ಉತ್ತರ ಕನ್ನಡ: ನಡುಮುರಿದ ಕಾಂಗ್ರೆಸ್ ಕಟ್ಟಬಲ್ಲರೆ ಹೊಸ ಅಧ್ಯಕ್ಷರು?

Date:

ಉತ್ತರ ಕನ್ನಡ ಅಹಿಂದ ಜಿಲ್ಲೆ. ಬುಡಕಟ್ಟು ಹಾಲಕ್ಕಿ ಒಕ್ಕಲಿಗರು, ದೀವರು, ವಿವಿಧ ಪಂಗಡದ ಮೀನುಗಾರ ಸಂಕುಲ, ಕೋಮಾರ ಪಂಥ, ಕೊಂಕಣ ಮರಾಠರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಓಬಿಸಿಗಳ ಬೆಂಬಲ ಕ್ರೋಡೀಕರಿಸುವ ಚಾಕಚಕ್ಯತೆ ಹೊಸ ಡಿಸಿಸಿ ಅಧ್ಯಕ್ಷರು ಪ್ರದರ್ಶಿಸಬೇಕಿದೆ. ಜಿಟಿ ನಾಯ್ಕ್ ತನ್ನ ಜಾತಿಯ (ದೀವರು-ನಾಮಧಾರಿ) ಹುಡುಗರನ್ನು ಸಂಘ ಪರಿವಾರದ ಹಿಂದುತ್ವ ಹುಚ್ಚಿನಿಂದ ಹೊರತಂದರೆ ಅರ್ಧ ಯುದ್ಧ ಗೆದ್ದಂತೆಯೇ. 

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ದಶಕಗಳಿಂದ ತಳ ಒಡೆದ ಹಡಗಿನಂತೆ ದಿಕ್ಕುತಪ್ಪಿ ಹೊಯ್ದಾಡುತ್ತಲೇ ಇದೆ. ಬದ್ಧತೆ, ಪಕ್ಷನಿಷ್ಠೆಯಿಲ್ಲದ ನಾಯಕರ ಮುಂದಾಳತ್ವದಲ್ಲಿ ಮತ್ತೆ ಮತ್ತೆ ಮುಗ್ಗರಿಸುತ್ತಿದೆ. ಎದುರಾಳಿ ಬಿಜೆಪಿಗರು ಮತಾಂಧತೆಯಿಂದ ಅಬ್ಬರಿಸಿ ಬೊಬ್ಬಿರಿಯುತ್ತ ಕಾಂಗ್ರೆಸಿಗೆ ಹಾನಿ ಮಾಡುತ್ತಿದ್ದಾಗಲೂ ಸ್ವಪಕ್ಷದ ನೀತಿ-ನಿಲುವು ಸಮರ್ಥಿಸಿಕೊಳ್ಳುವ ನಿಯತ್ತು ಜಿಲ್ಲಾ ಕಾಂಗ್ರೆಸ್ ಚುಕ್ಕಾಣಿ ಹಿಡಿದವರು ತೋರಿಸಿದ್ದೇ ಇಲ್ಲ. ಪ್ರತಿ ತಂತ್ರದಿಂದ ಪಕ್ಷ ಕಟ್ಟಿದ ಕುರುಹುಗಳು ಕಾಣಿಸುವುದಿಲ್ಲ. ಜಿಲ್ಲಾ ಕಾಂಗ್ರೆಸ್‌ನ ಎರಡುಮೂರು ದಶಕದ ಇತಿಹಾಸ ಕೆದಕುತ್ತ ಹೋದರೆ, ಆ ಪಕ್ಷದ ದುರ್ಗತಿಗೆಲ್ಲ ಘಟಾನುಘಟಿ ನಾಯಕರೆನ್ನಲಾಗುವ ಮಾಜಿ ಮಂತ್ರಿ ಆರ್.ವಿ.ದೇಶಪಾಂಡೆ ಮತ್ತು ಮಾಜಿ ಸಂಸದೆ ಮಾರ್ಗರೆಟ್ ಆಳ್ವರ ಸ್ವಪ್ರತಿಷ್ಠೆಯ ಗುದುಮುರಿಗೆಯೇ ಮೂಲ ಕಾರಣವೆಂಬುದು ಸ್ಪಷ್ಟವಾಗುತ್ತದೆ.

- Advertisement -

1990ರ ದಶಕಾರಂಭದಲ್ಲಿ ದಕ್ಷಿಣ ಕನ್ನಡ ಮೂಲದ ದಿಲ್ಲಿ ರಾಜಕಾರಣಿ ಮಾರ್ಗರೆಟ್ ಆಳ್ವ, ತಾವು ಉತ್ತರ ಕನ್ನಡದ ಸೊಸೆ ಎನ್ನುತ್ತ ಜಿಲ್ಲೆಯಲ್ಲಿ ಎಂಪಿಯಾಗುವ ಪ್ರಯತ್ನ ಶುರು ಮಾಡಿದ್ದರು. ಅದೇ ವೇಳೆಗೆ ರಾಮಕೃಷ್ಣ ಹೆಗಡೆಯವರ ನವನಿರ್ಮಾಣ ವೇದಿಕೆಯಲ್ಲಿ ಮೂಲೆಗುಂಪಾಗಿದ್ದ ದೇಶಪಾಂಡೆ ಕಾಂಗ್ರೆಸ್ ಸೇರಿಕೊಂಡರು. ಆರಂಭದಲ್ಲಿ ಇಬ್ಬರಲ್ಲೂ ಅನಿವಾರ್ಯ ಹೊಂದಾಣಿಕೆಯಿತ್ತು. ದೇಶಪಾಂಡೆ ಎಸ್ಸೆಮ್ ಕೃಷ್ಣ ಸರಕಾರದಲ್ಲಿ ಮಂತ್ರಿಯಾದರೆ, ಮಾರ್ಗರೆಟ್ ಕೆನರಾದ ಸಂಸದೆಯಾದರು. ವರ್ಷ ಕಳೆಯುವದರೊಳಗೇ ಇಬ್ಬರ ನಡುವೆ ಮೇಲಾಟ ಆರಂಭವಾಯಿತು. ಪಕ್ಷದಲ್ಲಿ ಗುಂಪುಗಾರಿಕೆ, ಕಾಲೆಳೆದಾಟ ಮಿತಿಮೀರಿತು. ದೇಶಪಾಂಡೆಯವರು ಮಾರ್ಗರೆಟ್ ಆಳ್ವರನ್ನು ಜಿಲ್ಲೆಯಿಂದ ಓಡಿಸಲು ಪಣತೊಟ್ಟರು. ಜಿಲ್ಲಾ ಕಾಂಗ್ರೆಸ್ ಹಳ್ಳ ಹಿಡಿಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಳೇ ಮೈಸೂರು: ಮಹಿಳಾ ರಾಜಕಾರಣಕ್ಕೆ ದಿಕ್ಕು ತೋರಿದ ‘ಗುಂಡ್ಲುಪೇಟೆ...

