‘ನಮ್ಮನ್ನು ದಮನಿಸುವ ಪೊಲೀಸ್ ಆದೇಶ ಕೂಡಲೇ ರದ್ದಾಗಲಿ’: ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಲಿಂಗತ್ವ ಅಲ್ಪಸಂಖ್ಯಾತರು

Date:

ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಇತ್ತೀಚೆಗೆ ಹೊರಡಿಸಿರುವ ಆದೇಶವು ಸಮುದಾಯವನ್ನು ಮರು-ಅಪರಾಧೀಕರಣಗೊಳಿಸುವಂತಿದ್ದು, ಈ ಅಸಾಂವಿಧಾನಿಕ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಹಾಗೂ ಸಾಮಾಜಿಕ ಹೋರಾಟಗಾರರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

- Advertisement -

​’ಟ್ರಾನ್ಸ್ ಫೆಮಿನಿಸ್ಟ್ ಕಲೆಕ್ಟಿವ್’ ಹಾಗೂ ‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆಗಳ ವತಿಯಿಂದ ಸೋಮವಾರ (ಅ. 12) ಬೆಂಗಳೂರಿನ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಆಯೋಜಿಸಿದ್ದ ಸಮುದಾಯದ ಸಮಾಲೋಚನಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಹೇಳಿಕೊಳ್ಳುವ ಕರ್ನಾಟಕ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರನ್ನು ದ್ವೇಷಿಸುತ್ತಿರುವುದು ಏಕೆ ಎಂದು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖಂಡರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಸೆಳೆಯಲು 13 ಪ್ರಮುಖ ಬೇಡಿಕೆಗಳ ಹಕ್ಕೊತ್ತಾಯದ ನಿರ್ಣಯಗಳನ್ನು ಅಂಗೀಕರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ...

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು. ದೆಹಲಿಯ ಜಂತರ್ ಮಂತರ್ ಪ್ರತಿಭಟನಾ...

2026ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯ ಹಿಂದಿನ ತಿರುಳು

ಅಮೆರಿಕದ ಇಬ್ಬರು ವಿದ್ವಾಂಸರಾದ ರಾಬರ್ಟ್ ಇ. ಹಾಲ್ ಮತ್ತು ಮೈಕಲ್ ವುಡ್‌ಫೋರ್ಡ್ ರೂಪಿಸಿದ 'ನವ-ಕೇನ್ಸಿಯನ್ ಮಾದರಿ'ಗಳು ಇಂದು ಜಗತ್ತಿನ ಬಹುತೇಕ ಕೇಂದ್ರ ಬ್ಯಾಂಕುಗಳ ಮತ್ತು ಹಣಕಾಸು ಇಲಾಖೆಗಳ ದೈನಂದಿನ ದಿಕ್ಸೂಚಿಯಾಗಿವೆ. ಆ ಕಾರಣಕ್ಕೆ...

ಮಣಿಪುರ | ಜನಾಂಗೀಯ ಕಿಚ್ಚಿಗೆ ದ್ವೇಷ ರಾಜಕಾರಣದ ತುಪ್ಪ;...

ಮಣಿಪುರದಲ್ಲಿ ಕಳೆದ ಮೂರು ವರ್ಷಗಳಿಂದ ಮುಗಿಯದ ಜನಾಂಗೀಯ ರಕ್ತಪಾತಕ್ಕೆ, ಸಮುದಾಯಗಳ ನಡುವಿನ ಹಳೆಯ ವೈರತ್ವವನ್ನು ಮೀರಿ, ಸರ್ಕಾರದ ಪಕ್ಷಪಾತದ ರಾಜಕಾರಣ, ಆಡಳಿತಾತ್ಮಕ ವೈಫಲ್ಯ ಮತ್ತು ವಿಭಜನಾತ್ಮಕ ನೀತಿಗಳೂ ಕಾರಣವಾಗಿವೆ. ಉರಿಯುವ ಬೆಂಕಿಗೆ ತುಪ್ಪ...

