ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಈಗ ರಚನೆಯಾಗಿರುವ ಎಸ್‌ಐಟಿಯು ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಆದೇಶದ ಆಶಯಕ್ಕೆ ಪೂರಕವಾಗಿಲ್ಲ. ಆದ್ದರಿಂದ ಸೌಜನ್ಯ ಪ್ರಕರಣದ ತನಿಖೆಗಾಗಿ ಈಗ ರಚನೆ ಮಾಡಲಾಗಿರುವ ಎಸ್‌ಐಟಿಯನ್ನು ಪುನರಚಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ‘ಕೊಂದವರು ಯಾರು?’ ಆಂದೋಲನ ಬಹಿರಂಗ ಪತ್ರ ಬರೆದಿದೆ.
ಸುಪ್ರೀಂ ಕೋರ್ಟ್ ಸೂಚನೆಯಂತೆ 2012ರ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರವು ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದೆ. ಆದರೆ ಎಸ್‌ಐಟಿ ನೇತೃತ್ವದ ಶ್ರೇಣಿಯಲ್ಲೇ ಲೋಪ ಎಂದು ಕೊಂದವರು ಯಾರು? ಆಂದೋಲನ ತಿಳಿಸಿದ್ದು, ತೀವ್ರ ವಿರೋಧ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ ಹೊಸ ಭರವಸೆ!
“ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯಲ್ಲಿ ಹಳೆಯ ತನಿಖಾ ಸಂಸ್ಥೆಗಳು ತೋರಿದ ಕಳಪೆ ಕಾಳಜಿ ಹಾಗೂ ತನಿಖಾ ವೈಫಲ್ಯವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿ, ಅತ್ಯುನ್ನತ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆಗೆ ಖಡಕ್ ಸೂಚನೆಗಳನ್ನು ನೀಡಿರುವುದು ದೇಶಕ್ಕೇ ತಿಳಿದಿದೆ. ಆದರೆ, ಸೌಜನ್ಯ ಪ್ರಕರಣದ ಮರುತನಿಖೆಗೆ ಈಗ ರಚನೆಯಾಗಿರುವ ಎಸ್‌ಐಟಿಯು ದೇಶದ ಅತ್ಯುನ್ನತ ನ್ಯಾಯಾಲಯದ ಆದೇಶದ ಆಶಯಕ್ಕೆ ಪೂರಕವಾಗಿಲ್ಲ ಎಂಬುದನ್ನು ಬಹಳ ಆತಂಕ ಮತ್ತು ನೋವಿನೊಂದಿಗೆ ಒತ್ತಿ ಹೇಳಲು ಬಯಸುತ್ತೇವೆ” ಎಂದು ಕೊಂದವರು ಯಾರು? ತಂಡ ಪತ್ರದಲ್ಲಿ ಉಲ್ಲೇಖಿಸಿದೆ.
ಹಾಗೆಯೇ, “ಸುಪ್ರೀಂ ಕೋರ್ಟ್ ಉನ್ನತ ಮಟ್ಟದ ಅಧಿಕಾರಿಯ ನೇತೃತ್ವದಲ್ಲೇ ತನಿಖೆ ನಡೆಯಬೇಕು ಎಂದು ಸ್ಪಷ್ಟವಾಗಿ ನಿರ್ದೇಶಿಸಿದ್ದರೂ, ಸರ್ಕಾರ IGP ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ತಂಡ ರಚಿಸಿದೆ. ಈ ಪ್ರಕರಣದ ಗಂಭೀರತೆ, ಹಿಂದಿನ ತನಿಖಾ ಲೋಪಗಳು ಮತ್ತು ಪ್ರಭಾವಿಗಳ ಕೈವಾಡವನ್ನು ಗಮನಿಸಿದರೆ, ಈ ತನಿಖೆಯು DG (ಮಹಾ ನಿರ್ದೇಶಕರು) ಅಥವಾ ADGP (ಅಪರ ಮಹಾ ನಿರ್ದೇಶಕರು) ದರ್ಜೆಯ ಅತ್ಯುನ್ನತ ಅಧಿಕಾರಿಯ ನೇತೃತ್ವದಲ್ಲೇ ನಡೆಯಬೇಕಿತ್ತು” ಎಂದು ಹೋರಾಟಗಾರರು ತಿಳಿಸಿದ್ದಾರೆ.
“ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಅವರು ಮಾಧ್ಯಮಗಳ ಮೂಲಕ ಬಹಿರಂಗಪಡಿಸಿರುವಂತೆ, ಎಸ್‌ಐಟಿಗೆ ಸೇರ್ಪಡೆಗೊಳಿಸಲಾಗಿರುವ ಎಸಿಪಿ ವೆಂಕಟೇಶ್ ಪ್ರಸನ್ನ ಅವರ ಮೇಲೆ ವಕೀಲರ ಕೊಲೆ, ಅಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣ, ಭೂಗತ ಪಾತಕಿಗಳ ಜೊತೆಗಿನ ಸಂಪರ್ಕ, ಅಪರಾಧಿಗಳಿಗೆ ತನಿಖಾ ಮಾಹಿತಿ ಸೋರಿಕೆ ಹಾಗೂ ಗಂಭೀರ ಭ್ರಷ್ಟಾಚಾರದ ಆರೋಪಗಳ ಮೇರೆಗೆ ಇಲಾಖಾ ತನಿಖೆಗಳು ನಡೆದಿದ್ದವು. ಇಂತಹ ಗುರುತರ ಆರೋಪ ಹೊತ್ತಿರುವ ಅಧಿಕಾರಿಯನ್ನು ಎಸ್‌ಐಟಿಗೆ ತಂದು ಕೂರಿಸಿದರೆ, ಅದು ಸುಪ್ರೀಂ ಕೋರ್ಟ್ ಆದೇಶದ ಮೂಲ ಆಶಯಕ್ಕೇ ಎಸಗಿದ ದ್ರೋಹವಾಗುತ್ತದೆ” ಎಂದು ಕೊಂದವರು ಯಾರು ತಂಡ ತಿಳಿಸಿದೆ.
ಆದ್ದರಿಂದ, ನ್ಯಾಯಪರರಾದ ಕರ್ನಾಟಕದ ಸಮಸ್ತ ನಾಗರಿಕರು, ಸೌಜನ್ಯ ಕುಟುಂಬ ಮತ್ತು ಎಲ್ಲ ಹೋರಾಟ ನಿರತರ ಪರವಾಗಿ, ಈಗ ನೇಮಿಸಿರುವ ಮರುತನಿಖೆ ಎಸ್‌ಐಟಿಯಿಂದ ವಿವಾದಾಸ್ಪದ ಅಧಿಕಾರಿಗಳನ್ನು ಕೈಬಿಟ್ಟು ಸಮಿತಿಯನ್ನು ಪುನರಚಿಸಬೇಕೆಂದು ಅತ್ಯಂತ ಕಳಕಳಿಯಿಂದ ‘ಕೊಂದವರು ಯಾರು?’ ಆಂದೋಲನ ಸರ್ಕಾರವನ್ನು ಒತ್ತಾಯಿಸಿದೆ.
ಇದನ್ನೂ ಓದಿ: ಸೌಜನ್ಯ ಪ್ರಕರಣದ ಮರುತನಿಖೆ: ಎಸ್‌ಐಟಿ ಅಧಿಕಾರಿಗಳ ನೇಮಕದ ಸುತ್ತ ಭುಗಿಲೆದ್ದ ಅಸಮಾಧಾನ
ಹೊಸ ಸದಸ್ಯರ ಆಯ್ಕೆಯನ್ನು ಕೆಲವೊಂದು ಮಾನದಂಡಗಳ ಆಧಾರದಲ್ಲಿ ಮಾಡುವಂತೆ ಆಂದೋಲನ ಮನವಿ ಮಾಡಿದೆ. “ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಡಿಜಿ ಅಥವಾ ಎಡಿಜಿಪಿ ಶ್ರೇಣಿಯ ಅಧಿಕಾರಿಗಳನ್ನೇ ಎಸ್‌ಐಟಿಯ ಮುಖ್ಯಸ್ಥರಾಗಿ ನೇಮಿಸಬೇಕು. ಸೌಜನ್ಯ ಪ್ರಕರಣದ ಮರುತನಿಖೆಗೆ ಆದೇಶಿಸಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದಲ್ಲಿ ಸ್ಪಷ್ಟವಾಗಿ ಹೇಳಿದಂತೆ, ತಂಡದಲ್ಲಿ ತಾಂತ್ರಿಕ ಪರಿಣತಿ (Forensic expert) ಆಗಿರುವ ಅಧಿಕಾರಿಗಳಿರಬೇಕು. ಭ್ರಷ್ಟಾಚಾರ, ಕರ್ತವ್ಯಲೋಪ, ಮಹಿಳೆಯರ ವಿಚಾರದಲ್ಲಿ ಅಸೂಕ್ಷ್ಮತೆ ಮತ್ತು ಕೋಮುವಾದಿ ಶಕ್ತಿಗಳೊಂದಿಗೆ ನೇರಸಂಪರ್ಕದ ಆರೋಪ ಹೊಂದಿರುವ ಅಧಿಕಾರಿಗಳು ಸಮಿತಿಯಲ್ಲಿರಬಾರದು” ಎಂದು ಕೊಂದವರು ಯಾರು? ಆಂದೋಲನ ಆಗ್ರಹಿಸಿದೆ.
