2011ನೇ ಸಾಲಿನ ‘ಕರ್ನಾಟಕ ಆಡಳಿತ ಸೇವೆ’ (ಕೆಎಎಸ್) ನೇಮಕಾತಿ ಪ್ರಕ್ರಿಯೆಯನ್ನು ಊರ್ಜಿತಗೊಳಿಸಲು ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ 362 ಕೆಎಎಸ್ ಅಧಿಕಾರಿಗಳ ಹುದ್ದೆಗೆ ಕುತ್ತು ಎದುರಾಗಿದೆ.
ಕರ್ನಾಟಕ ಸರ್ಕಾರ ತಂದಿದ್ದ ಕಾಯ್ದೆಯನ್ನು ಎತ್ತಿಹಿಡಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಶ್ರೀನಿವಾಸ ಟಿ. ಮತ್ತು ಇತರ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದೆ.
ಅಂದಹಾಗೆ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, 2011ರ ನವೆಂಬರ್‌ನಲ್ಲಿ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ಪರೀಕ್ಷೆಗಳು ಮುಗಿದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಗೊಂಡ ಬಳಿಕ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿಬಂದಿತ್ತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ತದನಂತರ, 2014ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಈ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವಹಿಸಿತ್ತು.
ಸಿಐಡಿ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ಅಕ್ರಮ ನಡೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಸರ್ಕಾರವು ಇಡೀ ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಬಾಗಿಲು ತಟ್ಟಿದ್ದರು. ಕೆಎಟಿ ಅಭ್ಯರ್ಥಿಗಳ ಪರವಾಗಿ ತೀರ್ಪು ನೀಡಿ, ನೇಮಕಾತಿ ಪತ್ರ ನೀಡುವಂತೆ ಸೂಚಿಸಿತ್ತು. ಆದರೆ, ಆ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತು. ಹೈಕೋರ್ಟ್‌ನ ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿತ್ತು.
ಈ ಲೇಖನ ಓದಿದ್ದೀರಾ?: ಗಡಿಯಲ್ಲಿ ಚೀನಾ ಅತಿಕ್ರಮಣ; ಮೌನಕ್ಕೆ ಸರಿದ 56 ಇಂಚಿನ ಎದೆಯ ಮೋದಿ!
ಇದೆಲ್ಲವೂ ಮುಗಿಯುವಷ್ಟದಲ್ಲಿ ಬರೋಬ್ಬರಿ 11 ವರ್ಷಗಳು ಕಳೆದುಹೋಗಿದ್ದವು. ಮಾತ್ರವಲ್ಲದೆ, ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಮರಳಿತ್ತು. ಈ ಸರ್ಕಾರವು ಸಂಕಷ್ಟದಲ್ಲಿದ್ದ 362 ಅಭ್ಯರ್ಥಿಗಳ ಆಯ್ಕೆಯನ್ನು ಉಳಿಸಲು 2022ರಲ್ಲಿ ‘ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಕಾಯ್ದೆ’ಯನ್ನು ರೂಪಿಸಿ ಆಯ್ಕೆ ಪಟ್ಟಿಗೆ ಶಾಸನಬದ್ಧ ಮಾನ್ಯತೆ ನೀಡಿತ್ತು.
ಆದರೆ, ಈ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ವಂಚಿತ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈಗ ನ್ಯಾಯಾಲಯವು ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನೇ ಸಂಪೂರ್ಣವಾಗಿ ರದ್ದುಗೊಳಿಸಿದೆ. ಪರಿಣಾಮ, 15 ವರ್ಷಗಳಿಂದ ಸೇವೆಯಲ್ಲಿದ್ದ 362 ಕೆಎಎಸ್ ಅಧಿಕಾರಿಗಳ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ.



