ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸ್ವಾಗತಿಸಿರುವ ಸೌಜನ್ಯಳ ತಾಯಿ ಕುಸುಮಾವತಿ ಅವರು, ರಾಜ್ಯ ಸರ್ಕಾರವು ಪ್ರಸ್ತುತ ರಚಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತನಿಖಾಧಿಕಾರಿ ಬದಲಾವಣೆಗೆ ಆಗ್ರಹಿಸಿದ್ದಾರೆ.
ಈ ಸಂಬಂಧ ಸೌಜನ್ಯಳ ತಾಯಿ ಕುಸುಮಾವತಿ ಪತ್ರಿಕಾ ಪ್ರಕಟಣೆ ನೀಡಿದ್ದು, ನನ್ನ ಮಗಳು, ಧರ್ಮಸ್ಥಳ ಸೌಜನ್ಯಳಿಗಾದ ದುರಂತದ ಮರುತನಿಖೆಗೆ ಆದೇಶಿಸಿರುವ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ನಾವು ಎಂದಿಗೂ ಅಭಾರಿಯಾಗಿರುತ್ತೇವೆ” ಎಂದು ತಿಳಿಸಿದ್ದಾರೆ. ಆದರೆ “ಮರುತನಿಖೆಗಾಗಿ ರಾಜ್ಯ ಸರ್ಕಾರವು ರಚಿಸಿರುವ ವಿಶೇಷ ತನಿಖಾ ದಳದ ಬಗ್ಗೆ, ನಮಗೆ ಅಸಮಾಧಾನವಿದೆ” ಎಂದು ಹೇಳಿದ್ದಾರೆ.
“ತನಿಖೆಗೆ ಮೇಲುದರ್ಜೆಯ ಹಾಗೂ DNA ಪರಿಣಿತ ಅಧಿಕಾರಿಯ ಅಗತ್ಯವಿದೆ. ಹಾಗೂ ಸರ್ವೋಚ್ಚ ನ್ಯಾಯಾಲಯದ ಆದೇಶದಲ್ಲಿ ತಿಳಿಸಿರುವಂತೆ (63/iii)ನಲ್ಲಿ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದ್ದು ಆ ಆದೇಶ ಪ್ರಕಾರ ವಿಶೇಷ ತನಿಖಾ ತಂಡದ ಮುಖ್ಯಸ್ಥನ ನೇಮಕಾತಿ ಆಗಿರುವುದಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೂಡಲೇ ಸೌಜನ್ಯ ಎಸ್‌ಐಟಿ ಪುನರಚಿಸಿ: ರಾಜ್ಯ ಸರ್ಕಾರಕ್ಕೆ ‘ಕೊಂದವರು ಯಾರು?’ ಆಂದೋಲನ ಬಹಿರಂಗ ಪತ್ರ
ರಾಜ್ಯ ಸರ್ಕಾರ ರಚಿಸಿರುವ ಐದು ಸದಸ್ಯರ ಈ ವಿಶೇಷ ತನಿಖಾ ತಂಡದ ನೇತೃತ್ವವನ್ನು ಐಜಿಪಿ ದರ್ಜೆಯ ಅಧಿಕಾರಿ ವಹಿಸಿಕೊಂಡಿದ್ದಾರೆ. ಎನ್. ಶಶಿಕುಮಾರ್, IPS – ಐಜಿಪಿ (ತಂಡದ ಮುಖ್ಯಸ್ಥರು), ಸಿ.ಹೆಚ್. ಸುಧೀರ್ ಕುಮಾರ್ ರೆಡ್ಡಿ, IPS – ಮಂಗಳೂರು ನಗರ ಪೊಲೀಸ್ ಆಯುಕ್ತರು, ನಿಶಾ ಜೇಮ್ಸ್, IPS – ಪೊಲೀಸ್ ವರಿಷ್ಠಾಧಿಕಾರಿ (SP), ರಾಜ್ಯ ಗುಪ್ತಚರ ಇಲಾಖೆ, ಬೆಂಗಳೂರು, ಲೋಕೇಶ್ ಜಗಲಾಸರ್, IPS – ಪೊಲೀಸ್ ವರಿಷ್ಠಾಧಿಕಾರಿ (SP), ಸಿಐಡಿ (CID), ಬೆಂಗಳೂರು, ವೆಂಕಟೇಶ್ ಪ್ರಸನ್ನ – ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP), ಬೆಂಗಳೂರು ಗ್ರಾಮಾಂತರ ಈ ತಂಡದಲ್ಲಿದ್ದಾರೆ. ಬಹುಕೋಟಿ ರೂಪಾಯಿಗಳ ‘ಆಂಬಿಡೆಂಟ್ ವಂಚನೆ ಪ್ರಕರಣ’ದ ತನಿಖಾಧಿಕಾರಿಯಾಗಿದ್ದ ವೆಂಕಟೇಶ್ ಪ್ರಸನ್ನ ಅವರ ವಿರುದ್ಧ ಉದ್ಯಮಿಗಳಿಂದ ಗಂಭೀರ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಇಂತಹ ವಿವಾದಿತ ಅಧಿಕಾರಿಗಳನ್ನು ತಂಡದಲ್ಲಿಟ್ಟಿರುವುದು ತನಿಖೆಯ ಪಾರದರ್ಶಕತೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಪ್ರಕರಣದಲ್ಲಿ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿರುವ ‘ಕೊಂದವರು ಯಾರು’ ಆಂದೋಲನ, ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ಹಾಗೂ ಸೌಜನ್ಯ ನ್ಯಾಯಪರ ಸಮಿತಿಯಂತಹ ಹಲವಾರು ನಾಗರಿಕ ಸಂಘಟನೆಗಳು ಸರ್ಕಾರದ ಎಸ್‌ಐಟಿ ರಚನೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಹಿಂದೆ ದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದಲ್ಲಿ ಸೇವೆ ಸಲ್ಲಿಸಿದ ಮತ್ತು ಕೆಲವು ವಿವಾದಾತ್ಮಕ ಹಿನ್ನೆಲೆಯುಳ್ಳ ಅಧಿಕಾರಿಗಳನ್ನು ಎಸ್‌ಐಟಿ ತಂಡದಲ್ಲಿ ಸೇರಿಸಿರುವುದನ್ನು ಈ ಸಂಘಟನೆಗಳು ಕಟುವಾಗಿ ಟೀಕಿಸಿವೆ.