ಹಳೇ ಮೈಸೂರು ಭಾಗದ ರಾಜಕೀಯ ಇತಿಹಾಸವನ್ನು ಗಮನಿಸಿದಾಗ, ಪುರುಷ ಪ್ರಧಾನ ರಾಜಕಾರಣದ ನಡುವೆ ತನ್ನದೇ ಆದ ಛಾಪು ಮೂಡಿಸಿದ ಮಹಿಳಾ ನಾಯಕಿಯರ ಪೈಕಿ ಕೆ.ಎಸ್. ನಾಗರತ್ನಮ್ಮ ಅವರ ಹೆಸರು ವಿಶಿಷ್ಟವಾಗಿ ಕಾಣಿಸುತ್ತದೆ. ಶಾಸಕಿಯಾಗಿ,...

ಬಡ ಯೆಮನ್ ಇಕ್ಕಳದಲ್ಲಿ ಶ್ರೀಮಂತ ಸೌದಿ: ವಿನಾಕಾರಣ ದಾಳಿ...

ಸುಮ್ಮನೆ ಇರಲಾರದ ಸೌದಿ ಅರೇಬಿಯಾ, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡಲು ಹೋಗಿ, ಮರ್ಮಕ್ಕೆ ತಾಕುವಂತಹ ಹೊಡೆತ ತಿಂದು ಕೂತಿದೆ. ಈಗ ಸೌದಿ ಅರೇಬಿಯಾದ ನೆರವಿಗೆ ಅಮೆರಿಕಾ, ಇಸ್ರೇಲ್‌, ಪಾಕಿಸ್ತಾನ ಮತ್ತು ಟಿರ್ಕಿ...

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಕಾಂಗ್ರೆಸ್ಸಿನ ಈ ಒಳಗುದಿಯನ್ನು ಬಿಜೆಪಿಯ ಅನಂತಕುಮಾರ್ ಹೆಗಡೆ, ಕಾಗೇರಿ ವಗೈರೆ ಹೈಗರ(ಹವ್ಯಕ ಬ್ರಾಹ್ಮಣ) ಹಿರೇಮಣಿಗಳು ತಮ್ಮ ಹಿಂದುತ್ವದ ಹಿಡನ್ ರಾಜಕಾರಣಕ್ಕೆ-ಜಾತಿ ಪ್ರೀತಿಗೆ ಬಳಸಿಕೊಂಡು ಭೀಕರವಾಗಿ ಬೆಳೆದರು. ಆಗ ಹಳಿತಪ್ಪಿದ ಕಾಂಗ್ರೆಸ್ ಇವತ್ತಿಗೂ ಚೇತರಿಸಿಕೊಂಡಿಲ್ಲ. ಪಕ್ಷವನ್ನು ರಿಪೇರಿ ಮಾಡಲು ಯಾರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಿಲ್ಲ. ಹೀಗೆ ಸಂಘಟನೆ-ಶಿಸ್ತು ಇಲ್ಲದೆ ನೆಲ ಕಚ್ಚಿರುವ ಜಿಲ್ಲಾ ಕಾಂಗ್ರೆಸ್ ಕಮಿಟಿಗೀಗ ಹೊಸ ಸಾರಥಿ- ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದೆ. ಜಿಲ್ಲಾ ಕೇಂದ್ರ ಕಾರವಾರದಲ್ಲಿ ವಕೀಲಿಕೆ ವೃತ್ತಿ ಮಾಡುತ್ತಿರುವ ಜಿ.ಟಿ.ನಾಯ್ಕ್‌ರನ್ನು ಡಿಸಿಸಿ ಅಧ್ಯಕ್ಷರಾಗಿ ಹೈಕಮಾಂಡ್ ಆಯ್ಕೆ ಮಾಡಿದೆ.

ಜಿಲ್ಲಾಧ್ಯಕ್ಷರ ಆಯ್ಕೆ ಸಂಪೂರ್ಣ ಪಾರದರ್ಶಕವಾಗಿರುತ್ತದೆ; ಆಸಕ್ತರೆಲ್ಲರೂ ಅರ್ಜಿ ಸಲ್ಲಿಸಬಹುದು; ಪ್ರತಿ ಅರ್ಜಿಯ ಬಗ್ಗೆ ವಿವರ ಸಂಗ್ರಹಿಸಲಾಗುತ್ತದೆ. ಕಾರ್ಯಕರ್ತರ ಅಭಿಪ್ರಾಯ ಪಡೆಯಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ನಿರೀಕ್ಷೆ-ಉತ್ಸಾಹ ಮೂಡಿಸಿತ್ತು. ‘ಸಂಘಟನ್ ಸೃಜನ್’ ಕಾರ್ಯಕ್ರಮದ ಹೆಸರಲ್ಲಿ ಮುಖಂಡರು, ಕಾರ್ಯಕರ್ತರನ್ನು ಆಕ್ಟಿವ್ ಮಾಡಲಾಗಿತ್ತು. ಆದರೆ ಜಿಲ್ಲೆಯ ಕಾಂಗ್ರೆಸ್ಸಿನ ಸ್ಥಿತಿ-ಗತಿಯನ್ನು ಹತ್ತಿರದಿಂದ ಬಲ್ಲ, ಸ್ಥಳೀಯ ಒಂದಿಷ್ಟು ಮುಂಚೂಣಿ ಮುಂದಾಳುಗಳ ನಿಕಟ ಸಂಪರ್ಕವಿರುವ ಕೆಪಿಸಿಸಿ ಅಧ್ಯಕ್ಷ  ಹರಿಪ್ರಸಾದ್ ನಿರ್ಧಾರದಂತೆಯೇ ಡಿಸಿಸಿ ಅಧ್ಯಕ್ಷರ ನೇಮಕಾತಿ ಆಗಿದೆ ಎಂಬ ಗುಸುಗುಸು ಕಾಂಗ್ರೆಸ್ ಪಡಸಾಲೆಯಲ್ಲಿದೆ.

