ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಘೋಷಣೆಯಾಗಿರುವ ಉಪಚುನಾವಣೆಯಲ್ಲಿ ಒಳಮೀಸಲಾತಿ ಹೋರಾಟಕ್ಕೆ ದ್ರೋಹ ಮಾಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ತೀರ್ಮಾನವನ್ನು ಸಮಗ್ರ ಒಳಮೀಸಲಾತಿ ಹೋರಾಟಗಾರರು ತೆಗೆದುಕೊಂಡಿದ್ದಾರೆ. ಕಳೆದ 35 ವರ್ಷಗಳಿಂದ ಸಾಮಾಜಿಕ ನ್ಯಾಯದ ಈ ಬೇಡಿಕೆಯನ್ನು ಬೆಂಬಲಿಸಿದ್ದ ಕರ್ನಾಟಕದ ಎಲ್ಲಾ ಪ್ರಜ್ಞಾವಂತರು ನಮ್ಮ ಈ ನಿಲುವನ್ನು ಬೆಂಬಲಿಸಬೇಕೆಂದು ವಿನಂತಿ ಮಾಡುತ್ತೇವೆ ಎಂದು ಸಮಗ್ರ ಒಳಮೀಸಲಾತಿ ಹೋರಾಟಗಾರರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಳಮೀಸಲಾತಿ ಹೋರಾಟಗಾರರು, “ಕಳೆದ 35 ವರ್ಷಗಳಿಂದ ಒಳಮೀಸಲಾತಿಗಾಗಿ ಆಗ್ರಹಿಸಿ ನಡೆಯುತ್ತಿದ್ದ ಹೋರಾಟಕ್ಕೆ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಯಾಗುವ ಭರವಸೆಯನ್ನು ಒಳಮೀಸಲಾತಿ ಹೋರಾಟಗಾರರು ಹೊಂದಿದ್ದರು. ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಎರಡು ವರ್ಷಗಳಿಂದ ನಿರಂತರವಾಗಿ ಉದಾಸೀನ ತೋರುತ್ತಿದೆ. ಪಕ್ಕದ ರಾಜ್ಯಗಳಾದ ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳು ಒಳ ಮೀಸಲಾತಿಯನ್ನು ಜಾರಿ ಮಾಡುವ ಧೃಡ ತೀರ್ಮಾನವನ್ನು ಕೈಗೊಂಡಿದ್ದರು. ಕರ್ನಾಟಕ ಸರ್ಕಾರ ಮಾತ್ರ ಸಾಮಾಜಿಕ ನ್ಯಾಯದ ನಿರಾಕರಣೆ ಮಾಡುತ್ತಿದೆ. ಈಗ ಮಾರ್ಚ್ 27ನೇ ತಾರೀಕು ಒಳಮೀಸಲಾತಿ ಕುರಿತು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿತ್ತು. ಆದರೆ ಒಂದು ದಿನ ಮುಂಚಿತವಾಗಿ ಸರ್ಕಾರ ಉಪಚುನಾವಣೆ ಎಂಬ ಕುಂಟುನೆಪವನ್ನು ಮುಂದಿಟ್ಟುಕೊಂಡು ವಿಶೇಷ ಸಚಿವ ಸಂಪುಟ ಸಭೆಯನ್ನು ಒಳಮೀಸಲಾತಿ ಹೋರಾಟಗಾರರ ಅಭಿಪ್ರಾಯಗಳನ್ನು ಪಡೆಯದೇ ಅನಿರ್ಧಿಷ್ಟಾವಧಿಗೆ ಮುಂದೂಡಿ ಒಳಮೀಸಲಾತಿಗೆ ಬಹುದೊಡ್ಡ ದ್ರೋಹ ಎಸಗಿದ್ದಾರೆ. ಇದನ್ನು ಸಮಗ್ರ ಒಳಮೀಸಲಾತಿ ಹೋರಾಟಗಾರರು ಖಂಡಿಸುತ್ತೇವೆ.
ಒಳಮೀಸಲಾತಿ ಇಲ್ಲದೆ ತುಂಬಲು ಹೊರಟಿದ್ದ 56,432 ಹುದ್ದೆಗಳನ್ನು ಮುಂದಿನ ಸಚಿವ ಸಂಪುಟ ಸಭೆ ನಡೆಯುವವರೆಗೂ ಸರ್ಕಾರ ನೇಮಕಾತಿ ಮಾಡಬಾರದೆಂದು ಸರ್ಕಾರವನ್ನು ಆಗ್ರಹಿಸುತ್ತೇವೆ.
ಸಾಮಾಜಿಕ ನ್ಯಾಯವನ್ನು ನಿರಾಕರಣೆ ಮಾಡಿದ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ಹರಿಕಾರರಾದ ಬಾಬು ಜಗಜೀವನ್ ರಾಮ್ ಹಾಗೂ ವಿಶ್ವರತ್ನ ಡಾ. ಬಿ. ಆರ್ ಅಂಬೇಡ್ಕರ್ ರವರ ಜಯಂತಿಯನ್ನು ಆಚರಿಸಲು ಯಾವುದೇ ನೈತಿಕತೆ ಇರುವುದಿಲ್ಲ. ಸಮುದಾಯಗಳು ಮಹನೀಯರ ಜಯಂತಿಯನ್ನು ಆಚರಿಸುತ್ತೇವೆ. ವಿಧಾನಸೌಧ ಮುಂಬಾಗದ ಆಚರಣೆ ಸೇರಿದಂತೆ, ಜಿಲ್ಲಾ ಮಟ್ಟದಲ್ಲಿ ಈ ಮಹನೀಯರ ಜಯಂತಿಯನ್ನು ಆಚರಿಸಲು ಸರ್ಕಾರ ಮುಂದಾದರೆ ಒಳಮೀಸಲಾತಿ ಹೋರಾಟಗಾರರು ಮುತ್ತಿಗೆ ಹಾಕುತ್ತೇವೆ” ಎಂದು ಎಚ್ಚರಿಸಿದ್ದಾರೆ.
ಮಾರಸಂದ್ರ ಮುನಿಯಪ್ಪ, ಅಂಬಣ್ಣ ಅರೋಲಿಕರ್, ಬಸವರಾಜ್ ಕೌತಾಳ್, ನರಸಪ್ಪ ದಂಡೋರ, ಬಿ. ಆರ್. ಭಾಸ್ಕರ್ ಪ್ರಸಾದ್, ಕರಿಯಪ್ಪ ಗುಡಿಮನಿ, ಎಂ ಗುರುಮೂರ್ತಿ, ಬಿ.ಪಿ ಪ್ರಕಾಶ್ ಮೂರ್ತಿ, ಆರ್ ಮುನಿಯಪ್ಪ, ಪಿ. ಮೂರ್ತಿ ವೈ. ಸಿ ಕಾಂಬ್ಳೆ, ಚಾವಡಿ ಲೋಕೇಶ್ ಉಪಸ್ಥಿತರಿದ್ದರು.




