ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಆರ್ಎಸ್ ಜಲಾಶಯವು ಬಹುತೇಕ ಭರ್ತಿಯಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ ಇನ್ನೂ 3 ದಿನ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಾಳಿಯ ತೀವ್ರತೆ ಹೆಚ್ಚಿದ್ದು, ಧಾರಾಕಾರ ಮಳೆ ಸುರಿಯುವ ನಿರೀಕ್ಷೆ ಇದೆ. ಅಂತೆಯೇ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಘಟ್ಟ ಪ್ರದೇಶಗಳಲ್ಲೂ ಮಳೆ ಅಬ್ಬರ ಮುಂದುವರೆಯಲಿದೆ. ಇನ್ನು, ದಕ್ಷಿಣ ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಸೂಚಿಸಿದೆ.
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲದೆ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಸುರಿಯುವ ನಿರೀಕ್ಷೆ ಇದೆ.
ಇನ್ನು, ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ ಹಾಗೂ ಬೀದರ್ ಸೇರಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ಸೂಚಿಸಿದೆ.
ಈ ಲೇಖನ ಓದಿದ್ದೀರಾ?: ನಾಗೇಂದ್ರ ಪ್ರಕರಣ | ಬಿಜೆಪಿ-ಕಾಂಗ್ರೆಸ್ ರಾಜಕೀಯ ಲೆಕ್ಕಾಚಾರವೇನು? ಒಂದೇ ಏಟಿಗೆ ಎರಡು ಹಕ್ಕಿ ಹೊಡೆವುದೇ
ಕಳೆದ 24 ಗಂಟೆಗಳಲ್ಲಿ ಕರಾವಳಿ ಕರ್ನಾಟಕದ ಬಹುತೇಕ ಕಡೆ ಮಳೆಯಾಗಿದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಸುಮಾರು 3 ಸೆಂ.ಮೀ ಮಳೆಯಾಗಿದ್ದು, ಪುತ್ತೂರು, ಮಂಗಳೂರು, ಬಂಟ್ವಾಳ ಮತ್ತು ಮಣಿ ಭಾಗಗಳಲ್ಲಿ ಸುಮಾರು 2 ಸೆಂ.ಮೀ ಮಳೆ ದಾಖಲಾಗಿದೆ. ಉತ್ತರ ಕನ್ನಡದ ಹೊನ್ನಾವರ, ಗೇರುಸೊಪ್ಪ ಮತ್ತು ಜೋಯಿಡಾ ಭಾಗಗಳಲ್ಲೂ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕೊಲ್ಲೂರು ಮತ್ತು ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲೂ ಮಳೆ ಮುಂದುವರಿದಿದೆ.
ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಸುಮಾರು 4 ಸೆಂ.ಮೀ ಮಳೆಯಾಗಿದ್ದು, ಚಿಕ್ಕಮಗಳೂರಿನ ಶೃಂಗೇರಿ ಭಾಗದಲ್ಲಿ 2 ಸೆಂ.ಮೀ ಮಳೆ ದಾಖಲಾಗಿದೆ. ಕೊಡಗಿನ ಭಾಗಮಂಡಲ, ಅಮ್ಮತ್ತಿ ಮತ್ತು ನಾಪೋಕ್ಲು ಭಾಗಗಳಲ್ಲೂ ಮಳೆಯಾಗಿದೆ. ತುಮಕೂರಿನ ಕುಣಿಗಲ್ ಹಾಗೂ ಶಿವಮೊಗ್ಗದ ತೀರ್ಥಹಳ್ಳಿಯಲ್ಲೂ ಮಳೆ ದಾಖಲಾಗಿದೆ.
ಕಾವೇರಿ ಜಲಾನಯನ ಪ್ರದೇಶ ಹಾಗೂ ಕೊಡಗು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕೆಆರ್ಎಸ್ ಜಲಾಶಯದ ಒಳಹರಿವು ಹೆಚ್ಚಾಗಿದೆ. ಕೆಆರ್ಎಸ್ಗೆ ಬುಧವಾರ ಬೆಳಗ್ಗೆ 9,438 ಕ್ಯೂಸೆಕ್ನಷ್ಟಿದ್ದ ಒಳಹರಿವು, ಶುಕ್ರವಾರದ ವೇಳೆಗೆ 17,427 ಕ್ಯೂಸೆಕ್ಗೆ ಏರಿಕೆ ಕಂಡಿದೆ. ಒಳಹರಿವು ಹೆಚ್ಚಾಗುತ್ತಿದ್ದಂತೆ ಜಲಾಶಯದ ನೀರಿನ ಮಟ್ಟದಲ್ಲೂ ಏರಿಕೆ ಕಂಡುಬಂದಿದ್ದು, ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ಮೂಡಿಸಿದೆ.