ಇದನ್ನು ಓದಿದ್ದೀರಾ?: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಹೊಸ ಡಿಸಿಸಿ ಪ್ರಸಿಡೆಂಟ್ ಜಿ.ಟಿ.ನಾಯ್ಕ್‌ಗೆ ಕಾಂಗ್ರೆಸ್ ಹೊಸತು; ಅದರೊಳಗಿನ ದೊಡ್ಡವರ-ಸಣ್ಣವರ ಬಣ ರಾಜಕೀಯ ಅದಕ್ಕಿಂತಲೂ ಹೊಸದು. ಇದೆಲ್ಲವನ್ನು ನಾಜೂಕಾಗಿ ನಿಭಾಯಿಸಿ ತತ್ತರಿಸುತ್ತಿರುವ ಜಿಲ್ಲಾ ಕಾಂಗ್ರೆಸ್ಸನ್ನು ಕಟ್ಟಿ ನಿಲ್ಲಿಸಬೇಕಾದ ಮಹತ್ತರ ಹೊಣೆಗಾರಿಕೆ ಜಿಟಿ ಮೇಲಿದೆ. ಒಂದೇ ನೆಗೆತದಲ್ಲಿ ಕಾಂಗ್ರೆಸ್ಸಿನ ಜಿಲ್ಲಾಧ್ಯಕ್ಷತೆಯಂತಹ ಆಯಕಟ್ಟಿನ ಸ್ಥಾನಕ್ಕೆ ಜಿಟಿ ಜಿಗಿದಿದ್ದಾರೆ. ಜಿಲ್ಲಾ ಕಾಂಗ್ರೆಸ್‌ನಲ್ಲಾಗಲಿ, ಅವರ ತವರು ತಾಲೂಕು ಸಿದ್ಧಾಪುರದ ಬ್ಲಾಕ್ ಕಾಂಗ್ರೆಸ್‌ನಲ್ಲಾಗಲಿ ಜಿಟಿ ಈವರೆಗೆ ಯಾವುದೆ ಪದಾಧಿಕಾರ ನಿಭಾಯಿಸಿದವರಲ್ಲ. ತಾನು ಸಿದ್ದಾಪುರದಲ್ಲಿ ರೈತ ಹೋರಾಟ, ಸಾಮಾಜಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದೇನೆಂದು ಹೇಳಿಕೊಳ್ಳುತ್ತಾರೆ. ಆದರೆ ಜಿಟಿ ಹೆಸರು ಕೇಳಿ ಬಂದಿದ್ದೇ ಕಳದೆ ಲೋಕಸಭಾ ಚುನಾವಣಾ ಸಂದರ್ಭದಲ್ಲಿ- ಅದು ಕೂಡ ಕೈ ಟಿಕೆಟ್ ಕೇಳಿದಾಗ. ಒಂದು ಹಂತದಲ್ಲಿ ಜಿಟಿ ಹುರಿಯಾಳಾಗೋದು ಪಕ್ಕಾ ಎಂಬ ಸುದ್ದಿಯೂ ಹಬ್ಬಿತ್ತು. ಕೊನೆಯ ಕ್ಷಣದಲ್ಲಿ ಖಾನಾಪುರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ತಮ್ಮ ದಿಲ್ಲಿ ಸಂಪರ್ಕ ಬಳಸಿ ಕೆನರಾದ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದರು.

