ದಶಕಗಳ ಕಾಲ ಪುರುಷ ಪ್ರಾಬಲ್ಯದಲ್ಲಿದ್ದ ಉನ್ನತ ಹುದ್ದೆಗಳ ಬಾಗಿಲುಗಳು ಇಂದು ಮಹಿಳೆಯರಿಗೂ ತೆರೆದುಕೊಳ್ಳುತ್ತಿವೆ. 2026ರಲ್ಲಿ ವರ್ಷಾ ಅಗ್ಲಾವೆ, ಸ್ಕ್ವಾಡ್ರನ್ ಲೀಡರ್ ಭಾವನಾ ಕಾಂತ್, ಕ್ಯಾಪ್ಟನ್ ಶಿವಾನಿ ಸೆಹ್ರಾವತ್ ಮತ್ತು ನ್ಯಾಯಮೂರ್ತಿ ಅಭಾ ನಾಯರ್ ಪಟೇಲ್ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ವಿಜ್ಞಾನ, ಸೇನೆ, ಯುದ್ಧವಿಮಾನ ಹಾಗೂ ನ್ಯಾಯಾಂಗದಂತಹ ಕ್ಷೇತ್ರಗಳಲ್ಲಿ ಪುರುಷ ಪ್ರಾಬಲ್ಯದ ಸರಹದ್ದುಗಳನ್ನ ಒದ್ದು ಮೇಲೇರಿದ ಅವರ ಸಾಧನೆಗಳು ಮಹಿಳಾ ನಾಯಕತ್ವದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿವೆ.
ವರ್ಷಾ ಅಶೋಕ್ ಅಗ್ಲವೆ: 176 ವರ್ಷಗಳ ಇತಿಹಾಸದ ‘ಮೊದಲ ಮಹಿಳೆ’
1851ರಲ್ಲಿ ಸ್ಥಾಪನೆಯಾದ ಭಾರತದ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ದೇಶದ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ವೈಜ್ಞಾನಿಕ ಸಂಸ್ಥೆಗಳಲ್ಲಿ ಒಂದು. ಭಾರತದ ಭೂವೈಜ್ಞಾನಿಕ ನಕ್ಷೆ ತಯಾರಿಸುವುದು, ಖನಿಜ ಸಂಪನ್ಮೂಲಗಳ ಅನ್ವೇಷಣೆ, ಭೂಕಂಪ ಮತ್ತು ಭೂಸಂಪನ್ಮೂಲಗಳ ಅಧ್ಯಯನ ಸೇರಿದಂತೆ ಹಲವು ಪ್ರಮುಖ ಜವಾಬ್ದಾರಿಗಳನ್ನು ಈ ಸಂಸ್ಥೆ ನಿರ್ವಹಿಸುತ್ತದೆ. ಇಂತಹ 176 ವರ್ಷಗಳ ಇತಿಹಾಸ ಹೊಂದಿರುವ ಸಂಸ್ಥೆಯ ಅತ್ಯುನ್ನತ ಹುದ್ದೆಗೆ ಇಲ್ಲಿವರೆಗೆ ಮಹಿಳೆಯೊಬ್ಬರು ನೇಮಕವಾಗಿರಲಿಲ್ಲ.
ಈ ಸಂಪ್ರದಾಯಕ್ಕೆ ತೆರೆ ಎಳೆದವರು ವರ್ಷಾ ಅಶೋಕ್ ಅಗ್ಲವೆ. 2026ರ ಆಗಸ್ಟ್ 3ರಂದು ಅವರು GSIಯ 54ನೇ ಮಹಾನಿರ್ದೇಶಕರಾಗಿ (Director General) ಅಧಿಕಾರ ಸ್ವೀಕರಿಸುವ ಮೂಲಕ ಸಂಸ್ಥೆಯ ಮೊದಲ ಮಹಿಳಾ ಮುಖ್ಯಸ್ಥೆಯಾಗಿ ಇತಿಹಾಸ ನಿರ್ಮಿಸಿದರು.
