ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾದ ಗ್ಯಾನೇಶ್ ಕುಮಾರ್ ಕಳೆದ 10 ತಿಂಗಳಲ್ಲಿ 14 ಬಾರಿ ಇನ್ನುಳಿದ ಇಬ್ಬರು ಆಯುಕ್ತರ ಭಿನ್ನಮತವನ್ನು ತಳ್ಳಿಹಾಕಿ ಗೌಪ್ಯವಾಗಿ ಎಸ್ಐಆರ್ ಪ್ರಕ್ರಿಯೆ ನಡೆಸಿರುವುದು ದೇಶದ ನಾಗರೀಕರಿಗೆ ಆಘಾತ ತಂದಿದೆ. ಆದ್ದರಿಂದ ಗ್ಯಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು. ಈ ಸಂಬಂಧ ನಾಳೆ ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರು ಆಗ್ರಹಿಸಿದ್ದಾರೆ.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಮಾಧ್ಯಮಗೋಷ್ಠಿ ನಡೆಸಿದ್ದಾರೆ. “ಪ್ರಜಾಪ್ರಭುತ್ವದ ಅಸ್ಥಿತ್ವ ಉಳಿಸುವುದು ಆಯೋಗದ ಮೇಲಿರುತ್ತದೆ. ಆದರೆ ಒಂದು ರಾಜಕೀಯ ಪಕ್ಷಕ್ಕೆ ಹಾಗೂ ಒಬ್ಬ ನಾಯಕನಿಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲಾಗಿದೆ. ಗ್ಯಾನೇಶ್ ಕುಮಾರ್ ಮಾಡಿರುವ ಕೆಲಸದಿಂದಾಗಿ ಬಿಹಾರದಲ್ಲಿ 63 ಲಕ್ಷ, ಪಶ್ಚಿಮ ಬಂಗಾಳದಲ್ಲಿ 91 ಲಕ್ಷ, ಈಗ ಕರ್ನಾಟಕದಲ್ಲಿ 1.07 ಕೋಟಿ ಮತಗಳನ್ನು ಕಿತ್ತುಹಾಕಲಾಗಿದೆ” ಎಂದು ದೂರಿದರು.
ಇದನ್ನೂ ಓದಿ: ಸೆ.25ಕ್ಕೆ ಚುನಾವಣಾ ಕಚೇರಿಗಳಿಗೆ ಕಾಂಗ್ರೆಸ್ ಮುತ್ತಿಗೆ: ಸಿಇಸಿ ಗ್ಯಾನೇಶ್ ಕುಮಾರ್ ಬಂಧನ, ವಜಾಕ್ಕೆ ಆಗ್ರಹ
“ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗಕ್ಕೆ 2025ರ ಫೆಬ್ರವರಿಯಲ್ಲಿ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಗೌರವವಿಲ್ಲದೇ ಆಯೋಗವು ತೆಗೆದುಕೊಂಡಿರುವ ಏಕಪಕ್ಷೀಯ ನಿರ್ಧಾರಗಳನ್ನು ನಾವು ಖಂಡಿಸುತ್ತೇವೆ. ಮಾಧ್ಯಮಗಳಲ್ಲಿ ಎರಡು ದಿನಗಳಿಂದ ಬಂದಿರುವ ವರದಿಗಳ ಪ್ರಕಾರ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರುದ್ಧ ನಡೆ ಸ್ಪಷ್ಟವಾಗಿ ಕಾಣುತ್ತದೆ” ಎಂದು ತಿಳಿಸಿದ್ದಾರೆ.