​ಆದೇಶ ಹಿಂಪಡೆಯಲು ಆಗ್ರಹ:

ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಶೋಷಣೆಗೆ ಒಳಗಾಗಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಪರ್ಯಾಯ ಜೀವನೋಪಾಯ ಕಲ್ಪಿಸದೆ, ಪೊಲೀಸ್ ಆಯುಕ್ತರು ಹಾಗೂ ಸೆಂಟ್ರಲ್ ರಿಲೀಫ್ ಕಮಿಟಿ (ಸಿಆರ್‌ಸಿ) ಪತ್ರಿಕಾ ಹೇಳಿಕೆಗಳ ಮೂಲಕ ಸಮುದಾಯವನ್ನು ಅಪರಾಧಿಗಳಂತೆ ಬಿಂಬಿಸುತ್ತಿರುವುದು ಖಂಡನೀಯ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. 2017ರ ಲಿಂಗತ್ವ ಅಲ್ಪಸಂಖ್ಯಾತರ ನೀತಿಯನ್ನು ಇನ್ನೂ ಅನುಷ್ಠಾನಗೊಳಿಸಿಲ್ಲ. ಇದರ ನಡುವೆ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಸೆಪ್ಟೆಂಬರ್ 24ರಂದು ಹೊರಡಿಸಿರುವ ಆದೇಶ ಸಂವಿಧಾನ ವಿರೋಧಿಯಾಗಿದ್ದು, ಅದನ್ನು ತಕ್ಷಣವೇ ರದ್ದುಪಡಿಸಬೇಕು ಹಾಗೂ ಹಿಜ್ರಾ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಸಾಂಪ್ರದಾಯಿಕ ಬದಾಯಿ/ಬಸ್ತಿ (ಭಿಕ್ಷಾಟನೆ) ಪದ್ಧತಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು.

​ಪ್ರತ್ಯೇಕ ನಿಗಮ ಹಾಗೂ ಆರ್ಥಿಕ ಭದ್ರತೆಗೆ ಒತ್ತಾಯ:

ಅಂತರ್ಲಿಂಗಿ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವನ್ನು ಸ್ಥಾಪಿಸಬೇಕು ಮತ್ತು ಆ ನಿಗಮಕ್ಕೆ ಸಮುದಾಯದವರನ್ನೇ ಅಧ್ಯಕ್ಷರನ್ನಾಗಿ ಹಾಗೂ ಹೆಚ್ಚಿನ ಸಂಖ್ಯೆಯ ಸದಸ್ಯರನ್ನಾಗಿ ನೇಮಿಸಬೇಕು. ಸಮುದಾಯದವರಿಗೆ ಬೆಂಗಳೂರಿನಲ್ಲಿ ಸ್ವಂತ ವಸತಿ, ಪರ್ಯಾಯ ಉದ್ಯೋಗ, ಆರೋಗ್ಯ ವಿಮೆ, ಸರ್ಕಾರಿ ಉದ್ಯೋಗ ಹಾಗೂ ಜೀವನೋಪಾಯಕ್ಕಾಗಿ ತಲಾ ₹10 ಲಕ್ಷ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಿ, ಘನತೆಯ ಬದುಕು ಕಟ್ಟಿಕೊಳ್ಳಲು ಪೂರಕ ವಾತಾವರಣ ನಿರ್ಮಿಸಬೇಕು ಎಂದು ಆಗ್ರಹಿಸಲಾಯಿತು.

​ದೌರ್ಜನ್ಯ ತಡೆಗೆ ಸಮಿತಿ ರಚನೆಗೆ ಆಗ್ರಹ:

ಸಮುದಾಯದ ಮೇಲೆ ಪ್ರತಿದಿನ ನಡೆಯುತ್ತಿರುವ ಪೊಲೀಸ್ ದೌರ್ಜನ್ಯ, ಕೌಟುಂಬಿಕ ಹಿಂಸೆ, ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. ಬಹುಸಂಖ್ಯಾತ ಸಮಾಜದಿಂದ ಎದುರಾಗುತ್ತಿರುವ ದಬ್ಬಾಳಿಕೆಗಳನ್ನು ಮಟ್ಟಹಾಕಲು ಕೂಡಲೇ ರಾಜ್ಯಮಟ್ಟದ ಸಮಿತಿಯೊಂದನ್ನು ರಚಿಸಬೇಕು. ಸಾಮಾಜಿಕ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲೂ ಸಮುದಾಯದ ಓರ್ವ ಪ್ರತಿನಿಧಿಯನ್ನು ನೇಮಕ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಯಿತು.

