ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಚಿಸಲಾಗಿರುವ ನೂತನ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿರುವ ಬೆನ್ನಲ್ಲೇ, ತಂಡದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಎಎಸ್‌ಪಿ ಡಾ. ವೆಂಕಟೇಶ್ ಪ್ರಸನ್ನ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಜ್ಯ ಸರ್ಕಾರವು ಐಜಿಪಿ ಶಶಿಕುಮಾರ್ ನೇತೃತ್ವದಲ್ಲಿ ಇತ್ತೀಚೆಗಷ್ಟೇ ನೂತನ ಎಸ್‌ಐಟಿ ರಚಿಸಿತ್ತು. ಈ ತಂಡದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಗುಪ್ತವಾರ್ತೆಯ ಎಸ್‌ಪಿ ನಿಶಾ ಜೇಮ್ಸ್, ಸಿಐಡಿ ಎಸ್‌ಪಿ ಲೋಕೇಶ್ ಜಗಲಸಾರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಎಸ್‌ಪಿ ವೆಂಕಟೇಶ್ ಪ್ರಸನ್ನ ಅವರನ್ನು ನೇಮಿಸಲಾಗಿತ್ತು. ಆದರೆ, ಈ ನೂತನ ತನಿಖಾ ತಂಡದ ಕೆಲ ಸದಸ್ಯರ ಬಗ್ಗೆ ಸೌಜನ್ಯ ಕುಟುಂಬಸ್ಥರು ಹಾಗೂ ಹಲವು ಸಾಮಾಜಿಕ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನೇಮಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.
ತನಿಖಾ ತಂಡದ ಅಧಿಕಾರಿಗಳ ಮೇಲೆ ಮೃತಳ ಕುಟುಂಬಸ್ಥರು ಹಾಗೂ ಹೋರಾಟಗಾರರು ಅವಿಶ್ವಾಸ ವ್ಯಕ್ತಪಡಿಸಿರುವುದರಿಂದ, ನೈತಿಕ ಹೊಣೆಹೊತ್ತು ತಂಡದಲ್ಲಿ ಮುಂದುವರಿಯದಿರಲು ವೆಂಕಟೇಶ್ ಪ್ರಸನ್ನ ನಿರ್ಧರಿಸಿದ್ದಾರೆ. ಮರುತನಿಖೆ ನಡೆಸುವ ತಂಡದ ಬಗ್ಗೆಯೇ ಅಪಸ್ವರ ಎದ್ದಿರುವುದರಿಂದ ಅದರಲ್ಲಿ ತಾನು ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂಬ ಕಾರಣ ನೀಡಿ, ತಮ್ಮನ್ನು ಎಸ್‌ಐಟಿಯಿಂದ ಮುಕ್ತಗೊಳಿಸುವಂತೆ ಕೋರಿ ಅವರು ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದ್ದಾರೆ.




