ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಎರಡೂವರೆ ತಿಂಗಳ ಪುಟ್ಟ ತಂಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಸುದ್ದಿ ಕೇಳಿ ತೀವ್ರ ಆಘಾತಕ್ಕೊಳಗಾದ 10 ವರ್ಷದ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯಲ್ಲಿ ನಡೆದಿದೆ.
ಕೋರ್ಬಾ ಜಿಲ್ಲೆಯ ಬಾಂಗೊ ಪೊಲೀಸ್ ಠಾಣಾ ವ್ಯಾಪ್ತಿಯ ಅಮತಿಕ್ರಾ ಗ್ರಾಮದ ದಿನಗೂಲಿ ಕಾರ್ಮಿಕ ಸುಖಿರಾಮ್ ಎಂಬುವವರ ಎರಡೂವರೆ ತಿಂಗಳ ಮಗು ‘ರಾಣಿ’ ಕಳೆದ ಕೆಲವು ದಿನಗಳಿಂದ ಶೀತ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿತ್ತು. ಮಗುವಿಗೆ ಸ್ಥಳೀಯ ಆಸ್ಪತ್ರೆ ಮತ್ತು ಪೊಂಡಿ ಉಪ್ರೋಡಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.
ಇದನ್ನೂ ಓದಿ: ಗುಬ್ಬಿ | ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ..!.
ಆದರೆ, ಗುರುವಾರ ರಾತ್ರಿ ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಕೋರ್ಬಾದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಿಗ್ಗೆ ಪುಟ್ಟ ಕಂದಮ್ಮ ರಾಣಿ ಕೊನೆಯುಸಿರೆಳೆದಿದೆ. ಈ ದುಃಖದ ವಿಷಯವನ್ನು ತಂದೆ ಸುಖಿರಾಮ್ ಅವರು ದೂರವಾಣಿ ಮೂಲಕ ಮನೆಯವರಿಗೆ ತಿಳಿಸಿದ್ದರು.
ಪೋಷಕರು ಮಗುವಿನ ಮೃತದೇಹದೊಂದಿಗೆ ಗ್ರಾಮಕ್ಕೆ ಮರಳಿದಾಗ ಮನೆಯೊಳಗೆ ಮತ್ತೊಂದು ಭೀಕರ ದೃಶ್ಯ ಕಂಡುಬಂದಿದೆ. ಸುಖಿರಾಮ್ ಅವರ 10 ವರ್ಷದ ಹಿರಿಯ ಮಗಳು ರೂಪಕುನ್ವರ್ ಮನೆಯ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯ ಪಕ್ಕದಲ್ಲೇ ಮೂರೂವರೆ ವರ್ಷದ ಮತ್ತೊಬ್ಬ ತಂಗಿ ರಾಗಿಣಿ ಕುಳಿತಿದ್ದಳು.
ತಕ್ಷಣವೇ ರೂಪಕುನ್ವರ್‌ಳನ್ನು ಪೊಂಡಿ ಉಪ್ರೋಡಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ, ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಪುಟ್ಟ ತಂಗಿಯ ಮೇಲೆ ಅತಿಯಾದ ಪ್ರೀತಿ ಹೊಂದಿದ್ದ ರೂಪಕುನ್ವರ್, ಆಕೆಯ ಸಾವಿನ ಸುದ್ದಿ ತಿಳಿದು ತೀವ್ರ ಮನನೊಂದು ಈ ಕಠಿಣ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದಾಗ್ಯೂ, ಸಾವಿಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಾಂಗೊ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ದುರ್ಗೇಶ್ ವರ್ಮಾ ಮತ್ತು ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಒಂದೇ ಕುಟುಂಬದಲ್ಲಿ ನಡೆದ ಈ ಅವಳಿ ದುರಂತದಿಂದ ಇಡೀ ಅಮತಿಕ್ರಾ ಗ್ರಾಮಕ್ಕೆ ಆಘಾತ ಉಂಟು ಮಾಡಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.



