ಮಹಾರಾಷ್ಟ್ರದ ಬರಗಾಲ ಮತ್ತು ಜಲ ಸಂರಕ್ಷಣಾ ನೀತಿಗಳ ಕುರಿತು ಟೀಕಿಸುವ ಭರದಲ್ಲಿ, ರಿಪಬ್ಲಿಕನ್ ಸೇನಾ ಮುಖ್ಯಸ್ಥ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಆನಂದರಾಜ್ ಅಂಬೇಡ್ಕರ್ ಅವರು ದಿವಂಗತ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಕುರಿತು ನೀಡಿದ ವ್ಯಂಗ್ಯದ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಶನಿವಾರ ಜಾಲ್ನಾ ನಗರದಲ್ಲಿ ಆಯೋಜಿಸಲಾಗಿದ್ದ ರಿಪಬ್ಲಿಕನ್ ಸೇನೆಯ 28ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಆನಂದರಾಜ್ ಅಂಬೇಡ್ಕರ್, ರಾಜ್ಯ ಸರ್ಕಾರದ ‘ನೀರು ತಡೆಯಿರಿ, ನೀರು ಇಂಗಿಸಿ’ ಯೋಜನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ಅಜಿತ್ ಪವಾರ್ ವಿಮಾನ ದುರಂತ ಆಕಸ್ಮಿಕವಲ್ಲ, ಸಂಚು: ರೋಹಿತ್ ಪವಾರ್ ಗಂಭೀರ ಆರೋಪ
“ನಮ್ಮ ಆಡಳಿತಗಾರರು ಮಳೆ ನೀರನ್ನು ತಡೆದು ಇಂಗಿಸುವಂತೆ ಜನರಿಗೆ ಹೇಳುತ್ತಾರೆ. ಆದರೆ ಮಳೆಯೇ ಬಾರದ ಪ್ರದೇಶಗಳಲ್ಲಿ ಏನು ಮಾಡಬೇಕು? ಅಲ್ಲಿನ ಕೆರೆಗಳನ್ನು ತುಂಬಿಸಲು ಅಜಿತ್ ಪವಾರ್ ಅವರನ್ನು ಕರೆತರಬೇಕೇ?” ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದ್ದರು. 2013ರ ಏಪ್ರಿಲ್‌ನಲ್ಲಿ ಬರಗಾಲದ ವೇಳೆ ಖಾಲಿ ಅಣೆಕಟ್ಟುಗಳ ಕುರಿತು ಅಜಿತ್ ಪವಾರ್ ನೀಡಿದ್ದ ವಿವಾದಾತ್ಮಕ ‘ಮೂತ್ರ’ದ ಹೇಳಿಕೆಯನ್ನು ಪರೋಕ್ಷವಾಗಿ ಉಲ್ಲೇಖಿಸಿ ಆನಂದರಾಜ್ ಈ ಮಾತುಗಳನ್ನಾಡಿದ್ದರು.
ಈ ಹೇಳಿಕೆಗೆ ವಿವಾದ ಭುಗಿಲೇಳುತ್ತಿದ್ದಂತೆಯೇ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಆನಂದರಾಜ್ ಅಂಬೇಡ್ಕರ್, ತಾವು ಯಾರನ್ನೂ ಅವಮಾನಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನೀರಿನ ಅಭಾವದ ಕುರಿತು ಅಜಿತ್ ಪವಾರ್ ಈ ಹಿಂದೆ ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ತಾವು ಕೇವಲ ವ್ಯಂಗ್ಯವಾಗಿ ಆ ಮಾತನ್ನು ಉಲ್ಲೇಖಿಸಿದ್ದಾಗಿ ತಿಳಿಸಿದ್ದಾರೆ. ಆದರೆ, ಅವರ ಈ ಸ್ಪಷ್ಟನೆಯ ಹೊರತಾಗಿಯೂ ರಾಜಕೀಯ ವಲಯದಲ್ಲಿ ಆಕ್ರೋಶ ತಣ್ಣಗಾಗಿಲ್ಲ.
ಅಜಿತ್ ಪವಾರ್ ಅವರು ಜನವರಿ 28ರಂದು ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಅಜಿತ್ ಪವಾರ್ ಅವರೊಂದಿಗೆ ವಿಮಾನದಲ್ಲಿದ್ದ ಪೈಲಟ್, ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು ಐದು ಮಂದಿ ಮೃತಪಟ್ಟರು. ಮೃತರನ್ನು ಈಗ ಕರೆತರಬೇಕೇ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಮತ್ತೊಂದೆಡೆ, ದಿವಂಗತ ನಾಯಕನ ಕುರಿತು ಇಂತಹ ಅಸಂವೇದನಾಶೀಲ ಹೇಳಿಕೆ ನೀಡಿರುವುದಕ್ಕೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ತೀವ್ರ ಕೆಂಡಾಮಂಡಲವಾಗಿದೆ. ಎನ್‌ಸಿಪಿ ಪ್ರಧಾನ ಕಾರ್ಯದರ್ಶಿ ಸೂರಜ್ ಚವಾಣ್ ಮತ್ತು ನಾಯಕ ಉಮೇಶ್ ಪಾಟೀಲ್ ಅವರು ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಆನಂದರಾಜ್ ಅಂಬೇಡ್ಕರ್ ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಸಂವಿಧಾನಬದ್ಧವಾಗಿ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎನ್‌ಸಿಪಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಅಜಿತ್ ಪವಾರ್: ಮೋದಿ ಸರ್ಕಾರದ ಒತ್ತಡಕ್ಕೆ ಮಣಿದು ಎನ್‌ಸಿಪಿ ಇಬ್ಭಾಗಿಸಿದ್ದ ‘ಮಹಾ’ ನಾಯಕ
ಅಜಿತ್ ಪವಾರ್ ಮೂತ್ರದ ಹೇಳಿಕೆ ಏನು?
