ಮುಂಬರುವ 2029ರ ಲೋಕಸಭಾ ಚುನಾವಣೆಯೊಳಗೆ ದೇಶದ 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಘೋಷಣೆಗೆ ಮೈತ್ರಿಕೂಟದೊಳಗೇ ತೀವ್ರ ವಿರೋಧ ವ್ಯಕ್ತವಾಗಿದೆ. ಕೇಂದ್ರದಲ್ಲಿ ಆಡಳಿತಾರೂಢ ಮೋದಿ–ಶಾ ಸರ್ಕಾರಕ್ಕೆ ಆಧಾರ ಸ್ತಂಭಗಳಂತಿರುವ ಬಿಹಾರದ ಜೆಡಿಯು ಹಾಗೂ ಆಂಧ್ರಪ್ರದೇಶದ ಟಿಡಿಪಿ ಪಕ್ಷಗಳು ಅಸಮಾಧಾನ ಹೊರಹಾಕಿದ್ದು, ಸರ್ಕಾರದ ಈ ಯೋಜನೆಗೆ ಬಹುದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ.
ಇತ್ತೀಚೆಗಷ್ಟೇ ಮುಂಬೈನಲ್ಲಿ ಮಾತನಾಡಿದ್ದ ಅಮಿತ್ ಶಾ, 370ನೇ ವಿಧಿ ರದ್ದತಿ ಹಾಗೂ ತ್ರಿವಳಿ ತಲಾಖ್ ನಿರ್ಮೂಲನೆಯ ಸಾಧನೆಗಳನ್ನು ಉಲ್ಲೇಖಿಸಿ, ಮುಂದಿನ ಮಹತ್ವಾಕಾಂಕ್ಷೆಯಾಗಿ 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿಗೊಳಿಸುವ ಗುರಿ ಹೊಂದಲಾಗಿದೆ ಎಂದು ಘೋಷಿಸಿದ್ದರು. ಆದರೆ, ಈ ನಿರ್ಧಾರದ ಬಗ್ಗೆ ಮೈತ್ರಿಕೂಟದಲ್ಲಿ ಯಾವುದೇ ಪೂರ್ವಭಾವಿ ಚರ್ಚೆ ನಡೆದಿಲ್ಲ ಎಂಬುದು ಇದೀಗ ಮಿತ್ರಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಹಾರದಲ್ಲಿ ಗಣನೀಯ ಪ್ರಮಾಣದ ಮುಸ್ಲಿಂ ಮತಬ್ಯಾಂಕ್ ಹೊಂದಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು, ರಾಜ್ಯದಲ್ಲಿ ಯುಸಿಸಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದೆ. ‘ರಾಷ್ಟ್ರಮಟ್ಟದಲ್ಲಿ ಮಸೂದೆ ತಂದರೆ ಬೆಂಬಲಿಸುವ ಬಗ್ಗೆ ಪರಿಶೀಲಿಸುತ್ತೇವೆ, ಆದರೆ ಬಿಹಾರದಲ್ಲಿ ಮಾತ್ರ ಇದನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಲು ಬಿಡುವುದಿಲ್ಲ’ ಎಂದು ಜೆಡಿಯು ನಾಯಕ ಶ್ಯಾಮ್ ರಜಾಕ್ ಸ್ಪಷ್ಟಪಡಿಸಿದ್ದಾರೆ. ಬಿಹಾರದ ಮತ್ತೊಂದು ಮೈತ್ರಿ ಪಕ್ಷ ಎಲ್‌ಜೆಪಿ (ರಾಂ ವಿಲಾಸ್) ಕೂಡ ಕರಡು ಪ್ರತಿ ಬಿಡುಗಡೆಯಾಗುವ ಮುನ್ನ ತರಾತುರಿಯಲ್ಲಿ ಬೆಂಬಲ ನೀಡುವುದಿಲ್ಲ ಎಂದು ಎಚ್ಚರಿಕೆಯ ಹೆಜ್ಜೆ ಇಟ್ಟಿದೆ.