ಅಗ್ಲಾವೆ ಅಧಿಕಾರಿ ಮಾತ್ರವಲ್ಲ, ಅವರು ಅನುಭವಿ ಭೂವಿಜ್ಞಾನಿ. ವಿಶೇಷವಾಗಿ ಪ್ಯಾಲಿಯೊಂಟಾಲಜಿ (Palaeontology) ಕ್ಷೇತ್ರದಲ್ಲಿ, ಅದರಲ್ಲೂ ಡೈನೋಸಾರ್‌ಗಳ ಜೀವನಶೈಲಿ, ವರ್ತನೆ ಹಾಗೂ ಗೂಡು ನಿರ್ಮಾಣದ ಕುರಿತ ಸಂಶೋಧನೆಗಳಲ್ಲಿ ಅವರು ಪರಿಣಿತಿ ಹೊಂದಿದ್ದಾರೆ. GSIಯ ವಿವಿಧ ವೈಜ್ಞಾನಿಕ ಮತ್ತು ಆಡಳಿತಾತ್ಮಕ ಹುದ್ದೆಗಳಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ ಬಳಿಕ ಸಂಸ್ಥೆಯ ಅತ್ಯುನ್ನತ ಸ್ಥಾನಕ್ಕೇರಿದ್ದಾರೆ.
ಭಾರತದ ಅತ್ಯಂತ ಹಳೆಯ ವೈಜ್ಞಾನಿಕ ಸಂಸ್ಥೆಯ ಚುಕ್ಕಾಣಿ ಮೊದಲ ಬಾರಿಗೆ ಮಹಿಳೆಯ ಕೈ ಸೇರಿದ ಮಹತ್ವದ ಮೈಲಿಗಲ್ಲು ಇದಾಗಿದೆ. ದಶಕಗಳಿಂದ ಪುರುಷರ ಪ್ರಾಬಲ್ಯದಲ್ಲಿದ್ದ ಭಾರತದ ಪ್ರಮುಖ ವೈಜ್ಞಾನಿಕ ಸಂಸ್ಥೆಯ ನಾಯಕತ್ವ ವಹಿಸಿಕೊಂಡಿದ್ದಾರೆ. ಸಾಮರ್ಥ್ಯ ಮತ್ತು ಪರಿಣತಿ ಲಿಂಗವನ್ನು ಮೀರಿ ಗುರುತಿಸಲ್ಪಡುತ್ತಿದೆ ಎಂಬುದಕ್ಕೆ ಇದು ಮಹತ್ವದ ಉದಾಹರಣೆ.
ಸ್ಕ್ವಾಡ್ರನ್ ಲೀಡರ್ ಭಾವನಾ ಕಾಂತ್: ಭಾರತದ ಮೊದಲ ಮಹಿಳಾ ‘ಟಾಪ್ ಗನ್’
ಭಾರತೀಯ ವಾಯುಪಡೆಯ ಇತಿಹಾಸದಲ್ಲಿ ಮಹಿಳೆಯರ ಹೆಸರನ್ನು ಚಿನ್ನದ ಅಕ್ಷರಗಳಲ್ಲಿ ಬರೆದವರಲ್ಲಿ ಸ್ಕ್ವಾಡ್ರನ್ ಲೀಡರ್ ಭಾವನಾ ಕಾಂತ್ ಪ್ರಮುಖರು. 1992ರ ಡಿಸೆಂಬರ್ 1ರಂದು ಜನಿಸಿದ ಭಾವನಾ, ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಮೆಡಿಕಲ್ ಎಲೆಕ್ಟ್ರಾನಿಕ್ಸ್ ಪದವಿ ಪಡೆದರು. ನಂತರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿದರು. 2016ರಲ್ಲಿ ಭಾರತೀಯ ವಾಯುಪಡೆಯು ಮೊದಲ ಬಾರಿಗೆ ಮಹಿಳೆಯರನ್ನು ಫೈಟರ್ ಸ್ಟ್ರೀಮ್‌ಗೆ ಸೇರಿಸಿಕೊಂಡಾಗ, ಅವಾನಿ ಚತುರ್ವೇದಿ, ಮೋಹನಾ ಸಿಂಗ್ ಹಾಗೂ ಭಾವನಾ ಕಾಂತ್ ಮೊದಲ ಬ್ಯಾಚ್‌ನ ಭಾಗವಾಗಿದ್ದರು. ಇದು ಭಾರತೀಯ ಸೇನಾ ಇತಿಹಾಸದ ಮಹತ್ವದ ತಿರುವಾಗಿತ್ತು.
ನಂತರ ಭಾವನಾ ಮಿಗ್-21 ಬೈಸನ್ ಯುದ್ಧವಿಮಾನವನ್ನು ಯಶಸ್ವಿಯಾಗಿ ಹಾರಿಸಿದರು. 2019ರಲ್ಲಿ ಅವರು ಹಗಲಿನ ಯುದ್ಧ ಕಾರ್ಯಾಚರಣೆಗಳಿಗೆ (Day Combat Mission) ಅರ್ಹತೆ ಪಡೆದ ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆಗಾಗಿ 2020ರಲ್ಲಿ ಅವರಿಗೆ ನಾರಿ ಶಕ್ತಿ ಪುರಸ್ಕಾರವೂ ಲಭಿಸಿತು.
