್ರಸ್ತುತ ಎಸ್‌ಐಆರ್ ತದ್ವಿರುದ್ಧವಾಗಿ ನಡೆಯುತ್ತಿದೆ. ಪರಿಷ್ಕರಣೆ ಪ್ರಕ್ರಿಯೆಯನ್ನು ಇನ್ನೂ ತ್ವರಿತಗೊಳಿಸಿ, ಮತದಾರರನ್ನು ಹೊರಹಾಕಲು ಚುನಾವಣಾ ಆಯೋಗವು ಧಾವಂತ ತೋರುತ್ತಿರುವಂತೆ ಕಾಣುತ್ತಿದೆ. ಆದ್ದರಿಂದ, ಬಿಎಲ್‌ಒಗಳ ಮೇಲೆ ಎಫ್‌ಐಆರ್ ದಾಖಲಿಸುವ ಬೆದರಿಕೆಗಳನ್ನು ಹಾಕಲಾಗುತ್ತಿದೆ. ಇಂತಹ ಬೆದರಿಕೆಗಳು ಬಿಎಲ್‌ಒಗಳ ಮೇಲೆ ಮಾನಸಿಕ ಮತ್ತು ದೈಹಿಕ ಒತ್ತಡ ಹೇರುವುದರಲ್ಲಿ ಯಾವುದೇ ಸಂದೇಹವಿಲ್ಲ.
ಬಿಎಲ್‌ಒಗಳಾಗಿ ಕೆಲಸ ಮಾಡುವ ಬಹುತೇಕರು ಪ್ರಾಥಮಿಕ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಅಥವಾ ಕಂದಾಯ ಇಲಾಖೆಯ ಕೆಳಹಂತದ ನೌಕರರಾಗಿರುತ್ತಾರೆ. ಇವರಿಗೆ ಕೇವಲ ಚುನಾವಣಾ ಕೆಲಸ ಮಾತ್ರವಲ್ಲದೆ, ತಮ್ಮದೇ ಇಲಾಖೆಯ ದೈನಂದಿನ ಶೈಕ್ಷಣಿಕ ಅಥವಾ ಆಡಳಿತಾತ್ಮಕ ಕರ್ತವ್ಯಗಳ ಭಾರೀ ಜವಾಬ್ದಾರಿಗಳು ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಅವರು ತಮ್ಮ ಮೂಲ ಕೆಲಸಗಳ ಜೊತೆಗೆ ಎಸ್‌ಐಆರ್ ಪ್ರಕ್ರಿಯೆಯನ್ನು ಅತ್ಯಂತ ತ್ವರಿತವಾಗಿ ಮುಗಿಸಬೇಕಾದ ಇಕ್ಕಟ್ಟಿಗೆ ಸಿಲುಕುತ್ತಾರೆ. ಯಾವುದೇ ಪ್ರಕ್ರಿಯೆಯನ್ನು ತರಾತುರಿಯಲ್ಲಿ ಮುಗಿಸಲು ಒತ್ತಡ ಹೇರಿದಾಗ, ಅಲ್ಲಿ ದೋಷಗಳು ಉಂಟಾಗುವ ಸಾಧ್ಯತೆ ಮತ್ತಷ್ಟು ಹೆಚ್ಚಾಗುತ್ತದೆ. ಕೇವಲ ಗುರಿ ತಲುಪುವ ಮತ್ತು ಎಫ್‌ಐಆರ್‌ನಿಂದ ಬಚಾವಾಗುವ ಆತುರದಲ್ಲಿ ಬಿಎಲ್‌ಒಗಳು ಮತದಾರರ ಪರಿಶೀಲನೆಯನ್ನು ಸಮರ್ಪಕವಾಗಿ ಮಾಡದೆ ಕೇವಲ ಕಾಗದದ ಮೇಲೆ ದಾಖಲೆಗಳನ್ನು ಸೃಷ್ಟಿಸುವ ಅಪಾಯವೂ ಇರುತ್ತದೆ.