ಮುಂದೊಂದು ದಿನ ಸಂಸದನಾಗುವ ಆಸೆ ಉಳಿಸಿಕೊಂಡಿರುವ ಜಿಟಿ ಆಸೆಪಟ್ಟು, ಪ್ರಯತ್ನಪಟ್ಟು ಡಿಸಿಸಿ ಪಟ್ಟ ಗಿಟ್ಟಿಸಿದ್ದಾರೆ. ಜಿಟಿ ಕಾಂಗ್ರೆಸ್‌ನ ಸೆಕ್ಯುಲರ್ ತತ್ವ ನಿಷ್ಠರು, ಕೋಮುವಾದಿ ರಾಜಕಾರಣಕ್ಕೆ ಮುಲಾಜಿಲ್ಲದೆ ತಿರುಗೇಟು ಕೊಡಬಲ್ಲ ತಾಕತ್ತಿನವರು, ಹಿಂದಿನ ಅಧ್ಯಕ್ಷ ಭೀಮಣ್ಣ ನಾಯ್ಕರಂತೆ ‘ಸಮನ್ವಯ’ ಸಿದ್ಧಾಂತಿಯಲ್ಲ ಎಂಬ ಪ್ರತೀತಿಯಿದೆ. ಜತೆಗೇ ವೈಟ್ ಕಾಲರ್ ವಕೀಲರು, ಬಡವರ ಕೈಗೆಟುಕದ ದುಬಾರಿ ನ್ಯಾಯವಾದಿ, ಜನಸಾಮಾನ್ಯರೊಂದಿಗೆ ಬೆರೆಯುವುದು ಅನುಮಾನ ಎಂಬ ದೂರುಗಳೂ ಇವೆ. ಹಣವಿರುವುದರಿಂದ ಪಕ್ಷ ಸಂಘಟನೆಗೆ ಅನುಕೂಲವಾಗಬಹುದೆಂಬ ಲೆಕ್ಕಾಚಾರಗಳೂ ಇವರ ಆಯ್ಕೆ ಹಿಂದಿರಬಹುದು. ಈ ಬಾರಿಯ ಡಿಸಿಸಿ ಅಧ್ಯಕ್ಷರಾಯ್ಕೆಯಲ್ಲಿ ಮೊಂಡು ಹಠದ ಯಜಮಾನರಾದ ದೇಶಪಾಂಡೆ ಮತ್ತು ಮಾರ್ಗರೆಟ್ ಆಳ್ವಾರ ಮಾತಿಗೆ ಮನ್ನಣೆಯಿರಲಿಲ್ಲ. ಹೀಗಾಗಿ ಈ ಶತ್ರುಗಳು ಡಿಸಿಸಿ ಪ್ರಸಿಡೆಂಟ್ ಆಯ್ಕೆಯಲ್ಲಿ ತಲೆಹಾಕಲು ಅವಕಾಶವಾಗಲಿಲ್ಲ. ಅಂತೆಯೇ ಜಿಟಿ ಪಟ್ಟಾಭಿಷೇಕ ಸಲೀಸಾಗಿ ಆಗಿದೆ ಎನ್ನುವ ಸುದ್ದಿಯೂ ಇದೆ.

margaret alva deshpande
ಮಾರ್ಗರೆಟ್ ಆಳ್ವ ಮತ್ತು ಆರ್.ವಿ. ದೇಶಪಾಂಡೆ

ಕಾಲೆಳೆಯುವ ಕಲಾ ಪ್ರವೀಣರಿರುವ ಕಾಂಗ್ರೆಸ್ಸಿನಲ್ಲಿ ಅಧ್ಯಕ್ಷತೆಗೇರಿದಷ್ಟು ಸುಲಭ ಸಂಘಟನೆಯಲ್ಲ; ಬುನಾದಿಯೇ ಕುಸಿದಿರುವ ಪಕ್ಷ ಪುನಃ ಕಟ್ಟುವುದು ಪ್ರಯಾಸದ ಕೆಲಸ. ಎರಡೆರಡು ಅವಧಿ ಡಿಸಿಸಿ ಪೀಠದಲ್ಲಿದ್ದ ಭೀಮಣ್ಣ ನಾಯ್ಕ್(ಹಾಲಿ ಶಿರಸಿ ಶಾಸಕ)ರ ಕಾಲದಲ್ಲಿ ಪಕ್ಷ ಜಡ್ಡುಗಟ್ಟಿಬಿಟ್ಟಿದೆ. ದೇಶಪಾಂಡೆ ಹೇಳಿದಂತೆ ಕೇಳುತ್ತಿದ್ದ ಭೀಮಣ್ಣ ನಾಯ್ಕರಲ್ಲಿ ಸಂಘಟನಾ ಶಕ್ತಿ, ಸೈದ್ಧಾಂತಿಕ ಬದ್ಧತೆಗಳಿರಲಿಲ್ಲ. ದೇಶಪಾಂಡೆಗೆ ಬಿಜೆಪಿಯ ಉಗ್ರ ಹಿಂದುತ್ವವಾದಿ ಅನಂತ್ ಹೆಗಡೆ ಮತ್ತು ನಾಜೂಕು ಕೋಮುವಾದಿ ಕಾಗೇರಿ ಹೆಗಡೆ ಜತೆ ಮೃಧು-ಮಧುರ ಸಂಬಂಧವಿದ್ದರೆ, ಭೀಮಣ್ಣ ನಾಯ್ಕರಿಗೆ ಅನಂತ್ ಹೆಗಡೆ ಎಂದರೆ ಭಯ-ಭಕ್ತಿ ಎರಡೂ ಇತ್ತು. ಅನಂತ್ ಹೆಗಡೆ ಶಿರಸಿಯ ಆಸ್ಪತ್ರಯೊಂದಕ್ಕೆ ನುಗ್ಗಿ ವೈದ್ಯರ ಮೇಲೆ ಹಲ್ಲೆ ಮಾಡಿ ರಕ್ತ ಹರಿಸಿದಾಗ ಕಾಂಗ್ರೆಸ್ ಕಾಟಾಚಾರಕ್ಕೆ ಪ್ರತಿಭಟನೆ ಹಮ್ಮಿಕೊಂಡಿತ್ತು. ಆ ಸಭೆಯಲ್ಲಿ ಅಂದಿನ ಜಿಲ್ಲಾಧ್ಯಕ್ಷ ಭೀಮಣ್ಣ ‘ನನಗೆ ಶೀತ-ಕೆಮ್ಮು’ ಎಂದು ಅನಂತ್ ಹೆಗಡೆ ವಿರುದ್ಧ ಉಸಿರೆತ್ತದೆ ಪಲಾಯನ ಮಾಡಿದ್ದನ್ನು ಇವತ್ತಿಗೂ ನಿಷ್ಠಾವಂತ ಕಾಂಗ್ರೆಸಿಗರು ನೆನಪಿಸಿಕೊಂಡು ನಗುತ್ತಾರೆ. ಜಿಲ್ಲಾ ಕಾಂಗ್ರೆಸ್ ನಾಯಕಾಗ್ರೇಸರ ನೈತಿಕ-ಸೈದ್ಧಾಂತಿಕ ದಿವಾಳಿಕೋರತನಕ್ಕೆ ಇದೊಂದು ಸಣ್ಣ ಸ್ಯಾಂಪಲ್!