ಅವರ ಸಾಧನೆ ಅಲ್ಲಿಗೇ ನಿಲ್ಲಲಿಲ್ಲ. 2026ರಲ್ಲಿ ಭಾರತೀಯ ವಾಯುಪಡೆಯ ಅತ್ಯಂತ ಕಠಿಣ ತರಬೇತಿಗಳಲ್ಲಿ ಒಂದಾದ ಫೈಟರ್ ಕಾಂಬ್ಯಾಟ್ ಲೀಡರ್ (FCL) ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ಮಹಿಳಾ ಪೈಲಟ್ ಎನಿಸಿಕೊಂಡರು. ಈ ತರಬೇತಿ ಯುದ್ಧ ಕಾರ್ಯಾಚರಣೆಗಳಿಗೆ ನಾಯಕತ್ವ ವಹಿಸುವ ಹಾಗೂ ವೈಮಾನಿಕ ತಂತ್ರಗಳನ್ನು ರೂಪಿಸುವ ಪೈಲಟ್‌ಗಳಿಗೆ ಮಾತ್ರ ನೀಡಲಾಗುತ್ತದೆ. ಅದರಿಂದಲೇ ಭಾವನಾ ಕಾಂತ್ ಅವರನ್ನು ಭಾರತದ ಮೊದಲ ಮಹಿಳಾ ‘ಟಾಪ್ ಗನ್’ ಎಂದೂ ಕರೆಯಲಾಗುತ್ತದೆ.
ಕ್ಯಾಪ್ಟನ್ ಶಿವಾನಿ ಸೆಹ್ರಾವತ್: ಸೇನಾ ಮುಖ್ಯಸ್ಥರ ಮೊದಲ ಮಹಿಳಾ ಎಡಿಸಿ
ಇದನ್ನೂ ಓದಿ: ಡಿಜಿಟಲ್ ಹಿಂಸೆ : ಮಹಿಳೆಯರ ಧ್ವನಿಯನ್ನು ದಮನಗೊಳಿಸುವ ರಾಜಕಾರಣ
ಭಾರತೀಯ ಸೇನೆಯಲ್ಲಿ ಮಹಿಳೆಯರ ಪಾತ್ರ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ. ಈ ಬದಲಾವಣೆಯ ಮತ್ತೊಂದು ಮಹತ್ವದ ಮೈಲಿಗಲ್ಲು ಕ್ಯಾಪ್ಟನ್ ಶಿವಾನಿ ಸೆಹ್ರಾವತ್. ಅವರು ಭಾರತೀಯ ಸೇನಾ ಮುಖ್ಯಸ್ಥರ (Chief of the Army Staff) ಎಯ್ಡ್-ಡಿ-ಕ್ಯಾಂಪ್ (ADC) ಆಗಿ ನೇಮಕಗೊಂಡ ಮೊದಲ ಮಹಿಳಾ ಅಧಿಕಾರಿ.
ADC ಹುದ್ದೆಯನ್ನು ಹಲವರು ಕೇವಲ ಔಪಚಾರಿಕ ಹುದ್ದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಈ ಅಧಿಕಾರಿಯು ಸೇನಾ ಮುಖ್ಯಸ್ಥರ ಅಧಿಕೃತ ಕಾರ್ಯಕ್ರಮಗಳು, ಆಡಳಿತಾತ್ಮಕ ಕಾರ್ಯಗಳು, ಸಭೆಗಳು, ಭದ್ರತಾ ಸಮನ್ವಯ ಹಾಗೂ ಹಲವು ಪ್ರಮುಖ ಜವಾಬ್ದಾರಿಗಳಲ್ಲಿ ನೇರವಾಗಿ ನೆರವಾಗುತ್ತಾರೆ. ಈ ಹುದ್ದೆಗೆ ಅತ್ಯುತ್ತಮ ಸೇವಾ ದಾಖಲೆ ಹೊಂದಿರುವ ಅಧಿಕಾರಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಇದುವರೆಗೆ ಈ ಜವಾಬ್ದಾರಿ ಪುರುಷ ಅಧಿಕಾರಿಗಳ ಪಾಲಾಗುತ್ತಿತ್ತು. ಈಗ ಮೊದಲ ಬಾರಿಗೆ ಮಹಿಳೆಯೊಬ್ಬರು ಈ ಸ್ಥಾನ ಅಲಂಕರಿಸಿರುವುದು ಭಾರತೀಯ ಸೇನೆಯಲ್ಲಿ ಮಹಿಳೆಯರ ಮೇಲಿನ ವಿಶ್ವಾಸ ಹೆಚ್ಚುತ್ತಿರುವುದನ್ನು ಪ್ರತಿಬಿಂಬಿಸುತ್ತದೆ. ಕ್ಯಾಪ್ಟನ್ ಶಿವಾನಿಯ ಅವರ ನೇಮಕವೇ ಭಾರತೀಯ ಸೇನೆಯ ಇತಿಹಾಸದಲ್ಲಿ ಮಹತ್ವದ ತಿರುವಾಗಿ ದಾಖಲಾಗಿದೆ.