​ಶಾಸನಸಭೆಯಲ್ಲಿ ಪ್ರಾತಿನಿಧ್ಯ:

ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿರುವ ಈ ಸಮುದಾಯಕ್ಕೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಲಯಗಳಲ್ಲಿ ವಿಶೇಷ ಅವಕಾಶಗಳನ್ನು ನೀಡಬೇಕು. ಸಂವಿಧಾನದ ಚೌಕಟ್ಟಿನಡಿ ಶಾಸನಸಭೆಗಳಲ್ಲಿಯೂ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಬೇಕು. ವಯಸ್ಸಾದ ಅಂತರ್ಲಿಂಗಿ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ವೃದ್ಧಾಶ್ರಮ (ಓಲ್ಡ್ ಏಜ್ ಹೋಂ) ಮತ್ತು ಲಿಂಗತ್ವಾತೀತ ಮಕ್ಕಳಿಗಾಗಿ ಅಲ್ಪಾವಧಿ ವಸತಿ ಗೃಹಗಳನ್ನು (ಶಾರ್ಟ್ ಸ್ಟೇ ಹೋಂ) ತುರ್ತಾಗಿ ಸ್ಥಾಪಿಸಬೇಕು ಎಂದು ನಿರ್ಣಯಿಸಲಾಯಿತು.

​ಈ ಎಲ್ಲ ಬೇಡಿಕೆಗಳ ಪರಿಶೀಲನೆಗೆ ತಕ್ಷಣವೇ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿ, ಶೀಘ್ರವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಸಭೆ ಒಕ್ಕೊರಲಿನಿಂದ ಆಗ್ರಹಿಸಿದೆ.

​ಸಭೆಯಲ್ಲಿ ಹಿರಿಯ ಸಾಮಾಜಿಕ ಹೋರಾಟಗಾರರು, ಚಿಂತಕರು ಹಾಗೂ ಸಮುದಾಯದ ಮುಖಂಡರಾದ ಅಕ್ಕೈ ಪದ್ಮಶಾಲಿ, ಸೌಮ್ಯ, ಮಧು ಭೂಷಣ್, ಚಾಂಪಾ, ಅರವಿಂದ್, ಪ್ರೊ. ಡೊಮಿನಿಕ್ ಡಿ., ನವೀನ್ ಕೃಷಿ, ಲಕ್ಷ್ಮಮ್ಮ, ಶಮಾ, ಚಾಂದಿನಿ, ಸವಿತಾ, ಕ್ರಿಸ್ಟಿ, ಅಬೀದಾ ಬೇಗಮ್, ವೀಣಾ, ನಿಶಾ, ವೈಶಾಲಿ, ಮೋನಿಕಾ, ದೀಪು, ಶ್ರೇಯಾ, ಅನುಷಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೆಪ್ಟೆಂಬರ್‌ನಲ್ಲಿ ಶೇ. 5.54ಕ್ಕೆ ಏರಿಕೆಯಾದ ಚಿಲ್ಲರೆ ಹಣದುಬ್ಬರ: ದುಬಾರಿಯಾದ ಆಹಾರ ಪದಾರ್ಥಗಳೇ ಕಾರಣ

ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಭಾರತದ ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್ ತಿಂಗಳಿನಲ್ಲಿ...

SIR ವಿರುದ್ಧ, ಸಿಇಸಿ ಗ್ಯಾನೇಶ್ ವಜಾ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲಾಗಿದೆ,...

2026ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯ ಹಿಂದಿನ ತಿರುಳು

ಅಮೆರಿಕದ ಇಬ್ಬರು ವಿದ್ವಾಂಸರಾದ ರಾಬರ್ಟ್ ಇ. ಹಾಲ್ ಮತ್ತು ಮೈಕಲ್ ವುಡ್‌ಫೋರ್ಡ್...

ಮಣಿಪುರ | ಜನಾಂಗೀಯ ಕಿಚ್ಚಿಗೆ ದ್ವೇಷ ರಾಜಕಾರಣದ ತುಪ್ಪ; ರಾಜ್ಯವನ್ನು ಪ್ರಪಾತಕ್ಕೆ ತಳ್ಳಿದ ಬಿಜೆಪಿ ಧೋರಣೆ

ಮಣಿಪುರದಲ್ಲಿ ಕಳೆದ ಮೂರು ವರ್ಷಗಳಿಂದ ಮುಗಿಯದ ಜನಾಂಗೀಯ ರಕ್ತಪಾತಕ್ಕೆ, ಸಮುದಾಯಗಳ ನಡುವಿನ...