“ಇದು ದೇಶದ್ರೋಹ ಕೆಲಸವಾಗಿದ್ದು, ಇದಕ್ಕೆ ಕುಮ್ಮಕ್ಕು ನೀಡಿರುವ ಪ್ರಧಾನಮಂತ್ರಿಗಳು, ಗೃಸಚಿವರು, ಚುನಾವಣಾ ಆಯೋಗದ ಕಾರ್ಯ ದೇಶದ್ರೋಹವೆಂದೇ ಪರಿಗಣಿಸಬೇಕಾಗುತ್ತದೆ. ಗ್ಯಾನೇಶ್ ಕುಮಾರ್ ಅವರಿಗೆ ಈಗಾಗಲೇ 2023ರಲ್ಲಿ ಸಂಸತ್ತಿನಲ್ಲಿ ತೆಗೆದುಕೊಂಡಿರುವ ತೀರ್ಮಾನ ಪ್ರಕಾರ, ಚುನಾವಣಾ ಆಯುಕ್ತರ ಮೇಲೆ ಯಾವುದೇ ಪ್ರಕರಣದಲ್ಲಿ ನಾವು ಕೇಸ್ ದಾಖಲಿಸಿ, ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಗ್ಯಾನೇಶ್ ಕುಮಾರ್ ಅವರಿಂದ ತಕ್ಷಣವೇ ಕೇಂದ್ರ ಚುನಾವಣಾ ಆಯೋಗದಿಂದ ರಾಜೀನಾಮೆ ಪಡೆದು ಬಂಧಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಇಷ್ಟು ಬಹಿರಂಗವಾಗಿ ಸಂವಿಧಾನ ವಿರುದ್ಧ ಮಾಡಿರುವ ಕೆಲಸವನ್ನು ಖಂಡಿಸಿ ನಾವು ನಾಳೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಬೇರೆ ಪಕ್ಷದವರಿಗೂ ನಾವು ಆಹ್ವಾನ ನೀಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿರುವ ಯಾವುದೇ ಪಕ್ಷವಾದರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಬಹುದು. ಈ ರೀತಿ ಆದರೆ ಮುಂದಿನ ದಿನಗಳಲ್ಲಿ ಚುನಾವಣೆ ಎಂಬುದು ಜಾತಕಪಕ್ಷಿಯಾಗಲಿದೆ” ಎಂದು ಹೇಳಿದ್ದಾರೆ.
“ಎರಡನೇ ಹಂತದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆ ಪಡೆದು ಬಂಧಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು. ಸೆ.23ರಂದು ಪತ್ರಿಕೆಯಲ್ಲಿ ಬಂದ ವರದಿಯಲ್ಲಿ ರಾಹುಲ್ ಗಾಂಧಿ ಅವರು ಈ ಹಿಂದೆ ಹೇಳಿದ್ದ ಅಂಶ ಸ್ಪಷ್ಟವಾಗಿ ಕಾಣುತ್ತಿದೆ. ಸಿಖ್ಬೀರ್ ಸಿಂಗ್ ಹಾಗೂ ವಿವೇಕ್ ಜೋಷಿ ಅವರು 10 ತಿಂಗಳಲ್ಲಿ 14 ಬಾರಿ ಭಿನ್ನಮತ ವ್ಯಕ್ತಪಡಿಸಿದ್ದರೂ ಏಕಪಕ್ಷೀಯವಾಗಿ ಕೈಗೊಳ್ಳಲಾಗಿದೆ. ಗ್ಯಾನೇಶ್ ಕುಮಾರ್ ಅವರು ಇನ್ನಿಬ್ಬರು ಆಯುಕ್ತರ ಅನುಮತಿ ಇಲ್ಲದೇ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇಬ್ಬರು ಆಯುಕ್ತರ ವಿರೋಧದ ನಡುವೆಯೂ ಫಾರಂ 6 ಅನ್ನು ಮಾರ್ಪಾಡು ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮತದಾರರ ಬೇಟೆ ಬಿಡಿ, ವಿಶೇಷವಾಗಿ ಬಿಜೆಪಿಗೆ ಹಣದ ಹೊಳೆ ಹೇಗೆ ಹರಿಯಿತೆಂದು ನೋಡುವ ಧೈರ್ಯ ಮಾಡಿ- ಗ್ಯಾನೇಶ್’ಗೆ ಲವಾಸ ಸವಾಲು
“ರಾಹುಲ್ ಗಾಂಧಿ ಅವರು ಮತಗಳ್ಳತನ ವಿರುದ್ಧ ಧ್ವನಿ ಎತ್ತಿದಾಗ ಗ್ಯಾನೇಶ್ ಕುಮಾರ್ ಅವರು ರಾಹುಲ್ ಗಾಂಧಿ ದೇಶದ ಜನರ ಮುಂದೆ ಕ್ಷಮೆ ಕೋರಬೇಕು ಎಂದು ತಿಳಿಸಿದ್ದರು. ಈಗ ನಡೆದಿರುವ ಅಸಂವಿಧಾನಿಕ ತೀರ್ಮಾನಕ್ಕಾಗಿ ಗ್ಯಾನೇಶ್ ಕುಮಾರ್ ಅವರು ಕ್ಷಮೆಗೆ ಅರ್ಹರಲ್ಲ” ಎಂದಿದ್ದಾರೆ.