ನ್ಯಾಯಮೂರ್ತಿ ಅಭಾ ನಾಯರ್ ಪಟೇಲ್: ಭಾರತದಿಂದ ಜಾಂಬಿಯಾ ಸುಪ್ರೀಂ ಕೋರ್ಟ್‌ವರೆಗೆ
ನ್ಯಾಯಮೂರ್ತಿ ಅಭಾ ನಾಯರ್ ಪಟೇಲ್ ಅವರ ಸಾಧನೆ ಭಾರತ ಮತ್ತು ಜಾಂಬಿಯಾ ನಡುವಿನ ವಿಶಿಷ್ಟ ನ್ಯಾಯಾಂಗ ಪಯಣದ ಪ್ರತೀಕ. 1966ರ ಏಪ್ರಿಲ್ 24ರಂದು ಜನಿಸಿದ ಅವರು ಬಾಲ್ಯದ ಒಂದು ಭಾಗವನ್ನು ದೆಹಲಿಯಲ್ಲಿ ಕಳೆದರು. 1973ರಲ್ಲಿ ಅವರ ಕುಟುಂಬ ಜಾಂಬಿಯಾಕ್ಕೆ ವಲಸೆ ಹೋಯಿತು.
ಅವರು ಜಾಂಬಿಯಾ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಹಾಗೂ ನಂತರ ಬ್ರಿಟನ್‌ನ ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಎಂ ಪದವಿ ಪಡೆದರು.
1989ರಲ್ಲಿ ಜಾಂಬಿಯಾದಲ್ಲಿ ವಕೀಲರಾಗಿ ನೋಂದಾಯಿಸಿಕೊಂಡ ಅವರು, ಬಳಿಕ ಇಂಗ್ಲೆಂಡ್ ಮತ್ತು ವೇಲ್ಸ್‌ನ ಸುಪ್ರೀಂ ಕೋರ್ಟ್‌ನ ಸಾಲಿಸಿಟರ್ ಆಗಿಯೂ ಅರ್ಹತೆ ಪಡೆದರು. ಹಲವು ವರ್ಷಗಳ ವಕಾಲತ್ತಿನ ಅನುಭವದ ಬಳಿಕ 2023ರಲ್ಲಿ ಜಾಂಬಿಯಾ ಕೋರ್ಟ್ ಆಫ್ ಅಪೀಲ್‌ಗೆ ಬಡ್ತಿ ಪಡೆದರು 2026ರ ಮೇ 27ರಂದು ದೂರದ ದಕ್ಷಿಣ ಆಫ್ರಿಕಾದ ಜಾಂಬಿಯಾ ದೇಶದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು.
ಅವರು ಮಧ್ಯಸ್ಥಿಕೆ ತಜ್ಞೆಯೂ ಆಗಿದ್ದು, ಚಾರ್ಟರ್ಡ್ ಇನ್‌ಸ್ಟಿಟ್ಯೂಟ್ ಆಫ್ ಅರ್ಬಿಟ್ರೇಟರ್ಸ್‌ನ ಫೆಲೋ ಹಾಗೂ ಜಾಂಬಿಯಾ ಮಹಿಳಾ ನ್ಯಾಯಮೂರ್ತಿಗಳ ಸಂಘದ ಸದಸ್ಯೆಯೂ ಆಗಿದ್ದಾರೆ. 2026ರಲ್ಲಿ ಭಾರತದ ಸುಪ್ರೀಂ ಕೋರ್ಟ್‌ನ ನ್ಯಾಯಪೀಠದಲ್ಲಿ ವಿಶೇಷ ಆಹ್ವಾನಿತ ನ್ಯಾಯಮೂರ್ತಿಯಾಗಿ ಭಾಗವಹಿಸುವ ಅವಕಾಶ ಪಡೆದ ಮೊದಲ ಜಾಂಬಿಯಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಯೂ ಅವರಿಗೆ ಲಭಿಸಿದೆ.