ನಂತರ ಬಂದಿದ್ದ ಸಾಯಿ ಗಾಂವ್ಕರ್ ಎಂಬ ಮಾರ್ಗರೆಟ್ ಆಳ್ವಾರ ಶಿಷ್ಯ ಮೂರು ವರ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರೆಂದು ವಿರೋಧ ಪಕ್ಷದವರಿಗಿರಲಿ, ಕಾಂಗ್ರೆಸಿಗರಿಗೇ ಗೊತ್ತಾಗಲಿಲ್ಲ. ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದಾರೆ. ಯಲ್ಲಾಪುರದ ಉಚ್ಚಾಟಿತ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ದೇಹ ತಾಂತ್ರಿಕ ಕಾರಣಕ್ಕೆ ಕಾಂಗ್ರೆಸ್ ಸೇರಲಾಗಿಲ್ಲ; ಆದರೆ ಹೆಬ್ಬಾರ್ ಮನಸ್ಸು ಕಾಂಗ್ರೆಸ್‌ನಲ್ಲಿದೆ. ಈಗಾಗಲೇ ತಮ್ಮ ಮಗನನ್ನು ಹೆಬ್ಬಾರ್ ಕಾಂಗ್ರೆಸಿಗೆ ಸೇರಿಸಿದ್ದಾರೆ. ಆದರೆ ಈ ಐವರು ಶಾಸಕರು ಅಪ್ಪಿ ತಪ್ಪಿಯೂ ಬಿಜೆಪಿಯನ್ನು ಎದುರಿಸುವ ಧೈರ್ಯ ಮಾಡುವುದಿಲ್ಲ! ನಾಲ್ಕು+ಒಂದು ಶಾಸಕರು ಕಾಂಗ್ರೆಸ್‌ನಲ್ಲಿದ್ದಾರೆಂದ ಮಾತ್ರಕ್ಕೆ ಜಿಲ್ಲೆಯಲ್ಲಿ ಪಕ್ಷ ಮಜಬೂತಾಗಿದೆ ಎಂದೇನಲ್ಲ; ಆಯಾ ಅಸೆಂಬ್ಲಿ ಕ್ಷೇತ್ರದಲ್ಲಿನ ಸ್ಥಳಿಯ ಸಮಸ್ಯೆ, ಅಂದಿನ ಬಿಜೆಪಿ ಶಾಸಕರ ಬಗೆಗಿನ ಬೇಸರ-ಸಿಟ್ಟು ಕಾಂಗ್ರೆಸನ್ನು ಗೆಲ್ಲಿಸಿದೆಯೇ ಹೊರತು, ಸೈದ್ಧಾಂತಿಕ ಸಂಘಟನೆಯಿಂದೇನಲ್ಲ. ಬಿಜೆಪಿ ದೌರ್ಬಲ್ಯವೇ ಕಾಂಗ್ರೆಸ್ ಬಲವಾಗಿದೆಯಷ್ಟೇ!

ಇದನ್ನು ಓದಿದ್ದೀರಾ?: ಪ್ರಜಾ ಸೇವೆ ಪ್ರಚಾರವೂ ಇರಲಿ, ಪ್ರಜೆಗಳ ಬದುಕಿನಲ್ಲಿ ಬದಲಾವಣೆಯನ್ನೂ ತರಲಿ

ಕಾಂಗ್ರೆಸ್ಸಿನ ಅಸಲಿ ಶಕ್ತಿ-ಸಾಮರ್ಥ್ಯ ನೋಡಬೇಕೆಂದರೆ ಒಟ್ಟಾರೆ ಜಿಲ್ಲಾ ಕಾಂಗ್ರೆಸ್‌ನ ಹಿನ್ನೆಲೆಯನ್ನು ಅವಲೋಕಿಸಬೇಕು. ನೂತನ ಸಾರಥಿ ಜಿಟಿ ಜಿಲ್ಲಾ ಕಾಂಗ್ರೆಸ್‌ಗೆ ಆಗಿರುವ ಧಕ್ಕೆಯ ಮೂಲ ಅರ್ಥ ಮಾಡಿಕೊಡು ರಿಪೇರಿಗೆ ನೀಲ ನಕ್ಷೆ ಹಾಕಿಕೊಳ್ಳಬೇಕು. ಒಂದೆಡೆ ಮಹಾಮಹಿಮರಾದ ಮಾರ್ಗರೆಟ್ ಆಳ್ವ, ದೇಶಪಾಂಡೆ ಮತ್ತೊಂದೆಡೆ ಹತ್ತಾರು ಬಣದ ಬಡಿದಾಟಗಾರರನ್ನು ಸಂಬಾಳಿಸಿಕೊಂಡು ಜಿಲ್ಲೆಯಲ್ಲಿರುವ ಹುಸಿ ಹಿಂದುತ್ವದ ಹುಚ್ಚು ಇಳಿಸುತ್ತ ಜನರ ಬೆಂಬಲ ಒಗ್ಗೂಡಿಸಲು ಹೋರಾಡಬೇಕು. ಇದಕ್ಕೆ ಅಪಾರ ತಾಳ್ಮೆ, ಪರಿಶ್ರಮ ಬೇಕು; ತಳಮಟ್ಟದಲ್ಲಿ ನಿರಂತರ ಸಂಘಟನಾ ಕೆಲಸ ಆಗಬೇಕು.