“ಈ ಹಿನ್ನೆಲೆಯಲ್ಲಿ ಗ್ಯಾನೇಶ್ ಕುಮಾರ್ ಆ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ. ಸಮಗ್ರ ಸ್ವಾಯತ್ತ ಪರಿಶೀಲನೆ ನಡೆಯಬೇಕು. ಗುರುವಾರ ನಾನು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರು 2500 ಮತದಾರರ ಮತವನ್ನು ತೆಗೆದುಹಾಕಬೇಕು ಎಂದು ಬರೆದಿದ್ದ ಪತ್ರವನ್ನು ಬಿಡುಗಡೆ ಮಾಡಿ ಮಾಧ್ಯಮಗೋಷ್ಠಿ ಮಾಡಿದ್ದೆ. ಇಂದು ನನ್ನ ಬಳಿ 65 ಸಾವಿರ ಡಿಲೀಟ್ ಆಗಿರುವ ಮತಗಳ ಅರ್ಜಿಗಳು ನನ್ನ ಬಳಿ ಇವೆ. ಈ ಅರ್ಜಿಗಳಲ್ಲಿ ಯಾರ ಸಹಿ ಕೂಡ ಇಲ್ಲವಾಗಿದೆ” ಎಂದು ಹೇಳಿದ್ದಾರೆ.
“ನಾವು ಈ ಬಗ್ಗೆ ಪರಿಶೀಲನೆ ಮಾಡಿದಾಗ ಡಿಲೀಟ್ ಆಗಿರುವ ಮತಗಳಲ್ಲಿ ಹೆಚ್ಚು ಪ್ರಮಾಣದಲ್ಲಿರುವುದು ಅಸ್ಪಸಂಖ್ಯಾತರು ಹಾಗೂ ದಲಿತರ ಮತಗಳು. ಬಡವರ ಮತದಾನದ ಹಕ್ಕನ್ನು ಕಸಿಯಲು ಮುಂದಾಗಿದ್ದಾರೆ. ಬಬಲೇಶ್ವರ, ಹಬ್ಬಳ್ಳಿ ಧಾರವಾಡಗಳಲ್ಲಿ ಈ ಪ್ರಯತ್ನಗಳು ನಡೆದಿವೆ. ತಪ್ಪುಗಳಾಗಿರುವುದು ಮತಪಟ್ಟಿಯಲ್ಲಿ ಅಲ್ಲ. ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆಯಲ್ಲಿ” ಎಂದಿದ್ದಾರೆ.
“ನಾವು ಚುನಾವಣಾ ಆಯೋಗದ ಬಗ್ಗೆ ಮಾತನಾಡಿದರೆ, ಅವರ ಪರವಾಗಿ ಸಮರ್ಥನೆಗೆ ನಿಲ್ಲುವುದು ಕೇಂದ್ರ ಬಿಜೆಪಿ ನಾಯಕರು. ನಾವು ಚುನಾವಣಾ ಆಯೋಗಕ್ಕೆ ಪ್ರಶ್ನೆ ಮಾಡಿದರೆ ಆಯೋಗದವರೇ ಉತ್ತರ ನೀಡಬೇಕು. ಆದರೆ ಬಿಜೆಪಿಯವರು ಉತ್ತರ ನೀಡುತ್ತಿದ್ದಾರೆ” ಎಂದು ಟೀಕಿಸಿದರು.