2013ರ ಏಪ್ರಿಲ್‌ನಲ್ಲಿ ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ಆವರಿಸಿದ್ದ ವೇಳೆ ಅಂದಿನ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ನೀಡಿದ್ದ “ಅಣೆಕಟ್ಟುಗಳಲ್ಲಿ ನೀರಿಲ್ಲದಿದ್ದರೆ, ನಾನು ಮೂತ್ರ ವಿಸರ್ಜಿಸಿ ತುಂಬಿಸಬೇಕೇ?” ಎಂಬ ಹೇಳಿಕೆಯು ಭಾರತೀಯ ರಾಜಕಾರಣದಲ್ಲಿ ಭಾರಿ ಕೋಲಾಹಲ ಎಬ್ಬಿಸಿತ್ತು.
2013ರಲ್ಲಿ ಮಹಾರಾಷ್ಟ್ರದ ಮರಾಠವಾಡ ಸೇರಿದಂತೆ ಹಲವು ಭಾಗಗಳಲ್ಲಿ ತೀವ್ರ ಬರಗಾಲವಿತ್ತು. ಈ ವೇಳೆ ಸೋಲಾಪುರ ಜಿಲ್ಲೆಯ ಪ್ರಭಾಕರ ದೇಶಮುಖ್ ಎಂಬ ರೈತ ಮುಖಂಡರು ಬರಪೀಡಿತ ಪ್ರದೇಶಗಳಿಗೆ ನೀರು ಬಿಡುವಂತೆ ಒತ್ತಾಯಿಸಿ ಮುಂಬೈನ ಆಜಾದ್ ಮೈದಾನದಲ್ಲಿ 55 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು.
2013ರ ಏಪ್ರಿಲ್ 6ರಂದು ಪುಣೆ ಜಿಲ್ಲೆಯ ಇಂದಾಪುರದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಅಜಿತ್ ಪವಾರ್, ರೈತರ ಉಪವಾಸ ಸತ್ಯಾಗ್ರಹವನ್ನು ಲೇವಡಿ ಮಾಡುತ್ತಾ, “ನೀರು ಬಿಡಬೇಕೆಂದು ಒಬ್ಬ ವ್ಯಕ್ತಿ ಕಳೆದ 55 ದಿನಗಳಿಂದ ಆಜಾದ್ ಮೈದಾನದಲ್ಲಿ ಉಪವಾಸ ಕುಳಿತಿದ್ದಾರೆ. ಆದರೆ ಅಣೆಕಟ್ಟುಗಳಲ್ಲಿ ನೀರೇ ಇಲ್ಲದಿದ್ದರೆ ಎಲ್ಲಿಂದ ಬಿಡುವುದು? ನಾವೇನಾದರೂ ಅಲ್ಲಿಗೆ ಹೋಗಿ ಮೂತ್ರ ವಿಸರ್ಜಿಸಿ ಅಣೆಕಟ್ಟುಗಳನ್ನು ತುಂಬಿಸಬೇಕೇ? ಕುಡಿಯಲು ನೀರಿಲ್ಲದಿದ್ದರೆ ಮೂತ್ರ ವಿಸರ್ಜಿಸುವುದೂ ಕಷ್ಟವಾಗುತ್ತದೆ” ಎಂದು ಹೇಳಿದ್ದರು.
ಇದರ ಜೊತೆಗೆ, ರಾತ್ರಿ ವೇಳೆ ವಿದ್ಯುತ್ ಕಡಿತಗೊಳ್ಳುವುದರ ಬಗ್ಗೆಯೂ ವ್ಯಂಗ್ಯವಾಡಿದ್ದ ಅವರು, “ರಾತ್ರಿ ಲೋಡ್ ಶೆಡ್ಡಿಂಗ್ ಆಗುತ್ತಿರುವುದರಿಂದ ಜನಸಂಖ್ಯೆ ಹೆಚ್ಚಾಗುತ್ತಿದೆ, ಬೇರೆ ಏನೂ ಕೆಲಸವಿಲ್ಲದಂತಾಗಿದೆ” ಎಂದು ವಿವಾದಾತ್ಮಕವಾಗಿ ಮಾತನಾಡಿದ್ದರು. ಆದರೆ ವಿವಾದ ಕೈಮೀರುತ್ತಿದ್ದಂತೆಯೇ ಅಜಿತ್ ಪವಾರ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು. “ನನ್ನ ಜೀವನದಲ್ಲಿ ನಾನು ಮಾಡಿದ ಅತಿದೊಡ್ಡ ತಪ್ಪು ಇದು. ಯಾರನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ” ಎಂದು ಹೇಳಿದ್ದರು. ಇದೀಗ ಇದೇ ಹೇಳಿಕೆಯನ್ನು ಮುಂದಿಟ್ಟುಕೊಂಡು ಕೆರೆ ತುಂಬಿಸಲು ಅಜಿತ್ ಪವಾರ್ ಅವರನ್ನು ಕರೆತರಬೇಕೇ? ಎಂದು ಆನಂದರಾಜ್ ಅಂಬೇಡ್ಕರ್ ಹೇಳಿಕೆ ನೀಡಿದ್ದಾರೆ.