ಇತ್ತ ಕೇಂದ್ರ ಸರ್ಕಾರಕ್ಕೆ 16 ಸಂಸದರ ಬಲ ತುಂಬಿರುವ ಆಂಧ್ರಪ್ರದೇಶದ ಟಿಡಿಪಿ ಕೂಡ ತಟಸ್ಥ ಒಲವು ತೋರಿದೆ. ಶೇ 10ರಷ್ಟು ಮುಸ್ಲಿಂ ಜನಸಂಖ್ಯೆ ಇರುವ ಆಂಧ್ರದಲ್ಲಿ ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡುವುದಾಗಿ ಈ ಹಿಂದೆ ಚಂದ್ರಬಾಬು ನಾಯ್ಡು ಭರವಸೆ ನೀಡಿದ್ದರು. ಇದೀಗ ಯುಸಿಸಿ ಬಗ್ಗೆ ಪ್ರತಿಕ್ರಿಯಿಸಿರುವ ಟಿಡಿಪಿ ನಾಯಕರು, ‘ಈ ಬಗ್ಗೆ ಎಲ್ಲ ಪಾಲುದಾರರೊಂದಿಗೆ ವ್ಯಾಪಕ ಚರ್ಚೆ ನಡೆಸದೇ ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳುವುದಿಲ್ಲ’ ಎಂದು ತಿಳಿಸುವ ಮೂಲಕ ಸರ್ಕಾರದ ಏಕಪಕ್ಷೀಯ ನಿರ್ಧಾರಕ್ಕೆ ತಡೆ ಹಾಕಿದ್ದಾರೆ.
ಜೆಡಿಯು ಮತ್ತು ಟಿಡಿಪಿ ಪಕ್ಷಗಳು ವಿರೋಧ ಹಾಗೂ ಎಚ್ಚರಿಕೆಯ ನಿಲುವು ಪ್ರದರ್ಶಿಸಿದ್ದರೆ, ಎನ್‌ಡಿಎ ಮೈತ್ರಿಕೂಟದ ಇತರ ಪಕ್ಷಗಳಾದ ಶಿವಸೇನೆ ಮತ್ತು ಎಚ್‌ಎಎಂ (ಸೆಕ್ಯುಲರ್) ಯುಸಿಸಿ ಜಾರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜೊತೆ ಹೊಸದಾಗಿ ಕೈಜೋಡಿಸಿರುವ ಎನ್‌ಸಿಪಿಐ (ಟಿಎಂಸಿ ಬಂಡಾಯ ಸಂಸದರ ಗುಂಪು) ಕೂಡ ಯಾವುದೇ ಕರಡು ಪ್ರಸ್ತಾವನೆ ಬರುವ ಮುನ್ನ ಚರ್ಚೆ ಅತ್ಯಗತ್ಯ ಎಂದಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಕೇವಲ 240 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ, ಬಹುಮತಕ್ಕಾಗಿ ಜೆಡಿಯು (12 ಸಂಸದರು) ಮತ್ತು ಟಿಡಿಪಿ (16 ಸಂಸದರು) ಮೇಲೆಯೇ ಸಂಪೂರ್ಣ ಅವಲಂಬಿತವಾಗಿದೆ. ಇದೀಗ ಈ ಎರಡೂ ಪ್ರಮುಖ ಮಿತ್ರಪಕ್ಷಗಳು ಯುಸಿಸಿ ವಿಚಾರದಲ್ಲಿ ಭಿನ್ನರಾಗ ಎಳೆದಿರುವುದು ಮತ್ತು ಅಲ್ಪಸಂಖ್ಯಾತರ ಹಿತಾಸಕ್ತಿಯ ಪರ ನಿಂತಿರುವುದು, ತಮ್ಮ ಸೈದ್ಧಾಂತಿಕ ಅಜೆಂಡಾವನ್ನು ರಾಜ್ಯಗಳ ಮೂಲಕ ಹೇರಲು ಹೊರಟಿರುವ ಕೇಂದ್ರ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.




