ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯಿಂದ ಉಂಟಾಗುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಕಲ್ಯಾಣ ಜನಪರ ವೇದಿಕೆಯ ಸೇಡಂ ತಾಲೂಕು ಘಟಕದ ತಹಸೀಲ್ದಾರ್ ಶ್ರಿಯಾಂಕ್ ಎ. ಧನಶ್ರೀ ಅವರಿಗೆ ಮನವಿ ಸಲ್ಲಿಸಿದೆ.
ಕಾರ್ಖಾನೆಯಿಂದ ವಿಪರೀತ ಧೂಳು ಹೊರಸೂಸುತ್ತಿರುವುದು, ಕಾರ್ಖಾನೆಯ ಮುಂಭಾಗದ ಮುಖ್ಯ ರಸ್ತೆಯಲ್ಲಿ ಲಾರಿಗಳನ್ನು ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಹಾಗೂ ಕಮಲಾವತಿ ನದಿಗೆ ಕಲುಷಿತ ನೀರು ಬಿಡಲಾಗುತ್ತಿದೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಮಸ್ಯೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಒತ್ತಾಯಿಸಿದೆ.
ಅಲ್ಲದೆ, ಸೇಡಂ ನಗರದಲ್ಲಿರುವ ಕಾರ್ಖಾನೆಗೆ ಸಂಬಂಧಿಸಿದ ರೈಲ್ವೆ ಹಳಿಯನ್ನು ಸ್ಥಳಾಂತರಿಸಬೇಕು ಹಾಗೂ ಸ್ಥಳೀಯ ಯುವಕರಿಗೆ ಕಾರ್ಖಾನೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಬೇಕು ಎಂಬ ಬೇಡಿಕೆಗಳನ್ನೂ ಮುಂದಿಡಲಾಗಿದೆ.
ಇದನ್ನೂ ಓದಿ: ಕಲಬುರಗಿ | ಮನೆಯ ಛಾವಣಿಯಲ್ಲಿ ಬೆಂಕಿ ಅವಘಡ
ಮನವಿಯಲ್ಲಿ ಪ್ರಸ್ತಾಪಿಸಿರುವ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯ ಮುಂಭಾಗದಲ್ಲಿ ಹಾಗೂ ತಹಸೀಲ್ದಾರ್ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಕಲ್ಯಾಣ ಜನಪರ ವೇದಿಕೆಯ ತಾಲೂಕು ಘಟಕ ಎಚ್ಚರಿಕೆ ನೀಡಿದೆ.