ಉತ್ತರ ಕನ್ನಡದ ರಾಜಕೀಯ ರಂಗದಲ್ಲಿ ದೀವರು(ಈಡಿಗರು) ಮತ್ತು ಹವ್ಯಕ ಬ್ರಾಹ್ಮಣರು ಎರಡು ನಿರ್ಣಾಯಕ ಸಮುದಾಯಗಳು. ದೀವರು-ನಾಮಧಾರಿಗಳು ಕಾಂಗ್ರೆಸ್‌ನ ಪ್ರಬಲ ಬೆಂಬಲಿಗರಾದರೆ, ಹವ್ಯಕರು ಲಾಗಾಯ್ತಿನಿಂದಲೂ ಜನಸಂಘ, ಜನತಾ ಪರಿವಾರ ಆನಂತರ ಬಿಜೆಪಿ ಬೆನ್ನಿಗೆ ನಿಲ್ಲುತ್ತ ಬಂದಿದ್ದಾರೆ. ದೀವರಿಗೆ ಬಂಗಾರಪ್ಪ ಐಕಾನ್ ಆಗಿದ್ದರೆ, ಹೈಗರಿಗೆ ರಾಮಕೃಷ್ಣ ಹೆಗಡೆ ಸ್ವಜಾತಿ ಅಸ್ಮಿತೆಯಾಗಿದ್ದರು. ಆದರೆ ಒಬಿಸಿ ಸಮುದಾಯದ ದೀವರ ಕೈ ಚುನಾವಣಾ ರಾಜಕಾರಣದಲ್ಲಿ ಮೇಲಾಗುತ್ತಿತ್ತು. ಈ ಸಿದ್ಧಸೂತ್ರ 1996ರ ಲೋಕಸಭಾ ಚುನಾವಣೆ ಅಖಾಡದಲ್ಲಿ ಮುರಿದುಬಿತ್ತು! ರಾಮಜನ್ಮ ಭೂಮಿ-ಬಾಬರಿ ಮಸೀದಿ ಹೆಸರಿನ ಮತೀಯ ಸಂಘರ್ಷ ಮತ್ತು ಅದೇ ಸಂದರ್ಭದಲ್ಲಿ (1990ರ ದಶಕಾರಂಭ) ಭಟ್ಕಳದಲ್ಲಿ ಒಂದಿಡೀ ವರ್ಷ ನಡೆದ ಕೋಮು ಕ್ರೌರ್ಯದ ‘ಯುದ್ಧ’ದಲ್ಲಿ ದೀವರ ಹೊಸ ಪೀಳಿಗೆ ಹಿಂದುತ್ವದ ಕಾಲಾಳಾಯಿತು! ಅನಂತ್ ಹೆಗಡೆಯ ಮುಸ್ಲಿಮ್ ವಿರೋಧಿ ಪ್ರಚೋದಕ ಮಾತುಗಾರಿಕೆಯಿಂದ ದೀವರ ಹುಡುಗರು ದಿಕ್ಕು ತಪ್ಪಿಹೋದರು!

1980ರಿಂದ 1991ರವರೆಗೆ ಸತತ ನಾಲ್ಕು ಬಾರಿ ದೀವರ ಜಾತಿಯ ದೇವರಾಯ ನಾಯ್ಕ್ ಕಾಂಗ್ರೆಸ್ ಸಂಸದರಾಗಿದ್ದರು. ದಿಲ್ಲಿ ಕಾಂಗ್ರೆಸ್ ಪಡಸಾಲೆಯಲ್ಲಿ ಪ್ರಭಾವಿಯಾಗಿದ್ದ ಮಾರ್ಗರೆಟ್ ಆಳ್ವಾರ ತಂತ್ರಗಾರಿಕೆಯಿಂದ ದೇವರಾಯ ನಾಯ್ಕ್ ಕಾಂಗ್ರೆಸ್‌ನಿಂದ ಹೊರಹೋಗುವ ಪರಿಸ್ಥಿತಿ ನಿರ್ಮಾಣವಾಯಿತು. ಆಳ್ವಾ ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾಗುವ ಕಾತುರದಲ್ಲಿದ್ದರು. ಅದು 1996ರ ಲೋಕಸಭಾ ಚುನಾವಣಾ ಸಮಯ; ಮುಸ್ಲಿಮ್ ದ್ವೇಷದ ಹಿಂದುತ್ವದ ಹರಾಕಿರಿ ಪರಾಕಾಷ್ಠೆ ತಲುಪಿದ್ದ ಸಂದರ್ಭ. ನವಾಯತ ಮುಸಲ್ಮಾನರು ಹೆಚ್ಚಿರುವ ಭಟ್ಕಳ ಸಂಘ ಪರಿವಾರದ ಕರ್ಮಭೂಮಿಯಾಗಿದ್ದ ವಿಷಮ ಕಾಲ. ಹಿಂದುತ್ವದ ಬೀದಿ ಹೊಡೆದಾಟಗಾರನಾಗಿದ್ದ ಅನಂತಕುಮಾರ್ ಹೆಗಡೆ ಎಂಬ 27ರ ಹರೆಯದ ಹುಡುಗನನ್ನು ಬಿಜೆಪಿ ಅಖಾಡಕ್ಕಿಳಿಸಿತು. ಕ್ರಿಶ್ಚಿಯನ್ ಸಮುದಾಯದ ಆಳ್ವಾಗೆ ಕಾಂಗ್ರೆಸ್ ಕ್ಯಾಂಡಿಡೇಟಾಗುವ ಧೈರ್ಯ ಇಲ್ಲದಾಯಿತು. ಬಿಜೆಪಿ ಬ್ರಾಹ್ಮಣ ಸಮುದಾಯಕ್ಕೆ ಮಣೆ ಹಾಕಿದ್ದರಿಂದ ಕಾಂಗ್ರೆಸ್ ಅನಿವಾರ್ಯವಾಗಿ ಮತ್ತೊಂದು ಬಹುಸಂಖ್ಯಾತ ದೀವರ ಜಾತಿಗೆ ಅವಕಾಶ ಕೊಡಬೇಕಾಯಿತು.

hegde kageri
ಅನಂತಕುಮಾರ್ ಹೆಗಡೆ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ

ಮಾರ್ಗರೆಟ್ ಆಳ್ವಾರಿಂದಾಗಿಯೇ ಭಟ್ಕಳ ಅಸೆಂಬ್ಲಿ ಟಿಕೆಟ್ ತಪ್ಪಿಸಿಕೊಂಡಿದ್ದ ಮಾಜಿ ಮಂತ್ರಿ ಆರ್.ಎನ್.ನಾಯ್ಕ್ ಪಾರ್ಲಿಮೆಂಟ್ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಕಾಂಗ್ರೆಸ್ ಕುದುರೆಯಾದರು. ನಾಯ್ಕ್ ಠೇವಣಿ ಕಳೆಕೊಂಡು ಹೀನಾಯವಾಗಿ ಸೋತರು; ಬಿಜೆಪಿಯ ಅನಂತ್ ಹೆಗಡೆ ಗೆದ್ದರು. ಆನಂತರ ನಿರ್ಣಾಯಕ ದೀವರು-ನಾಮಧಾರಿ ಜಾತಿಯ ಬಹುತೇಕ ಮತದಾರರು ಸಾವಕಾಶವಾಗಿ ಕಾಂಗ್ರೆಸ್ಸಿನಿಂದ ವಿಮುಖರಾಗಿ ಹಿಂದುತ್ವದ ಮಂಕುಬೂದಿಗೆ ಮರುಳಾದರು. ಕಾಂಗ್ರೆಸ್ಸಿನ ಪ್ರಬಲ ಓಟ್ ಬ್ಯಾಂಕ್ ಆಗಿದ್ದ ದೀವರು-ನಾಮಧಾರಿ ಬಳಗ ಬಿಜೆಪಿಯತ್ತ ಆಕರ್ಷಿತವಾಗಲು ಧರ್ಮಕಾರಣದಷ್ಟೇ ಪ್ರಮುಖವಾದ ಮತ್ತೊಂದು ಪ್ರಮುಖ ಕಾರಣ ಅಲ್ಪಸಂಖ್ಯಾತ ಸಮುದಾಯದ ದೇಶಪಾಂಡೆ ಮತ್ತು ಮಾರ್ಗರೆಟ್ ಆಳ್ವಾರ ಏಕಪಕ್ಷೀಯ ದರ್ಬಾರು! ದೀವರು-ನಾಮಧಾರಿ ಮತದಾರರನ್ನು ಮರುಳಿ ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನ ಆಗಲಿಲ್ಲ. ಬದಲಿಗೆ ದೀವರಿಗೆ ಲೋಕಸಭಾ ಟಿಕೆಟ್ ಕೊಡುವುದನ್ನೇ ಕಾಂಗ್ರೆಸ್ ಹೈಕಮಾಂಡ್ ನಿಲ್ಲಿಸಿಬಿಟ್ಟಿತು.

ಇದನ್ನು ಓದಿದ್ದೀರಾ?: ಹಳೇ ಮೈಸೂರು: ಮಹಿಳಾ ರಾಜಕಾರಣಕ್ಕೆ ದಿಕ್ಕು ತೋರಿದ ‘ಗುಂಡ್ಲುಪೇಟೆ ಅಮ್ಮ’

1998ರಲ್ಲಿ ಮೊದಲ ಬಾರಿ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದ ಮಾರ್ಗರೆಟ್ ಆಳ್ವಾ ಆ ಬಳಿಕದ ಮೂರು ಚುನಾವಣೆಯಲ್ಲಿ ಮತ್ತೆ ಸ್ಫರ್ಧಿಸಿದ್ದರು. 1999ರಲ್ಲಿ ತೀರಾ ಸಣ್ಣ ಅಂತರದಲ್ಲಿ ಒಮ್ಮೆ ಮಾತ್ರ ಗೆದ್ದಿದ್ದ ಅವರು, ಉಳಿದಲ್ಲ ಸಲ ದೊಡ್ಡ ಅಂತರದಲ್ಲೇ ಸೋತಿದ್ದರು. 2014ರಲ್ಲಿ ಮಾರ್ಗರೆಟ್ ಆಳ್ವಾರಿಗೆ ಕೈ ಟಿಕೆಟ್ ಸಿಗದಂಗೆ ನೋಡಿಕೊಂಡ ದೇಶಪಾಂಡೆ, ತಮ್ಮ ಕುಲ ಕಂಠೀರವ ಪ್ರಶಾಂತ್ ದೇಶಪಾಂಡೆಯನ್ನೇ ಅಭ್ಯರ್ಥಿಯಾಗಿಸಿದ್ದರು. ಆಗಲೂ ಕಾಂಗ್ರೆಸ್ ಗೆಲ್ಲಲಿಲ್ಲ; 2019ರಲ್ಲಿ ಕಾಂಗ್ರೆಸ್ ಮೈತ್ರಿ ಪಕ್ಷ ಜೆಡಿಎಸ್‌ಗೆ ಸೀಟು ಬಿಟ್ಟುಕೊಟ್ಟಿತ್ತು. ಆಪರೇಷನ್ ಕಮಲಕ್ಕೆ ಬಲಿಯಾಗಿ ರಾಜಕೀಯ ಬದುಕು ಬರ್ಬಾದ್ ಮಾಡಿಕೊಂಡಿರುವ ಮಾಜಿ ಕಾಂಗ್ರೆಸಿಗ, ಮಾಜಿ ಬಿಜೆಪಿಗ ಆನಂದ್ ಅಸ್ನೋಟಿಕರ್ ಮೈತ್ರಿ ಅಭ್ಯರ್ಥಿಯಾದರು. ಐದು ಬಾರಿ ಸಂಸದನಾದರೂ ಉತ್ತರ ಕನ್ನಡಕ್ಕೆ ಮೂರು ಬಿಲ್ಲಿ ಪ್ರಯೋಜನಕ್ಕೆ ಬಾರದ ಬಿಜೆಪಿಯ ಬೆಂಕಿ ನವಾಬ ಅನಂತ್ ಹೆಗಡೆ ಭರ್ಜರಿ ಅಂತರದಲ್ಲೇ ಅಸ್ನೋಟಿಕರ್‍‌ರನ್ನು ಮಣಿಸಿದರು. ಕಳೆದ ಪಾರ್ಲಿಮೆಂಟ್ ಇಲೆಕ್ಷನ್‌ನಲ್ಲಿ ಈಡಿಗರಿಗೆ ಅವಕಾಶ ಕಲ್ಪಿಸುವ ಚರ್ಚೆಗಳಾದರೂ ಅಭ್ಯರ್ಥಿಯಾಗಿದ್ದು ಮಾತ್ರ ಮರಾಠ ಸಮುದಾಯದ ಅಂಜಲಿ ನಿಂಬಾಳ್ಕರ್. ಈಡಿಗರಿಗಿದು ಸಹ್ಯವಾಗಲಿಲ್ಲ. ಬಿಜೆಪಿಯ ಕಾಗೇರಿ ಅಗಾಧ ಮತಗಳ ಅಂತರದಲ್ಲಿ ಗೆಲುವು ಕಂಡರು. ಕಾಂಗ್ರೆಸ್‌ನ ಈ ಎರಡು ದಶಕದ ಸತತ ಸೋಲಿಗೆ ನಾಮಧಾರಿ-ದೀವರು ಮತದಾರರು ಎರವಾದದ್ದೇ  ಕಾರಣ. ಇದು ಜಿಲ್ಲಾ ಕಾಂಗ್ರೆಸ್ಸಿಗೆ ಅರ್ಥವಾಗಬೇಕಿದೆ.