ಇದನ್ನೂ ಓದಿ: ಡಂಗಾವಾಸ್ ದಲಿತ ಹತ್ಯಾಕಾಂಡ | ಟ್ರ್ಯಾಕ್ಟರ್ ಹರಿಸಿ ದಲಿತರ ಹತ್ಯೆಯಿಂದ ಆರೋಪಿಗಳ ಖುಲಾಸೆವರೆಗೆ…
ವರ್ಷಾ ಅಗ್ಲವೆ, ಭಾವನಾ ಕಾಂತ್, ಶಿವಾನಿ ಸೆಹ್ರಾವತ್, ಅಭಾ ನಾಯರ್ ಪಟೇಲ್.. ನಾಲ್ಕು ಹೆಸರುಗಳು, ನಾಲ್ಕು ವಿಭಿನ್ನ ಕ್ಷೇತ್ರಗಳು, ನಾಲ್ಕು ಮಹತ್ವದ ಮೈಲಿಗಲ್ಲುಗಳು. ವಿಜ್ಞಾನ ಸಂಸ್ಥೆಯ ಅತ್ಯುನ್ನತ ಹುದ್ದೆಯಿಂದ ಯುದ್ಧವಿಮಾನದ ಕಾಕ್‌ಪಿಟ್‌ವರೆಗೆ, ಸೇನಾ ಮುಖ್ಯಸ್ಥರ ಕಚೇರಿಯಿಂದ ಸುಪ್ರೀಂ ಕೋರ್ಟ್ ನ್ಯಾಯಪೀಠದವರೆಗೆ ಈ ಮಹಿಳೆ ಶಕ್ತಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಆದರೆ ಸ್ವಾತಂತ್ರ್ಯ ಪಡೆದು ಎಂಟು ದಶಕಗಳು ಸಮೀಪಿಸುತ್ತಿದ್ದರೂ ನಾವಿನ್ನೂ ‘ಮೊದಲ ಮಹಿಳೆ’ ಎಂದೇ ಬರೆಯುತ್ತಿದ್ದೇವೆ.
ಇದಕ್ಕೆ ಮಹಿಳೆಯರಲ್ಲಿ ಸಾಮರ್ಥ್ಯ ಅಥವಾ ಅರ್ಹತೆಯ ಕೊರತೆ ಕಾರಣಔೇ? ಖಂಡಿತ ಅಲ್ಲ. ದಶಕಗಳ ಕಾಲ ಅವಕಾಶ, ಪ್ರಾತಿನಿಧ್ಯ ಮತ್ತು ನಿರ್ಧಾರ ಕೈಗೊಳ್ಳುವ ಸ್ಥಾನಗಳಲ್ಲಿ ಅವರಿಗೆ ಸಮಾನ ಅವಕಾಶ ಸಿಗದಿರುವುದೇ ಮುಖ್ಯ ಕಾರಣ. ‘ಮೊದಲ ಮಹಿಳೆ’ ಎಂಬ ಸಾಧನೆಯನ್ನು ಸಂಭ್ರಮಿಸುವಂತೆ, ಇಂದಿಗೂ ಉಳಿದುಕೊಂಡಿರುವ ಲಿಂಗ ಅಸಮಾನತೆಯನ್ನು ಕಿತ್ತೊಗೆಯುವ ದೃಢ ನಿಶ್ಚಯವನ್ನೂ ಮಾಡಬೇಕಿದೆ. ಒಂದು ದಿನ ವಿಜ್ಞಾನ ಸಂಸ್ಥೆಯ ಮುಖ್ಯಸ್ಥೆ, ಫೈಟರ್ ಪೈಲಟ್, ಉನ್ನತ ಸೇನಾ ಅಧಿಕಾರಿ ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಮಹಿಳೆಯೊಬ್ಬರು ನೇಮಕವಾಗುವುದು ‘ಇತಿಹಾಸ’ವಾಗದೆ ಸಹಜ ಸುದ್ದಿಯಾಗಬೇಕು. ಅಂದು ‘ಮೊದಲ ಮಹಿಳೆ’ ಎಂಬ ವಿಶೇಷಣದ ಅಗತ್ಯವೇ ಇರುವುದಿಲ್ಲ. ಬಹುಶಃ ಅದೇ ಈ ಸಾಧನೆಗಳ ನಿಜವಾದ ಗೆಲುವಾಗಬಹುದು.




