ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರನ್ನು ತಕ್ಷಣವೇ ಬಂಧಿಸಬೇಕು, ಹುದ್ದೆಯಿಂದ ವಜಾಗೊಳಿಸಬೇಕು ಹಾಗೂ ಅವರ ಅಧಿಕಾರಾವಧಿಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷವು ದೇಶವ್ಯಾಪಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಇದರ ಭಾಗವಾಗಿ ಸೆಪ್ಟೆಂಬರ್ 25ರಂದು ದೇಶದ ಎಲ್ಲಾ ರಾಜ್ಯ ಚುನಾವಣಾ ಆಯೋಗದ ಕಚೇರಿಗಳಿಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ನೀಡಿದ ಮಾಹಿತಿಯಂತೆ ಪ್ರತಿಭಟನೆಯನ್ನು ಎರಡು ಹಂತಗಳಲ್ಲಿ ಆಯೋಜಿಸಲಾಗಿದೆ. ಮೊದಲ ಹಂತದಲ್ಲಿ ಸೆಪ್ಟೆಂಬರ್ 25ರಂದು ಎಲ್ಲಾ ಪ್ರದೇಶ ಕಾಂಗ್ರೆಸ್ ಕಮಿಟಿಗಳು ತಮ್ಮ ತಮ್ಮ ರಾಜ್ಯಗಳ ಚುನಾವಣಾ ಆಯೋಗದ ಕಚೇರಿಗಳ ಮುಂದೆ ಬೃಹತ್ ಪ್ರತಿಭಟನೆ ಹಾಗೂ ಮುತ್ತಿಗೆ ನಡೆಸಲಿವೆ. ಎರಡನೇ ಹಂತ ಸೆಪ್ಟೆಂಬರ್ 28ರಂದು ಎಲ್ಲ ಜಿಲ್ಲಾ ಕಾಂಗ್ರೆಸ್ ಕಮಿಟಿಗಳು ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಪ್ರತಿಭಟನಾ ಮೆರವಣಿಗೆ ನಡೆಸಲಿವೆ.
ಇದನ್ನೂ ಓದಿ: ಸಿಇಸಿ ಗ್ಯಾನೇಶ್ ಕುಮಾರ್ ವಜಾಕ್ಕೆ ಆಗ್ರಹ; ಸಂಸತ್ತಿನಲ್ಲಿ ‘ಮಹಾಭಿಯೋಗ’ ಸಲ್ಲಿಕೆಗೆ ವಿಪಕ್ಷಗಳ ನಿರ್ಧಾರ
ಇತ್ತೀಚೆಗೆ ಮಾಧ್ಯಮ ವರದಿಯೊಂದರಲ್ಲಿ ಹೊರಬಿದ್ದ ಮಾಹಿತಿಯ ಪ್ರಕಾರ, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಿಇಸಿ ಗ್ಯಾನೇಶ್ ಕುಮಾರ್ ಅವರು ಇತರ ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಗಮನಕ್ಕೆ ತರದೆ ಏಕಪಕ್ಷೀಯವಾಗಿ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇತರ ಇಬ್ಬರು ಆಯುಕ್ತರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ತಮ್ಮ ಆಕ್ಷೇಪಣೆಯನ್ನು ದಾಖಲಿಸಿದ್ದಾರೆ ಎನ್ನಲಾಗಿದೆ.
This video cannot be played in your browser. Open the video directly
ಈ ವರದಿಯನ್ನು ಉಲ್ಲೇಖಿಸಿರುವ ಕಾಂಗ್ರೆಸ್ ನಾಯಕರು, ಬಿಜೆಪಿ ಸರ್ಕಾರದ ಪರವಾಗಿ ಗ್ಯಾನೇಶ್ ಕುಮಾರ್ ಅವರು “ಬೃಹತ್ ಮತ ಕಳವು” ಪ್ರಕ್ರಿಯೆಯ ನೇತೃತ್ವ ವಹಿಸಿದ್ದಾರೆ ಮತ್ತು ಇದು ಪ್ರಜಾಪ್ರಭುತ್ವಕ್ಕೆ ಎಸಗಿದ ದ್ರೋಹ ಎಂದು ಆರೋಪಿಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, “ಸಂವಿಧಾನದ ಶತ್ರುಗಳು ಈಗ ಬಯಲಾಗಿದ್ದಾರೆ, ಖಂಡಿತವಾಗಿಯೂ ನ್ಯಾಯ ಸಿಗಲಿದೆ” ಎಂದು ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ ನಾಯಕರು ಜ್ಞಾನೇಶ್ ಕುಮಾರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಮತ್ತೊಂದೆಡೆ, ಚುನಾವಣಾ ಆಯೋಗವು ಈ ಆರೋಪಗಳನ್ನು ತಳ್ಳಿಹಾಕಿದ್ದು, ಆಯೋಗದ ಒಳಗಿನ ಆಕ್ಷೇಪಣೆಗಳು ಚರ್ಚೆಯ ಭಾಗವಾಗಿದ್ದವು ಮತ್ತು ಅಂತಿಮ ನಿರ್ಧಾರಗಳು ನಿಯಮಾನುಸಾರವೇ ಆಗಿವೆ ಎಂದು ಹೇಳಿಕೊಂಡಿದೆ.





