ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ಭಾರತದ ಸಮಗ್ರ ಶೋಷಿತ ಸಮುದಾಯಗಳ ಬದುಕಿಗೆ ಉಸಿರು ಮತ್ತು ರಕ್ತ ತುಂಬಿದರು. ಅದರಲ್ಲೂ ಮಹಿಳೆಯರ ಬದುಕಿನಲ್ಲಿ ಹೊಸ ಬೆಳಕಿನ ಅಧ್ಯಾಯವನ್ನು ಸಂವಿಧಾನದ ಮೂಲಕ ಬರೆದರು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ವತಿಯಿಂದ ಬ್ರಹ್ಮಾವರ ಬಿರ್ತಿಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂವಿಧಾನದಿಂದ ಮಹಿಳೆಯರಿಗೆ ದೊರೆತಿರುವ ಹಕ್ಕುಗಳು ಮತ್ತು ಅವಕಾಶಗಳ ಬಗ್ಗೆ ಭಾರತದ ಬಹುಸಂಖ್ಯಾತ ಮಹಿಳೆಯರಿಗೆ ಇಂದಿಗೂ ಸಮರ್ಪಕ ಅರಿವಿಲ್ಲದಿರುವುದು ದುರದೃಷ್ಟಕರ. ಸಂವಿಧಾನದ ಬಗ್ಗೆ ಇತರರು ನಿಗಾ ವಹಿಸದಿದ್ದರೂ ದಲಿತ ಸಮುದಾಯ ಸಂವಿಧಾನದ ರಕ್ಷಣೆಯ ಹೊಣೆಗಾರಿಕೆಯನ್ನು ನಿರ್ವಹಿಸಬೇಕು. ಇದುವರೆಗೂ ಸಂವಿಧಾನದ ಉಳಿವಿಗಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿರುವುದು ದಲಿತ ಚಳವಳಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಸಂವಿಧಾನ ಸಮರ್ಪಣಾ ದಿನದಂದು ಸಂವಿಧಾನದ ಆಶಯಗಳನ್ನು ಮನೆಮನೆಗೆ ತಲುಪಿಸುವ ಕಾರ್ಯ ನಡೆಯಬೇಕು. ಸಂಘಟನೆಯ ನಾಯಕರು ಚಳವಳಿಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಭಾರತದ ಸಂವಿಧಾನದ ಅಸ್ತಿತ್ವ ಮತ್ತು ಆಶಯಗಳನ್ನು ಉಳಿಸಿಕೊಳ್ಳಲು ಶ್ರಮಿಸಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಮಾತನಾಡಿ, ಸಂವಿಧಾನ ಸಮರ್ಪಣೆಯಾಗಿ 77 ವರ್ಷಗಳು ಕಳೆದಿದ್ದರೂ ಇಂದಿಗೂ ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಜಾರಿಯಾಗಿಲ್ಲ. ಪ್ರಸ್ತುತ ರಾಜಕೀಯ ವ್ಯವಸ್ಥೆ ಬಾಬಾಸಾಹೇಬರು ರೂಪಿಸಿದ ಸಂವಿಧಾನದ ಆಶಯಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಅವಕಾಶ ನೀಡುತ್ತಿಲ್ಲ. ಸಂವಿಧಾನದ ಆಶಯಗಳ ಶೇ.50ರಷ್ಟಾದರೂ ಸಮರ್ಪಕವಾಗಿ ಜಾರಿಯಾಗಿದ್ದರೆ ದಲಿತರ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದವು ಎಂದು ಅಭಿಪ್ರಾಯಪಟ್ಟರು.
ಇಂದಿಗೂ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನವನ್ನು ಒಪ್ಪಿಕೊಳ್ಳದವರು ಹಾಗೂ ಮನುಸ್ಮೃತಿಯೇ ನಮ್ಮ ಸಂವಿಧಾನ ಎಂದು ಪ್ರತಿಪಾದಿಸುವವರೂ ಇದ್ದಾರೆ. ಇಂತಹ ಸಂವಿಧಾನ ವಿರೋಧಿ ಮನೋಭಾವದಿಂದ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ದಲಿತರ ಜೀವಕ್ಕೆ ಬೆಲೆ ಇಲ್ಲದಂತಹ ಪರಿಸ್ಥಿತಿಗಳು ನಿರ್ಮಾಣವಾಗುತ್ತಿವೆ. ದಲಿತ ಚಳವಳಿ ಇಲ್ಲದಿದ್ದರೆ ಮನುವಾದಿಗಳು ಎಂದೋ ಸಂವಿಧಾನವನ್ನು ಬದಲಾಯಿಸುವ ಪ್ರಯತ್ನ ಮಾಡುತ್ತಿದ್ದರು. ಆದ್ದರಿಂದ ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂವಿಧಾನಕ್ಕೆ ಯಾವುದೇ ಧಕ್ಕೆ ಉಂಟಾಗದಂತೆ ಅದರ ರಕ್ಷಣೆಗಾಗಿ ಸಂಘಟಿತ ಹೋರಾಟ ನಡೆಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕುಸುಮಾ ಗುಜ್ಜರಬೆಟ್ಟು, ಸುಂದರಿ ಪುತ್ತೂರು, ಸುರೇಶ್ ಹಕ್ಲಾಡಿ, ಸುರೇಶ್ ಬೈಂದೂರು, ರಾಜು ಬೆಟ್ಟಿನಮನೆ, ಹರಿಶ್ಚಂದ್ರ ಬಿರ್ತಿ, ಕುಮಾರ್ ಕೋಟ, ಮಂಜುನಾಥ ಬಾಳ್ಕುದ್ರು, ಭೋಜರಾಜ್ ಕಾವ್ರಾಡಿ, ಸುರೇಶ್ ಬಿರ್ತಿ, ಪ್ರಕಾಶ್ ಹೇರೂರು, ಶಿವಾನಂದ ಬಿರ್ತಿ, ವಿಜಯ ಗಿಳಿಯಾರು, ಶರತ್ ಆರೂರು, ಸದಾನಂದ ಹಂಗಾರಕಟ್ಟೆ, ನಿಖಿಲ್ ಬ್ರಹ್ಮಾವರ, ಚೈತನ್ಯ ಬಿರ್ತಿ ಹಾಗೂ ಸುಧಾಮ ಹಂಗಾರಕಟ್ಟೆ ಉಪಸ್ಥಿತರಿದ್ದರು.
ಶ್ಯಾಮಸುಂದರ ತೆಕ್ಕಟ್ಟೆ ಸ್ವಾಗತಿಸಿ, ಮಂಜುನಾಥ ನಾಗೂರು ವಂದಿಸಿದರು.