“ಸುಪ್ರೀಂ ಕೋರ್ಟ್ ಈ ತೀರ್ಪು ಮಹಿಳೆಯರ ಮೇಲಿನ ಹಿಂಸಾಚಾರವನ್ನು ತಡೆಯುವ ದಿಕ್ಕಿನಲ್ಲಿ ಒಂದು ಚಾರಿತ್ರಿಕ ಹೆಜ್ಜೆಯಾಗಲಿದ್ದು, ದಶಕಗಳ ನಂತರ ಸೌಜನ್ಯ ಪ್ರಕರಣದ ಅಸಲಿ ಅಪರಾಧಿಗಳನ್ನು ಮತ್ತು ಸಾಕ್ಷ್ಯ ನಾಶಪಡಿಸಿದ ಪ್ರಭಾವಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಲು ರಾಜ್ಯ ಸರ್ಕಾರಕ್ಕೆ ದೊರೆತಿರುವ ಅಮೂಲ್ಯವಾದ ಅವಕಾಶ ಇದಾಗಿದೆ. ಇಂತಹ ಸಂದರ್ಭದಲ್ಲಿ ಅತ್ಯಂತ ನ್ಯಾಯ-ನಿಷ್ಠುರತೆಯಿಂದ ಕರ್ತವ್ಯ ನಿರ್ವಹಿಸುವ ಎಸ್‌ಐಟಿ ಈ ತನಿಖೆಯನ್ನು ಮುನ್ನಡೆಸುವುದು ಅತ್ಯಗತ್ಯ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
“ಆದ್ದರಿಂದ ದಯಮಾಡಿ ಮುಖ್ಯಮಂತ್ರಿಗಳು ಮತ್ತು ಗೃಹಮಂತ್ರಿಗಳು ಮಧ್ಯಪ್ರವೇಶಿಸಿ, ಸ್ಥಳೀಯ ಪ್ರಭಾವಕ್ಕೆ ಅಥವಾ ಹಿಂದಿನ ಯಾವುದೇ ತನಿಖಾ ಲೋಪಗಳಿಗೆ ಒಳಗಾಗದ, ಕಳಂಕವಿಲ್ಲದ, ಅತ್ಯಂತ ದಕ್ಷ ಮತ್ತು ವಿಶ್ವಾಸಾರ್ಹ ಅಧಿಕಾರಿಗಳನ್ನು ನೇಮಿಸಿ, ಪಾರದರ್ಶಕ ಮರುತನಿಖೆಗೆ ಅವಕಾಶ ಮಾಡಿಕೊಡಬೇಕು” ಎಂದು ಆಂದೋಲನವು ಆಗ್ರಹಿಸಿದೆ.
ಸುಪ್ರೀಂ ಕೋರ್ಟ್ ಆದೇಶಕ್ಕೆ ಪೂರಕವಾಗಿ, ಡಿಜಿ ಅಥವಾ ಎಡಿಜಿಪಿ ಶ್ರೇಣಿಯ ಅಧಿಕಾರಿಗಳ ನೇತೃತ್ವದಲ್ಲಿ, ವಿಧಿವಿಜ್ಞಾನವನ್ನೂ ಸೇರಿದಂತೆ ತಾಂತ್ರಿಕ ಪರಿಣತಿಯುಳ್ಳವರೂ, ದಕ್ಷರೂ, ಯಾವುದೇ ಭ್ರಷ್ಟಾಚಾರದ ಅಥವಾ ಕೋಮುವಾದಿಗಳೊಂದಿಗೆ ಸಂಪರ್ಕದ ಆರೋಪ ಹೊಂದಿಲ್ಲದ ಅಧಿಕಾರಿಗಳನ್ನು ನೇಮಿಸಿ, ಎಸ್‌ಐಟಿಯನ್ನು ಪುನರಚಿಸುವಂತೆ ಆಗ್ರಹಿಸಿ, ಇಂದು ಸಂಜೆ 4.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ʼಕೊಂದವರು ಯಾರು?ʼ ಆಂದೋಲನದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.




