ಭಾರತದ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಜೊತೆಗೆ ಅವುಗಳ ರಕ್ಷಣೆಗಾಗಿ ಪ್ರತಿಯೊಬ್ಬ ನಾಗರಿಕನೂ ಜಾಗೃತನಾಗಬೇಕು. ಕೇವಲ ಕಾನೂನು ವ್ಯವಸ್ಥೆ ಮತ್ತು ರಾಜಕೀಯ ಪಕ್ಷಗಳನ್ನು ಅವಲಂಬಿಸಿದರೆ ಸಾಲದು. ಸಂವಿಧಾನದ ಆಶಯಗಳಿಗೆ ಧಕ್ಕೆಯಾದಾಗ ಜನಸಾಮಾನ್ಯರು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಚಿಂತಕ ಪ್ರೊ. ಫಣಿರಾಜ್ ಕರೆ ನೀಡಿದರು.
ನಗರದಲ್ಲಿ ಸಹಬಾಳ್ವೆ ಉಡುಪಿ, ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಉಡುಪಿ ಜಿಲ್ಲೆ ಹಾಗೂ ದಲಿತ ಸಂಘರ್ಷ ಸಮಿತಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ‘ಸಂವಿಧಾನ ಸಂರಕ್ಷಣಾ ದಿನ’ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಸುಮಾರು 13 ಕೋಟಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಇಂತಹ ಬೆಳವಣಿಗೆಗಳ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಮತದಾನದ ಹಕ್ಕಿನ ರಕ್ಷಣೆಗಾಗಿ ನಾಗರಿಕರು ಧ್ವನಿ ಎತ್ತಬೇಕಾಗಿದೆ ಎಂದರು.
ಸಂಸತ್ತಿನಲ್ಲಿ ಕಾಯಿದೆಗಳನ್ನು ಅಂಗೀಕರಿಸುವ ಪ್ರಕ್ರಿಯೆಯ ಕುರಿತು ಮಾತನಾಡಿದ ಅವರು, 2004ರಿಂದ 2014ರವರೆಗಿನ ಯುಪಿಎ ಸರ್ಕಾರದ ಅವಧಿಯಲ್ಲಿ ಶೇ.74ರಷ್ಟು ಮಸೂದೆಗಳನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಶಿಫಾರಸು ಮಾಡಿ, ಸುದೀರ್ಘ ಚರ್ಚೆಯ ಬಳಿಕ ಅಂಗೀಕರಿಸಲಾಗುತ್ತಿತ್ತು. ಆದರೆ 2014ರಿಂದ 2019ರವರೆಗಿನ ಬಿಜೆಪಿ ಆಡಳಿತಾವಧಿಯಲ್ಲಿ ಕೇವಲ ಶೇ.27ರಷ್ಟು ಮಸೂದೆಗಳನ್ನು ಮಾತ್ರ ಸಮಿತಿಗೆ ಕಳುಹಿಸಲಾಗಿದ್ದು, ಶೇ.73ರಷ್ಟು ಮಸೂದೆಗಳನ್ನು ಸಮರ್ಪಕ ಚರ್ಚೆಯಿಲ್ಲದೆ ಸಂಖ್ಯಾಬಲದ ಆಧಾರದಲ್ಲಿ ಅಂಗೀಕರಿಸಲಾಗಿದೆ ಎಂದು ಟೀಕಿಸಿದರು. ಈ ಬೆಳವಣಿಗೆಯಿಂದ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆಯಾಗುತ್ತಿದ್ದು, ಅದರ ಜೀವಂತಿಕೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬಾಬರಿ ಮಸೀದಿ ಧ್ವಂಸ ಪ್ರಕರಣ ಹಾಗೂ ಬಿಲ್ಕೀಸ್ ಬಾನು ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ನ್ಯಾಯಾಂಗ ವ್ಯವಸ್ಥೆಯ ತೀರ್ಪುಗಳು ಮತ್ತು ಅವುಗಳ ಪರಿಣಾಮಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬಾಬರಿ ಮಸೀದಿ ಧ್ವಂಸ ಕೃತ್ಯವನ್ನು ಸುಪ್ರೀಂ ಕೋರ್ಟ್ ಅಪರಾಧವೆಂದು ಪರಿಗಣಿಸಿದ್ದರೂ, ಅದೇ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ ತೀರ್ಪಿನ ಕುರಿತು ಪ್ರಶ್ನೆಗಳನ್ನು ಎತ್ತಿದರು. ಬಿಲ್ಕೀಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳ ಬಿಡುಗಡೆ ವಿಚಾರವೂ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಸಾರ್ವಜನಿಕ ನಂಬಿಕೆಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಲಿಡಾರಿಟಿಯ ನಿಹಾಲ್ ಕಿದಿಯೂರು, ಪ್ರೊ. ಮೋಹನ್ ಕುಮಾರ್ ಹಾಗೂ ಸಾಮಾಜಿಕ ಕಾರ್ಯಕರ್ತ ಇದ್ರಿಸ್ ಹೂಡೆ ಅವರು ಸಂವಿಧಾನದ ಪ್ರಸ್ತುತ ಸ್ಥಿತಿಗತಿ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ನಾಗರಿಕರ ಹಕ್ಕುಗಳ ಕುರಿತು ವಿಚಾರ ಮಂಡಿಸಿದರು.
ಈ ಸಂದರ್ಭದಲ್ಲಿ ನಾಗೇಶ್ ಉದ್ಯಾವರ, ನಿಸಾರ್ ಉಡುಪಿ, ಮುಹಮ್ಮದ್ ಮೌಲ, ಚಾರ್ಲ್ಸ್ ಅಂಬ್ಲೇರ್, ರಫೀಕ್ ಕುಂದಾಪುರ, ರಿಯಾಝ್ ಕೋಡಿ, ಶಾರದ, ಕುಲ್ಸುಮ್ ಅಬುಬಕ್ಕರ್, ಅಬ್ದುಲ್ ಅಝೀಜ್ ಉದ್ಯಾವರ, ಸಾಲಿಡಾರಿಟಿಯ ಅಫ್ವಾನ್ ಬಿ. ಹೂಡೆ, ಜೌಹರ್ ಹೂಡೆ, ಮುಸ್ತಾಕ್ ಖತೀಬ್, ನಿಫಾಲ್ ಕಿದಿಯೂರು, ಇಕ್ಬಾಲ್ ಮನ್ನಾ, ಇಸ್ಮಾಯಿಲ್ ಕಟಪಾಡಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.
ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.






