“ನಮ್ಮ ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳಲು ನಮ್ಮನ್ನೇಕೆ ಅಧಿಕಾರಿಗಳ ಹಿಂದೆ ಅಲೆಯುವಂತೆ ಮಾಡುತ್ತಿದ್ದೀರಿ? ನಮ್ಮ ಮೂಲಭೂತ ಹಕ್ಕಿಗಾಗಿ ನಮ್ಮನ್ನು ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ” ಎಂದು ಚುನಾವಣಾ ಆಯೋಗದ ವಿರುದ್ಧ ನಟ ಪ್ರಕಾಶ್ ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಹೆಸರಿನಲ್ಲಿ ಚುನಾವಣಾ ಆಯೋಗವು ಅರ್ಹ ಮತದಾರರ ಹಕ್ಕನ್ನು ಕಸಿದುಕೊಳ್ಳುತ್ತಿದೆ” ಎಂದು ಆರೋಪಿಸಿದರು.
“ಇನ್ನೂ ಎರಡು ವರ್ಷಗಳ ಕಾಲ ರಾಜ್ಯದಲ್ಲಿ ಯಾವುದೇ ಚುನಾವಣೆಗಳಿಲ್ಲದಿದ್ದರೂ, ಇಷ್ಟೊಂದು ಅವಸರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುವ ಅಗತ್ಯವೇನಿತ್ತು? ಜನಸಾಮಾನ್ಯರ ಘನತೆಯನ್ನು ಹೀಗೆ ಅವಮಾನಿಸುತ್ತಿರುವುದು ಏಕೆ” ಎಂದು ಪ್ರಕಾಶ್ ರಾಜ್ ತೀವ್ರವಾಗಿ ಪ್ರಶ್ನಿಸಿದರು.
ಚುನಾವಣಾ ಆಯೋಗದ ಧೋರಣೆಯನ್ನು ತೀವ್ರವಾಗಿ ಖಂಡಿಸಿದ ಪ್ರಕಾಶ್ ರಾಜ್, “ಜೀವನ ನಡೆಸಲು ಜಾಗ ಬದಲಾಯಿಸುವವರಿಗೆ ಫಾರಂ ನಂ.6 ಅಲ್ಲ, ಫಾರಂ ನಂ.8 ಕೊಡಬೇಕು. ಆದರೆ, ಜಾಗ ಬದಲಾಯಿಸಿದವರ ಓಟನ್ನೇ ಕಿತ್ತುಕೊಳ್ಳಲು ನೋಡುತ್ತಿರುವ ಚುನಾವಣಾ ಆಯೋಗದ ನಿಜವಾದ ಬಣ್ಣ ರಾಜಕೀಯವಾಗಿದೆ” ಎಂದು ವಾಗ್ದಾಳಿ ನಡೆಸಿದರು.
“ಎಲ್ಲದಕ್ಕೂ ಉತ್ತರವಾಗಿ ಫಾರಂ ನಂ.6 ತೆಗೆದುಕೊಳ್ಳಿ ಎಂದು ಹೇಳುವ ಚುನಾವಣಾ ಆಯೋಗ, ಅದಕ್ಕೆ ಕೇಳಲಾಗುತ್ತಿರುವ 13 ವಿವಿಧ ದಾಖಲಾತಿಗಳ ಅಸಲಿ ಕಥೆಯನ್ನು ಮುಚ್ಚಿಡುತ್ತಿರುವುದೇಕೆ? ಚುನಾವಣಾ ಆಯೋಗದ ಈ ಷಡ್ಯಂತ್ರ ಕರ್ನಾಟಕದ ಜನರಿಗೆ ಈಗಾಗಲೇ ಅರ್ಥವಾಗಿದೆ. ಸ್ಥಳಾಂತರವಾದವರಿಗೆ ನೋಟೀಸ್ ನೀಡಿ, ಅವರ ಅಭಿಪ್ರಾಯ ಕೇಳಿ ವಿಳಾಸ ಬದಲಾಯಿಸುವುದು ನಿಜವಾದ ಒಳಗೊಳ್ಳುವಿಕೆ. ಆದರೆ, ಹೆಸರನ್ನೇ ಡಿಲೀಟ್ ಮಾಡಿ ಮತ್ತೆ ಫಾರಂ ನಂ.6 ಕೊಡಿ ಎನ್ನುವುದು ಜನರನ್ನು ಹೊರಗುಳಿಸುವಿಕೆ. ಅಸಲಿಗೆ SIR ಅಂದರೇನೇ ಜನರನ್ನು ಹೊರಗುಳಿಸುವ ಕುತಂತ್ರ!” ಎಂದು ಅವರು ಆಕ್ರೋಶ ಹೊರಹಾಕಿದರು.
ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕೊಳೆಗೇರಿ ನಿವಾಸಿಗಳು ತಮಗೆ ನೀಡಲಾಗಿದ್ದ ಗಣತಿ ನಮೂನೆ (Enumeration Form) ಸ್ವೀಕೃತಿ ಪತ್ರಗಳನ್ನು ಪ್ರದರ್ಶಿಸಿ ಆಯೋಗದ ಎಡವಟ್ಟುಗಳನ್ನು ಬಿಚ್ಚಿಟ್ಟರು. “ನಾವು ನಮೂನೆ ಸಲ್ಲಿಸಿದ್ದರೂ ನಮ್ಮನ್ನು ‘ಸ್ಥಳಾಂತರಗೊಂಡವರು’ ಎಂದು ಪಟ್ಟಿಗೆ ಸೇರಿಸಲಾಗಿದೆ. ಬಿಎಲ್‌ಒಗಳಿಗೆ ಪದೇಪದೇ ಕರೆ ಮಾಡಿದರೂ ಫಾರಂ ನೀಡಿಲ್ಲ. ನಮ್ಮ ಮನೆಯಲ್ಲಿ ದಿನದ 24 ಗಂಟೆಯೂ ಯಾರಾದರೂ ಇದ್ದೇ ಇರುತ್ತಾರೆ. ಹಾಗಿರುವಾಗ ಮನೆಗೆ ಯಾರೂ ಬಾರದೆ, ಗಣತಿಯನ್ನೂ ಮಾಡದೆ ನಮ್ಮನ್ನು ‘ಶಿಫ್ಟೆಡ್’ ಎಂದು ಹೇಗೆ ಕೈಬಿಟ್ಟಿರಿ?” ಎಂದು ನಿವಾಸಿಗಳು ಕಿಡಿಕಾರಿದರು.
“ಬಾಡಿಗೆ ಮನೆ ಬದಲಾಯಿಸುವುದು, ಬದುಕಿಗಾಗಿ ಬೇರೆ ಊರಿಗೆ ಹೋಗುವುದು, ಮದುವೆಯಾಗಿ ಗಂಡನ ಮನೆಗೆ ಹೋಗುವುದು ಅಪರಾಧವೇ? ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವ ಬದಲು, ವಿಳಾಸ ಬದಲಾವಣೆಗೆ ಫಾರಂ-8 ಕೊಡುವ ಸೌಜನ್ಯವನ್ನೂ ಆಯೋಗ ತೋರಿಲ್ಲ. ಈಗ ಮತ್ತೆ ಹೊಸದಾಗಿ ಫಾರಂ-6ನಲ್ಲಿ ಅರ್ಜಿ ಸಲ್ಲಿಸಿ ಎನ್ನುತ್ತಿರುವುದು ಯಾವ ನ್ಯಾಯ” ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌ಐಆರ್ ವಿರೋಧ ಕರ್ನಾಟಕ ಮುಖಂಡ ನೂರ್ ಶ್ರೀಧರ್, “ಹಿರಿಯ ನಾಗರಿಕರ ವಿಷಯದಲ್ಲೂ ಅಧಿಕಾರಿಗಳು ಕರುಣೆಯಿಲ್ಲದೆ ವರ್ತಿಸುತ್ತಿದ್ದಾರೆ. ಬಿಎಲ್‌ಒಗಳು ನಿರ್ದಿಷ್ಟವಾಗಿ ‘ಸತ್ತಿಲ್ಲ’ ಎಂದು ನಮೂದಿಸದಿದ್ದರೆ ಹಿರಿಯ ಜೀವಗಳನ್ನು ‘ಮೃತಪಟ್ಟವರು’ ಎಂದು ಗುರುತಿಸಿ, ಬದುಕಿರುವವರನ್ನೂ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ” ಎಂದು ಕಿಡಿಕಾರಿದರು.
ಈ ವರದಿ ಓದಿದ್ದೀರಾ?: SIR | ಬದುಕಿರುವವರನ್ನೇ ಮತಪಟ್ಟಿಯಲ್ಲಿ ಕೊಂದ ಚುನಾವಣಾ ಆಯೋಗ
“ಯಾವುದೇ ಸಮರ್ಪಕ ಪ್ರಚಾರ ಅಥವಾ ಅಭಿಯಾನವಿಲ್ಲದೆ ಏಕಾಏಕಿ ‘Absent’ ಅಥವಾ ‘Shifted’ ಎಂದು ಲಕ್ಷಾಂತರ ಜನರ ಹೆಸರುಗಳನ್ನು ಅಳಿಸಿಹಾಕಲಾಗುತ್ತಿದೆ. ಇಷ್ಟೊಂದು ದೊಡ್ಡ ಪ್ರಕ್ರಿಯೆಯನ್ನು ಅಲ್ಪ ಅವಧಿಯಲ್ಲಿ ಮುಗಿಸಲು ಹೊರಟಿರುವುದು ಬೂತ್ ಮಟ್ಟದ ಅಧಿಕಾರಿಗಳ (BLO) ಮೇಲೆಯೂ ತೀವ್ರ ಮಾನಸಿಕ ಒತ್ತಡ ಹೇರಿದೆ” ಎಂದು ಅವರು ಆರೋಪಿಸಿದರು.