ಇದಲ್ಲದೆ, ಕ್ರಿಮಿನಲ್ ಮೊಕದ್ದಮೆ ಅಥವಾ ಎಫ್‌ಐಆರ್‌ನಂತಹ ಕಠಿಣ ಕ್ರಮಗಳ ಬೆದರಿಕೆಯು ನೌಕರರ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಆಡಳಿತಾತ್ಮಕ ಲೋಪಗಳು ಅಥವಾ ಪ್ರಾಯೋಗಿಕ ತೊಂದರೆಗಳಿಂದಾಗಿ ಕೆಲಸ ವಿಳಂಬವಾದಾಗ, ಅದನ್ನು ಇಲಾಖಾ ಶಿಸ್ತು ಕ್ರಮಗಳ ಮೂಲಕ ಸರಿಪಡಿಸುವ ಬದಲು ನೇರವಾಗಿ ಪೊಲೀಸ್ ಕೇಸ್ ದಾಖಲಿಸುವುದಾಗಿ ಹೇಳುವುದು ಅಪಾಯಕಾರಿ ಪ್ರವೃತ್ತಿಯಾಗಿದೆ.
This video cannot be played in your browser. Open the video directly
ಈ ಲೇಖನ ಓದಿದ್ದೀರಾ?: ಶಿಕ್ಷಕರಿಗೆ SIR ಕರ್ತವ್ಯವೋ, ಮಕ್ಕಳ ಪಾಠವೋ- ಬಗೆಹರಿಯದ ಗೊಂದಲ
ತಳಮಟ್ಟದ ಸಿಬ್ಬಂದಿಗೆ ಎದುರಾಗುವ ತಾಂತ್ರಿಕ ಸಮಸ್ಯೆಗಳು, ಇಂಟರ್ನೆಟ್ ಕೊರತೆ, ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಎದುರಾಗುವ ಸವಾಲುಗಳನ್ನು ಅರ್ಥಮಾಡಿಕೊಳ್ಳದೆ, ಕೇವಲ ಬೆದರಿಕೆಯ ತಂತ್ರವನ್ನು ಬಳಸುವುದರಿಂದ ಉನ್ನತ ಅಧಿಕಾರಿಗಳು ಮತ್ತು ಕೆಳಹಂತದ ನೌಕರರ ನಡುವೆ ಅಪನಂಬಿಕೆ ಹಾಗೂ ಅಸಮಾಧಾನದ ವಾತಾವರಣ ಸೃಷ್ಟಿಯಾಗುತ್ತದೆ.
ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಯಶಸ್ವಿಯಾಗಿ ಮತ್ತು ಸಮಯಕ್ಕೆ ಸರಿಯಾಗಿ ಮುಗಿಸುವುದು ಎಷ್ಟು ಮುಖ್ಯವೋ, ಅದನ್ನು ನಿರ್ವಹಿಸುವ ಸಿಬ್ಬಂದಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸುವುದು ಅಷ್ಟೇ ಮುಖ್ಯ. ಕೇವಲ ಶಿಕ್ಷಾರ್ಹ ಕ್ರಮಗಳ ಭಯವನ್ನು ಬಿತ್ತುವ ಬದಲಾಗಿ, ಬಿಎಲ್‌ಒಗಳಿಗೆ ಅಗತ್ಯವಿರುವ ತಾಂತ್ರಿಕ ನೆರವು, ಹೆಚ್ಚುವರಿ ಸಮಯಾವಕಾಶ ಮತ್ತು ಪ್ರೋತ್ಸಾಹವನ್ನು ನೀಡುವ ಮೂಲಕ ಕೆಲಸದ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಬೆದರಿಕೆ ಆಧಾರದ ಮೇಲೆ ಪ್ರಕ್ರಿಯೆ ನಡೆಯುವ ಬದಲು, ಪ್ರಾಯೋಗಿಕ ಯೋಜನೆಗಳ ಮೂಲಕ ಸಾಕಾರಗೊಳ್ಳಬೇಕಾದುದು ಅಗತ್ಯ.




