ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯ ಅವಧಿಯನ್ನು ಭಾರತೀಯ ಚುನಾವಣಾ ಆಯೋಗವು ಪರಿಷ್ಕರಿಸಿ, ವಿಸ್ತರಿಸಿದೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ವಿ.ಅನ್ಬುಕುಮಾರ್ ಕೋರಿಕೆಯ ಮೇರೆಗೆ ಚುನಾವಣಾ ಆಯೋಗವು ಈ ನಿರ್ಧಾರ ಕೈಗೊಂಡಿದೆ.
ಬೂತ್ ಮಟ್ಟದ ಅಧಿಕಾರಿಗಳು (BLO) ಮತದಾರರ ಮನೆಗಳಿಗೆ ಭೇಟಿ ನೀಡಿ ಗಣತಿ ನಮೂನೆ (Enumeration Form) ಸಂಗ್ರಹಿಸುವ ಅವಧಿಯನ್ನು ಜುಲೈ 29ರ ಬದಲಾಗಿ ಆಗಸ್ಟ್ 8ರವರೆಗೆ ವಿಸ್ತರಿಸಲಾಗಿದೆ. ಹಾಗೆಯೇ ಕರಡು ಮತದಾರರ ಪಟ್ಟಿಯನ್ನು ಮೊದಲು ನಿಗದಿಪಡಿಸಿದ್ದ ಆಗಸ್ಟ್ 5ರ ಬದಲಾಗಿ ಆಗಸ್ಟ್ 17ರಂದು ಪ್ರಕಟಿಸಲಾಗುತ್ತದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | SIRಗೆ ಅವಧಿ ವಿಸ್ತರಣೆ ಅಗತ್ಯ
ಇನ್ನು ಸಾರ್ವಜನಿಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಆಗಸ್ಟ್ 17 ರಿಂದ ಸೆಪ್ಟೆಂಬರ್ 16ರವರೆಗೆ ಕಾಲಾವಕಾಶ ನೀಡಲಾಗಿದೆ. ಪರಿಷ್ಕೃತಗೊಂಡ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 19ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು.
ಕರ್ನಾಟಕ ಮಾತ್ರವಲ್ಲದೆ ಪಂಜಾಬ್, ತೆಲಂಗಾಣ ರಾಜ್ಯಗಳಲ್ಲಿ ಮತ್ತು ದೆಹಲಿಯಲ್ಲಿಯೂ ಎಸ್ಐಆರ್ ಅವಧಿ ಪರಿಷ್ಕರಣೆ ಮಾಡಲಾಗಿದೆ.
ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿಗೆ ಬರೆದ ಪತ್ರದಲ್ಲಿ, ಚುನಾವಣಾ ಪ್ರಾಧಿಕಾರವು ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 5ರ ಬದಲಿಗೆ ಆಗಸ್ಟ್ 17ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದೆ. ಅದೇ ರೀತಿ, ಜುಲೈ 29ರವರೆಗೆ ನಿಗದಿಯಾಗಿದ್ದ ಮನೆ-ಮನೆ ಭೇಟಿಗಳು ಆಗಸ್ಟ್ 8ರವರೆಗೆ ಮುಂದುವರಿಸಿದೆ.
ಪಂಜಾಬ್ನಲ್ಲಿ, ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ಮನೆ-ಮನೆ ಭೇಟಿಗಳು ಆಗಸ್ಟ್ 3ರವರೆಗೆ ಮುಂದುವರಿಯಲಿವೆ. ಇದಕ್ಕೂ ಮೊದಲು, ಮನೆ-ಮನೆ ಭೇಟಿಗೆ ಜುಲೈ 24ರವರೆಗೆ ಅವಕಾಶವಿತ್ತು. ಪಂಜಾಬ್ನಲ್ಲಿ ಕರಡು ಮತದಾರರ ಪಟ್ಟಿಯನ್ನು ಈಗ ಜುಲೈ 31ರ ಬದಲಿಗೆ ಆಗಸ್ಟ್ 13ರಂದು ಪ್ರಕಟಿಸಲಾಗುವುದು. ಅಕ್ಟೋಬರ್ 10 ರ ಬದಲಿಗೆ ಅಕ್ಟೋಬರ್ 12 ರಂದು ಅಂತಿಮ ಪಟ್ಟಿಗಳು ಹೊರಬರಲಿವೆ.
ತೆಲಂಗಾಣದಲ್ಲಿ, ಕರಡು ಪಟ್ಟಿಯನ್ನು ಆಗಸ್ಟ್ 10ರಂದು ಪ್ರಕಟಿಸಲಾಗುವುದು ಮತ್ತು ಅಂತಿಮ ಪಟ್ಟಿಯನ್ನು ಅಕ್ಟೋಬರ್ 12ರಂದು ಪ್ರಕಟಿಸಲಾಗುವುದು.