“ಕರ್ನಾಟಕದಲ್ಲಿ ಐವರು ಬಿಎಲ್‌ಒಗಳ ಸಾವಿಗೆ ಈ ಕಾರ್ಯದ ಒತ್ತಡವೇ ಕಾರಣ ಎಂದು ಹೇಳಲಾಗುತ್ತಿದೆ. ದೇಶಾದ್ಯಂತ ಎಸ್‌ಐಆರ್ ಜಾರಿಯಾಗಿರುವ ಪ್ರದೇಶಗಳಲ್ಲಿ ಈಗಾಗಲೇ ೪೦ಕ್ಕೂ ಹೆಚ್ಚು ಬಿಎಲ್‌ಒಗಳು ಮೃತಪಟ್ಟಿದ್ದು, ಹಲವರು ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ” ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಆಯೋಗದ ಮುಂದಿಟ್ಟ ಪ್ರಮುಖ ಹಕ್ಕೊತ್ತಾಯಗಳು:
- ರಾಜ್ಯದ ಮತದಾರರ ಪಟ್ಟಿಯನ್ನು ಮರುರೂಪಿಸುವ ಈ ಪ್ರಕ್ರಿಯೆಯನ್ನು ಇಷ್ಟೊಂದು ದುಡುಕಿನಲ್ಲಿ ಮಾಡಬಾರದು. ಪೂರ್ಣ ಒಂದು ವರ್ಷದ ಕಾಲಾವಕಾಶ ನೀಡಿ, ವ್ಯವಧಾನದಿಂದ ಪ್ರಕ್ರಿಯೆ ನಡೆಸಬೇಕು.
- ಬಿಎಲ್‌ಒಗಳು ಹೋದಾಗ ಮನೆಯಲ್ಲಿ ಇಲ್ಲದವರ ಹೆಸರುಗಳನ್ನು ತಕ್ಷಣವೇ ಡಿಲೀಟ್ ಮಾಡಬಾರದು. ದುಡಿಮೆಗಾಗಿ ಅಲೆಯುವ ಜನರ ಜೊತೆ ಮಾನವೀಯತೆಯಿಂದ ನಡೆದುಕೊಂಡು, ಅವರಿಗೆ ಕನಿಷ್ಠ ಮೂರು ತಿಂಗಳ ಕಾಲಾವಕಾಶ ನೀಡಬೇಕು.
- ಸ್ಥಳಾಂತರಗೊಂಡವರನ್ನು ಅಥವಾ ಮನೆಯಲ್ಲಿ ಸಿಗದವರನ್ನು ಯಾವುದೇ ಕಾರಣಕ್ಕೂ ‘ಡಿಲೀಟ್’ ಪಟ್ಟಿಗೆ ಸೇರಿಸಬಾರದು. ಅವರು ಪ್ರಸ್ತುತ ಇರುವ ಸ್ಥಳಗಳಲ್ಲೇ ಎನ್ಯುಮುರೇಷನ್ ಫಾರಂ ಹಾಗೂ ಫಾರಂ-8 ನೀಡುವ ವ್ಯವಸ್ಥೆಯಾಗಬೇಕು.
- ಹೊಸ ಮತದಾರರಿಗೆ ಫಾರಂ-6 ಹಾಗೂ ಸ್ಥಳಾಂತರಗೊಂಡವರಿಗೆ ಫಾರಂ-8 ನೀಡಿ ಪ್ರತಿಯೊಬ್ಬರನ್ನೂ ಪಟ್ಟಿಯಲ್ಲಿ ಒಳಗೊಳ್ಳಲು ಮತ್ತೆ ಮನೆಮನೆ ಗಣತಿ ನಡೆಸಬೇಕು.
- ಕರಡು ಪಟ್ಟಿ ಪ್ರಕಟವಾದ ನಂತರ ಪ್ರತಿಯೊಂದು ಬೂತ್ ಪ್ರದೇಶದಲ್ಲೂ ಮ್ಯಾನ್ಯುಯಲ್ ನಿಯಮದಂತೆ ಸಾರ್ವಜನಿಕ ಪರಿಶೀಲನಾ ಸಭೆ ನಡೆಸಿ, ಬಿಟ್ಟುಹೋದವರನ್ನು ಪಟ್ಟಿಗೆ ಸೇರಿಸಬೇಕು.
- ಲಾಜಿಕಲ್ ಡಿಸ್ಕ್ರಿಪೆನ್ಸಿ (Logical Discrepancy) ತಂತ್ರಜ್ಞಾನದ ಕುರಿತು ಆಯೋಗ ಸ್ಪಷ್ಟನೆ ನೀಡಬೇಕು ಮತ್ತು ಇದನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಳಸಬಾರದು.