ಈ ದೀವರು-ನಾಮಧಾರಿ ಸಮುದಾಯದ ಮೇಲೆ ಕಣ್ಣಿಟ್ಟೇ ಈಗ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಹುರುಪಿನ ದೀವರ ತರುಣ ಜಿಟಿಗೆ ಡಿಸಿಸಿ ಚುಕ್ಕಾಣಿ ವಹಿಸಿದ್ದಾರೆ ಎನ್ನಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಮತ್ತು ಡಿಸಿಸಿ ಪ್ರಸಿಡೆಂಟ್ ಇಬ್ಬರೂ ಈಡಿಗ ಸಮುದಾಯದವರು. ಈ ಕಾಂಬಿನೇಷನ್‌ನಿಂದ ಜಿಲ್ಲಾ ಕಾಂಗ್ರೆಸ್‌ಗೆ ಗತವೈಭವ ಮರಳಬಹುದೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಉತ್ತರ ಕನ್ನಡ ಅಹಿಂದ ಜಿಲ್ಲೆ. ಬುಡಕಟ್ಟು ಹಾಲಕ್ಕಿ ಒಕ್ಕಲಿಗರು, ದೀವರು, ವಿವಿಧ ಪಂಗಡದ ಮೀನುಗಾರ ಸಂಕುಲ, ಕೋಮಾರ ಪಂಥ, ಕೊಂಕಣ ಮರಾಠರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಓಬಿಸಿಗಳ ಬೆಂಬಲ ಕ್ರೋಡೀಕರಿಸುವ ಚಾಕಚಕ್ಯತೆ ಹೊಸ ಡಿಸಿಸಿ ಅಧ್ಯಕ್ಷರು ಪ್ರದರ್ಶಿಸಬೇಕಿದೆ. ಜಿಟಿ ತನ್ನ ಜಾತಿಯ (ದೀವರು-ನಾಮಧಾರಿ) ಹುಡುಗರನ್ನು ಸಂಘ ಪರಿವಾರದ ಹಿಂದುತ್ವ ಹುಚ್ಚಿನಿಂದ ಹೊರತಂದರೆ ಅರ್ಧ ಯುದ್ಧ ಗೆದ್ದಂತೆಯೇ. ತಾತ್ವಿಕವಾಗಿ ಕಾಂಗ್ರೆಸ್‌ನ ಕಟ್ಟಾಳು ಆಗಿರುವ ಜಿಟಿ ಮುರಿದು ಬಿದ್ದಿರುವ ಜಿಲ್ಲಾ ಕಾಂಗ್ರೆಸನ್ನು ಹೇಗೆ ಕಟ್ಟುತ್ತಾರೆಂಬುದು ಅವರ ಸಾಮರ್ಥ್ಯವನ್ನು ಸಾಬೀತು ಮಾಡಲಿದೆ. 

-ನಹುಷ 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಸಂವಿಧಾನ, ಪ್ರಜಾಪ್ರಭುತ್ವಕ್ಕೆ ದೇಶ ಒಗ್ಗೂಡಿಸುವ ಶಕ್ತಿಯಿದೆ: ಸುಪ್ರಿಯಾ ಬನಸೂಡೆ

ವೈವಿಧ್ಯತೆಯಲ್ಲಿ ಏಕತೆಯನ್ನು ರೂಪಿಸುವ ಶಕ್ತಿ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗಿದೆ....

ಸಿಜೆಪಿ ಪ್ರತಿಭಟನೆ: ಪೆಲೆಟ್‌ ಗನ್‌ ಬಳಕೆ, ಮಹಿಳೆಯರ ಕಿರುಕುಳ ಕುರಿತು ತನಿಖೆಗೆ ಸುಪ್ರೀಂ ಸೂಚನೆ

ಕಾಕ್‌ರೋಚ್‌ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಜುಲೈ 20ರಂದು ನಡೆದ ಪ್ರತಿಭಟನೆಗೆ...

ಮಸೂದ್ ಅಜರ್ ತಲೆಗೆ 70 ಲಕ್ಷ ಬಹುಮಾನ ಘೋಷಿಸಿದ ಪಾಕ್: ‘ಕಣ್ಣೊರೆಸುವ ನಾಟಕ’ ಎಂದ ಭಾರತ

ಜೈಷ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಹಿಡಿದುಕೊಟ್ಟವರಿಗೆ ನೀಡುವ...

ಹವಾಮಾನ | ರಾಜ್ಯದ ಹಲವೆಡೆ ಒಣಹವೆ, ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ

ಕರ್ನಾಟಕದಾದ್ಯಂತ ಇಂದು ಒಣಹವೆ ಮುಂದುವರಿಯುವ ಸಾಧ್ಯತೆಯಿದ್ದು, ಮಧ್ಯಾಹ್ನದ ನಂತರ ಕೆಲವೆಡೆ...